ಬಹುನಿರೀಕ್ಷಿತ ಟಿ20 ವಿಶ್ವಕಪ್ ಅಭಿಯಾನ ಮುಕ್ತಾಯಗೊಂಡಿದೆ. ನ್ಯೂಜಿಲೆಂಡ್ ಎದುರು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ರಿಕೆಟ್ ದಿಗ್ಗಜ ಆಸ್ಟ್ರೇಲಿಯಾ ಜಯಭೇರಿ ಭಾರಿಸಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ಗೆ ಮುತ್ತಿಟ್ಟಿತು. 2019 ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ನ್ಯೂಜಿಲೆಂಡ್ ತಂಡ ಭಾನುವಾದ ಟಿ20 ವಿಶ್ವಕಪ್ ಫೈನಲ್‌ನಲ್ಲಿಯೂ ಆಸ್ಟ್ರೇಲಿಯಾ ಎದುರು ಮುಗ್ಗರಿಸಿ ನಿರಾಶೆ ಅನುಭವಿಸಿತು.
ಆಸ್ಟ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದರೆ ಅದೇ ತಂಡದ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮ್ಯಾನ್ ಆಫ್ ದಿ ಟೂರ್ನಿಮೆಂಟ್ ಮುಡಿಗೇರಿಸಿಕೊಂಡರು. ಈ ವಿಷಯವಾಗಿ ಪಾಕಿಸ್ತಾನದ ಮಾಜಿ ಆಟಗಾರ ಶೋಯಬ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೇವಿಡ್ ವಾರ್ನರ್‌ಗಿಂತ ಹೆಚ್ಚು ರನ್ ಗಳಿಸಿದ್ದ, ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ಪಾಕಿಸ್ತಾನದ ನಾಯಕ ಮತ್ತು ಬ್ಯಾಟ್ಸ್‌ಮನ್ ಬಾಬರ್ ಅಜಂರವರಿಗೆ ಆ ಶ್ರೇಯ ಸಲ್ಲಬೇಕಿತ್ತು ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದು, ಇದು ಐಸಿಸಿಯ ‘ಅನ್ಯಾಯದ ನಿರ್ಧಾರ’ ಎಂದು ಕರೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಬಾಬರ್ ಅಜಂ ಮ್ಯಾನ್ ಆಫ್ ದಿ ಟೂರ್ನಿಮೆಂಟ್ ಆಗುತ್ತಾರೆ ಎಂದು ನಿರೀಕ್ಷಿಸಿದ್ದೆ. ನಿಜಕ್ಕೂ ಅನ್ಯಾಯದ ನಿರ್ಧಾರ” ಎಂದಿದ್ದಾರೆ.
Was really looking forward to see @babarazam258 becoming Man of the Tournament. Unfair decision for sure.
— Shoaib Akhtar (@shoaib100mph) November 14, 2021
ಪಾಕ್ ಆಟಗಾರ ಬಾಬರ್ ಒಟ್ಟು ಅಜಂ 6 ಪಂದ್ಯಗಳಲ್ಲಿ 60.60 ಸರಾಸರಿಯಲ್ಲಿ 303 ರನ್ ಗಳಿಸಿದರೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಒಟ್ಟು 7 ಪಂದ್ಯಗಳಲ್ಲಿ 48.16 ಸರಾಸರಿಯಲ್ಲಿ 289 ರನ್ ಗಳಿಸಿದ್ದಾರೆ. ಪಾಕ್ ತಂಡದ ಮತ್ತೊಬ್ಬ ಆಟಗಾರ ಮೊಹಮ್ಮದ್ ರಿಜ್ವಾನ್ ಕೂಡ 6 ಪಂದ್ಯಗಳಲ್ಲಿ 70.25 ಸರಾಸರಿಯಲ್ಲಿ 281 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಬಾಬರ್ ಅಜಂ ಡೇವಿಡ್ ವಾರ್ನರ್‌ಗಿಂತ ಒಂದು ಇನ್ನಿಂಗ್ಸ್ ಕಡಿಮೆ ಆಡಿದರೂ ಸಹ ಅವರಿಗಿಂತ 14 ರನ್ ಹೆಚ್ಚು ಗಳಿಸಿದ್ದಾರೆ. ಸರಾಸರಿ ಸಹ ಉತ್ತಮವಾಗಿದೆ. ಹಾಗಾಗಿ ಅವರಿಗೆ ಮ್ಯಾನ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ನೀಡಬೇಕಿತ್ತು ಎಂಬುದು ಅಖ್ತರ್‌ರವರ ವಾದವಾಗಿದೆ.

ಡೇವಿಡ್ ವಾರ್ನರ್ 3 ಅರ್ಧಶತಕಗಳನ್ನು ಭಾರಿಸಿ, 146.70 ಬ್ಯಾಟಿಂಗ್ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದ್ದಾರೆ. ಅಲ್ಲದೆ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ಎದುರು ಮತ್ತು ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಸ್ಟ್ರೇಲಿಯಾ ಜಯ ಸಾಧಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ ಅವರನ್ನು ಮ್ಯಾನ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹಲವರು ಸಮರ್ಥಿಸಿಕೊಂಡಿದ್ದಾರೆ. ಬಾಬರ್ ಅಜಂ 4 ಅರ್ಧಶತಕಗಳನ್ನು ಗಳಿಸಿದ್ದರು ಮತ್ತು ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 126.25 ಆಗಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿತ್ತು. ಅದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆಟಗಾರರು ಲೀಲಾಜಾಲವಾಗಿ ಬ್ಯಾಟ್ ಬೀಸಿದರು. 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗೆಲುವಿನ ಗುರಿ ಮುಟ್ಟಿದರು. 8 ವಿಕೆಟ್‌ಗಳ ಜಯ ಸಾಧಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡರು.

ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 4 ಓವರ್‌ನಲ್ಲಿ ಒಂದೂ ರನ್ ಕೊಡದ ಮೊದಲ ಬೌಲರ್ ಅಕ್ಷಯ್!


