Homeಕರ್ನಾಟಕಅಡಿ ಇಡದಿರಿ ಗುಡಿಯೊಳಗೆ...! ದೇವಸ್ಥಾನ ಪ್ರವೇಶ ನಿಷೇಧ ಮತ್ತು ವಿರೋಧ

ಅಡಿ ಇಡದಿರಿ ಗುಡಿಯೊಳಗೆ…! ದೇವಸ್ಥಾನ ಪ್ರವೇಶ ನಿಷೇಧ ಮತ್ತು ವಿರೋಧ

- Advertisement -
- Advertisement -

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ನುಗ್ಗೇಹಳ್ಳಿ ದಾರಿಯಲ್ಲಿ ಹೊರಟರೆ ಕೆಲವೇ ನಿಮಿಷಗಳಲ್ಲಿ ದಿಂಡಗೂರು ಎಂಬ ಬೋರ್ಡ್ ಸಿಗುತ್ತದೆ. ಈ ಊರಿನ ಹೆಸರು ದಿಂಡಿಗನೂರು ಎಂದು ಕೂಡ ಬಳಕೆಯಲ್ಲಿದೆ. ಅದನ್ನು ಅನುಸರಿಸಿ ಮುಂದೆ ಹೋದರೆ ಹೊಯ್ಸಳರ ಕಾಲದ ಎರಡು ದೇವಾಲಯ ಇರುವ ಹಳ್ಳಿಗೆ ತಲುಪುತ್ತೇವೆ. ಐನೂರು ಮನೆಗಳು ಇರಬಹುದಾದ ಈ ಗ್ರಾಮದಲ್ಲಿ ಸೆಪ್ಟೆಂಬರ್ 28ರಂದು ಅಪರೂಪದ ಘಟನೆ ನಡೆಯಿತು. ಹದಿಮೂರನೇ ಶತಮಾನದಷ್ಟು ಹಳೆಯ ದೇವಸ್ಥಾನಗಳಿಗೆ ಬಹುಶಃ ಅಂದು ಮೊದಲ ಬಾರಿಗೆ ಆ ಊರಿನ ದಲಿತರು ಪ್ರವೇಶಿಸಿದರು. ಅಲ್ಲಿರುವ ಭಗವಂತನಿಗೆ ಮೊದಲ ಬಾರಿಗೆ ತನ್ನ ಆಲಯದಲ್ಲಿ ದಲಿತ ಭಕ್ತರ ದರ್ಶನವಾಯ್ತು. ಹಳ್ಳಿಯಲ್ಲಿ ಇರುವ ಯಾವ ಹಿರಿಯರಿಗೂ ತಮ್ಮ ಜೀವಿತಾವಧಿಯಲ್ಲಿ ದಲಿತ ಕೇರಿಯ ಮಂದಿ ದೇವಾಲಯಗಳಿಗೆ ಭೇಟಿ ನೀಡಿದ ನೆನಪೇ ಇಲ್ಲ. ಯಾಕೆ ಹೀಗೆ ಎಂದು ಕೇಳಿದರೆ, ಸವರ್ಣೀಯರು ಹೇಳುವ ಮಾತು, “ಅವರು ಎಂದೂ ದೇವಸ್ಥಾನಕ್ಕೆ ಬರಬೇಕು ಎಂದು ಕೇಳಲಿಲ್ಲ. ನಾವೂ ಅವರನ್ನು ಬರಬೇಡಿ ಎಂದಿರಲಿಲ್ಲ”. ಹಬ್ಬಗಳ ದಿನ ದಲಿತರು ಹೊರಗಡೆಯೇ ನಿಂತು ಹಣ್ಣು-ಕಾಯಿ ಅರ್ಪಿಸಿ ಬರುತ್ತಿದ್ದರು.

ಆ ದಿನ ತಾಲೂಕು ಆಡಳಿತ ಶಾಂತಿ ಸಭೆ ನಡೆಸಿ ದಲಿತರ ದೇವಾಲಯ ಪ್ರವೇಶಕ್ಕೆ ಯಾವುದೇ ಅಡ್ಡಿ ಆಗದಂತೆ ನೋಡಿಕೊಳ್ಳುವುದರ ಹಿಂದೆ ಹಲವು ಘಟನೆಗಳು ನಡೆದಿದ್ದವು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆ ಊರಿನ ಸಂತೋಷ್ ಎಂಬ ಕಲಾವಿದ ಹೊಯ್ಸಳರ ಕಾಲದ ದೇವಾಲಯದ ಆವರಣಕ್ಕೆ ಅಂಟಿಕೊಂಡಂತೆ ಇರುವ ಹೋಟೆಲ್ ಒಳಗೆ ಇದ್ದ ಗೆಳೆಯನನ್ನು ಮಾತನಾಡಿಸಲು ಹೋದರು. ಹೆಗ್ಗೋಡಿನ ನೀನಾಸಂನಲ್ಲಿ ನಾಟಕ ತರಬೇತಿ ಪಡೆದು, ’ತಿರುಗಾಟ’ದಲ್ಲಿ ಪಾಲ್ಗೊಂಡು ಹೆಸರು ಮಾಡಿರುವ ಕಲಾವಿದ ಸಂತೋಷ್. ಆತ ಹೊಟೇಲ್‌ನ ಒಳಗೆ ಹೋಗಲಾಗಲಿಲ್ಲ. ಹೊಟೇಲ್‌ನ ಮಾಲೀಕ, “ನೀವೆಲ್ಲಾ ಒಳಗಡೆ ಬರುವಂತಿಲ್ಲ. ಅಲ್ಲೇ ಇರಿ” ಎಂದು ತಡೆದಿದ್ದ. ಊರಿನ ಎಲ್ಲಾ ಮಕ್ಕಳಿಗೆ ನಾಟಕ ಕಲಿಸಿದ್ದ ಸಂತೋಷ್‌ಗೆ ಆ ಸಂದರ್ಭ ಗಾಬರಿ ಹುಟ್ಟಿಸಿತ್ತು.

ಹೊಟೇಲ್ ಒಂದು ಸಾರ್ವಜನಿಕ ವ್ಯಾಪಾರಿ ಸ್ಥಳ. ಅಲ್ಲಿಗೆ ಜಾತಿ ಆಧಾರದ ಮೇಲೆ ನಿರ್ಬಂಧ ಹೇರುವುದು ಕಾನೂನಿನ ಪ್ರಕಾರ ಅಪರಾಧ. ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂದು ಸಂತೋಷ್ ತನ್ನ ಸಮುದಾಯದ ಮುಖಂಡರ ಬಳಿ ಮೊದಲು ಪ್ರಸ್ತಾಪಿಸಿದರು. ಹೊಟೇಲ್ ಮಾಲೀಕನನ್ನು ಊರಿನ ಜನ ಕರೆದು ಬುದ್ಧಿ ಹೇಳಬಹುದೆಂದು ಕಾದರು. ಹಾಗಾಗಲಿಲ್ಲ. ಕೊನೆಗೆ ’ಭೀಮ್ ಆರ್ಮಿ’ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ದೂರು ನೀಡಿದರು. ಇದೆಲ್ಲವೂ ಹಲವು ತಿಂಗಳುಗಳ ಕಾಲ ನಡೆಯಿತು. ಆ ನಂತರ ದೇವಾಲಯಗಳಿಗೂ ದಲಿತರ ಪ್ರವೇಶ ಇಲ್ಲದಿರುವ ಪರಿಸ್ಥಿತಿ ಬೆಳಕಿಗೆ ಬಂತು.

ತಹಸೀಲ್ದಾರ್ ಜೆ.ಬಿ.ಮಾರುತಿ, ಡಿವೈಎಸ್ಪಿ ಲಕ್ಷ್ಮೇಗೌಡ ಅವರ ಸಮ್ಮುಖದಲ್ಲಿ ಸಭೆ ನಡೆಯಿತು. ಇತರೆ ಜಾತಿಯ ಜನ ದಲಿತರ ದೇವಾಲಯ ಪ್ರವೇಶಕ್ಕೆ ನಮ್ಮದೇನೂ ತಕರಾರಿಲ್ಲ ಎಂದರು. ಸಣ್ಣಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದವರನ್ನು ಊರ ಮುಖಂಡರು, ಇದು ಕಾನೂನಿನ ವಿಚಾರ ಎಂದು ಗದರಿಸಿ ಸುಮ್ಮನಿರಿಸಿದರು. ಆ ಹೊತ್ತಿಗಾಗಲೇ ಅಸ್ಪೃಶ್ಯತೆ ಆಚರಿಸುತ್ತಿದ್ದ ವ್ಯಕ್ತಿಗೆ ’ಪರವಾನಗಿ ಇಲ್ಲದೆ ನಡೆಸುತ್ತಿದ್ದ ಹೊಟೇಲ್’ ಮುಚ್ಚುವಂತೆ ಆದೇಶ ಹೊರಬಿದ್ದಿತ್ತು.

ಪರಿಣಾಮವಾಗಿ ಊರಿನ ದೇವಾಲಯಗಳಿಗೆ ದಲಿತರು ಭೇಟಿ ನೀಡಿದರು. ಎಪ್ಪತ್ತೈದು, ಎಂಭತ್ತು ವರ್ಷದ ಹಿರಿಯರು ತಮ್ಮ ಹುಟ್ಟೂರಲ್ಲಿ ಮೊದಲ ಬಾರಿಗೆ ದೇವಾಲಯಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಭಾವುಕರಾಗಿದ್ದರು. ಕೆಲವರಲ್ಲಿ ಆತಂಕವೂ ಇತ್ತು. ಈ ಘಟನೆಯ ಪರಿಣಾಮ ಊರಲ್ಲಿ ಮತ್ತೇನಾಗಬಹುದೋ ಎಂಬ ಭಯ ಅವರದು. ಅವರು ಎಣಿಸಿದಂತೆ, ದಲಿತ ಕೇರಿಯ ಜನರಿಗೆ ಅಲ್ಪಸ್ವಲ್ಪ ಸಾಲ ಕೊಟ್ಟಿದ್ದ ಮೇಲ್ವರ್ಗದ ಜನ ದರ್ಪದಿಂದ ತಕ್ಷಣ ವಾಪಸ್ಸು ಕೊಡುವಂತೆ ಕೇಳಿದರು. ಕೇರಿ ಮೂಲಕ ಹಾದುಹೋಗುವಾಗ ಕೆಟ್ಟ ಕೊಳಕು ಭಾಷೆಯಲ್ಲಿ ಬೈದರು.

ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಹೊಡೆದಾಟಗಳೂ ನಡೆದು ಹಿರಿಯ ಪೊಲೀಸ್ ಅಧಿಕಾರಿಗಳೂ ಪೆಟ್ಟು ತಿಂದ ಘಟನೆಗಳಿವೆ. ದಲಿತರಿಗೆ ಗುಡಿಯೊಳಗೆ ಪ್ರವೇಶ ಇಲ್ಲದ ಊರುಗಳು ನೂರಾರು ಇವೆ. ಆದರೆ ಅವೆಲ್ಲವೂ ಸುದ್ದಿಯಾಗುವುದಿಲ್ಲ. ಇದುವರೆಗೆ ವರದಿಯಾಗಿ ಚರ್ಚೆಯಾದ ಬಹುತೇಕ ಘಟನೆಗಳಲ್ಲಿ ದೇವಾಲಯದ ಜೊತೆ ಬೇರೆ ಅಗತ್ಯ, ಅವಕಾಶ ಪ್ರಶ್ನೆಯೂ ಅಂಟಿಕೊಂಡಿರುತ್ತದೆ. ದಿಂಡಗೂರಿನಲ್ಲಿ ನೇರವಾಗಿ ದೇವಾಲಯದ ಪ್ರಶ್ನೆ ಮುನ್ನೆಲೆಗೆ ಬಂದಿದ್ದು, ಹೋಟೆಲ್ ಪ್ರಕರಣದಿಂದ. ದಲಿತ ಕಾಲೋನಿಯ ಪ್ರಜ್ಞಾವಂತ ತರುಣರಿಗೆ ’ದೇವಾಲಯ ಪ್ರವೇಶ’ ಪ್ರಮುಖ ಪ್ರಶ್ನೆಯಾಗಿಲ್ಲ. ’ಪ್ರವೇಶ ಇಲ್ಲದ ಕಡೆ ಹೋಗದಿದ್ದರಾಯ್ತು’ ಎಂಬುದು ಅವರ ಅಭಿಪ್ರಾಯ. ಆದರೆ ತಮ್ಮಲ್ಲಿ ಯಾರಾದರೂ ಗುಡಿಗೆ ಹೋದಾಗ ಇತರರು ತಡೆದರೆ ಅವರು ಪ್ರತಿಭಟಿಸುತ್ತಾರೆ. ಹಾಗೂ ಬೇರೊಂದು ಸಾರ್ವಜನಿಕ ಸ್ಥಳಕ್ಕೆ ದಲಿತರು ಬರದಂತೆ ತಡೆದಾಗ ದೇವಸ್ಥಾನದ ವಿಚಾರವೂ ಮುನ್ನೆಲೆಗೆ ಬರುತ್ತದೆ.

ಆರು ವರ್ಷಗಳ ಹಿಂದೆ (2015 ಸೆಪ್ಟೆಂಬರ್) ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಯ ಬಸವೇಶ್ವರ ದೇವಾಲಯದ ಪ್ರಾಂಗಣಕ್ಕೆ ನಾಲ್ವರು ದಲಿತ ಮಹಿಳೆಯರು ಹೋದರು ಎಂಬ ಕಾರಣಕ್ಕೆ ವಾಗ್ವಾದ ಆರಂಭವಾಯಿತು. ಅವರ ಆಗಮನದಿಂದ ಗುಡಿಯ ಪಾವಿತ್ರ್ಯ ಹಾಳಾಯ್ತೆಂದು ಇತರೆ ಜಾತಿಯ ಜನ ದಂಡ ಹಾಕಿದರು. ಅವರ ಪ್ರಕಾರ ದೇವಾಲಯ ಶುದ್ಧಿಯಾಗಬೇಕು. ಅಷ್ಟು ವರ್ಷ ದೇವಾಲಯ ಪ್ರವೇಶದ ಬಗ್ಗೆ ತಲೆಕೆಡಿಸಿಕೊಳ್ಳದ ಯುವಕರು ಪ್ರತಿಭಟಿಸಿದರು. ದೇವಾಲಯ ಮಾತ್ರ ಅಲ್ಲ ಒಂದು ಜಾತಿಗಷ್ಟೇ ಸೀಮಿತವಾಗಿದ್ದ ಸಮುದಾಯ ಭವನದಲ್ಲೂ ತಮ್ಮವರು ಕಾರ್ಯಕ್ರಮ ಮಾಡಲು ಅವಕಾಶ ಬೇಕು ಎಂದರು. ಸರಕಾರದ ದುಡ್ಡಿನಲ್ಲಿ ಕಟ್ಟಿದ್ದ ಸಮುದಾಯ ಭವನಕ್ಕೆ ಒಂದು ಜಾತಿಗೆ ಸೀಮಿತ ಮಾಡಿ ಹೆಸರು ಬರೆಸಲಾಗಿತ್ತು. ಅಲ್ಲಿ ದಲಿತರು ಯಾವುದೇ ಕಾರ್ಯಕ್ರಮ ಮಾಡುವಂತಿರಲಿಲ್ಲ. ಊರಲ್ಲಿ ಸಮುದಾಯ ಭವನ ಇದ್ದರೂ, ಅವರು ಮದುವೆ ಕಾರ್ಯಗಳನ್ನು ಮನೆಯ ಮುಂದಿನ ಬೀದಿಗಳಲ್ಲೇ ಮಾಡಿಕೊಳ್ಳಬೇಕಿತ್ತು.

ಊರಿನ ಬಲಾಢ್ಯರು ದಲಿತರ ಹಕ್ಕೊತ್ತಾಯವನ್ನು ವಿರೋಧಿಸಿದರು. ಅವರ ಬೆಂಬಲಕ್ಕೆ ನಿಂತ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ಮೇಲ್ವರ್ಗದ ಜನ ಖಂಡಿಸಿದರು. ಈ ಮಧ್ಯೆ ಕೆಲವು ಜನಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯದೆ “ಇದುವರೆಗೆ ಹೇಗೆ ನಡೆದುಕೊಂಡು ಬಂದಿತ್ತೋ.. ಹಾಗೇ ಇರಲಿ” ಎಂದದ್ದು ದಲಿತ ಹುಡುಗರನ್ನು ಮತ್ತಷ್ಟು ಕೆರಳಿಸಿತ್ತು.

ಅದೇ ಊರಿನಲ್ಲಿ ಕೆಲವು ದಶಕಗಳ ಹಿಂದೆ ಸವರ್ಣೀಯ ಮನೆಯ ಹುಡುಗರು ತಮ್ಮ ದಲಿತ ಸ್ನೇಹಿತರ ಮನೆಯ ಸಮಾರಂಭವೊಂದರಲ್ಲಿ ಊಟ ಮಾಡಿದರು ಎಂಬ ಕಾರಣಕ್ಕೆ, ಅವರಿಗೆ ಊಟ ಬಡಿಸಿದ, ನೀರು ಕೊಟ್ಟವರಿಗೆ ದಂಡ ಹಾಕಿದ್ದರು. ಆ ದಂಡದ ಮೊತ್ತದಲ್ಲಿ ಸವರ್ಣೀಯ ಹುಡುಗರನ್ನು ಧರ್ಮಸ್ಥಳಕ್ಕೆ ಕಳುಹಿಸಿ ’ಶುದ್ಧರಾಗಿ’ ಹಿಂತಿರುಗುವಂತೆ ನೋಡಿಕೊಳ್ಳಲಾಗಿತ್ತು. ಇಂತಹ ಅನೇಕ ಘಟನೆಗಳ ಕಾರಣಗಳಿಗೆ ಅನುಭವಿಸಿಕೊಂಡು ಬಂದಿದ್ದ ನೋವನ್ನು ಈ ದೇವಸ್ಥಾನ ಘಟನೆ ನಂತರ ದಲಿತರು ವ್ಯಕ್ತಪಡಿಸಿದರು. ಆಗ ಈ ಸುದ್ದಿ ರಾಜ್ಯದ ಗಮನ ಸೆಳೆಯಿತು. ಈ ಮಧ್ಯೆ ಇದೇ ಊರಿನ ಪತ್ರಕರ್ತ ತನ್ನ ಪತ್ರಿಕೆಗೆ ಈ ಸುದ್ದಿ ಮಾಡಿದ ಕಾರಣಕ್ಕೆ ಕೆಲಸ ಕಳೆದುಕೊಂಡ. ಆದರೆ ಕೆಲ ದಿನಗಳ ನಂತರ ಮತ್ತೊಂದು ಪತ್ರಿಕೆ ಆ ಪತ್ರಕರ್ತನಿಗೆ ಕೆಲಸ ಕೊಟ್ಟಿತು.

ಮದುಮಗನ ಸಂಕಟ

ಇನ್ನೊಂದು ದಾರುಣ ಘಟನೆ ನಡೆದದ್ದು ಹಾಸನ ತಾಲೂಕಿನ ಹಿರೇಕಡಲೂರಿನಲ್ಲಿ. 2018ರ ಡಿಸೆಂಬರ್‌ನಲ್ಲಿ ಪ್ರದೀಪ್ ಎಂಬ ದಲಿತ ಹುಡುಗನ ಮದುವೆ ಮುನ್ನಾ ದಿನ ಪೂಜೆಗೆಂದು ಊರ ದೇವಾಲಯದಲ್ಲಿ ನೆಂಟರೆಲ್ಲಾ ಸೇರಿದ್ದರು. ದೇವಾಲಯದ ಪಕ್ಕದಲ್ಲಿಯೇ ಒಂದು ತೊಟ್ಟಿ ಇದೆ. ಪೂಜೆಗೆ ಬೇಕೆಂದು ಅಲ್ಲಿ ನೀರು ತೆಗೆದುಕೊಂಡಿದ್ದಾರೆ. ಅಷ್ಟಕ್ಕೆ ಅಸಮಾಧಾನಗೊಂಡ ಇತರ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರಿ ವಾದಕ್ಕಿಳಿದರು. ಅವರಲ್ಲೊಬ್ಬ ಗುಡಿಯ ಮೈಕ್ ಬಳಸಿಕೊಂಡು ದೇವಸ್ಥಾನ ಅಪವಿತ್ರ ಆಗುತ್ತಿದೆ ಎಲ್ಲಾ ಬನ್ನಿ ಎಂದು ಕರೆ ಕೊಟ್ಟಿದ್ದ. ಮದುಮಗ ಹಾಗೂ ಅವನ ಮನೆಯವರು ಅನುಭವಿಸಿದ ಯಾತನೆ ಯಾರಿಗೂ ಬೇಡ. ಮೇಲ್ವರ್ಗದ ಜನ ತಮ್ಮ ನಡವಳಿಕೆಯನ್ನು ಖುಲ್ಲಂಖುಲ್ಲಾ ಸಮರ್ಥಿಸಿಕೊಂಡರು.

ಇದುವರೆಗೆ ದಲಿತರು ಈಶ್ವರನ ದೇವಸ್ಥಾನಕ್ಕೆ ಬಂದಿರಲಿಲ್ಲ ಹಾಗೂ ಆ ತೊಟ್ಟಿಯಿಂದ ನೀರು ತೆಗೆದಿರಲಿಲ್ಲ. ಇವತ್ತೇಕೆ ಬರಬೇಕು ಎಂದು ಪ್ರಶ್ನೆ ಕೇಳಿದರು. ದಲಿತ ಕುಟುಂಬದವರು ಅಂದು
ಹೋಗಿದ್ದು ಮದುವೆ ಪ್ರಯುಕ್ತ. ಅಲ್ಲಿಯೂ ಯುವಕರು ಗಟ್ಟಿಯಾಗಿ ಅಸ್ಪೃಶ್ಯತೆ ವಿರೋಧಿಸಿದರು.

ಇಂತಹ ಘಟನೆ ನಡೆದಾಗಲೆಲ್ಲಾ ಜಿಲ್ಲಾಡಳಿತ, ಪೊಲೀಸರು ತಕ್ಷಣದ ಪರಿಹಾರಕ್ಕೆ ಮುಂದಾಗುತ್ತಾರೆ. ಅವರ ಆ ಕ್ಷಣದ ಕಾಳಜಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು. ಶತಮಾನಗಳ ಕಾಲದ ಜಾಢ್ಯಕ್ಕೆ ಮದ್ದು ಕೊಡುವ ಉಸಾಬರಿ ನಮಗೇಕೆ ಎನ್ನುವ ಭಾವನೆ ಅವರಲ್ಲೂ ಇದ್ದಂತಿದೆ. ಸುದ್ದಿ ಗೊತ್ತಾದ ತಕ್ಷಣ ಊರಿಗೆ ಮೀಸಲು ಪೊಲೀಸರನ್ನು ರವಾನಿಸುತ್ತಾರೆ. ಗಸ್ತು ತಿರುಗಲು ಹೇಳುತ್ತಾರೆ. ಯಾರಿಗೂ ಅಸಮಾಧಾನ ಆಗುವುದು ಬೇಡ ಎಂಬ ಧೋರಣೆಯಿಂದ ಎರಡೂ ಕಡೆಯವರಿಂದ ಒಂದೊಂದು ದೂರು ದಾಖಲಿಸಿಕೊಳ್ಳುತ್ತಾರೆ. ಆಮೇಲೆ ಕೆಳ ಹಂತದ ಅಧಿಕಾರಿಗಳ ಮೂಲಕ ದಲಿತರನ್ನೇ ಸುಮ್ಮನಾಗಿಸಲು ಪ್ರಯತ್ನಿಸುತ್ತಾರೆ. ಅಸ್ಪೃಶ್ಯತೆ ಹಾಗೂ ಶೋಷಣೆಯನ್ನು ನಿವಾರಿಸುವ ಉದ್ದೇಶಕ್ಕಿಂತ, ಸರಕಾರಕ್ಕೆ ತಲೆನೋವು ಆಗದಂತೆ ನೋಡಿಕೊಳ್ಳುವುದೇ ಪ್ರಮುಖವಾಗಿರುತ್ತದೆ.

ಕಲ್ಯಾಣಿ ನೀರು

ನೀರು ಬಳಕೆಗೆ ಸಂಬಂಧಪಟ್ಟಂತೆ ಇನ್ನೊಂದು ಉದಾಹರಣೆ ನೋಡೋಣ. ಚನ್ನರಾಯಪಟ್ಟಣ ತಾಲೂಕಿನ ಕುರುವಂಕ ಎಂಬ ಗ್ರಾಮದ ಮಧ್ಯ ಭಾಗದಲ್ಲಿ ಹಳೇಕಾಲದ ಆಕರ್ಷಕ ಕಲ್ಯಾಣಿ ಇದೆ. ಅಲ್ಲಿ ಪಕ್ಕದಲ್ಲೇ ಇರುವ ದಲಿತ ಕೇರಿಯ ಜನ ನೇರವಾಗಿ ಬಂದು ನೀರನ್ನು ಮೊಗೆಯುವಂತಿಲ್ಲ. ಆ ಊರಿನಲ್ಲಿರುವ ದೇವಸ್ಥಾನದ ಪೂಜೆಗೆ ಅದೇ ಕಲ್ಯಾಣಿಯ ನೀರನ್ನು ಬಳಸುವುದರಿಂದ ದಲಿತರು ಮುಟ್ಟಬಾರದು ಎಂಬುದು ಹಳ್ಳಿಗರ ವಾದ. ಈ ಬಗ್ಗೆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ದಿನ ಅಧಿಕಾರಿಗಳ ದಂಡು ಊರಿಗೆ ನಡೆಯಿತು. ಊರ ಜನರನ್ನು ಸೇರಿಸಿ ’ನೀವು ಹೀಗೆಲ್ಲಾ ಮಾಡುವಂತಿಲ್ಲ. ನೀರು ಎಲ್ಲರಿಗೂ ಸೇರಿದ್ದು’ ಎಂದು ಹೇಳಿ, ತಕ್ಷಣವೇ ಹತ್ತಿರದಲ್ಲಿದ್ದ ಒಂದಿಬ್ಬರು ದಲಿತರಿಗೆ ನೀರು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟರು. ಆ ಮೂಲಕ ಅಸ್ಪೃಶ್ಯತೆಯನ್ನು ನಿಲ್ಲಿಸಲಾಗಿದೆ ಎಂದು ಘೋಷಿಸಿದರು. ಆದರೆ ಅಲ್ಲಿಗೆ ಆ ಪದ್ಧತಿ ನಿಂತಿತೇ ಎಂಬುದು ಗೊತ್ತಿಲ್ಲ. ಹಾಗೂ, ಜನರ ಮನಸ್ಥಿತಿ ಒಂದು ಗಂಟೆಯ ಫೋಟೋ ಸೆಷನ್ ಮೂಲಕ ಬದಲಾಗುವಂತಿದ್ದರೆ ಎಷ್ಟು ಚೆನ್ನಾಗಿತ್ತಲ್ಲ?

ಅಪಾಯಕಾರಿ ಸಿಡಿ ಮತ್ತು ಸಾವು

ಹೀಗೆ ಗುಡಿಗಳ ಪ್ರವೇಶಕ್ಕೆ ಹಾಗೂ ಗುಡಿಗೆ ಸೇರಿದ ಕಲ್ಯಾಣಿಯ ನೀರು ಕುಡಿಯಲು ನಿರ್ಬಂಧಗಳಿದ್ದರೂ, ದೇವರ ಜಾತ್ರೆಗಳಲ್ಲಿ ಸಿಡಿಯಂತಹ ಅಮಾನವೀಯ ಆಚರಣೆಗಳು ಬಂದಾಗ ದಲಿತರನ್ನು ತೊಡಗಿಸಿಕೊಳ್ಳುವ ರೀತಿಯೇ ಭಿನ್ನವಾಗಿದೆ. ಒಂದು ವಾರ ಕೇವಲ ನೀರಿನ ಆಹಾರ ಸೇವಿಸಿ, ಬೆನ್ನಿಗೆ ಕಬ್ಬಿಣದ ತಂತಿ ಸಿಕ್ಕಿಸಿಕೊಂಡು ಮರದ ಕೊಂಬೆಗೆ ನೇತು ಬಿದ್ದು ಸಿಡಿ ಆಡಬೇಕು. ನೋಡುವವರನ್ನು ರಂಜಿಸಬೇಕು. ಊರಿನ ಇತರರ ಮನೆಗಳಲ್ಲಿ ನೆಂಟರು ಬಂದು ಇವರ ಆಟ ನೋಡಿ ಸಂಭ್ರಮಿಸಬೇಕು. ಹೊಳೆನರಸೀಪುರ ತಾಲೂಕಿನ ಹರಿಹರಪುರದಲ್ಲಿ ನಡೆಯುವ ಉಡುಸಲಮ್ಮ ಜಾತ್ರೆಯಲ್ಲಿ ಸಿಡಿ ಆಡುವವರು ಅಲ್ಲಿಯೇ ಹತ್ತಿರದ ಚಾಕೇನಹಳ್ಳಿಯ ದಲಿತರು. ಅದೂ ಒಂದೇ ಮನೆಯ ಅಣ್ಣ ತಮ್ಮಂದಿರು ಭಾಗವಹಿಸಬೇಕೆಂಬ ಸಂಪ್ರದಾಯ ಇದೆ. ಅವರೇ ಏಕೆ ಎನ್ನುವುದಕ್ಕೂ ಒಂದು ಕತೆ ಕಟ್ಟಲಾಗಿದೆ. ಎಷ್ಟೋ ವರ್ಷಗಳ ಹಿಂದೆ ಅವರ ಪೂರ್ವಿಕರು ಭತ್ತ ಕದ್ದರಂತೆ ಆಗ ಉಡುಸಲಮ್ಮ ಇವರ ರಕ್ಷಣೆಗೆ ಬಂದು ಏಕಾಏಕಿ ಭತ್ತದ ಬಣ್ಣ ಬದಲಾಯಿಸಿ, ಕಳ್ಳರನ್ನು ಹುಡುಕಿಕೊಂಡು ಬಂದವರಿಂದ ಪಾರು ಮಾಡಿದರಂತೆ. ಹಾಗಾಗಿ ಅಂದಿನಿಂದ ಪ್ರತಿವರ್ಷ ಸಿಡಿ ಆಡುವ ಮೂಲಕ ದೇವತೆಗೆ ಕೃತಜ್ಞತೆ ಸಲ್ಲಿಸಬೇಕಂತೆ.

ಆ ಕುಟುಂಬದವರಿಗೂ ಈ ಪರಂಪರೆ ಪಾಲಿಸದೇ ಇದ್ದರೆ ಏನು ಅನಾಹುತ ಕಾದಿದೆಯೋ ಎಂಬ ಭಯ. ಮೂರು ವರ್ಷಗಳ ಹಿಂದೆ ಆ ಕುಟುಂಬದ ಒಬ್ಬರು ಧೈರ್ಯ ತೋರಿ ಸಿಡಿ ಆಡಲು ನಿರಾಕರಿಸಿದರು. ಅದಕ್ಕೆ ಅವರಿಗಿದ್ದ ಬಲವಾದ ಕಾರಣವೆಂದರೆ, ಅವರು ದೂರದ ಊರಿನಲ್ಲಿ ಸಂಸಾರದೊಂದಿಗೆ ಸಣ್ಣ ಸಂಬಳದ ಕೆಲಸ ಮಾಡುತ್ತಿದ್ದರು. ಒಂದು ವಾರದ ಮೊದಲೇ ಕೆಲಸಕ್ಕೆ ರಜೆ ಹಾಕಿ ಸಿಡಿ ಆಡಲು ಬರುವುದು ಅವರಿಗೆ ಆರ್ಥಿಕವಾಗಿ ನಷ್ಟದ ವಿಷಯ. ಕೆಲಸ ಬಿಡುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಧೈರ್ಯ ಮಾಡಿ ತಾನು ಸಿಡಿ ಏರುವುದಿಲ್ಲ ಎಂದರು. ಮೇಲಾಗಿ ಸಿಡಿ ಒಂದು ಅಪಾಯಕಾರಿ ಆಟ. 2016 ಮಾರ್ಚ್‌ನಲ್ಲಿ ಬೇಲೂರು ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ದಲಿತರ ಮನೆ ಹುಡುಗ ಸಿಡಿ ಆಡುವಾಗ ಕೊಂಬೆ ಮುರಿದು ಬಿದ್ದು ಸತ್ತು ಹೋದ. ಸಿಡಿಗಂಬ ಜೋಡಿಸುವಲ್ಲಿ ಏನೋ ಲೋಪ ಆಗಿರಬಹುದು. ಆದರೆ ಊರ ಜನರಲ್ಲಿ ಏನು ನಂಬಿಕೆ ಗೊತ್ತೆ? ಅವನು ನೇಮವನ್ನು ಸರಿಯಾಗಿ ಪಾಲಿಸದ ಕಾರಣ ಹೀಗಾಯ್ತಂತೆ. ಕರ್ನಾಟಕ ಸರಕಾರ ತಂದ ಮೌಢ್ಯ ಪ್ರತಿಬಂಧಕ ಕಾಯಿದೆಯ ಕಾರಣದಿಂದ ಅಲ್ಲಲ್ಲಿ ಇಂತಹ ಆಚರಣೆಗೆ ಕಡಿವಾಣ ಹಾಕಲಾಗಿದೆ.

ಕೆಲವು ದೇವಾಲಯಗಳ ವಿಚಾರದಲ್ಲಿ ಹಲವು ಕಟ್ಟುಕತೆಗಳಿವೆ. ಆ ಕಾರಣ ದಲಿತರು ಅಲ್ಲಿಗೆ ಹೋಗುವ ಬೇಡಿಕೆ ಇರಲಿ, ಆ ದೇವರ ಹೆಸರನ್ನೂ ಉಲ್ಲೇಖಿಸಲು ಹಿಂಜರಿಯುತ್ತಾರೆ. ಸಕಲೇಶಪುರದ ಕಾಗಿನಹರೆ ಗ್ರಾಮದಲ್ಲಿ ಚೌಡಿಯ ಗುಡಿಯಿದೆ. ಆಲೂರು, ಸಕಲೇಶಪುರ ಭಾಗದ ದಲಿತರು ಆ ದೇವತೆಯನ್ನು ನೆನಪಿಸಿಕೊಳ್ಳುವುದೂ ತಪ್ಪು ಎಂಬ ಭಾವನೆ ಆಳವಾಗಿದೆ. ಆ ದೇವತೆಗೆ ದಲಿತರೆಂದರೆ ಆಗುವುದಿಲ್ಲವಂತೆ. ಹಾಗಾಗಿ ಅಲ್ಲಿಗೆ ಯಾವ ದಲಿತರೂ ಹೋಗಬಾರದಂತೆ. ಹಿಂದೊಮ್ಮೆ ಆ ಊರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡಕ್ಟರ್ ಮತ್ತು ಡ್ರೈವರ್‌ಗಳು ಕೂಡಾ ದಲಿತರು ಇರದಂತೆ ನೋಡಿಕೊಳ್ಳಲಾಗಿತ್ತು. ಆ ಊರಲ್ಲಿ ದಲಿತರಾರೂ ನೆಲೆಸಿಲ್ಲ. ಅಲ್ಲಿ ಯಾರೂ ಈ ದೇವಸ್ಥಾನಕ್ಕೆ ಪ್ರವೇಶ ಇಲ್ಲವೆಂದು ದಲಿತರು ಪ್ರತಿಭಟಿಸಲಿಲ್ಲ. ಅದುವರೆಗೆ ಆ ಹಳ್ಳಿ ಸೇರುವ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರೂ ಅಲ್ಲಿಗೆ ಹೋಗಿರಲಿಲ್ಲ.

ಈ ಸುದ್ದಿ ವರದಿ ಆದಾಗ ದೇವಾಲಯ ಸಮಿತಿಯವರು ದಲಿತರಿಗೆ ಅಂತಹ ನಿರ್ಬಂಧಗಳೇನೂ ಇಲ್ಲ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಶಾಸಕರು ’ಇಲ್ಲಿ ಅಂತಹ ಪದ್ಧತಿ ಏನಿಲ್ಲ’ ಎಂಬಂತೆ ಅದೊಂದು ದಿನ ದೇವಾಲಯದ ಒಳಗೆ ಹೋದರು. ಸಮಾಜದಲ್ಲಿರುವ ರೋಗವನ್ನು ಮುಚ್ಚಿಡುವುದರಲ್ಲಿ ಅವರಿಗೆ ಆಸಕ್ತಿ ಇತ್ತೇ ಹೊರತು, ಅದಕ್ಕೆ ಮದ್ದು ಹುಡುಕುವ ಬಗ್ಗೆ ಅಲ್ಲ. ಇತ್ತೀಚೆಗೆ ತಮಿಳುನಾಡಿನಲ್ಲಿ ದಲಿತ ಮಹಿಳೆಗೆ ದೇವಾಲಯದ ಆವರಣದಲ್ಲಿ ಊಟ ಮಾಡಲು ಬಿಡಲಿಲ್ಲ ಎಂದು ವರದಿಯಾದ ನಂತರ, ಖುದ್ದು ಮುಜರಾಯಿ ಮಂತ್ರಿಯೇ ಆಕೆಯೊಂದಿಗೆ ಅದೇ ಜಾಗದಲ್ಲಿ ಕುಳಿತು ಊಟ ಮಾಡಿದರು. ನಮ್ಮಲ್ಲಿ ಅಂತಹ ದಿನಗಳನ್ನು ನಿರೀಕ್ಷಿಸಬಹುದೇ..??

ಜಿತೇಶ್ ಎಸ್
ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು


ಇದನ್ನೂ ಓದಿ: ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...