Homeಕರ್ನಾಟಕಅಪ್ಪು ನುಡಿನಮನ; ಮಿಂಚಿ ಮರೆಯಾದ ಜನಮನದ ಹುಡುಗ

ಅಪ್ಪು ನುಡಿನಮನ; ಮಿಂಚಿ ಮರೆಯಾದ ಜನಮನದ ಹುಡುಗ

- Advertisement -
- Advertisement -

(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ)

ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದ ಕಲಾವಿದ ಪುನೀತ್‌ರ ಸಾವು ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದೆ. ಕಳೆದ 45 ವರ್ಶಗಳಿಂದ ಲೋಹಿತ್ ಮತ್ತು ಪುನೀತ್ ಜೊತೆಗೆ ಹಾದಿ ಸವೆಸಿದ ಕನ್ನಡಿಗರಿಗೆ ಚೈತನ್ಯದ ಚಿಲುಮೆಯಂತಿದ್ದ ಆ ಹುಡುಗ ಯಾವ ಮುನ್ಸೂಚನೆ ಕೊಡದೆ, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ದುಃಖವನ್ನುಂಟುಮಾಡಿದೆ. ಚಲಿಸುವ ಮೋಡಗಳು ಸಿನಿಮಾದಲ್ಲಿ ‘ಏನ್ ಸರ್ ಹನಿಮೂನ’ ಎಂದು ರಾಜ್ ಮತ್ತು ಅಂಬಿಕಾರನ್ನು ತುಂಟತನದಿಂದ ಪ್ರಶ್ನಿಸಿದ ರಾಮುವಿನ ಪಾತ್ರದಲ್ಲಿ ಅಬಿನಯಿಸಿದ ಮಾ.ಲೋಹಿತ್ ಮುಂದೆ ಪುನೀತ್ ಆಗಿ 40 ವರ್ಶಗಳ ಕಾಲ ಸಿನಿಮಾರಂಗದಲ್ಲಿ ಬಾಲನಟ, ನಾಯಕ ನಟನಾಗಿ ಅಬಿನಯಿಸಿ, ತೆರೆಯ ಮೇಲೆ ಕುಣಿದು ಕುಪ್ಪಳಿಸಿ, ಪ್ರೇಕ್ಷಕರನ್ನು ರಂಜಿಸಿ ಈಗ ನನ್ನದೆಲ್ಲವೂ ಮುಗೀತು ಎಂಬಂತೆ ನಿಶ್ಚೇತನರಾಗಿ ಮಲಗಿರುವುದು ಆಘಾತ ಮೂಡಿಸಿದೆ. ಕಲೆ ಮತ್ತು ಅದು ತಂದುಕೊಡುವ ಖ್ಯಾತಿಯ ಅವಾಂತರಕಾರಿ ಗುಣವನ್ನು ಚೆನ್ನಾಗಿ ಅರಿತಿದ್ದ ಅಪ್ಪು ‘ಕೀರ್ತಿಶನಿ ತೊಲಗಾಚೆ’ ಎಂಬಂತೆ ಬದುಕಿದ್ದು ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದು ಮೇಲ್ಪಂಕ್ತಿ ಎಂದರೆ ಅತಿಶಯೋಕ್ತಿಯಲ್ಲ. ಖ್ಯಾತಿವಂತರಿಗೆ ‘ಕಾಲು ನೆಲದ ಮೇಲಿರಲಿ, ತಲೆ ಹೆಗಲ ಮೇಲಿರಲಿ’ ಎನ್ನುವ ಎಚ್ಚರಿಕೆ ಗಂಟೆಯನ್ನು ಅಪ್ಪು ಚೆನ್ನಾಗಿ ಕೇಳಿಸಿಕೊಂಡಿದ್ದ. ಇದಕ್ಕೆ ಮಾದರಿಯಾಗಿದ್ದ ಅಣ್ಣಾವ್ರ ನೈತಿಕತೆಯೂ ಸಹ ಅಲ್ಲಿ ತನ್ನ ಪ್ರಭಾವ ಬೀರಿದೆ. ಅಪ್ಪುವಿನ ಈ ನಮ್ರತೆ ಮತ್ತು ಸಜ್ಜನಿಕೆಯು ಲಕ್ಷಾಂತರ ಕನ್ನಡಿಗರ ಅನುಬವಕ್ಕೆ ದಕ್ಕಿದ ಬಗೆಯೇ ಒಂದು ಸಿನಿಮಾ ಕತೆಯಂತಿದೆ. ಪುನೀತ್‌ರ ಅಕಾಲಿಕ ಮರಣವು ಹೊಸತಾಗಿ ಮತ್ತೊಂದು ರೂಪದಲ್ಲಿ ಮರುಹುಟ್ಟು ಪಡೆದುಕೊಳ್ಳಲಿ ಎಂಬಂತೆ ಕನ್ನಡಿಗರು ಕಣ್ಣೀರಿಡುತ್ತಿದ್ದಾರೆ. ಅದರಲ್ಲಿಯೂ ಚಿಕ್ಕ ಮಕ್ಕಳು ಅಪ್ಪುವಿನ ಬಲು ದೊಡ್ಡ ಅಭಿಮಾನಿಗಳಾಗಿದ್ದರು. ಇದಂತೂ ಒಂದು ವಿಸ್ಮಯ. ಹಿರಿಯ ಮತ್ತು ಈಗಿನ ಇತರೇ ಸ್ಟಾರ್ ಕಲಾವಿದರಿಗೂ ಸಹ ಈ ಪ್ರಮಾಣದಲ್ಲಿ ಮಕ್ಕಳ ಅಭಿಮಾನಗಳನ್ನು ನಾನಂತೂ ಕಂಡಿಲ್ಲ. ಅದು ಡಾನ್ಸಿಂಗ್‌ನ ಮಾಂತ್ರಿಕ ಹೆಜ್ಜೆಗಳೋ, ಕೋಟ್ಯಾಧಿಪತಿ ಕಾರ್ಯಕ್ರಮದ ಕಾರಣಕ್ಕೋ, ಬೀದಿ ಹುಡುಗನ ವ್ಯಕ್ತಿತ್ವವೋ, ದಣಿವರಿಯದ ಲವಲವಿಕೆಯೋ, ರಾಜಕುಮಾರ ತರಹದ ಸಿನಿಮಾಗಳೋ, ಆ ಮುಗುವಿನಂತ ಮುಗ್ಧ ನಗುವೋ, ಮಕ್ಕಳಿಗೆ ಇವ ನಮ್ಮವ ಎಂದೆನಿಸಿತೋ? ಇಲ್ಲಿ ಅಣ್ಣಾವ್ರಿಗೆ ತಮ್ಮ ಭಾವುಕತೆ ಮತ್ತು ಅಭಿಮಾನದ ಮೂಲಕ ಪ್ರೀತಿಯ ಹೊಳೆ ಹರಿಸಿದ ಅಭಿಮಾನಿಗಳು ಅದನ್ನು ಪುನೀತ್‌ಗೆ ಮುಂದುವರೆಸಿದ್ದು ಕಾಕತಾಳೀಯವಂತೂ ಅಲ್ಲ.

ಹುಟ್ಟಿದಾಗಿನಿಂದಲೂ ಸಿನಿಮಾ ಅಂಗಳದಲ್ಲಿಯೇ ಬೆಳೆದ, ಬಣ್ಣ ಹಚ್ಚಿಕೊಂಡ ಮಾ.ಲೋಹಿತ್‌ಗೆ ಕ್ಲಾಪ್, ಆಕ್ಷನ್, ಸ್ಟಾರ್ಟ, ಕಟ್ ಎಲ್ಲವೂ ದಿನನಿತ್ಯದ ಮಾತಾಗಿತ್ತು. ಒಮ್ಮೆ ತಮ್ಮ ತಾಯಿ ಪಾರ್ವತಮ್ಮನವರ ಕುರಿತು ಮಾತನಾಡುತ್ತಾ ‘ಆಗ ಅವರ ಒಂದು ಕೈಯಲ್ಲಿ ನಾನು ಇದ್ದರೆ ಮತ್ತೊಂದು ಕೈಯಲ್ಲಿ ವ್ಯಾನಿಟಿ ಬ್ಯಾಗ್ ಇರುತ್ತಿತ್ತು’ ಎಂದು ನೆನಪಿಸಿಕೊಂಡಿದ್ದರು. ಇದು ಕೇವಲ ರೂಪಕವಲ್ಲ, ವಾಸ್ತವ ಮಾತ್ರವೂ ಅಲ್ಲ. ಬದಲಿಗೆ ಅನೇಕ ಕತೆಗಳನ್ನು ಹೇಳುತ್ತದೆ. ಆ ಕಾಲವೇ ಹಾಗಿತ್ತು. ರಾಜ್ ಸೂಪರ್‌ಸ್ಟಾರ್ ಆಗಿದ್ದರು. ಆದರೆ ರಾಜ್ ಕುಟುಂಬಕ್ಕೆ ಎಲ್ಲಿಯೋ ಒಂದು ಕೊರತೆ ಕಾಡಿದಂತಿತ್ತು. ಅಣ್ಣಾವ್ರ ಸಿನಿಮಾಗಳು ಯಶಸ್ಸು ಗಳಿಸುತ್ತಿದ್ದರೂ ಸಹ ಸಂಭಾವನೆ ಮಾತ್ರ ಕಡಿಮೆ ಕೊಡುತ್ತಿರುವುದು ಪಾರ್ವತಮ್ಮನವರ ಗಮನಕ್ಕೆ ಬಂದು ಸ್ವತಃ ವಜ್ರೇಶ್ವರಿ ಕಂಬೈನ್ಸ್ ಮೂಲಕ ನಿರ್ಮಾಪಕಿಯಾದರು ಮತ್ತು 1975ರಲ್ಲಿ ತ್ರಿಮೂರ್ತಿ ಸಿನಿಮಾದಿಂದ ಆರಂಬಿಸಿ ನಂತರ ೮೦ರ ದಶಕದ ಮಧ್ಯದವರೆಗೆ ಗಿರಿಕನ್ಯೆ, ಶಂಕರ್ ಗುರು, ತಾಯಿಗೆ ತಕ್ಕ ಮಗ, ರವಿಚಂದ್ರ, ವಸಂತಗೀತ, ಭಾಗ್ಯವಂತ, ಹೊಸ ಬೆಳಕು, ಹಾಲುಜೇನು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಬೆಟ್ಟದ ಹೂವು ಮುಂತಾದ ಸಿನಿಮಾಗಳನ್ನು ನಿರ್ಮಿಸಿದರು. ಈ ಎಂಟರಿಂದ ಹತ್ತು ವರ್ಶಗಳಲ್ಲಿ ಪಾರ್ವತಮ್ಮ ಯಶಸ್ವೀ ನಿರ್ಮಾಪಕಿಯಾಗಿ ಬೆಳೆದಂತೆ ಜೊತೆಜೊತೆಯಲ್ಲಿ ಮಾ.ಲೋಹಿತ್ ಬಾಲ ಕಲಾವಿದನಾಗಿ ಜನಪ್ರಿಯನಾಗುತ್ತಾ ಸುಮಾರು ಹತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಬಿನಯಿಸಿದ. ಆ ಮೂಲಕ ನಟನೆಯ ವೃತ್ತಿಪರತೆಯನ್ನು ಸಹ ಮೈಗೂಡಿಸಿಕೊಂಡಿದ್ದ. ಹೀಗೆ ತಾಯಿ ಮತ್ತು ಸಣ್ಣ ವಯಸ್ಸಿನ ಮಗ ಒಂದೇ ಅವಧಿಯಲ್ಲಿ ಮೇಲ್ಮುಖ ಚಲನೆಯಲ್ಲಿರುವುದು ಸಹ ಫ್ಯಾಂಟಸಿ ಕತೆಯಂತಿದೆ.

‘ಬೆಟ್ಟದ ಹೂವು’ ಸಿನಿಮಾದಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ದತೆಯನ್ನು ವ್ಯಕ್ತಪಡಿಸುವ ಅಬಿನಯವು ಮಾ.ಲೋಹಿತ್‌ನ ತನ್ಮಯತೆಗೆ ಸಾಕ್ಷಿಯಂತಿದೆ. ದುಡಿಯುವ ವರ್ಗ ಹಿನ್ನಲೆಯ ಬಾಲಕ ರಾಮು ಕುವೆಂಪು ಅವರ ರಾಮಾಯಣದರ್ಶನಂ ಪುಸ್ತಕ ಕೊಳ್ಳಲು ಶೆರ್ಲಿ ಮೇಡಂಗೆ ಹೂಗಳನ್ನು ಮಾರಿ ಕಾಸುಕಾಸು ಕೂಡಿಟ್ಟಿದ್ದ. ಆದರೆ ಬಾಲಕನ ಆಸೆ ಕೈಗೂಡಲಿಲ್ಲ. ಏಕೆಂದರೆ ಆ ರೊಕ್ಕದಲ್ಲಿ ಚಳಿಯಲ್ಲಿ ನಡುಗುತ್ತಿರುವ ತನ್ನ ತಂಗಿಯರಿಗೆ ಕಂಬಳಿ ಕೊಂಡುಕೊಂಡ. ಕನ್ನಡದ ಪ್ರೇಕ್ಷಕರು ಬಂಗಾರದ ಮನುಷ್ಯದಲ್ಲಿ ಚಪ್ಪಲಿ ಬಿಟ್ಟು ಮನೆ ತೊರೆದಿದ್ದ ರಾಜೀವ ಹತ್ತು ವರ್ಶಗಳ ನಂತರ ಬೆಟ್ಟದ ಹೂವಿನ ರಾಮು ರೂಪದಲ್ಲಿ ಮರಳಿಬಂದ ಎಂಬಂತೆ ಭಾವುಕರಾಗಿದ್ದು ನಿನ್ನೆಮೊನ್ನೆ ನಡೆದಂತಿದೆ. ನಿರ್ದೇಶಕ ಎನ್ನೆಲ್ ವಾಸ್ತವವಾದಿ ನೆಲೆಯಲ್ಲಿ ಈ ಸಿನಿಮಾ ಕಟ್ಟಿಕೊಟ್ಟರೆ ಪ್ರೇಕ್ಷಕರು ಅದನ್ನು ಭಾವುಕತೆಯ ನೆಲೆಯಲ್ಲಿ ಸ್ವೀಕರಿಸಿದ್ದು ಬೆರಗು ಮೂಡಿಸುತ್ತದೆ. ಈ ಕಾರಣಕ್ಕೆ ಸಿನಿಮಾ ಎನ್ನುವುದು ಒಂದು ಮಾಯ್ಕಾರ. ಭಕ್ತ ಪ್ರಹ್ಲಾದ ಸಿನಿಮಾದ ಶೂಟಿಂಗ್ ಸಂದರ್ಬದಲ್ಲಿ ಹಿರಣ್ಯಕಶುಪು ಪಾತ್ರದಲ್ಲಿ ಕೆಂಗಣ್ಣು ಬಿಟ್ಟುಕೊಂಡು ಅಬ್ಬರಿಸುತ್ತಿದ್ದ ರಾಜ್‌ರಿಗೆ ‘ಅಪ್ಪಾ ಆ ರೀತಿ ಕಣ್ಣು ಬಿಡಬೇಡ, ಭಯವಾಗುತ್ತದೆ’ ಎಂದು ಪ್ರಹ್ಲಾದ ಪಾತ್ರದಲ್ಲಿ ರಿಹರ್ಸಲ್ ಮಾಡುತ್ತಿದ್ದ ಮಾ.ಲೋಹಿತ್ ಅಲವತ್ತುಕೊಂಡಿರುವ ಘಟನೆ ಬಹಳ ವರ್ಶಗಳ ಕಾಲ ನನಗೆ ಕಾಡಿತ್ತು. ಒಂದು ಪಕ್ಕಾ ವೃತ್ತಿಪರ ಕಲಾವಿದರ ಆ ಕುಟುಂಬದಲ್ಲಿ ಕಲೆಯ ಕುರಿತು ಆ ಬದ್ದತೆ ಹೇಗೆ ಮೊಳಕೆಯೊಡೆಯಿತು, ಬೆಳೆದು ಹೆಮ್ಮರವಾಯಿತು ಎನ್ನುವುದು ಇಂದಿಗೂ ವಿಸ್ಮಯ. ‘ಸುಮಕೆ ಸೌರಭ ಬಂದ ಗಳಿಗೆ ಯಾವುದು’?

ಕನ್ನಡ ಸಿನಿಮಾರಂಗದ ಅನುಕೂಲವಂತ, ಪ್ರಭಾವಶಾಲಿ ಕುಟುಂಬ ಮತ್ತು ಸೂಪರ್‌ಸ್ಟಾರ್ ತಂದೆ ಈ ಎಲ್ಲಾ ಹಿನ್ನಲೆಯ ಕಾರಣಕ್ಕೆ ಅಪ್ಪುವಿಗೆ ಸುಲಬವಾಗಿ ಬಾಲನಟನಿಂದ ನಾಯಕ ನಟನಾಗಿ ಭಡ್ತಿ ಪಡೆಯಲು, ತನ್ನ ಬಣ್ಣದ ಬದುಕಿನ ಮತ್ತೊಂದು ಏಣಿಯನ್ನು ಹತ್ತಲು ಸಾದ್ಯವಾಯಿತು. ಅಲ್ಲಿ ಏಳುಬೀಳುಗಳಿರಲಿಲ್ಲ. ದೋಣಿಯೂ ಓಲಾಡುತ್ತಿರಲಿಲ್ಲ. ಆದರೆ ಇಶ್ಟು ಮಾತ್ರವಾಗಿದ್ದರೆ ಆ ಕತೆ ಇಂಟರ್‌ವಲ್‌ಗೆ ಮುಗಿಯುತ್ತಿತ್ತೇನೋ. ಆದರೆ ನಡೆದದ್ದೇ ಬೇರೆ. ತೊಂಬತ್ತರ ದಶಕದಲ್ಲಿ ಸಂಪೂರ್ಣವಾಗಿ ಬಣ್ಣದ ಬದುಕಿನಿಂದ ಕಣ್ಮರೆಯಾದ ಲೋಹಿತ್‌ನ ಕುರಿತು ಆಗೊಮ್ಮೆ ಈಗೊಮ್ಮೆ ತೇಲಿ ಬರುತ್ತಿದ್ದ ಗಾಳಿ ಸುದ್ದಿಗಳು ಅಣ್ಣಾವ್ರ ಅಬಿಮಾನಿಗಳಿಗೆ ಆತಂಕ ಮೂಡಿಸುತ್ತಿತ್ತು. ಲೋಹಿತ್ ಗಣಿಗಾರಿಕೆ ಮಾಡಲು ಮುಂದಾಗಿದ್ದಾರೆ, ಆದರೆ ರಾಜ್ ಅದನ್ನು ಒಪ್ಪಲಿಲ್ಲ ಹಾಗೆ-ಹೀಗೆ ಎನ್ನುವ ವದಂತಿಗಳು ಅಭಿಮಾನಿ ದೇವರುಗಳಿಗೆ ಕಸಿವಿಸಿಯುಂಟು ಮಾಡಿದ್ದಂತೂ ಸತ್ಯ. ನಮ್ಮ ಪ್ರೀತಿಯ ಲೋಹಿತ್ ಅಣ್ಣಾವ್ರಿಗೆ ನೋವುಂಟು ಮಾಡಿದನೇ ಎನ್ನುವ ಆತಂಕ-ನೋವೂ ಸಹ ಅದು. ಆದರೆ ಆಂಟಿ ಕ್ಲೈಮಾಕ್ಸ್ ರೀತಿ 24ನೇ ವಯಸ್ಸಿನಲ್ಲಿ ಲೋಹಿತ್ ತಾನು ಪ್ರೀತಿಸಿದ ಅಶ್ವಿನಿಯವರನ್ನು ಮದುವೆಯಾಗಿದ್ದು, 2002ರಲ್ಲಿ ಪುನೀತ್ ಆಗಿ ‘ಅಪ್ಪು’ ಸಿನಿಮಾದ ಮೂಲಕ ನಾಯಕ ನಟನಾಗಿದ್ದು ಎಲ್ಲವೂ ಸೆಲ್ಯುಲಾಯ್ಡ್ ಪರದೆಯ ಮೇಲೆ ಸುರುಳಿಯಾಗಿ ಬಿಚ್ಚಿಕೊಂಡಿದ್ದು ಮಾತ್ರ ಒಂದು ಸಹಜ ಘಟನೆಯೆಂಬಂತೆ ನಡೆದುಹೋಯಿತು. ಇಂಟರ್‌ವೆಲ್ ವಿರಾಮ ಮುಗಿದು ಹೊಸ ಕತೆಯ ನಿರೂಪಣೆ ಪ್ರಾರಂಬವಾಗಿತ್ತು. ಕ್ರಮೇಣ ಸಿನಿಮಾರಂಗದ ಮಾಯಾಜಾಲದಲ್ಲಿ ಕುದುರಿಕೊಳ್ಳತೊಡಗಿದ ಅಪ್ಪು ಅದನ್ನು ಪಳಗಿಸುವುದನ್ನು ಕಲಿತುಕೊಂಡರು. ರಾಜ್‌ರವರ ಆ ಲೆಗಸಿಯನ್ನು ಹೆಗಲ ಮೇಲೆ ಹೊತ್ತುಕೊಳ್ಳುವುದರ ಆ ಹೊಣೆಗಾರಿಕೆ ಮತ್ತು ಅದರ ಭಾರದ ಕುರಿತು ಪುನೀತ್‌ಗೆ ಮನವರಿಕೆಯಾದಂತಿತ್ತು. ಬೆಟ್ಟದ ಹೂ ಸಿನಿಮಾದ ರಾಮು ಪಾತ್ರದಶ್ಟು ಸಲೀಸಾಗಿ ಶಿವರಾಜ್ ಅರಸು ಪಾತ್ರ ಮಾಡುವುದು ತುಂಬಾ ಕಶ್ಟ ಎಂಬುದು ಶೀಘ್ರವಾಗಿ ಅರಿವಿಗೆ ಬರತೊಡಗಿತ್ತು. ಅದಕ್ಕೆ ಅಬಿನಯದ ಪರಿಣಿತಿ ಮಾತ್ರವಲ್ಲ ಜೊತೆಗೆ ಹೆಗಲೇರಿರುವ ರಾಜ್‌ರ ಪರಂಪರೆ ತನ್ನನ್ನು ಪೊರೆಯುತ್ತದೆಯೋ ಅಥವಾ ಕಾಲೆಳೆಯುತ್ತದೆಯೋ ಎನ್ನುವ ಗೊಂದಲದಿಂದ, ಸಂಕೀರ್ಣತೆಯಿಂದ ಮುಕ್ತನಾಗುವ ತುರ್ತು ಅವಶ್ಯಕತೆಯೂ ಪುನೀತ್‌ಗಿತ್ತು. ಅದನ್ನು ನಿಭಾಯಿಸಿದರೇ? ಬಹುಶಃ ಹೌದು.

ನಂತರ ಪುನೀತ್ ಅಬಿನಯಿಸಿದ ಅಭಿ, ವೀರ ಕನ್ನಡಿಗ, ಮೌರ್ಯ, ನಮ್ಮ ಬಸವ, ಅಜಯ್ ತರಹದ ಅತಿ ಸಾಧಾರಣ ಸಿನಿಮಾಗಳನ್ನು ಪ್ರೇಕ್ಷಕರು ಆತ ಅಣ್ಣಾವ್ರ ಮಗ ಎಂದೇ ವೀಕ್ಷಿಸಿದರು ಮತ್ತು ಈತನಲ್ಲಿ ವಿಶೇಷವೇನಿಲ್ಲ, ಆದರೂ ರಾಜ್ ಕುಟುಂಬದ ಅಚ್ಚುಮೆಚ್ಚಿನ ಅಪ್ಪು ಎನ್ನುವ ಅಭಿಮಾನದ ಕಾರಣಕ್ಕೆ ಹಲವು ಸಿನಿಮಾಗಳು ಬೋರ್ಡಿಗೆ ನಿಲ್ಲುವಂತಾಯಿತು. ಇಲ್ಲಿ ಅಪ್ಪುವಿನ ಯಾವುದೇ ಓರೆಕೋರೆಗಳಿಲ್ಲದ ಡ್ಯಾನ್ಸಿಂಗ್ ಮೋಡಿಯೂ ಸಹ ತನ್ನ ಪ್ರಭಾವ ಬೀರಿದೆ. ಒಂದುವೇಳೆ ಯಾವುದೇ ಗಾಡ್‌ಫಾದರ್ ಇಲ್ಲದ ಪ್ರತಿಭಾವಂತ ನಟನೊಬ್ಬ ಈ ಲಂಗುಲಗಾಮಿಲ್ಲದ ಸಿನಿಮಾಗಳಲ್ಲಿ ಅಬಿನಯಿಸಿದ್ದರೆ ಎಂದೋ ತೋಪಾಗುತ್ತಿದ್ದ.

ಆದರೆ ಪ್ರತಿಭಾವಂತ ಕಲಾವಿದನಾದ ಪುನೀತ್‌ಗೆ ಬಹುಶಃ ಇದು ಕಾಡುತ್ತಿತ್ತು ಎನಿಸುತ್ತದೆ.
ಆದಷ್ಟು ಬೇಗ ಈ ಹಾಡಿದ್ದೇ ಹಾಡು ಎಂಬ ಬಲೆಯಿಂದ ಬಿಡಿಸಿಕೊಂಡು ಹೊರಬರದೇ ಹೋದರೆ ಮೂರಕ್ಕಿಂತ ಕೆಳಗಿಳಿಯುವ ಆತಂಕವೂ ಆತನ ಮನದಲ್ಲಿ ದ್ವಂವ್ವ ಮೂಡಿಸಿದಂತಿತ್ತು. ತನಗೆ ಇಮೇಜ್ ಮುಖ್ಯವಲ್ಲ ಮತ್ತು ಅದನ್ನು ನೆಚ್ಚಿಕೊಂಡರೆ ದೋಣಿಯನ್ನು ಬಹುಕಾಲ ಹುಟ್ಟುಹಾಕಲು ಅಸಾದ್ಯವೆಂದು ಅಪ್ಪುಗೆ
ಅರ್ಥವಾದಂತಿತ್ತು. ಆಗ ಸೀಮಿತ ಪರಿಧಿಯೊಳಗೆ ಸಣ್ಣ ಮಟ್ಟದ ಪ್ರಯೋಗಗಳಿಗೆ ತೆರೆದುಕೊಂಡಿದ್ದು ಅವರ ಭವಿಷ್ಯದ ದಿಕ್ಕನ್ನು ತಾತ್ಕಾಲಿಕವಾಗಿ ಬದಲಾಯಿಸಿತು. ಹೊಸ ಬಗೆಯ ಸಿನಿಮಾಗಳಿಗೆ ತುಡಿಯುತ್ತಿದ್ದ ಪುನೀತ್ ಅದಕ್ಕಾಗಿ ತಮಿಳುನಾಡಿನ ನಿರ್ದೇಶಕ ಮಿಷ್ಕಿನ್ ಜೊತೆಗೆ ಹೊಸ ಯೋಜನೆ ಕುರಿತಾಗಿ ಮಾತುಕತೆ ಸಹ ನಡೆಸಿದರು. ಆದರೆ ಕನ್ನಡಿಗರ ದೌರ್ಬಾಗ್ಯ, ಅದು ಅಪೂರ್ಣವಾಗಿ ಉಳಿಯಿತು. ಆದರೆ ಹೊಸ ಬಗೆಯ ಸಿನಿಮಾದೆಡಗಿನ ತನ್ನ ತುಡಿತವನ್ನು ಬಿಟ್ಟುಕೊಡದೆ ಉತ್ತಮ ಕತೆಯನ್ನು ಸಿನಿಮಾ ಫಾರ್ಮ್‌ಗೆ ಮತ್ತು ಚೌಕಟ್ಟಿಗೆ ಅಳವಡಿಸಿಕೊಂಡು ಸಹನೀಯವಾದ ಮತ್ತು ಲವಲವಿಕೆಯ ನಿರೂಪಣೆಯನ್ನು ಕಟ್ಟಿಕೊಂಡರೆ ಜನಪ್ರಿಯ ಶೈಲಿಯಲ್ಲಿಯೇ ಗುಣಮಟ್ಟದ ಸಿನಿಮಾಗಳನ್ನು ಕೊಡುವುದು ಅಸಾದ್ಯವೇನಲ್ಲ ಎಂದರಿತ ಪುನೀತ್ ಈ ಹೊಸ ಬದಲಾವಣೆಗೆ ತನ್ನನ್ನು ಒಗ್ಗಿಸಿಕೊಂಡರು. ಅದರ ಫಲವೇ ‘ಮಿಲನ’, ‘ಅರಸು, ‘ಪೃಥ್ವಿ’ ಸಿನಿಮಾಗಳು. ಇವು ಯಾವುದೇ ಪ್ರತಿಭಾವಂತ ಕಲಾವಿದನಿಗೆ ಸವಾಲೊಡ್ಡುವ ಪಾತ್ರಗಳೇನಲ್ಲ. ಆದರೆ ಸೀಮಿತ ಚೌಕಟ್ಟಿನ, ಸವಕಲು ಹಾದಿ ತುಳಿಯುವ, ಬದಲಾವಣೆಯೇ ಸ್ಥಗಿತಗೊಂಡ ಕನ್ನಡ ಸಿನಿಮಾರಂಗದಲ್ಲಿ ಪುನೀತ್ ಹೊಸ ದಾರಿಯ ಹುಡುಕಾಟಕ್ಕೆ ತೊಡಗಿದಾಗ ಈ ಪಾತ್ರಗಳು ಮತ್ತು ಚಿತ್ರಕತೆ ವರವಾಗಿ ದೊರಕಿದ್ದು ಮಾತ್ರ ಸತ್ಯ. ‘ಮಿಲನ’ ಸಿನಿಮಾದಲ್ಲಿ ಪುರುಷಾದಿಪತ್ಯದ ಅಹಂಗಳನ್ನು ಕಳಚಿಕೊಂಡ ಆಕಾಶ್ ತನ್ನ ಹೆಂಡತಿ ಅಂಜಲಿಯ ಸ್ವಾತಂತ್ರ್ಯವನ್ನು ಗೌರವಿಸುತ್ತಾನೆ ಮತ್ತು ಸಿನಿಮಾದ ಉದ್ದಕ್ಕೂ Underplay ಶೈಲಿಯ ಪಾತ್ರದಲ್ಲಿ ಮಾಗಿದ ಅಬಿನಯ ನೀಡಿದ ಪುನೀತ್ ತಾನೊಬ್ಬ ಪ್ರಬುದ್ದ ನಟನೆಂದು ಸಾಬೀತುಪಡಿಸಿದ. ‘ಅರಸು’ ಟಿಪಿಕಲ್ ಅಣ್ಣಾವ್ರ ಘಮಲಿನ ಸಿನಿಮಾ. ಮಾನವನಾಗಿ ಹುಟ್ಟಿ ನೀನು ಏನೇನು ಕಂಡಿ ಎಂಬ ಪ್ರಶ್ನೆಗೆ ಬಾಳಿನ ಸೌಂದರ್ಯವನ್ನು ಜನಸಾಮಾನ್ಯರಲ್ಲಿ ಹುಡುಕು ಎನ್ನುವ ಆದರ್ಶದ ಹುಡುಕಾಟದಲ್ಲಿ ಬೀದಿಗಿಳಿಯುವ ಶ್ರೀಮಂತ ಶಿವರಾಜ್ ಅರಸ್ ಬಡವರ ಬದುಕಿನ ನಗು ಮತ್ತು ಅಳು ಎರಡನ್ನೂ ಮುಖಾಮುಖಿಯಾಗುತ್ತಾನೆ. ಕಡೆಗೂ ಉಳಿಯುವುದು ಮಾನವೀಯತೆ ಮತ್ತು ಆತ್ಮಘನತೆ ಎಂದು ಅರ್ಥವಾಗಿ ಮಾಗಿದ ಮನುಷ್ಯನಾಗುತ್ತಾನೆ. ಇದು ಜ್ಞಾನೋದಯ. ಆ ಪಾತ್ರದಲ್ಲಿ ತನ್ಮಯತೆಯಿಂದ ಅಬಿನಯಿಸಿದ ಪುನೀತ್ ‘ಅರಸು’ ಸಿನಿಮಾದ ಯಶಸ್ಸಿನಿಂದ ಉತ್ತೇಜಿನಾಗಿ ಮತ್ತೊಂದು ವಿಬಿನ್ನ ಪ್ರಯೋಗಕ್ಕೆ ಒಡ್ಡಿಕೊಂಡ. ‘ಪೃಥ್ವಿ’ ಸಿನಿಮಾದಲ್ಲಿ ಬಳ್ಳಾರಿ ಗಣಿಚೋರರ ವಿರುದ್ದ ಕಾರ್ಯಪ್ರವೃತ್ತನಾಗುವ ಐಎಎಸ್ ಅದಿಕಾರಿಯ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ. ಫ್ಯೂಡಲ್ ಶಕ್ತಿಗಳ ವಿರುದ್ದದ ಹೋರಾಟವು ಎಲ್ಲಿಯೂ ಅತಿರೇಕವೆನಿಸದಂತೆ ಎಚ್ಚರ ವಹಿಸಿದ ಮತ್ತು ಸಂಯಮದಿಂದ ಅಬಿನಯಿಸಿದ. ಕಡೆಗೂ ತಾನು ಬಯಸಿದ ಹೊಸ ಇಮೇಜ್ ದಕ್ಕಿದ ಖುಶಿಯೂ ಸಹ ಅಪ್ಪುಗೆ ಹೊಸ ಸ್ಪೂರ್ತಿ ತಂದಂತಿತ್ತು.

ಮತ್ತೆ ಮತ್ತೆ ಹೊಸತನದ ಹುಡುಕಾಟದಲ್ಲಿದ್ದ ಅಪ್ಪು ತನ್ನ ಹೀರೋಗಿರಿ, ಇಮೇಜ್ ಎಲ್ಲವನ್ನೂ ಬದಿಗಿಟ್ಟು ಗಿರಿರಾಜ್ ನಿರ್ದೇಶನದ ‘ಮೈತ್ರಿ’ ಸಿನಿಮಾದಲ್ಲಿ ಅಬಿನಯಿಸಿದ್ದು ಅಚ್ಚರಿ ಸಂಗತಿಯೇನಲ್ಲ. ಹೊಸ ನಿರ್ದೇಶಕ, ಯಾವುದೇ ಪ್ರಭಾವಶಾಲಿ ಬ್ಯಾನರ್ ಇಲ್ಲ, ಆದರೂ ಅದು ವಿಬಿನ್ನ ಪ್ರಯೋಗ ಎನ್ನುವ ಕಾರಣಕ್ಕೆ ಮೈತ್ರಿ ಸಿನಿಮಾದ ಬಾಗವಾಗಿದ್ದು ಇತರೇ ಸ್ಟಾರ್‌ಗಳಿಗೆ ಮಾದರಿಯಾಗಿತ್ತು. ಆದರೆ ಇದು ಮುಂದುವರೆಯಲಿಲ್ಲ. ಇದಕ್ಕೆ ಗಾಂದಿನಗರವನ್ನೇ ದೂಶಿಸಬೇಕು ಇವುಗಳ ಮುಂದುವರೆದ ಭಾಗವೇ ಸೂರಿ ನಿರ್ದೇಶನದ ‘ಜಾಕಿ’. ಪಕ್ಕಾ ಅರಾಜಕತೆಯ ಈ ಸಿನಿಮಾ ಆಧುನಿಕೋತ್ತರ ಭಾರತದ ಎಲ್ಲಾ ತಿಕ್ಕಲುತನ ಮತ್ತು ಕೇಂದ್ರದಿಂದ ಪಕ್ಕಕ್ಕೆ ಜರಗುವ ವಿಲಕ್ಷಣ ಸ್ವಭಾವಗಳ ಉಡಾಫೆತನದ ನಿರೂಪಣೆ ಈ ಸಿನಿಮಾದ ಜೀವಾಳವಾಗಿತ್ತು. ಕ್ರಮ ತಪ್ಪುವುದೇ ಅಲ್ಲಿನ ಮಾದರಿಯಾಗುವ ಆ ಅಸಹಜತೆಯ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ಪುನೀತ್ ಮುಗ್ಧತೆ ಮತ್ತು ಟಪೋರಿತನದ ಆ ಪಾತ್ರವನ್ನು ಹದವರಿತು ನಟಿಸಿದ. ಆದರೆ ಎಲ್ಲೋ ಒಂದೆಡೆ ಚಿತ್ರಕತೆ ಕೈಕೊಟ್ಟಂತಿತ್ತು. ಸೂರಿಯಂತಹ ಪ್ರತಿಭಾವಂತ ನಿರ್ದೇಶಕ, ಪುನೀತ್‌ನಂತಹ ಪ್ರಬುದ್ದ ನಟ ಜೊತೆಗೂಡಿದ್ದರೂ ಸಹ ‘ಜಾಕಿ’ ತಾಳ ತಪ್ಪಿದ್ದು ಸ್ಪಷ್ಟವಾಗಿತ್ತು. ಒಂದುವೇಳೆ ‘ಜಾಕಿ’ ಸಿನಿಮಾ ತನ್ನೊಡಲೊಳಗಿನ ಆಶಯಗಳಿಗೆ ತಕ್ಕನಾಗಿ ರೂಪುಗೊಂಡಿದ್ದರೆ ಅದು ಕನ್ನಡ ಚಿತ್ರರಂಗದ ಹೊಸ ತಿರುವಿಗೆ ಕಾರಣವಾಗುತ್ತಿತ್ತು. ಸೂರಿ ಮತ್ತು ಪುನೀತ್‌ರ ಸಿನಿಮಾ ಬದುಕು ಸಹ ಹೊಸ ಆಯಾಮಗಳಿಗೆ ತೆರೆದುಕೊಳ್ಳುತ್ತಿತ್ತು.

ಆದರೆ ಹಾಗಾಗಲಿಲ್ಲ. ಒಂದು ಹೊಸ ಸಾದ್ಯತೆ ಕೈತಪ್ಪಿತು. ಆದರೂ ತನ್ನ ಪ್ರಯೋಗಗಳನ್ನು ಮುಂದುವರೆಸಿದ ಪುನೀತ್ ‘ಪರಮಾತ್ಮ’ ಸಿನಿಮಾದಲ್ಲಿ ಸಂಪೂರ್ಣವಾಗಿ ಲೀನವಾಗಿ ಅಬಿನಯಿಸಿದ. ಪರಂ ಪಾತ್ರವು ಅಪ್ಪುವಿನ ಅತ್ಯುತ್ತಮ ನಟನೆಗಳಲ್ಲೊಂದು. ಆದರೆ ಇದಕ್ಕೆ ಸರಿಸಾಟಿಯಾಗಿ ಸಿನಿಮಾ ಕಟ್ಟಿಕೊಡಲು ಯೋಗರಾಜ್ ಭಟ್ ಸೋತರು. ಅನಗತ್ಯವಾಗಿ ತಮ್ಮ ತಿಕ್ಕಲುತನಗಳನ್ನು ಪ್ರಯೋಗಿಸಿ ಅದನ್ನು ರಂಜನೆ ಎಂದು ಮರೆಮೋಸದಲ್ಲಿ ಅತಿಯಾಗಿ ವಿಜೃಂಬಿಸಿದ ಯೋಗರಾಜರು ಸಿನಿಮಾದ ಗತಿಯನ್ನೇ ಹಾಳು ಮಾಡಿದರು. ಈ ಸಿನಿಮಾ ಏನು ಹೇಳಲು ಬಯಸುತ್ತದೆ ಎಂದು ಪ್ರೇಕ್ಷಕ ತಲೆ ಕೆರೆದುಕೊಂಡಾಗ ಅದರ ಹಣೆಬರಹ ನಿರ್ದಾರವಾದಂತೆ. ಬಹುಶಃ ‘ಪರಮಾತ್ಮ’ದ ಸೋಲಿನಿಂದ ಪುನೀತ್ ಭ್ರಮನಿರಸನಕ್ಕೆ ಒಳಗಾದರು ಎನಿಸುತ್ತದೆ.

ಆ ನಂತರ ಬಂದ ಸಿನಿಮಾಗಳು ನಿರಾಶೆ ಉಂಟುಮಾಡಿದವು. ಬಂದಾ ಪುಟ್ಟ, ಹೋದಾ ಪುಟ್ಟ ರೀತಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಈ ಸಿನಿಮಾಗಳು ಪುನೀತ್‌ರ ಕೆರಿಯರ್‌ನ ಹಿನ್ನಡೆಗೆ ಕಾರಣವಾಯಿತು. ತಾನು ಚಾಲ್ತಿಯಲ್ಲಿರಲು ಆಯ್ಕೆ ಮಾಡಿಕೊಂಡ ನಿರ್ದಾರದಿಂದಾಗಿ ಹೊಸ ಬಗೆಯ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಆ ಪಯಣ ಹಠಾತ್ತನೆ ಕೊನೆಗೊಂಡಿತು. ರೀಮೇಕ್ ಸಿನಿಮಾಗಳ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿಕೊಂಡರು. ಪುನೀತ್ ಒಳಗೊಂಡಂತೆ ಅನೇಕ ಪ್ರತಿಭಾನ್ವಿತ ಕಲಾವಿದರು ಹತಾಶರಾಗುವುದಕ್ಕೆ ಹೊಸತನದ ತುಡಿತಕ್ಕೆ ಮುಂದಾಗಲು ನಿರಾಕರಿಸುವ ಕನ್ನಡ ಸಿನಿಮಾರಂಗದ ನಿಷ್ಕ್ರಿಯತೆಯೂ ಸಹ ಭರಪೂರಾ ಕೊಡುಗೆ ನೀಡಿದೆ. ಮುಖ್ಯವಾಗಿ ಕನ್ನಡದಲ್ಲಿ ಸೂಕ್ಷ್ಮ ಸಂವೇದನೆಯ ಗುಣಮಟ್ಟದ ನಿರ್ದೇಶಕರ ಕೊರತೆಯ ಕಾರಣಕ್ಕೆ ಇತರೇ ಕಲಾವಿದರಂತೆ ಪುನೀತ್ ಸಹ ಬಲಿಪಶುವಾದರು. ಅವರಿಗೆ ಬಾಲಾ, ವೇಟ್ರಿಮಾರನ್, ಮಿಷ್ಕಿನ್, ಪ.ರಂಜಿತ್, ಸಸಿ ಕುಮಾರ್ ತರಹದ ನಿರ್ದೇಶಕರು ದೊರಕಿದ್ದರೆ ಪುನೀತ್‌ರ ಮೂರನೇ ಇನ್ನಿಂಗ್ಸ್ ಚೇತೋಹಾರಿಯಾಗಿ ‘ಟೇಕ್ ಆನ್’ ಆಗುತ್ತಿತ್ತು. ಆದರೆ ಅದು ಕೇವಲ ‘ರೆ’ಗಳ ಪ್ರಪಂಚದಲ್ಲಿ ಕರಗಿಹೋಯಿತು. ತಮಿಳಿನ ‘ಪೋರಾಲಿ’ ಸಿನಿಮಾದ ರೀಮೇಕ್ ‘ಯಾರೇ ಕೂಗಾಡಲಿ’ನಲ್ಲಿ ನಟಿಸಿದ ಪುನೀತ್ ಯಾಕೋ ತಮ್ಮ ಲವಲವಿಕೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಅದರ ನಿರ್ದೇಶಕ ಸಮುದ್ರಖಣಿಗೆ ಗಾಂಧಿನಗರದಿಂದ ಯಾವುದೇ ಬಗೆಯ ಕ್ರಿಯಾಶೀಲ ಬೆಂಬಲ ದೊರಕದೆ ಅದು ತೋಪಾಯಿತು. ಪುನೀತ್‌ಗೆ ಸಿಕ್ಕ ಒಂದು ಅವಕಾಶವೂ ಹೀಗೆ ಕೈತಪ್ಪಿ ಹೋಯಿತು.
ಕುಣಿದು, ಕುಪ್ಪಳಿಸಿ, ಅಭಿನಯಿಸಿ ನಮ್ಮನ್ನೆಲ್ಲಾ ರಂಜಿಸಿದ ಆ ಮುಗ್ಧ ನಗುವಿನ ಅಪ್ಪು ನನ್ನದೆಲ್ಲಾ ಮುಗೀತು ಎನ್ನುವಂತೆ ನಿರ್ಗಮಿಸಿದ್ದಾರೆ. ಸದ್ಯಕ್ಕಂತೂ ಖಿನ್ನತೆ, ಶೂನ್ಯ ತುಂಬಿಕೊಂಡಿದೆ. ಅನೇಕ ಏಳುಬೀಳುಗಳನ್ನು ಕಂಡ ರಾಜ್ ಕುಟುಂಬ ಇಂತಹ ದುಃಖ, ಖಾಲಿತನವನ್ನು ಹೇಗೆ ಭರಿಸಬಲ್ಲರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರವಂತೂ ಇಲ್ಲ. ನನಗಂತೂ ಟಪೋರಿಯಾಗಿ, ಮುಗ್ಧನಾಗಿ, ಬೀದಿ ಹುಡುಗನಾಗಿ, ಜಗವನ್ನೇ ಗೆದ್ದ ಧೀರನಾಗಿ ‘ಎಕ್ಕ, ರಾಜ, ರಾಣಿ ನಿನ್ನ ಕೈಯೊಳಗೆ, ಹಿಡಿ ಮಣ್ಣು ನಿನ್ನ ಬಾಯೊಳಗೆ..,, ದೇವ್ರವನೇ ನೀ ನೈಂಟಿ ಹೊಡಿ…’ ಎಂದು ಕುಣಿದು ಕುಪ್ಪಳಿಸಿದ ಅಪ್ಪುವಿನ ಆ ಚೈತನ್ಯದ ಚಿಲುಮೆ ಕಾಡುತ್ತಲೇ ಇದೆ…. ಏನೋ ಹೇಳಲು ಬಯಸುತ್ತಿದೆ….

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...