ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಖಿನ್ನತೆಗೆ ಒಳಗಾಗಿದ್ದ 20 ವರ್ಷದ ವೈದ್ಯಕೀಯ ಆಕಾಂಕ್ಷಿಯೊಬ್ಬರು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ವಡಗುಮರೈ ನಿವಾಸಿ ಸುಭಾಶ್ಚಂದ್ರ ಬೋಸ್ ಅವರು ನಾಲ್ಕು ದಿನಗಳ ಹಿಂದಷ್ಟೇ ಫಲಿತಾಂಶ ಪ್ರಕಟವಾಗಿದ್ದ ನೀಟ್ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅವರು ಕಡಿಮೆ ಅಂಕ ಗಳಿಸಿದ್ದರು. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಕಾರಣ ಮನನೊಂದ ಅವರು ನವೆಂಬರ್ 2 ರಂದು ಕೀಟನಾಶಕ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ನೀಟ್ ವಿರೋಧಿಸಿ SFI ಯಿಂದ ದೇಶಾದ್ಯಂತ ಪ್ರತಿಭಟನೆ
ಹಾಸಿಗೆಯಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಪೋಷಕರು ಆತನನ್ನು ಆತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೇಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ಬೋಸ್ ಶನಿವಾರ ಮುಂಜಾನೆ 3.30 ರ ಸುಮಾರಿಗೆ ನಿಧನರಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಪಾರ ಸಂಖ್ಯೆಯ ಸಂಬಂಧಿಕರು ಜಮಾಯಿಸಿದ್ದು, ಅಲ್ಲಿ ಪರಿಸ್ಥಿತಿಯು ಉದ್ವಿಗ್ನಗೊಂಡಿತ್ತು.
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ಕೆಲವು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ಈ ಹಿಂದೆಯು ಆತ್ಮಹತ್ಯೆಗೆ ಶರಣಾಗಿದ್ದರು.
ವೈದ್ಯಕೀಯ ಆಕಾಂಕ್ಷಿಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ಎಐಎಡಿಎಂಕೆ ಉನ್ನತ ನಾಯಕ ಕೆ ಪಳನಿಸ್ವಾಮಿ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್‌ನಲ್ಲಿ ಇಂತಹ “ತಪ್ಪು” ನಿರ್ಧಾರಗಳನ್ನು ಆಶ್ರಯಿಸದಂತೆ ವಿದ್ಯಾರ್ಥಿಗಳಿಗೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: NEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?
ನೀಟ್‌ನಿಂದ ಸಂಪೂರ್ಣ ವಿನಾಯಿತಿ ನೀಡುವ ಮಸೂದೆಯನ್ನು ತಮಿಳುನಾಡು ಸರ್ಕಾರ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಿತ್ತು. ನೀಟ್‌ನಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳ ಬದುಕು ದುಸ್ತರವಾಗಿದೆ ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ನೀಟ್ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡುವ ಮಸೂದೆಗೆ ಅಂಗೀಕಾರ ಹಾಕಿದ್ದರು.
ದಕ್ಷಿಣ ಭಾರತದಲ್ಲೇ ನೀಟ್ ವಿರುದ್ದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ತಮಿಳುನಾಡಿನಲ್ಲಾಗಿದೆ. ವಿದ್ಯಾರ್ಥಿಗಳು ನೀಟ್ ರದ್ದು ಮಾಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಡಿಎಂಕೆ ಕೂಡಾ ನೀಟ್ ರದ್ದು ಮಾಡುವಂತೆ ಒಕ್ಕೂಟ ಸರ್ಕಾರದೊಂದಿಗೆ ಒತ್ತಡ ಹೇರುತ್ತಲೆ ಇದೆ.
ಇತ್ತೀಚೆಗೆ ಮುಖ್ಯಮಂತ್ರಿ ಸ್ಟಾಲಿನ್ ಅವರು ಭಾರತದ ಇತರ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ನೀಟ್ ವಿರುದ್ದದ ಹೋರಾಟಕ್ಕೆ ಬೆಂಬಲಿಸುವಂತೆ ವಿನಂತಿಸಿದ್ದರು.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: NEET ವಿರುದ್ಧ ಮಸೂದೆ ಅಂಗೀಕರಿಸಿದ ತಮಿಳುನಾಡು ಸರ್ಕಾರ; ಸಿಎಂ ಸ್ಟಾಲಿನ್ ಹೇಳಿದ್ದೇನು?


