ಆಫ್ರಿಕಾ ಖಂಡದ ಸಿಯೆರಾ ಲಿಯೋನ್ ದೇಶದ ರಾಜಧಾನಿಯಲ್ಲಿ ಶುಕ್ರವಾರ ಇಂಧನ ಟ್ಯಾಂಕರ್ ಡಿಕ್ಕಿಯಾದ ಬಳಿಕ ಸ್ಫೋಟಗೊಂಡಿದ್ದು, ತೊಂಬತ್ತೊಂದು ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಿಯೆರಾ ಲಿಯೋನ್‌ದ ಕೇಂದ್ರ ಶವಾಗಾರ ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರವು ಸಾವಿನ ಸಂಖ್ಯೆಯನ್ನು ನಿಖರವಾಗಿ ತಿಳಿಸಿಲ್ಲ. ರಾಜಧಾನಿ ಫ್ರೀಟೌನ್‌ನಲ್ಲಿರುವ ಸೆಂಟ್ರಲ್ ಸ್ಟೇಟ್ ಮೋರ್ಗ್‌ನ ವ್ಯವಸ್ಥಾಪಕರು ಸ್ಫೋಟದ ನಂತರ 91 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ರಾಜಧಾನಿಯಲ್ಲಿನ ಹಲವು ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ನೂರಕ್ಕೂ ಹೆಚ್ಚು ಜನರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ಉಪಆರೋಗ್ಯ ಸಚಿವ ಅಮರ ಜುಂಬೈ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಛಿದ್ರಗೊಂಡ ವಾಹನದಿಂದ ಸೋರಿಕೆಯಾಗುವ ಇಂಧನವನ್ನು ಸಂಗ್ರಹಿಸಲು ಸೇರಿದ್ದ ಜನರೂ ಸಾವಿಗೀಡಾಗಿದ್ದಾರೆ ಎಂದು ಬಂದರು ನಗರಿ ಫ್ರೀಟೌನ್ ಮೇಯರ್ ಯವೊನ್ನೆ ಅಕಿ-ಸಾಯೆರ್ ಅವರು ಆರಂಭದಲ್ಲಿ ಫೇಸ್‌ಬುಕ್‌ನಲ್ಲಿನ ಪೋಸ್ಟ್ ಮಾಡಿದ್ದರು. ನಂತರದಲ್ಲಿಅದನ್ನು ಎಡಿಟ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ನೀಡುತ್ತಿದ್ದಾರೆ.
“ನಾವು ಸಾವುನೋವುಗಳಿಗೆ ಒಳಗಾಗಿದ್ದೇವೆ. ಜನರು ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಬ್ರಿಮಾ ಬುರೆಹ್ ಸೆಸೆ ಅವರು ವಿಡಿಯೊ ಮೂಲಕ ತಿಳಿಸಿದ್ದಾರೆ. “ಇದು ಭಯಾನಕ, ಭಯಾನಕ ಅಪಘಾತ” ಎಂದು ವಿಷಾದಿಸಿದ್ದಾರೆ.
ಮೃತಪಟ್ಟವರ ಚಿತ್ರಗಳೆಂದು ಆನ್‌ಲೈನ್‌ನಲ್ಲಿ ಚಿತ್ರಗಳು ವೈರಲ್ ಮಾಡಲಾಗುತ್ತಿದ್ದು, ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಯಿಟರ್ಸ್ ತಿಳಿಸಿದೆ. ಸೋರಿಕೆಯಾಗಿದ್ದ ಇಂಧನ ತೆಗೆದುಕೊಳ್ಳಲು ಹೋದಾಗ ಟ್ಯಾಂಕರ್ ಟ್ರಕ್ ಅವಘಡಗಳು ಈ ಹಿಂದೆಯೂ ಆಫ್ರಿಕಾ ಖಂಡದಲ್ಲಿ ಘಟಿಸಿದ್ದವು ಎಂದು ವರದಿ ತಿಳಿಸಿದೆ.
2019ರಲ್ಲಿ ಪೂರ್ವ ತಾಂಜಾನಿಯಾದಲ್ಲಿ ಘಟಿಸಿದ ಟ್ಯಾಂಕರ್ ಸ್ಫೋಟದಲ್ಲಿ 85 ಜನರು ಸಾವನ್ನಪ್ಪಿದ್ದರೆ, 2018ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಇದೇ ರೀತಿಯ ದುರಂತದಲ್ಲಿ ಸುಮಾರು 50 ಜನರು ಸಾವನ್ನಪ್ಪಿದರು.
ಫ್ರೀಟೌನ್‌ನಲ್ಲಿನ ಹಾನಿಯ ಪ್ರಮಾಣವು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೇಯರ್ ಹೇಳಿದ್ದಾರೆ. ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಸಹಾಯ ಮಾಡಲು ಪೊಲೀಸರು ಮತ್ತು ಉಪ ಆಯುಕ್ತರು ಸ್ಥಳದಲ್ಲಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.
“ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ, ಅಂಗವಿಕಲರಾದವರಿಗೆ ನನ್ನ ಹೃದಯಾಂತರಾಳದ ಸಹಾನುಭೂತಿ ಇದೆ” ಎಂದು ಅಧ್ಯಕ್ಷ ಜೂಲಿಯಸ್ ಮಾದಾ ಬಯೋ ಟ್ವೀಟ್ ಮಾಡಿದ್ದಾರೆ.
Deeply disturbed by the tragic fires and the horrendous loss of life around the Wellington PMB area. My profound sympathies with families who have lost loved ones and those who have been maimed as a result. My Government will do everything to support affected families. pic.twitter.com/xJRA1UtCJJ
— President Julius Maada Bio (@PresidentBio) November 6, 2021
“ಸಂತ್ರಸ್ತ ಕುಟುಂಬಗಳ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ” ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿರಿ: ಕೋವಿಡ್ ವಾರ್ಡ್‌ನಲ್ಲಿ ಬೆಂಕಿ ಅವಘಡ: ಹತ್ತು ಮಂದಿ ದುರ್ಮರಣ


