‘ಒಂದು ಪ್ರಶ್ನೆ’ ವಿಡಿಯೋ ಸರಣಿ ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ತಮ್ಮ ನಾಲ್ಕನೇ ಕಂತಿನಲ್ಲಿ ‘ಉದ್ಯೋಗ ಸೃಷ್ಟಿ’ಯ ಕುರಿತು ಮಾತನಾಡಿದ್ದಾರೆ.

“ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಏಳು ವರ್ಷ ಆಯಿತು. ಹದಿನಾಲ್ಕು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ನಾನು ನಿಮ್ಮಲ್ಲಿ ಸರ್ಕಾರದ ಉದ್ಯೋಗವನ್ನು ಕೊಡಿ ಎಂದು ಕೇಳುತ್ತಿಲ್ಲ. ಖಾಸಗಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಅವಕಾಶ ಸರ್ಕಾರಕ್ಕೆ ಇಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮ ಜನ, ನಮ್ಮ ಯುವಕರು, ಪದವಿ ಪಡೆದವರು ಉದ್ಯೋಗವಿಲ್ಲದೆ ಹಳ್ಳಿಗಳಲ್ಲಿ ನರೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕವಾಗಿ ಸಹಾಯವನ್ನು ಕೊಡಬೇಕಾಗಿದೆ. ಆದರೆ ಬಂಡವಾಳಶಾಹಿಗಳಿಗೆ ಮಾತ್ರ ಅನೇಕ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದ್ದವರಿಗೆ ಯಾವುದೇ ಸಹಕಾರವನ್ನು ನೀಡುತ್ತಿಲ್ಲ. ಸರ್ಕಾರ ಇಂತಹ ವಿಚಾರಗಳಲ್ಲಿ ಯಾವ ದಿಕ್ಕಿನಲ್ಲಿ ಹೋಗಬೇಕು? ಉದ್ಯೋಗಗಳನ್ನು ಸೃಷ್ಟಿ ಮಾಡಲಿಕ್ಕೆ, ಕೈಗಾರಿಕೆಗಳನ್ನು ತರಲಿಕ್ಕೆ, ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ಜನರಿಗೆ ಕೊಡಲಿಕ್ಕೆ ಯಾವೆಲ್ಲ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿಮ್ಮ ಸಲಹೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನಲ್ಲಿ ತಿಳಿಸಿರಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಬಿಕ್ಕಟ್ಟೆಂದು ಘೋಷಿಸಿ ಬಿಡಗಾಸೂ ನೀಡಿಲ್ಲ: ಡಿ.ಕೆ.ಶಿವಕುಮಾರ್‌

ಡಿ.ಕೆ.ಶಿವಕುಮಾರ್‌ ಅವರು ಮೂರನೇ ಕಂತಿನಲ್ಲಿ ‘ಕೋವಿಡ್‌ ಪರಿಹಾರ’ ಕುರಿತು ಪ್ರಸ್ತಾಪಿಸಿದ್ದರು. “ಮಳೆ ಹೆಚ್ಚಾದಾಗ, ಭೂಕಂಪವಾದಾಗ ಯಾವುದೇ ಸಂದರ್ಭಗಳಲ್ಲಿ ಸರ್ಕಾರ ಪರಿಹಾರಗಳನ್ನು ಘೋಷಣೆ ಮಾಡಿದೆ. ಕೋವಿಡ್‌ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಸರ್ಕಾರ ಬಿಡುಗಾಸು ಪರಿಹಾರ ನೀಡಿಲ್ಲ. ಕೋವಿಡ್‌ನಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ. ಸರ್ಕಾರವೇ ನಂಬರ್‌ ಬಿಡುಗಡೆ ಮಾಡಿದೆ. ಒಬ್ಬರಿಗೂ ಪರಿಹಾರ ನೀಡಿಲ್ಲ” ಎಂದು ಟೀಕಿಸಿದ್ದರು.

ಎರಡನೇ ಕಂತಿನಲ್ಲಿ ‘ಸಿಲಿಂಡರ್‌ ಬೆಲೆ ಏರಿಕೆ’ಯ ಕುರಿತು ಮಾತನಾಡುತ್ತಾ, “ಸಿಲಿಂಡರ್ ಬೆಲೆ 888 ರೂ.  ಇದ್ದು, ಸದ್ಯದಲ್ಲೇ 900 ರೂಪಾಯಿಯಿಂದ 1000 ರೂ.ವರೆಗೆ ತಲುಪಬಹುದು. ರಾಜ್ಯದ ಜನತೆಗೆ ಎಂತಹ ಸಂಕಷ್ಟ ನೋಡಿ. ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ ಬೆಲೆ ಮಾತ್ರ ಕಡಿಮೆಯಾಗಲಿಲ್ಲ” ಎಂದಿದ್ದರು.

ಮೊದಲ ಕಂತಿನಲ್ಲಿ ‘ಎನ್‌ಇಪಿಯನ್ನು ನಾಗಪುರ ಎಜುಕೇಷನ್‌ ಪಾಲಿಸಿ’ ಎಂದು ವಿಶ್ಲೇಷಿಸಿದ್ದರು.


ಇದನ್ನೂ ಓದಿ: ಎಲ್‌ಪಿಜಿ ಬೆಲೆ ಏರಿಕೆ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ವಿಶೇಷ ವಿಡಿಯೋ ಬಿಡುಗಡೆ

LEAVE A REPLY

Please enter your comment!
Please enter your name here