Homeಕರ್ನಾಟಕNEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

NEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

- Advertisement -
- Advertisement -

ಮೆರಿಟ್ ಶ್ರೇಷ್ಠ ಎಂಬ ಸುಳ್ಳು ಬಿತ್ತನೆ ವರ್ಸಸ್ ’ಸಾಮಾಜಿಕ ನ್ಯಾಯ ಮತ್ತು ಸಾಮಾನ್ಯ ಒಳಿತಿನ’ ಪರಿಕಲ್ಪನೆ

ಕರ್ನಾಟಕ ರಾಜ್ಯದ ಸಿಇಟಿ ಪರೀಕ್ಷೆ ಫಲಿತಾಂಶಗಳು ಬಂದಿವೆ. ಒಂದು ಕಡೆ ಕೋಚಿಂಗ್ ಕೇಂದ್ರಗಳು ತಾವು ಉತ್ಪಾದಿಸಿರುವ ರ್‍ಯಾಂಕ್‌ಗಳ ಬಗ್ಗೆ ಉದ್ದಗಲದ ಜಾಹೀರಾತುಗಳನ್ನು ನೀಡಿದರೆ, ಮತ್ತೊಂದು ಕಡೆ ಬಡತನದ ಹಿನ್ನೆಲೆಯಿಂದ ಬಂದ ಹಲವು ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್ ಪಡೆದ ವರದಿಗಳು ಹಲವು ದಿನಪತ್ರಿಕೆಗಳಲ್ಲಿ ರಾರಾಜಿಸಲಿವೆ. ಒಟ್ಟಿನಲ್ಲಿ ಮೆರಿಟ್ ಅಥವಾ ಅರ್ಹತೆ ಎಂಬ ಕಲ್ಪನೆ ಶ್ರೇಷ್ಠ ಎಂದು ಸಮಾಜದಲ್ಲಿ ಬಿತ್ತಿಕೊಂಡು ಬಂದಿರುವ ಸುಳ್ಳನ್ನು ಮುಂದುವರಿಸಿಕೊಂಡು ಹೋಗುವ ಹುನ್ನಾರದ ಭಾಗವಾಗಿ ಪ್ರತಿ ವರ್ಷ ನಡೆಯುವ ರಿಚುಯಲ್ ಇದು.

ಇದೇ ಕೆಲವು ದಿನಗಳ ಹಿಂದೆ ತಮಿಳುನಾಡಿನ ವಿಧಾನಸಭೆಯಲ್ಲಿ ಡಿಎಂಕೆ ಸರ್ಕಾರ ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET ವಿರುದ್ಧ ನಿಲುವಳಿಯನ್ನು ಅಂಗೀಕರಿಸಿತು. ಇದಕ್ಕೆ ಮೊದಲು ಇದ್ದ ಎಐಡಿಎಂಕೆ ಸರ್ಕಾರ ಕೂಡ NEET ವಿರುದ್ಧ ನಿಲುವನ್ನು ತಳೆದಿತ್ತು. ಇದಕ್ಕೆ ಇರುವ ಕೆಲವು ಕಾರಣಗಳನ್ನು ಅವಲೋಕಿಸುವುದು ಅಗತ್ಯ.

1984ರಲ್ಲಿ ತಮಿಳುನಾಡಿನ ಎಂ ಜಿ ರಾಮಚಂದ್ರನ್ ಸರ್ಕಾರ ತಮಿಳುನಾಡು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಪರಿಚಯಿಸಿದಾಗ ಅಂದಿನ ಡಿಎಂಕೆ ನೇತಾರ ಕರುಣಾನಿಧಿ ಇದನ್ನು ಉಗ್ರವಾಗಿ ವಿರೋಧಿಸಿದ್ದರು. ಇದು ಬಡ ಮತ್ತು ಹಿಂದುಳಿದ ಮಕ್ಕಳನ್ನು ಹೊರಗಿಡುತ್ತದೆ ಹಾಗೂ ಪೆರಿಯಾರ್ ಮತ್ತು ಸಿ ಎನ್ ಅಣ್ಣಾದೊರೈ ಅವರ ಸಮಾನತೆಯ ಕನಸಿನ ವಿರುದ್ಧ ಎಂದು ವಾದಿಸಿದ್ದರು. ನಂತರದ ದಿನಗಳಲ್ಲಿ ಇಂತಹ ಪ್ರವೇಶ ಪರೀಕ್ಷೆಯನ್ನು ಎಐಡಿಎಂಕೆಯ ಜಯಲಲಿತಾ ಕೂಡ ವಿರೋಧಿಸಿದ್ದರು. ಕೊನೆಗೆ ಡಿಎಂಕೆ ಸರ್ಕಾರ (2006-2011) ಈ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ ದ್ವಿತೀಯ ಪಿಯುಸಿ ಹಂತದಲ್ಲಿ ನಡೆಯುವ ಮೌಲ್ಯಮಾಪನದ ಆಧಾರದ ಮೇಲೆ ವೃತ್ತಿ ಶಿಕ್ಷಣಕ್ಕೆ ಪ್ರವೇಶ ನೀಡುವ ಪರಿಪಾಠ 2007-08ರಿಂದ ಪ್ರಾರಂಭವಾಯಿತು.

ಸಾಮಾಜಿಕ ನ್ಯಾಯದ ಪರವಾಗಿರುವ ಹಲವು ಶಿಕ್ಷಣತಜ್ಞರ ಅಭಿಪ್ರಾಯ ಕೂಡ ಇದೇ ಆಗಿದೆ. ಯಾವುದೇ ವೃತ್ತಿಪರ ಶಿಕ್ಷಣಕ್ಕೆ ಆಯಾ ಆಭ್ಯರ್ಥಿಯ ಜೊತೆ ಸಮಾಲೋಚನೆಯ ಅಗತ್ಯವಿರುತ್ತದೆ ಮತ್ತು ಅವರ ಆಸಕ್ತಿ ಅವರು ಹಿಂದೆ ಪಡೆದ ಶಿಕ್ಷಣದ ಮೌಲ್ಯಮಾಪನದಲ್ಲಿ ವ್ಯಕ್ತವಾಗಿರುತ್ತದೆ. ಇಂತಹ ನೆಲೆಯಲ್ಲಿ, ಸಮಾಜದಲ್ಲಿ ಎಲ್ಲ ವರ್ಗಕ್ಕೆ, ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕುವಂತಹ ಪ್ರವೇಶ ನೀತಿ ವೃತ್ತಿಶಿಕ್ಷಣಕ್ಕೆ ಇರಬೇಕು. ಇನ್ನೊಂದು ಹೆಚ್ಚುವರಿ ಪ್ರವೇಶ ಪರೀಕ್ಷೆಯಿಂದ ಆಯಾ ವೃತ್ತಿಶಿಕ್ಷಣದಲ್ಲಿ ಕಲಿಯುವ ಅಭ್ಯರ್ಥಿಗಳ ಗುಣಮಟ್ಟ ಹೆಚ್ಚುತ್ತದೆ ಎಂಬುದು ಇಲ್ಲಿಯವರೆಗೂ ನಂಬಿಸಿಕೊಂಡು ಬಂದಿರುವ ಮಹಾ ಸುಳ್ಳಲ್ಲದೇ ಬೇರೇನೂ ಅಲ್ಲ.

ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾಮಾನ್ಯ ಒಳಿತಿಗಾಗಿ, ಸಾರ್ವಜನಿಕ ಶಿಕ್ಷಣ ಹಾಗು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತಮಿಳುನಾಡು ನಡೆಸಿಕೊಂಡು ಬಂದ ಪ್ರಯೋಗ ಅನುಕರಣೀಯ ಮಾದರಿ. ನೀತಿ ಆಯೋಗದ ರಾಷ್ಟ್ರೀಯ ಆರೋಗ್ಯ ವರದಿಯ ಪ್ರಕಾರ ಅಖಿಲ ಭಾರತದ ಮಟ್ಟದಲ್ಲಿ 1445 ಜನರಿಗೆ ಒಬ್ಬ ವೈದ್ಯರಿದ್ದರೆ, ತಮಿಳುನಾಡಿನಲ್ಲಿ 253 ಜನರಿಗೆ ಒಬ್ಬ ವೈದ್ಯರಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಉನ್ನತ ಶಿಕ್ಷಣದಲ್ಲಿ ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೋ (ಜಿಇಆರ್) 26.3 ಇದ್ದರೆ ಅದು ತಮಿಳುನಾಡಿನಲ್ಲಿ 49 ಇದೆ. ಇಂತಹ ವ್ಯವಸ್ಥೆಯಲ್ಲಿ, ಗ್ರಾಮೀಣ ವಿದ್ಯಾರ್ಥಿಗಳಿಗೆ, ತಮಿಳು ಮಾಧ್ಯಮಗಳಲ್ಲಿ ಓದಿದವರಿಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೂ ಕೂಡ ವೈದ್ಯಕೀಯ ಶಿಕ್ಷಣ ಪಡೆಯುವ ಸಮಾನ ಅವಕಾಶ ಸಾಪೇಕ್ಷವಾಗಿ ಹೆಚ್ಚಿದ್ದ ನಾಡಿನಲ್ಲಿ, ಒಂದು ದೇಶ ಒಂದು ಪರೀಕ್ಷೆ ಎನ್ನುವಂತಹ NEET ಪರೀಕ್ಷೆಯನ್ನು ಹೇರಿದ್ದು ಅಲ್ಲಿನ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಯಿತು.

NEET ಪರೀಕ್ಷೆ ಪರಿಚಯಿಸಿದ ಮೇಲೆ ಆಗುವ ಸಮಸ್ಯೆಗಳ ಬಗ್ಗೆ ಹಲವು ಶಿಕ್ಷಣ ತಜ್ಞರು ಈಗಾಗಲೇ ಬೆಳಕು ಚೆಲ್ಲಿದ್ದಾರೆ. ಈಗ ನಿವೃತ್ತ ಜಸ್ಟಿಸ್ ಎ ಕೆ ರಂಗರಾಜನ್ ನೇತೃತ್ವದ ಸಮಿತಿ NEET ಪರೀಕ್ಷೆಯಿಂದ ಹಿಂದುಳಿದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ಮಾಡಿ ಬಿಡುಗಡೆ ಮಾಡಿರುವ ವರದಿಯಲ್ಲಿ, ಇದು ತಮಿಳುನಾಡು ರಾಜ್ಯವನ್ನು ಸ್ವತಂತ್ರಪೂರ್ವ ಕಾಲಕ್ಕೆ ಕೊಂಡೊಯ್ಯುತ್ತದೆ ಎಂದಿರುವುದಲ್ಲದೆ, ಈ ಪರೀಕ್ಷೆಯನ್ನು ರದ್ದುಗೊಳಿಸಲು ರಾಜ್ಯಸರ್ಕಾರ ಎಲ್ಲಾ ಅಗತ್ಯ ಕಾನೂನು ಮತ್ತು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ.

ಈ ವರದಿ ನೀಡಿರುವ ಇದೊಂದು ಅಂಕಿಅಂಶವನ್ನು ಗಮನಿಸಿ: 2015 ಮತ್ತು 2020ರ ನಡುವೆ ತಮಿಳುನಾಡು ವೈದ್ಯಕೀಯ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದ, ಸಿಬಿಎಸ್‌ಇಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ ಶೇ.0%ಯಿಂದ ಶೇ.26.83ಕ್ಕೆ ಏರಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಈ ಸಂಖ್ಯೆ 0.07% ಇಂದ 12.01%ಕ್ಕೆ ಏರಿದೆ. ಇದೇ ಸಮಯದಲ್ಲಿ ರಾಜ್ಯ ಶಿಕ್ಷಣ ಮಂಡಲಿಯ ಅಡಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ 65% ಇಂದ 43.13%ಗೆ ಇಳಿದಿದೆ. ತಮಿಳು ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಪ್ರವೇಶ ಪಡೆದ ಸಂಖ್ಯೆ 14.4% ಇಂದ 1.7%ಗೆ ಇಳಿದಿದೆ.

ಕೆಳಗಿನ ಕೋಷ್ಠಕ: ಎಂಬಿಬಿಎಸ್ ಪ್ರವೇಶದ ಅಂಕಿ-ಸಂಖ್ಯೆ

NEET ಪರೀಕ್ಷೆ ಪೂರ್ವ: 2010-2017
NEET ಪರೀಕ್ಷೆ ನಂತರ: 2017-2021

ಇದು ಸ್ಪಷ್ಟವಾಗಿ ತಿಳಿಸುವುದೇನೆಂದರೆ NEET ಪರೀಕ್ಷೆಯನ್ನು ಎದುರಿಸುವುದಕ್ಕೆ ಕೋಚಿಂಗ್ ತೆಗೆದುಕೊಳ್ಳಲು ಶಕ್ತರಾದ ಉಳ್ಳ ಸಮುದಾಯಕ್ಕೆ ಮಾತ್ರ ಇದು ನೆರವಾಗಿದೆ. ತಳಸಮುದಾಯದಿಂದ, ಶೋಷಿತ ಸಮುದಾಯದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಹಂತವನ್ನು ತಲುಪುವುದೇ ಒಂದು ಸವಾಲಾಗಿರುತ್ತದೆ. ಇಂತಹ ಸಮಯದಲ್ಲಿ ಮತ್ತೊಂದು ಪರೀಕ್ಷೆಗೆ ಸಂಪನ್ಮೂಲಗಳನ್ನು ವ್ಯಯಿಸುವುದು ಸುಲಭದ ಮಾತಲ್ಲ. ಅದೂ ಅಲ್ಲದೆ ಬಹು ಉತ್ತರಗಳನ್ನು ಟಿಕ್ ಮಾಡಿ ಕ್ರ್ಯಾಕ್ ಮಾಡುವ ಪರೀಕ್ಷೆಯೊಂದು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡುವುದಕ್ಕೆ ಮಾನದಂಡವಾಗುವುದಿಲ್ಲ. ರಂಗರಾಜನ್ ಸಮಿತಿ ಕೂಡ ಹೇಳುವಂತೆ NEET ಪರೀಕ್ಷೆ ಕಂಠಪಾಠ ಮಾಡುವುದನ್ನು ಉತ್ತೇಜಿಸುತ್ತದೆಯೇ ಹೊರತು, ಸಂಕೀರ್ಣ ಮತ್ತು ಉನ್ನತ ಮಟ್ಟದ ಚಿಂತನೆಗೆ ಉತ್ತೇಜಿಸುವುದಿಲ್ಲ. ಅಲ್ಲದೆ ಈ ಕೋಚಿಂಗ್ ಉದ್ಯಮ ವಾರ್ಷಿಕವಾಗಿ ಸುಮಾರು 5750 ಕೋಟಿ ಗಳಿಸುವ ಉದ್ಯಮವಾಗಿ ಬೆಳೆದಿದೆ ಎಂದು ಕೂಡ ವರದಿ ಸೂಚಿಸುತ್ತದೆ.

ಕರ್ನಾಟಕದಲ್ಲಂತೂ ಸ್ಪರ್ಧಾತ್ಮಕ ಪರೀಕ್ಷೆಗಳ ತೀವ್ರ ದಮನ

ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆ ಮೇಲೆ ಪ್ರಹಾರ ಮಾಡಿರುವ NEET ಪರೀಕ್ಷೆಗೆ ಈ ಮಟ್ಟದ ವಿರೋಧ ವ್ಯಕ್ತವಾಗಿದ್ದರೆ, ಕರ್ನಾಟಕದಲ್ಲಿ ಅಂತಹ ದೊಡ್ಡಮಟ್ಟದ ಪ್ರತಿರೋಧವಂತೂ ಕೇಳಿಯೇ ಬಂದಿಲ್ಲ. ಇಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿಯೇ ಹತ್ತಾರು ಪ್ರವೇಶ ಪರೀಕ್ಷೆಗಳಿವೆ. ಸಿಇಟಿ, ಕಾಮೆಡ್‌ಕೆ, ಜೆಇಇ ಹೀಗೆ ಹತ್ತಾರು ಪರೀಕ್ಷೆಗಳನ್ನು ಎದುರಿಸುವ ಒತ್ತಡದಲ್ಲಿ ನಿಜವಾದ ಕಲಿಕೆ ಮೂಲೆಗುಂಪಾಗಿರುವುದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಇಂತಹ ಪರೀಕ್ಷೆಗಳನ್ನು ಎದುರಿಸುವುದಕ್ಕಾಗಿಯೇ ನಾಯಿಕೊಡೆಗಳಂತೆ ಎದ್ದಿರುವ ಕೋಚಿಂಗ್ ಸಂಸ್ಥೆಗಳು ಇಡೀ ಶಿಕ್ಷಣಕ್ಕೆ ಮಾರಕವಾಗಿ ರಾರಾಜಿಸುತ್ತಿವೆ.

ಇನ್ನು ಇದರ ಬಗ್ಗೆ ಹಲವು ಕಾಲದಿಂದ ಅಧ್ಯಯನ ನಡೆಸಿರುವ ವೃತ್ತಿಶಿಕ್ಷಣ ಸಮಾಲೋಚಕ ಉಮರ್ ಹೇಳುವಂತೆ, ಕರ್ನಾಟಕದ ಎಷ್ಟೋ ಸರ್ಕಾರಿ ಕಾಲೇಜುಗಳಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವ ಮಕ್ಕಳಿಗೆ NEET ಪರೀಕ್ಷೆಯ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇನ್ನು ಎಷ್ಟೋ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಇರುವ ಸುಮಾರು 250 ವೈದ್ಯಕೀಯ ಸೀಟುಗಳನ್ನು ಪಡೆಯಲು ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ಅಥವಾ ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ನೀಡಲಾಗುತ್ತದೆ. ಇದು ನಮಗೆ ತಿಳಿಸುವುದೇನೆಂದರೆ ಒಂದು ಕಡೆ ಇದು ಅಂಚಿನಲ್ಲುಳಿದ ಸಮುದಾಯದ ವಿದ್ಯಾರ್ಥಿಗಳನ್ನು ಹೊರಗುಳಿಸುತ್ತದೆ ಎನ್ನುವುದರ ಜೊತೆಗೆ, ಉಳ್ಳವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ದೊರಕುತ್ತದೆ ಮತ್ತು ಎಷ್ಟೋ ವೈದ್ಯಕೀಯ ಸೀಟುಗಳನ್ನು ಈ NEET ಪ್ರವೇಶ ಪರೀಕ್ಷೆಯ ಹೊರತಾಗಿಯೂ ಮಾರಿಕೊಳ್ಳಲಾಗುತ್ತದೆ.

ಮೆರಿಟ್ ಶ್ರೇಷ್ಠ ಎಂಬ ಸುಳ್ಳಿನ ಬಗ್ಗೆ ವಿಶ್ವದಾದ್ಯಂತ ಚರ್ಚೆ ಎದ್ದಿದೆ

ಜರ್ಮನಿ ದೇಶದ ಚಾನ್ಸಲೆರ್ ಚುನಾವಣೆಗಳಲ್ಲಿ ಮುಂಚೂಣಿ ಅಭ್ಯರ್ಥಿಯಾಗಿರುವ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಓಲಾಫ್ ಶೋಲ್ಸ್ (ಸದ್ಯದ ಉಪ ಚಾನ್ಸಲೆರ್ ಮತ್ತು ವಿತ್ತ ಸಚಿವ) ಅವರು ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಮೆರಿಟ್ ಕಲ್ಪನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅಮೆರಿಕದಲ್ಲಿ ಟ್ರಂಪ್‌ಅನ್ನು ಗೆಲ್ಲಿಸಿದ್ದ ಬಗ್ಗೆ ಮತ್ತು ಬ್ರಿಟನ್‌ನಲ್ಲಿ ಬ್ರೆಕ್ಸಿಟ್ ಪರವಾಗಿ ಬಹುಮತ ಚಲಾಯಿಸಿದ ಬಗ್ಗೆ ಮಾತನಾಡುತ್ತಾ “ಕೆಲವು ವೃತ್ತಿಪರ ವರ್ಗದಲ್ಲಿ ಇರುವ ಅರ್ಹತೆಯ ಬಗೆಗಿನ ಉತ್ಸಾಹ ಅವರ ಯಶಸ್ಸಿಗೆ ತಾವೇ ಸಂಪೂರ್ಣ ಕಾರಣ ಎಂದು ನಂಬುವಂತೆ ಮಾಡಿದೆ. ಈ ಕಾರಣಕ್ಕೆ, ನಿಜವಾಗಿ ರಸ್ತೆಗಳಲ್ಲಿ ಶ್ರಮವಹಿಸಿ ಈ ಯಶಸ್ಸಿನ ಪ್ರದರ್ಶನಕ್ಕೆ ಕಾರಣವಾಗಿರುವವರಿಗೆ ನಿಜವಾದ ಗೌರವ ಸಿಗುತ್ತಿಲ್ಲ. ಇದು ಬದಲಾಗಬೇಕಿದೆ” ಎಂದದ್ದಲ್ಲದೆ, ಹಾರ್ವರ್ಡ್ ತತ್ವಶಾಸ್ತ್ರಜ್ಞ ಮೈಕೆಲ್ ಸ್ಯಾಂಡಲ್ ಅವರ ’ಟಿರೆನಿ ಆಫ್ ಮೆರಿಟ್’ ಪುಸ್ತಕದಲ್ಲಿನ ಚಿಂತನೆಗಳನ್ನು ಆಧರಿಸಿ “ಮೆರಿಟ್ ಎಂಬುದು ಕೇವಲ ಅತಿ ಹೆಚ್ಚು ಗಳಿಕೆ ಇರುವವರಿಗೆ ಅಥವಾ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದವರಿಗೆ ಸೀಮಿತವಾಗಬೇಕಿಲ್ಲ. ಸೆಕ್ಯುರಿಟಿ ಗಾರ್ಡ್‌ಗೆ ಕೂಡ ಮೆರಿಟ್ ಇದೆ. ದಿನಗೂಲಿ ಶ್ರಮಿಕರೂ ಅಕಾಡೆಮಿಕ್‌ಗಳಿಗಿಂತ ಕಡಿಮೆ ಗೌರವವನ್ನು ಪಡೆಯಬೇಕಿಲ್ಲ” ಎಂದಿದ್ದರು.

PC : The Straits Times (ಓಲಾಫ್ ಶೋಲ್ಸ್)

ಪಶ್ಚಿಮ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅತ್ಯುತ್ತಮ ಕೋಚಿಂಗ್ ಪಡೆಯಲು ಶಕ್ತವಾಗಿರುವ ಕುಟುಂಬಗಳಿಗೆ ಸೇರಿರುತ್ತಾರೆ ಮತ್ತು ಇದರಲ್ಲಿ ಮೆರಿಟ್ ಪ್ರಶ್ನೆ ಹೇಗೆ ನಗಣ್ಯವಾಗಿರುತ್ತದೆ ಎಂಬ ಹಲವು ಅಧ್ಯಯನಗಳು ಆಗಿವೆ. ಇದೇ ನಿಟ್ಟಿನಲ್ಲಿ ಹಲವು ವಿಶ್ವವಿದ್ಯಾಲಯಗಳು ಏಕರೂಪದ ಪರೀಕ್ಷೆಗಳಾದ ಜಿಆರ್‌ಇ, ಜಿಎಂಎಟಿ ಮುಂತಾದ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಪ್ರವೇಶಕ್ಕೆ ಪರಿಗಣಿಸುವ ಬಗ್ಗೆ ಹಿಂದೆ ಸರಿದಿವೆ. ಇನ್ನೂ ಹಲವು ವಿಶ್ವವಿದ್ಯಾಲಯಗಳು ಆ ದಿಕ್ಕಿನಲ್ಲಿ ಚಿಂತಿಸುತ್ತಿವೆ. ವಿದ್ಯಾರ್ಥಿ ಆಸಕ್ತಿ, ಸರ್ವಾಂಗೀಣ ಅಭಿವೃದ್ಧಿಯನ್ನು ಪರಿಗಣಿಸಿ ಪ್ರವೇಶ ನೀಡುವ, ಸಾಮಾಜಿಕ ಪ್ರಾತಿನಿಧ್ಯದ ಕಡೆಗೆ ಹೆಜ್ಜೆ ಹಾಕುವೆಡೆಗೆ ಹಲವು ಪಶ್ಚಿಮದ ಸಂಸ್ಥಗಳು ದಾಪುಗಾಲು ಹಾಕುತ್ತಿವೆ.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ

ಇದಿಷ್ಟೇ ಅಲ್ಲದೆ ಏಕರೂಪದ ಪರೀಕ್ಷೆಗಳು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಪೆಟ್ಟನ್ನು ನೀಡುತ್ತವೆ. ಒಂದು, ಶಿಕ್ಷಣ ರಾಜ್ಯ ಪಟ್ಟಿಗೆ ಸೇರಿದ ವಿಷಯವಾಗಿರುವುದರಿಂದ ರಾಜ್ಯಗಳ ಮಾತಿಗೆ ಹೆಚ್ಚು ಮನ್ನಣೆ ಸಿಗಬೇಕಿದೆ. ಎರಡು, ಪ್ರತಿ ರಾಜ್ಯಗಳ ಭಾಷೆ, ಸಂಸ್ಕೃತಿ ವಿಶಿಷ್ಟ ಮತ್ತು ಅನನ್ಯವಾಗಿರುವುದರಿಂದ ಆ ರಾಜ್ಯದ ಮಕ್ಕಳಿಗೆ ಹೆಚ್ಚು ಪ್ರವೇಶಾವಕಾಶ ಇರಬೇಕಾಗುತ್ತದೆ. ಮೂರು, ಅದರಲ್ಲೂ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರ ಎಲ್ಲಾ ಸಮುದಾಯದ ಮತ್ತು ಎಲ್ಲ ವರ್ಗದ ಜನರನ್ನು ತಲುಪುವಂತೆ ಮಾಡುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯವಾಗಿರಬೇಕು. ಇದಕ್ಕಾಗಿ ಅಲ್ಲಿನ ಭಾಷಾ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ಸಿಕ್ಕುವಂತಾಗುವುದು ಮುಖ್ಯವಾಗಿದೆ. ಈ ಎಲ್ಲ ಕಾರಣಗಳಿಗಾಗಿ ಆಯಾ ರಾಜ್ಯದ ವೃತ್ತಿಪರ ಪ್ರವೇಶಕ್ಕೆ ನಿಯಮಾವಳಿಗಳನ್ನು ಹಾಕಿಕೊಳ್ಳಲು ಸಂಪೂರ್ಣ ಅವಕಾಶ ಇರುವುದು ಅಗತ್ಯ.

ಕರ್ನಾಟಕವು ತಮಿಳುನಾಡಿನ ಮಾದರಿಯನ್ನು ಅನುಸರಿಸಿ ಎಲ್ಲಾ ಬಗೆಯ ಪ್ರವೇಶ ಪರೀಕ್ಷೆಗಳನ್ನು ರದ್ದುಪಡಿಸಿ, ಅರ್ಹತಾ ತರಗತಿಯ ಪರೀಕ್ಷೆಯ ಫಲಿತಾಂಶವನ್ನೇ ಮಾನದಂಡವಾಗಿಟ್ಟುಕೊಳ್ಳಬೇಕು, ನೀಟ್‌ನ ಏಕಾಧಿಪತ್ಯಕ್ಕೆ ತಡೆಯೊಡ್ಡುವ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ವಿವಿಧ ವಂಚಿತ ಹಾಗೂ ಗ್ರಾಮೀಣ ಸಮುದಾಯಗಳಿಗೆ ಅವಕಾಶ ಸಿಗುವಂತೆ ನೀತಿ ರೂಪಿಸಲು ಮುಂದಾಗಬೇಕು. ಈ ಸದ್ಯ ಕನಿಷ್ಠ ಲಕ್ಷಾಂತರ ವಿದ್ಯಾರ್ಥಿಗಳು ಮಾಹಿತಿಯಿಂದ ವಂಚಿತವಾಗಿರುವುದು, ಕೋಚಿಂಗ್ ತಾರತಮ್ಯ ಇರುವುದನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.


ಇದನ್ನೂ ಓದಿ: NEET ವಿರುದ್ಧ ಮಸೂದೆ ಅಂಗೀಕರಿಸಿದ ತಮಿಳುನಾಡು ಸರ್ಕಾರ; ಸಿಎಂ ಸ್ಟಾಲಿನ್ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...