ಬಡತನದಿಂದ ನೊಂದು, ದಲಿತ ಕುಟುಂಬದ ಸಹೋದರರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಸಮೀಪದ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು, ರತ್ನಮ್ಮ ದಂಪತಿಯ ಪುತ್ರರಾದ ಸಿದ್ದರಾಜು (22) ಹಾಗೂ ನಾಗರಾಜ್ (20) ಆತ್ಮಹತ್ಯೆ ಮಾಡಿಕೊಂಡಿದ್ದು, ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯವನಾದ ಸಿದ್ದರಾಜು ಕೂಲಿ ಕಾರ್ಮಿಕರಾಗಿದ್ದರೆ, ನಾಗರಾಜು ಪದವಿ ವ್ಯಾಸಂಗ ಮಾಡಿದ್ದರು. ಇವರಿಗೆ ಜಮೀನು ಇರಲಿಲ್ಲ, ಸರಿಯಾಗಿ ಮನೆ ಕೂಡ ಇರಲಿಲ್ಲ. ಕುಟುಂಬ ಸಮೇತರಾಗಿ ಎಲ್ಲೆಂದರಲ್ಲಿ ಕೆಲಸ ಮಾಡುತ್ತಿದ್ದರು. ಪದವಿ ಮುಗಿಸಿದ್ದ ನಾಗರಾಜು ಉದ್ಯೋಗಕ್ಕಾಗಿ ಅಲೆದಾಡಿದ್ದರೂ ಎಲ್ಲಿಯೂ ಕೆಲಸ ಸಿಗದೆ ಕಂಗಾಲಾಗಿದ್ದರು.
ತಂದೆ ತಾಯಿಗಳು ಪಡುತ್ತಿರುವ ಪಾಡನ್ನು ನೋಡಲಾರದೆ ಸಾಯಲು ನಿರ್ಧರಿದ್ದ ಸಹೋದರರು, ಶುಕ್ರವಾರ ಮಧ್ಯಾಹ್ನ ಊಟ ಮಾಡಿದ ಬಳಿಕ, ಮನೆಯವರೊಂದಿಗೆ ಮಾತನಾಡಿ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದಾರೆ ಎಂದು ವರದಿಯಾಗಿದೆ.
ಹಿರಿಯವನಾದ ಸಿದ್ದರಾಜು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡರೆ, ನಾಗರಾಜು ಮನೆಯಿಂದ ಸ್ಪಲ್ಪ ದೂರಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಸ್ತೆ ಬದಿಯಲ್ಲಿ ನಾಗರಾಜು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಆಸ್ಪತ್ರೆಗೆ ಕರೆದೋಯ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಮನಕಲಕುವ ಘಟನೆಗೆ ಸಾಕ್ಷಿಯಾದ ಗ್ರಾಮಸ್ಥರು ಹಾಗೂ ಕುಟುಂಬದವರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮಾತ್ರ ದಲಿತರು ಸಿಎಂ ಆಗಲು ಸಾಧ್ಯ, ದಲಿತರು ಸಿಎಂ ಆಗಲು ನನ್ನ ವಿರೋಧವಿಲ್ಲ: ಸಿದ್ದರಾಮಯ್ಯ