ಕೇರಳದಲ್ಲಿ ನಿಫಾ ಮತ್ತು ಕೊರೊನಾ ಎರಗಿದಾಗ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮಾಜಿ ಆರೋಗ್ಯ ಸಚಿವೆ ‘ಕೆ.ಕೆ. ಶೈಲಜಾ ಟೀಚರ್’ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ. ಸಿಪಿಐಎಂ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ನವೆಂಬರ್ 23 ರ ಮಂಗಳವಾರ ಜಿಲ್ಲೆಯ ಗುರುಪುರ ಕೈಕಂಬದಲ್ಲಿ ನಡೆಯಲಿದೆ.
ಅಂದು ನಡೆಯಲಿರುವ ಬಹಿರಂಗ ಸಭೆಯಲ್ಲಿ ಶೈಲಜಾ ಟೀಚರ್ ಅವರು ಪ್ರಮುಖ ಭಾಷಣಕಾರರಾಗಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್‌ಗೆ ಪ್ರತಿಷ್ಟಿತ ಓಪನ್ ಸೊಸೈಟಿ ಪ್ರಶಸ್ತಿ
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಮಂಗಳೂರು ನಗರ ಸಿಪಿಐಎಂ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, “ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆಯಲಿರುವ ಬಹಿರಂಗ ಸಭೆಗೆ ಅವರು ಆಗಮಿಸಲಿದ್ದಾರೆ. ಅಂದು ಶ್ರಮಿಕರು, ಕಾರ್ಮಿಕರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ಸೇರಿದಂತೆ ಸುಮಾರು 10 ಸಾವಿರ ಜನರು ಭಾಗವಹಿಸಲಿದ್ದು, ವರ್ಣರಂಜಿತ ರ್‍ಯಾಲಿ ನಡೆಯಲಿದೆ. ಅವರನ್ನು ಉದ್ದೇಶಿಸಿ ಶೈಲಜಾ ಟೀಚರ್ ಭಾಷಣ ಮಾಡಲಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ’ಭಾರತದ ಕೋವಿಡ್ ಟೀಚರ್’ – ಕೆ.ಕೆ. ಶೈಲಜಾರನ್ನು ಬಣ್ಣಿಸಿದ ಅಂತರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ
ಕೇರಳದಲ್ಲಿ ನಿಫಾ ಸಾಂಕ್ರಮಿಕವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶೈಲಜಾ ಟೀಚರ್, ಕೊರೊನಾ ಸಮಯದಲ್ಲೂ ವಿಶ್ವದ ಗಮನ ಸೆಳೆದಿದ್ದರು.
ಅಮೇರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ (ಎಎಎಎಸ್) ನ ವಿಜ್ಞಾನ ನಿಯತಕಾಲಿಕೆಯು, ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು “ಭಾರತದ ಕೋವಿಡ್ ಟೀಚರ್” ಎಂದು ಬಣ್ಣಿಸಿತ್ತು. ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ಅವರನ್ನು ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಸಮರ್ಪಕವಾಗಿ ನಿಭಾಯಿಸಿದ್ದಕ್ಕೆ ಶೈಲಜಾ ಅವರನ್ನು ವಿಶ್ವಸಂಸ್ಥೆಯು ‘ಸಾರ್ವಜನಿಕ ಸೇವಾ ದಿನಾಚರಣೆ’ಯಲ್ಲಿ ಭಾಷಣಕ್ಕಾಗಿ ಆಹ್ವಾನಿಸಿ ಗೌರವಿಸಿತ್ತು. ಅಲ್ಲದೆ ಶೈಲಜಾ ಟೀಚರ್‌ಗೆ ಪ್ರತಿಷ್ಟಿತ ಸೆಂಟ್ರಲ್ ಯುರೋಪಿಯನ್ ವಿಶ್ವವಿದ್ಯಾಲಯ (CEU) ನೀಡುವ ಓಪನ್ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


