ಕನ್ನಡ ರಾಜ್ಯೋತ್ಸವ ಅಂಗವಾಗಿ ಒಂದು ‘ಪ್ರಶ್ನೆ ವಿಡಿಯೊ’ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕನ್ನಡ ರಾಜ್ಯೋತ್ಸವದ ಶುಭಕೋರುವ ಜೊತೆಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಕನ್ನಡ ನಾಡಿನ ಸಮಸ್ತ ಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರಿಗೆ ಸ್ವಾಭಿಮಾನದ ದಿನ. ಅದೇ ರೀತಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವೂ ಹೌದು” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನ್ನಡ ಭಾಷೆ ನಮ್ಮ ಹೆಮ್ಮೆ, ನಮ್ಮ ಸಂಸ್ಕೃತಿಯ ಕೇಂದ್ರಬಿಂದು. ಈ ವಾರದ ಒಂದು ಪ್ರಶ್ನೆ ಕನ್ನಡಿಗರ ಅಳಿವು- ಉಳಿವಿನ ಕುರಿತಾಗಿದೆ. ಬನ್ನಿ ಈ ಚರ್ಚೆಯಲ್ಲಿ ಪಾಲ್ಗೊಳ್ಳಿ.
This week's #OnduPrashne is about our Kannadiga pride.
And it's a question every Kannadiga should ask.
Have a look: pic.twitter.com/RmyZ5tlNi2— DK Shivakumar (@DKShivakumar) November 1, 2021
ಇಂತಹ ಸಂದರ್ಭದಲ್ಲಿ ನಾನು ನಿಮ್ಮ ಮುಂದೆ ಒಂದು ಪ್ರಶ್ನೆಯನ್ನು ಎತ್ತಿದ್ದೇನೆ. ಅದೇನಂದರೆ ಕನ್ನಡದಲ್ಲಿ ಎಲ್ಲ ಹಂತದಲ್ಲೂ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಂತಹ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗಬೇಕಾ ಬೇಡವಾ ಎಂಬ ಪ್ರಶ್ನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
“ಇವತ್ತು ಇಂಗ್ಲಿಷ್, ಹಿಂದಿ ಬರದ ಕನ್ನಡಿಗರು ಬ್ಯಾಂಕ್‌ಗೆ ಹೋಗಿ ಹಣ ಡ್ರಾ ಮಾಡಲು ಆಗುತ್ತಿಲ್ಲ. ಯಾಕೆಂದರೆ ಎಲ್ಲ ಫಾರ್ಮ್‌ಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿವೆ. ಈ ಬಿಜೆಪಿ ಸರ್ಕಾರ ಕನ್ನಡಕ್ಕೆ ಇಂಗ್ಲಿಷ್, ಹಿಂದಿ ನಂತರದ ಸ್ಥಾನವನ್ನು ನೀಡಿದೆ” ಎಂದು ಆರೋಪಿಸಿದ್ದಾರೆ.
“ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಹಿಂದಿ ಭಾಷಿಗರಿಗೆ ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಕನ್ನಡಿಗರಿಗೂ ಇದೆ. ಇತ್ತೀಚೆಗಷ್ಟೇ ಕೆವಿಪಿವೈ ಪರೀಕ್ಷೆಯಲ್ಲಿ ತಮಿಳರಿಗೆ ಅವಕಾಶ ನೀಡಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇಡೀ ಪರೀಕ್ಷೆಯನ್ನು ರದ್ದುಗೊಳಿಸಿದೆ. ಆದರೆ ಪದವಿಯಲ್ಲಿ ಕನ್ನಡವನ್ನು ಕಡ್ಡಾಯ ಮಾಡಬಾರದು ಎಂದು ಕರ್ನಾಟಕ ಸರ್ಕಾರ, ಹೈಕೋರ್ಟ್‌ಗೆ ನೋಟೀಸ್ ನೀಡಿದೆ” ಎಂದು ವಿಷಾದಿಸಿದ್ದಾರೆ.
ನಮ್ಮ ರಾಜ್ಯದ 25 ಸಂಸತ್ ಸದಸ್ಯರು ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಂಸತ್‌ನಲ್ಲಿ ಪ್ರಶ್ನೆ ಮಾಡುವ ಧೈರ್ಯ ತೋರುತ್ತಿಲ್ಲ. ಯುಪಿಎಸ್‌ಸಿ ಪರೀಕ್ಷೆ ಮಾತ್ರವಲ್ಲ ಕೇಂದ್ರ ಸರ್ಕಾರದ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಅದು ನಮ್ಮ ಸಂವಿಧಾನಬದ್ಧ ಹಕ್ಕು ಎಂದು ಒತ್ತಾಯಿಸಿದ್ದಾರೆ.
“ಈ ವಿಚಾರವಾಗಿ ನಿಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ ಮಾಡಿ, ನಾನೇ ಕುದ್ದಾಗಿ ನೋಡಲು ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಖಾಸಗಿ ಉದ್ಯೋಗಗಳನ್ನಾದರೂ ಸೃಷ್ಟಿಸಬೇಕಲ್ಲವೇ: ಡಿ.ಕೆ.ಶಿವಕುಮಾರ್ ‘ಒಂದು ಪ್ರಶ್ನೆ’


