ಮಹಾಮಳೆಗೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳೆನಾಶದಿಂದಾಗಿ ರೈತರು ಕಂಗಾಲಾಗಿದ್ದಾರೆ.
ಬೆಂಗಳೂರು ನಗರದ ಹಲವೆಡೆ ಮನೆಗೋಡೆಗಳು ಕುರಿದು ಬಿದ್ದಿವೆ. ಕಾಡುಗೋಡಿ ಸಮೀಪದ ರೈಲ್ವೆ ಹಳಿ ಸಮೀಪದ ಅಂಗಡಿಯೊಂದು ಕುಸಿದಿದ್ದು, ಕಟ್ಟಡದಲ್ಲೇ ಮಲಗಿದ್ದ ವೃದ್ಧರೊಬ್ಬರನ್ನು ಮುಂಜಾಗ್ರತೆ ವಹಿಸಿ ರಕ್ಷಿಸಲಾಗಿದೆ. ಶಂಕರಮಠ ವಾರ್ಡ್‌ನ ಆಂಜನೇಯ ಗುಡ್ಡ ಪ್ರದೇಶದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪಾದರಾಯನಪುರದ ಹರಿಶ್ಚಂದ್ರ ದೇವಸ್ಥಾನ ಸಮೀಪ ಮಂಜುಗಡ್ಡೆ ತಯಾರಿಕಾ ಕಾರ್ಖಾನೆಯ ಗೋದಾಮಿನ ಗೋಡೆ ನೆಲಕ್ಕುರುಳಿದ್ದು, ಪಕ್ಕದಲ್ಲಿದ್ದ ಆಟೋಗಳು ಜಖಂಗೊಂಡಿವೆ. ಹಲವೆಡೆ ಮರಗಳು ಮುರಿದುಬಿದ್ದಿರುವ ವರದಿಗಳಾಗಿವೆ. ಕ್ವೀನ್ ರಸ್ತೆ, ಮಹಾವೀರ ರಸ್ತೆಯಲ್ಲಿ ವಾರ್ತಾ ಇಲಾಖೆ ಕಚೇರಿ ಸಮೀಪ, ಥಣಿಸಂದ್ರ, ಕೆ.ಆರ್.ಪುರದಿಂದ ಟಿ.ಸಿ.ಪಾಳ್ಯಕ್ಕೆ ರಸ್ತೆ, ಬನಶಂಕರಿ 2ನೇ ಹಂತದಲ್ಲಿ ಮರಗಳು ಮುರಿದುಬಿದ್ದಿವೆ. ಬಹುತೇಕ ಕಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಧಾರಾ ಮಳೆಗೆ ರಸ್ತೆಗಳು ಕಾಣದಂತಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರು ತತ್ತರ
ಮೈಸೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅವಘಡಗಳು ಸಂಭವಿಸಿವೆ. ಚಾಮುಂಡಿ ಬೆಟ್ಟದಲ್ಲಿ ಮತ್ತೆ ಕುಸಿತ ಉಂಟಾಗಿದೆ. ಕಳೆದ ಅಕ್ಟೋಬರ್ 19ರಂದು ಬೆಟ್ಟದ ನಂದಿ ಮಾರ್ಗದಲ್ಲಿ ಮೊದಲ ಬಾರಿಗೆ ಕುಸಿತ ಉಂಟಾಗಿತ್ತು. ಕೇವಲ 15 ದಿನಗಳ ಅಂತರದಲ್ಲಿ ಮೂರನೇ ಭಾರಿಗೆ ಬೆಟ್ಟ ಕುಸಿದಿದೆ. ರಸ್ತೆ ಕುಸಿತದಿಂದಾಗಿ ಕೆಲವೆಡೆ ಮರಗಳು ನೆಲಕ್ಕುರುಳಿವೆ.
ಮೈಸೂರಿನ ಉತ್ತರಾದಿ ಮಠದ ರಸ್ತೆಯಲ್ಲಿ ಮನೆ ಛಾವಣಿ ಕುಸಿದಿದೆ. ಅಶೋಕರಸ್ತೆಯಲ್ಲಿ ಮಳಿಗೆಯ ಗೋಡೆ ಕುಸಿದಿದೆ. ಅಶೋಕ ರಸ್ತೆಯಲ್ಲಿನ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದ್ದು, ಸಮೀಪದಲ್ಲೇ ಇದ್ದವರಿಗೆ ಗೋಡೆ ಅಲುಗಾಡುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಮನೆಗೋಡೆ ಕುಸಿದು, ಬಡ ಕುಟುಂಬ ಕಂಗಾಲಾಗಿದೆ.
ಬೆಳೆನಾಶ, ರೈತ ಕಂಗಾಲು
ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ತುಮಕೂರು ಜಿಲ್ಲೆಯಲ್ಲಿ ರಾಗಿ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. 14,500 ಹೆಕ್ಟೇರ್ ಬೆಳೆ ಕೈತಪ್ಪಿದೆ ಎಂದು ತುಮಕೂರು ಜಿಲ್ಲಾ ವರದಿ ಹೇಳಿದೆ. ಚಿಕ್ಕ ಬಳ್ಳಾಪುರದಲ್ಲಿ 905.25 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ.
ಕೋಲಾರ ಜಿಲ್ಲೆಯೊಂದರಲ್ಲಿಯೇ ರಾಗಿ 36 ಸಾವಿರ ಹೆಕ್ಟೇರ್ ರಾಗಿ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗಿವೆ. 5.78 ಕೋಟಿ ಮೌಲ್ಯದ ತರಕಾರಿ, ಸುಮಾರು 1,370 ಹೆಕ್ಟೇರ್‌ಗಳಲ್ಲಿ ಕೊಳೆತು ಹೋಗುತ್ತಿದೆ. ರಾಗಿ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಭತ್ತ ಸೇರಿದಂತೆ 34,554 ಹೆಕ್ಟೇರ್ ಬೆಳೆ ರೈತರ ಕೈ ತಪ್ಪಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ, ಚೆನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆಗಳಲ್ಲಿ 2,150 ಹೆಕ್ಟೇರ್ ಪ್ರದೇಶದ ಭತ್ತ ರೈತರ ಕೈ ಸೇರುವುದು ಅನುಮಾನ. ಶಿವಮೊಗ್ಗ ಜಿಲ್ಲೆಯಲ್ಲಿ ಕಟಾವಿಗೆ ಅಡ್ಡಿಉಂಟಾಗಿದೆ. ಜಿಲ್ಲೆಯಲ್ಲಿನ ಕೃಷಿ ಭೂಮಿಯಲ್ಲಿ 78,100 ಹೆಕ್ಟೇರ್‌ನಲ್ಲಿ ಭತ್ತ, 52,000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಕಟಾವು ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಹಾಸನ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ರಾಗಿ ಮತ್ತು ಮೆಕ್ಕೆಜೋಳ ಬೆಳೆದಿದ್ದ ರೈತರು ಪರಿತಪಿಸುತ್ತಿದ್ದಾರೆ. 675 ಹೆಕ್ಟೇರ್ ಮೆಕ್ಕೆಜೋಳ, 19,403 ಹೆಕ್ಟೇರ್ ರಾಗಿ ನೆಲಕಚ್ಚಿದೆ.
ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ
ಪರಿಸ್ಥಿತಿಯನ್ನು ಗಮನಿಸಿ ಶಾಲೆಗಳಿಗೆ ರಜೆ ನೀಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಅಂದರಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಾಮರಾಜನಗರ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಗಳಲ್ಲಿ ನ.19, 20ರಂದು ರಜೆ ಘೋಷಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮೂರು ದಶಕಗಳಲ್ಲಿಯೇ ಅತಿ ಹೆಚ್ಚು ಮಳೆ ದಾಖಲಾಗಿದ ಎಂದು ವರದಿಗಳು ಹೇಳಿವೆ.
ಹನ್ನೊಂದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಇಂದಿನಿಂದ ನಾಳೆ ಬೆಳಿಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿರಿ: ಧಾರಾಕಾರ ಮಳೆಗೆ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ: ಏನಿವು ಅಲರ್ಟ್‌ಗಳು?


