Homeಮುಖಪುಟಆರು ವಿಷಯಗಳನ್ನು ಉಲ್ಲೇಖಿಸಿ ಪ್ರಧಾನಿಗೆ ಪತ್ರ ಬರೆದ ಸಂಯುಕ್ತ ಕಿಸಾನ್ ಮೋರ್ಚಾ

ಆರು ವಿಷಯಗಳನ್ನು ಉಲ್ಲೇಖಿಸಿ ಪ್ರಧಾನಿಗೆ ಪತ್ರ ಬರೆದ ಸಂಯುಕ್ತ ಕಿಸಾನ್ ಮೋರ್ಚಾ

ಉಲ್ಲೇಖಿತ ಆರು ವಿಷಯಗಳ ಕುರಿತು ಮಾತುಕತೆ ಪುನರಾರಂಭಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಅದು ಎಚ್ಚರಿಸಿದೆ.

- Advertisement -
- Advertisement -

ರೈತ ವಿರೋಧಿ ಕರಾಳ ಕಾನೂನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಯ ಒಕ್ಕೂಟವಾದ ‘ಸಂಯುಕ್ತ ಕಿಸಾನ್ ಮೋರ್ಚಾ’ ಪ್ರಧಾನಿ ಮೋದಿಗೆ ಭಾನುವಾರ ಪತ್ರ ಬರೆದಿದ್ದು, ಅದರಲ್ಲಿ ಒಟ್ಟು ಆರು ವಿಷಯಗಳನ್ನು ಪ್ರಸ್ತಾಪಿಸಿದೆ. ಪತ್ರದಲ್ಲಿ ಉಲ್ಲೇಖಿತ ಆರು ವಿಷಯಗಳ ಕುರಿತು ತಕ್ಷಣವೆ ರೈತರೊಂದಿಗೆ ಮಾತುಕತೆಯನ್ನು ಪುನರಾರಂಭಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದು, ಅಲ್ಲಿಯವರೆಗೂ ಚಳವಳಿಯು ಮುಂದುವರೆಯಲಿದೆ ಎಂದು ಅದು ಎಚ್ಚರಿಸಿದೆ.

ಒಕ್ಕೂಟವು ತನ್ನ ಪತ್ರದಲ್ಲಿ, “11 ಸುತ್ತಿನ ಮಾತುಕತೆಗಳು ನಡೆದರೂ, ಸರ್ಕಾರ ದ್ವಿಪಕ್ಷೀಯ ಪರಿಹಾರಕ್ಕಿಂತ ಏಕಪಕ್ಷೀಯವಾಗಿ ಘೋಷಣೆಯನ್ನು ಮಾಡುತ್ತಲೇ ಬಂದಿದೆ ಎಂಬುವುದನ್ನು ನಾವು ಗಮನಿಸಿದ್ದೇವೆ. ಅದೇನೇ ಇದ್ದರೂ, ನೀವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಕ್ಕಾಗಿ ನಮಗೆ ಸಂತೋಷವಾಗಿದೆ. ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಮತ್ತು ನಿಮ್ಮ ಸರ್ಕಾರವು ಈ ಭರವಸೆಯನ್ನು ಶೀಘ್ರವಾಗಿ ಮತ್ತು ಪೂರ್ಣವಾಗಿ ಪೂರೈಸುತ್ತದೆ ಎಂದು ಭಾವಿಸುತ್ತೇವೆ” ಎಂದು ಹೇಳಿದೆ.

ಜೊತೆಗೆ, ಮೂರು ಕಾನೂನುಗಳನ್ನು ರದ್ದುಗೊಳಿಸುವುದು ಮಾತ್ರವೆ ಈ ಹೋರಾಟದ ಏಕೈಕ ಬೇಡಿಕೆಯಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ ಎಂದು ಪ್ರಧಾನಿಯನ್ನು ಉಲ್ಲೇಖಿಸಿ ಹೇಳಿರುವ ಪತ್ರವು, ಈ ಹಿಂದಿನಿಂದಲೂ ಕೇಳುತ್ತಿದ್ದ ಮೂರು ಬೇಡಿಕೆಯನ್ನು ಪ್ರಧಾನಿಗೆ ನೆನಪಿಸಿದೆ. ಅವುಗಳು ಕೆಳಗಿನಂತಿವೆ,

ಒಂದನೇ ಬೇಡಿಕೆಯಾಗಿ, “ಸಮಗ್ರ ಉತ್ಪಾದನಾ ವೆಚ್ಚದ (C2+50%) ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಲ್ಲಾ ರೈತರಿಗೆ ಕಾನೂನುಬದ್ಧ ಅರ್ಹತೆಯಾಗಿ ಮಾಡಬೇಕು. ಇದರಿಂದಾಗಿ ದೇಶದ ಪ್ರತಿಯೊಬ್ಬ ರೈತನಿಗೆ ಸರ್ಕಾರವು ಘೋಷಿಸಿದ ಕನಿಷ್ಠ MSP ಯನ್ನು ಅವರ ಸಂಪೂರ್ಣ ಬೆಳೆಗೆ ಖಾತರಿಪಡಿಸಬಹುದು” ಎಂದು ಪತ್ರದಲ್ಲಿ ಒಕ್ಕೂಟವು ಹೇಳಿದೆ. ಜೊತೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು 2011 ರಲ್ಲಿ ಆಗಿನ ಪ್ರಧಾನಿಗೆ ಈ ಶಿಫಾರಸನ್ನು ಮಾಡಿತ್ತು ಮತ್ತು ಮೋದಿ ಸರ್ಕಾರವು ಈ ಬಗ್ಗೆ ಸಂಸತ್ತಿನಲ್ಲಿ ಘೋಷಿಸಿತ್ತು ಎಂದು ಪತ್ರದಲ್ಲಿ ರೈತ ಒಕ್ಕೂಟವು ನೆನಪಿದೆ.

ಎರಡನೇ ಬೇಡಿಕೆಯಾಗಿದೆ, “ಸರ್ಕಾರವು ಪ್ರಸ್ತಾಪಿಸಿರುವ ‘ವಿದ್ಯುತ್ ತಿದ್ದುಪಡಿ ಮಸೂದೆ, 2020/2021’ ಕರಡನ್ನು ಹಿಂತೆಗೆದುಕೊಳ್ಳಿ” ಎಂದು ಒತ್ತಾಯಿಸಿದೆ. ಈ ಹಿಂದೆನ ಮಾತುಕತೆಯಲ್ಲಿ, ಸರ್ಕಾರವು ಅದನ್ನು ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿತ್ತು, ಆದರೆ ನಂತರ ಭರವಸೆಯನ್ನು ಉಲ್ಲಂಘನೆ ಮಾಡಲಾದ್ದು, ಅದನ್ನು ಸಂಸತ್ತಿನ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಎಂದು ಪತ್ರವು ಉಲ್ಲೇಖಿಸಿದೆ.

ಮೂರನೇ ಬೇಡಿಕೆಯಾಗಿ, “ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ‘ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಕ್ಟ್-2021’ ನಲ್ಲಿರುವ ರೈತರ ಮೇಲಿನ ದಂಡದ ನಿಬಂಧನೆಗಳನ್ನು ತೆಗೆದುಹಾಕಬೇಕು” ಎಂದು ಹೇಳಿದೆ. ಈ ಕಾಯ್ದೆಯಲ್ಲಿನ ಕೆಲವು ರೈತ ವಿರೋಧಿ ನಿಬಂಧನೆಗಳನ್ನು ಸರ್ಕಾರವು ತೆಗೆದುಹಾಕಲಾಗಿದೆ ಎಂದು ಹೇಳಿರುವ ರೈತ ಒಕ್ಕೂಟ, ಆದರೂ ಕಾಯ್ದೆಯ ಸೆಕ್ಷನ್‌‌ 15 ರ ಮೂಲಕ ದಂಡದ ನಿಬಂಧನೆಗಳನ್ನು ರೈತರನ್ನು ಮರಳಿ ತರಲಾಗಿದೆ ಎಂದು ಆರೋಪಿಸಿದೆ.

ಪ್ರಧಾನಿ ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಈ ಪ್ರಮುಖ ಬೇಡಿಕೆಗಳ ಬಗ್ಗೆ ಸ್ಪಷ್ಟವಾದ ಘೋಷಣೆ ಇಲ್ಲದ ಕಾರಣ ರೈತರು ನಿರಾಶೆಗೊಂಡಿದ್ದಾರೆ ಎಂದು ರೈತ ಒಕ್ಕೂಟ ಹೇಳಿದೆ. ಈ ಐತಿಹಾಸಿಕ ಆಂದೋಲನದ ಮೂಲಕ ಮೂರು ಕಾನೂನುಗಳನ್ನು ರದ್ದಾಗುವುದರೊಂದಿಗೆ, ತಮ್ಮ ಕಠಿಣ ಪರಿಶ್ರಮಕ್ಕೆ ಫಲವಾಗಿ ಕನಿಷ್ಠ ಬೆಂಬಲದ ಕಾನೂನನ್ನು ಸಹ ಪಡೆಯುತ್ತಾರೆ ಎಂದು ರೈತರು ಆಶಿಸಿದ್ದರು ಎಂದು ರೈತ ಒಕ್ಕೂಟವು ಹೇಳಿದೆ.

ಇಷ್ಟೇ ಅಲ್ಲದೆ, ಕಳೆದ ಒಂದು ವರ್ಷದ ಐತಿಹಾಸಿಕ ಆಂದೋಲನದ ಸಂದರ್ಭದಲ್ಲಿ ಇತರ ಕೆಲವು ಸಮಸ್ಯೆಗಳೂ ಉದ್ಭವಿಸಿದ್ದು, ಅವುಗಳನ್ನು ತಕ್ಷಣವೇ ಪರಿಹರಿಸಬೇಕಾಗಿದೆ ಎಂದು ರೈತ ಒಕ್ಕೂಟ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಮೊದಲನೇಯದಾಗಿ, “ದೆಹಲಿ, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಇತರ ಹಲವು ರಾಜ್ಯಗಳಲ್ಲಿ ಈ ಚಳವಳಿಯ ಸಂದರ್ಭದಲ್ಲಿ (ಜೂನ್ 2020 ರಿಂದ ಇಲ್ಲಿಯವರೆಗೆ) ರೈತರ ಮೇಲೆ ನೂರಾರು ಪ್ರಕರಣಗಳಾಗಿವೆ, ಕೂಡಲೇ ಈ ಪ್ರಕರಣಗಳನ್ನು ಹಿಂಪಡೆಯಬೇಕು” ಎಂದು ಪತ್ರವು ಒತ್ತಾಯಿಸಿದೆ.

ಎರಡನೆಯದಾಗಿ, “ಲಖಿಂಪುರ ಖೇರಿ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಸೆಕ್ಷನ್ 120 ಬಿ ಆರೋಪಿ ಅಜಯ್ ಮಿಶ್ರಾ ಅವರು ಇನ್ನೂ ಮುಕ್ತವಾಗಿ ತಿರುಗಾಡುತ್ತಿದ್ದು, ಕೇಂದ್ರದ ಸಂಪುಟದಲ್ಲಿ ಸಚಿವರಾಗಿ ಉಳಿದಿದ್ದಾರೆ. ಅವರು ನಿಮ್ಮೊಂದಿಗೆ ಮತ್ತು ಇತರ ಹಿರಿಯ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅವರನ್ನು ವಜಾಗೊಳಿಸಿ ಬಂಧಿಸಬೇಕು” ಎಂದು ಪ್ರಧಾನಿಗೆ ಒತ್ತಾಯಿಸಲಾಗಿದೆ.

ಮೂರನೆಯದಾಗಿ, “ಈ ಆಂದೋಲನದ ಸಮಯದಲ್ಲಿ, ಇದುವರೆಗೆ ಸುಮಾರು 700 ರೈತರು ತಮ್ಮ ಪ್ರಾಣವನ್ನು ತಮ್ಮ ಪರಮ ತ್ಯಾಗವಾಗಿ ಅರ್ಪಿಸಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಬೆಂಬಲ ನೀಡಬೇಕು. ಹುತಾತ್ಮ ರೈತರ ಸ್ಮರಣಾರ್ಥ ಹುತಾತ್ಮರ ಸ್ಮಾರಕ ನಿರ್ಮಿಸಲು ಸಿಂಘು ಗಡಿಯಲ್ಲಿ ಭೂಮಿ ನೀಡಬೇಕು” ಎಂದು ಪತ್ರವು ಪ್ರಧಾನಿಗೆ ಕೇಳಿದೆ.

ಪತ್ರದಲ್ಲಿ, “ನಾವು ಬೀದಿಗಳಲ್ಲಿ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇವೆ. ಈ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿದ ನಂತರ, ನಾವು ನಮ್ಮ ಮನೆಗಳು, ಕುಟುಂಬಗಳು ಮತ್ತು ಕೃಷಿಗೆ ಮರಳಬೇಕೆಂದು ನಾವು ಬಯಸುತ್ತೇವೆ. ನಿಮಗೂ ಅದೇ ಬೇಕಾದರೆ, ಮೇಲಿನ ಆರು ವಿಷಯಗಳ ಕುರಿತು ಸರ್ಕಾರವು ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ತಕ್ಷಣ ಮಾತುಕತೆಯನ್ನು ಪುನರಾರಂಭಿಸಬೇಕು. ಅಲ್ಲಿಯವರೆಗೂ ಸಂಯುಕ್ತ ಕಿಸಾನ್ ಮೋರ್ಚಾ ಈ ಚಳವಳಿಯನ್ನು ಮುಂದುವರೆಸಲಿದೆ” ಎಂದು ಪತ್ರವು ಉಲ್ಲೇಖೀಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...