ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿ ವ್ಯಾಪ್ತಿಗೆ ಸೇರಿದ ಬ್ಯಾಲಹಳ್ಳಿಯಲ್ಲಿ ಸವರ್ಣೀಯರ ವಿರೋಧದ ನಡುವೆಯೇ ದಲಿತರು ದೇವಾಲಯ ಪ್ರವೇಶಿಸುವ ಕಾರ್ಯಕ್ರಮ ನಡೆಯಿತು.
ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ತೊಳಸಮ್ಮ ದೇವಾಲಯವಿದ್ದು, ಈವರೆಗೆ ದಲಿತರ ಪ್ರವೇಶವಾಗಿರಲಿಲ್ಲ. ಅಲ್ಲದೇ ದೇವಾಲಯದ ಗೋಡೆಗೆ ಮುಜರಾಯಿ ಇಲಾಖೆ ಅಂಟಿಸಿದ್ದ ಸೂಚನಾ ಫಲಕ ಅಳಿಸಿ ಹಾಕುವ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿದ್ದರು.
“ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮ ಬೇಧವಿಲ್ಲದೆ ಪ್ರವೇಶಿಸಲು ಅವಕಾಶ ನೀಡಲಾಗಿದೆ” ಎಂದು ಹಾಕಲಾಗಿದ್ದ ಸೂಚನಾ ಫಲಕದಲ್ಲಿ ‘ಜಾತಿ, ಜನಾಂಗ’ ಇತ್ಯಾದಿ ಪದಗಳನ್ನು ಅಳಿಸಿ ಹಾಕಲಾಗಿತ್ತು.
ಈ ಕುರಿತು ‘ನಾನುಗೌರಿ.ಕಾಂ’ ವರದಿ ಮಾಡಿದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರು. ಸೋಮವಾರ ಗ್ರಾಮಕ್ಕೆ ಭೇಟಿ ನೀಡಿರುವ ಕಂದಾಯ ನಿರೀಕ್ಷಕ ನಾಗಭೂಷಣ, ಗ್ರಾಮ ಲೆಕ್ಕಾಧಿಕಾರಿ ಶಶಿ ಕುಮಾರ್ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಆದರೆ ದಲಿತರು ದೇವಾಲಯ ಪ್ರವೇಶಿಸುವುದನ್ನು ತಡೆಯಲು ಸವರ್ಣೀಯ ಯುವಕರು ಯತ್ನಿಸಿದರು. ಇದರಿಂದ ಹೆದರಿದ ದಲಿತರು, ದೇವಾಲಯ ಪ್ರವೇಶಿಸಲು ಹಿಂದೇಟು ಹಾಕಿದರು. ಆದರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ ಒಬ್ಬರೇ ದೇವಾಲಯ ಪ್ರವೇಶಿಸುವ ಧೈರ್ಯ ತೋರಿದರು.
ದೇವಾಲಯ ಪ್ರವೇಶ ಸಂದರ್ಭದಲ್ಲಿ ಸೆರೆಹಿಡಿಯಲಾಗಿರುವ ವಿಡಿಯೋ ‘ನಾನುಗೌರಿ.ಕಾಂ’ಗೆ ಲಭ್ಯವಾಗಿದ್ದು, ಯಥಾಸ್ಥಿತಿಯನ್ನೇ ಮುಂದುವರಿಸಬೇಕೆಂದು ಸವರ್ಣೀಯರು ಪ್ರತಿಪಾದಿಸುತ್ತಿರುವುದನ್ನು ಕಾಣಬಹುದು.
“ಇವರಿಗೆ ಯಾವತ್ತಾದರೂ ಪ್ರಸಾದ ಕೊಡುವುದಿಲ್ಲ ಎಂದು ಹೇಳಿದ್ದೇವೆಯೇ? ನಮ್ಮ ಜೊತೆಯಲ್ಲೇ ಕುಳಿತು ನಮ್ಮ ಜನದಂತೆಯೇ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ” ಎಂದು ಸರ್ವಣೀಯ ಯುವಕರು ಹೇಳುವುದನ್ನು ಕೇಳಬಹುದು.
ಅದಕ್ಕೆ ರೇಣುಕಪ್ಪ ಅವರು, “ಪಂಕ್ತಿಯಿಂದ ಎದ್ದು ಬಂದಿದ್ದೇನೆ” ಎಂದು ಹೇಳುತ್ತಾ ತಮಗಾಗಿರುವ ಜಾತಿ ತಾರತಮ್ಯವನ್ನು ಖಂಡಿಸಿರುವುದನ್ನು ಕಾಣಬಹುದು.
“ಬೋರ್ಡ್ ಬರೆಸುತ್ತೇವೆ ಬಿಡಪ್ಪ” ಎಂದು ಕಂದಾಯ ಅಧಿಕಾರಿ ಹೇಳುತ್ತಾರೆ. “ಸರ್, ಬೋರ್ಡ್ ಬರೆಸುವುದಷ್ಟೇ ಅಲ್ಲ, ದೇವಾಲಯದೊಳಗೆ ಪ್ರವೇಶವನ್ನೂ ಕೊಡಿಸಬೇಕು” ಎಂದು ಆಗ್ರಹಿಸುತ್ತಾರೆ.
ಸಿಟ್ಟಿಗೆದ್ದ ಸವರ್ಣೀಯರು ತಿರಸ್ಕಾರದಿಂದಲೇ, “ಹೋಗೋ ಪ್ರವೇಶ ಮಾಡು” ಎನ್ನುತ್ತಾರೆ. ರೇಣುಕಪ್ಪ ದೇವಾಲಯ ಪ್ರವೇಶಿಸಿದ್ದಾರೆ. ಅದನ್ನು ಸಹಿಸದ ಸವರ್ಣೀಯ ಯುವಕನೊಬ್ಬ, “ದೇವರು ಶಕ್ತಿ ಇದ್ದರೆ ನಿನ್ನನ್ನು ನೋಡಿಕೊಳ್ಳುತ್ತಾಳೆ” ಎಂದಿದ್ದಾನೆ.
ಬ್ಯಾಲಹಳ್ಳಿಯ ಹಾಲು ಉತ್ಪಾದಕರ ಸಂಘದಲ್ಲಿ ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡುತ್ತಿರಲಿಲ್ಲ. ಹಾಲು ನೀಡಲು ನಿರಾಕರಣೆ ಹಾಗೂ ದೇವಾಲಯದ ಬೋರ್ಡ್ ಅಳಿಸಿ ಹಾಕಿರುವ ಕುರಿತು ನಾನೂಗೌರಿ.ಕಾಂನಲ್ಲಿ ವರದಿ ಮಾಡಲಾಗಿತ್ತು. ಹಾಲಿನ ವಿಚಾರವನ್ನು ದಲಿತ ಮುಖಂಡ ಸಿದ್ದಲಿಂಗಯ್ಯ ಪ್ರಸ್ತಾಪಿಸಿರುವುದನ್ನು ಕಾಣಬಹುದು. “ದೇವಾಲಯ ಪ್ರವೇಶಿಸಿ ನಮಗೇನು ಕೋಟಿ ಎಂಬತ್ತು ಲಕ್ಷ ಬರುವುದಿಲ್ಲ. ಹಾಲನ್ನು ಕೊಡಲು ವ್ಯವಸ್ಥೆ ಮಾಡಿ” ಎಂದು ಸಿದ್ದಲಿಂಗಯ್ಯ ಅಧಿಕಾರಿಗೆ ಆಗ್ರಹಿಸುತ್ತಾರೆ.
“ನಾವು ಪೂಜೆ ಸಾಮಾನು ತಂದಾಗ ಎಲ್ಲರಿಗೂ ಪೂಜೆ ಮಾಡಿಕೊಟ್ಟಂತೆ ನಮಗೂ ಮಾಡಿಕೊಡಬೇಕು” ಎಂದು ರೇಣುಕಪ್ಪ ಆಗ್ರಹಿಸಿದಾಗ, “ಮಾಡಿಕೊಡುತ್ತೇವೆ” ಎಂದು ತಿರಸ್ಕಾರದಿಂದಲೇ ಸವರ್ಣೀಯರು ಒಪ್ಪಿಕೊಂಡಿದ್ದಾರೆ.
ಹಾಲು ಖರೀದಿಗೆ ಅವಕಾಶ: ಕಂದಾಯ ನಿರೀಕ್ಷಕರು ಹಾಲಿನ ಡೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. “ಮಂಗಳವಾರದಿಂದ ದಲಿತರು ಹಾಲು ಖರೀದಿಸಲು ಅವಕಾಶ ನೀಡಿರುವುದು ಕೊಂಚ ಸಮಾಧಾನ ತಂದಿದೆ” ಎಂದು ದಲಿತರು ತಿಳಿಸಿದ್ದಾರೆ.
ಇದನ್ನೂ ಓದಿರಿ: ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’