ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ದಾದ್ರ ನಗರ ಹಾವೇಲಿಯ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಶಿವಸೇನೆ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಕಂಡಿವೆ.
ಹಿಮಾಚಲ ಪ್ರದೇಶ – ಮಂಡಿ
ಮಂಡಿ ಲೋಕಸಭಾ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 4 ಲಕ್ಷ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು. ಆಗ ಬಿಜೆಪಿಯ ರಾಮ್ ಸ್ವರೂಪ್ ಶರ್ಮಾ ವಿಜಯಿಯಾಗಿದ್ದರು. ಆದರೆ ಅವರು 2021ರ ಮಾರ್ಚ್‌ನಲ್ಲಿ ನಿಧನ ಹೊಂದಿದ್ದರು. ಹಾಗಾಗಿ ಅಲ್ಲಿ ಉಪಚುನಾವಣೆ ಘೋಷಣೆಯಾಗಿತ್ತು. ಬಿಜೆಪಿಯು ಬ್ರಿಗೇಡಿಯರ್ ಖುಶಾಲ್ ಸಿಂಗ್ ಠಾಕೂರ್ ರವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಪಕ್ಷವು ಮಾಜಿ ಸಿಎಂ ವೀರಭದ್ರ ಸಿಂಗ್‌ರವರ ಪತ್ನಿ ಪ್ರತಿಭಾ ಸಿಂಗ್ ರವರನ್ನು ಕಣಕ್ಕಿಳಿಸಿದ್ದರು. ನೇರಾ ನೇರ ಪೈಪೋಟಿ ನಡೆದು ಕೊನೆಗೆ ಕಾಂಗ್ರೆಸ್‌ನ ಪ್ರತಿಭಾ ಸಿಂಗ್ 7,490 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲಿಗೆ ಬಿಜೆಪಿ ಸ್ಥಾನ ಕಾಂಗ್ರೆಸ್ ಪಾಲಾಗಿದೆ.

ಮಧ್ಯಪ್ರದೇಶ – ಖಾಂಡ್ವಾ
ಬಿಜೆಪಿ ಅಭ್ಯರ್ಥಿ ಜ್ಞಾನೇಶ್ವರ್ ಪಾಟೀಲ್ ಅವರು ತಮ್ಮ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜನಾರಾಯಣ್ ಸಿಂಗ್ ಅವರನ್ನು 80,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ನಂದಕುಮಾರ್ ಸಿಂಗ್ ಚೌಹಾಣ್ ಅವರ ನಿಧನದ ನಂತರ ಖಾಂಡ್ವಾ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಈ ಗೆಲುವಿನ ಮೂಲಕ ಆ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ.

ದಾದ್ರ ಮತ್ತು ನಗರ ಹಾವೇಲಿ
ಮಾಜಿ ಸ್ವತಂತ್ರ ಸಂಸದ ದಿವಂಗತ ಮೋಹನ್ ದೇಲ್ಕರ್ ಅವರ ಪತ್ನಿ, ಶಿವಸೇನಾ ಅಭ್ಯರ್ಥಿ ಕಲಾಬೆನ್ ದೇಲ್ಕರ್ ಅವರು ದಾದ್ರಾ ಮತ್ತು ನಗರ ಹಾವೇಲಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 51,269 ಮತಗಳಿಂದ ಗೆದ್ದಿದ್ದಾರೆ.
2019 ರಲ್ಲಿ ಸ್ವತಂತ್ರ ಅಭ್ಯರ್ಥಿ ಮೋಹನ್ ದೇಲ್ಕರ್ ಬಿಜೆಪಿಯ ನಾಥುಭೈ ಪಟೇಲ್ ಅವರನ್ನು 9001 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ ಈ ವರ್ಷದ ಫೆಬ್ರವರಿ 22 ರಂದು ಸಂಸದರಾಗಿದ್ದ ಮೋಹನ್ ದೇಲ್ಕರ್ ಹೋಟೆಲ್ ಒಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಹಾಗಾಗಿ ಇಲ್ಲಿ ಉಪಚುನಾವಣೆ ನಡೆಸಲಾಯಿತು. ಅವರ ಪತ್ನಿ ಶಿವಸೇನೆ ಟಿಕೆಟ್ ಅಡಿಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಅಲ್ಲಿಗೆ ಸ್ವತಂತ್ರ ಅಭ್ಯರ್ಥಿಯ ಸ್ಥಾನ ಶಿವಸೇನೆ ಪಾಲಾಗಿದೆ.

ಇದನ್ನೂ ಓದಿ: ಅಸ್ಸಾಂ: ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸೋಲು; ಆಪರೇಷನ್ ಕಮಲಕ್ಕೆ ಜಯ!


