ಪಂಜಾಬ್‌ನ ಪಠಾಣ್ ಕೋಟ್ ಅಲ್ಲಿರುವ ಸೇನಾ ಕಂಟೋನ್ಮೆಂಟ್‌ನ ಗೇಟ್ ಹೊರಗೆ ಸೋಮವಾರ ಮುಂಜಾನೆ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ನಂತರ ಅಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಪಠಾಣ್‌ಕೋಟ್‌ನ ಧೀರಪುಲ್ ಬಳಿಯ ಸೇನಾ ಕಂಟೋನ್ಮೆಂಟ್‌ನ ತ್ರಿವೇಣಿ ಗೇಟ್‌ನಲ್ಲಿ ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಆರು ವಿಷಯಗಳನ್ನು ಉಲ್ಲೇಖಿಸಿ ಪ್ರಧಾನಿಗೆ ಪತ್ರ ಬರೆದ ಸಂಯುಕ್ತ ಕಿಸಾನ್ ಮೋರ್ಚಾ
ಸೇನಾ ಕಂಟೋನ್ಮೆಂಟ್‌ನ ತ್ರಿವೇಣಿ ಗೇಟ್ ಎದುರು ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ಎಸೆದಿದ್ದಾರೆ. ಆದರೆ, ಸ್ಫೋಟದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಘಟನಾ ಸ್ಥಳದಿಂದ ಗ್ರೆನೇಡ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
“ನಾವು ಘಟನಾ ಸ್ಥಳದಿಂದ ಪಡೆದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಸ್ಫೋಟದ ನಂತರ, ಪ್ರದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆಂದು TNIE ವರದಿ ಮಾಡಿದೆ.
ಸುಮಾರು ಐದು ವರ್ಷಗಳ ಹಿಂದೆ, ಜನವರಿ, 2016 ರಲ್ಲಿ ಪಠಾಣ್‌ಕೋಟ್‌ನಲ್ಲಿರುವ ವಾಯುಪಡೆಯ ನೆಲೆಯ ಮೇಲೆ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಏಳು ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದರು.


