ಜುಲೈ 28 ರಂದು ಜಾರ್ಖಂಡ್ ರಾಜ್ಯದ ಧನಬಾದ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್‌ರವರಿಗೆ ಆಟೋದಲ್ಲಿ ಗುದ್ದಿ ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಅಕ್ಟೋಬರ್ 20 ರಂದು ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ, ಕೊಲೆಯ ಪ್ರಧಾನ ಆರೋಪಿಯಾದ ರಾಹುಲ್ ಕುಮಾರ್ ಓರ್ವ ವೃತ್ತಿಪರ ಕಳ್ಳನಾಗಿದ್ದಾನೆ. ಆತ ಯಾವಾಗಲೂ ದುರ್ಬಲ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ. ಆತನ ಸಹವರ್ತಿ ಕಳ್ಳ ಲಖನ್ ವರ್ಮಾ ತನ್ನ ಯೋಜನೆಯನ್ನು ಜಾರಿಗೊಳಿಸಲು ಸಮಯಕ್ಕಾಗಿ ಕಾಯುತ್ತಿದ್ದ ಎಂದು ಸಿಬಿಐ ತಿಳಿಸಿದೆ. ಆದರೆ ಆ ಯೋಜನೆ ಏನು ಮತ್ತು ಕೊಲೆಯ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಸಿಬಿಐ ಏನನ್ನೂ ಹೇಳಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉದ್ದೇಶಪೂರ್ವಕವಾಗಿ ತೀವ್ರ ದೈಹಿಕ ಗಾಯಗಳನ್ನು ಉಂಟು ಮಾಡಿದ್ದಾರೆ. ತೀವ್ರ ದೈಹಿಕ ಹಲ್ಲೆಯಿಂದಾಗಿ ನ್ಯಾಯಾಧೀಶರು ಸಾವನಪ್ಪಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಸಿಬಿಐ ಸ್ಪಷ್ಟವಾಗಿ ವಿಚಾರಣೆ ನಡೆಸುತ್ತಿಲ್ಲ ಎಂದು ಈ ಹಿಂದೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಇಬ್ಬರೂ ಆರೋಪಿಗಳು ಆಟೋವೊಂದನ್ನು ಕದ್ದು ಬಲಿಯಾಪುರ ಕಡೆ ಚಲಾಯಿಸಿದ್ದರು. ಹಿಂದಿನ ನಂಬರ್ ಪ್ಲೇಟ್ ಅನ್ನು ಬದಲಿಸಿದ್ದರು ಮತ್ತು ಮುಂದಿನದ್ದನ್ನು ಕಾಣದ ಹಾಗೆ ತಿರುಚಿದ್ದರು. ಕೆಲ ಸಮಯ ಸುಮ್ಮನೆ ಅಡ್ಡಾಡಿ ಸಮಯ ಕಳೆದಿದ್ದರು ಎಂದು ಸಿಬಿಐ ಹೇಳಿದೆ.
ಧನಬಾದ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್‌ರವರು ಬುಧವಾರ ಬೆಳಿಗ್ಗೆ 5 ಗಂಟೆಯ ಸಮಯದಲ್ಲಿ ಜಾಗಿಂಗ್ ಮಾಡುತ್ತಿದ್ದರು. ಅವರ ಮನೆಯಿಂದ ಕೇವಲ ಅರ್ಧ ಕಿ.ಮೀ ಅಂತರದಲ್ಲಿ ಅವರು ರಸ್ತೆ ಬದಿಯಲ್ಲಿ ಜಾಗ್ ಮಾಡುತ್ತಿರುವಾಗಿ ಹಿಂದಿನಿಂದ ಬಂದ ಆಟೋವೊಂದು ಅವರನ್ನೇ ಗುರಿಯಾಗಿಸಿಕೊಂಡು ಗುದ್ದಿದೆ. ಇದರ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನಂತರ ಆಸ್ಪತ್ರೆಗೆ ಸೇರಿಸಿದರೂ ಸಹ ಅವರು ಬದುಕುಳಿಯಲಿಲ್ಲ.
ಧನಬಾದ್ ಪೊಲೀಸರು ಆರಂಭದಲ್ಲಿ ತನಿಖೆ ನಡೆಸಿ ನಂತರ ಸಿಬಿಐಗೆ ಒಪ್ಪಿಸಿದ್ದರು. ಆರೋಪಿಗಳು ಉದ್ದೇಶಪೂರ್ವಕವಾಗಿ ಜಡ್ಜ್ ಮೇಲೆ ಆಟೋ ಹರಿಸಿದ್ದಾರೆ. ನಂತರ ನಿಲ್ಲಿಸದೇ ಅದೇ ವೇಗದಲ್ಲಿ ಮುಂದುವರೆದಿದ್ದಾರೆ. ಮುಂದೆ ಒಬ್ಬ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಆತನಿಗೆ ಗುದ್ದದೆ ಬಲಕ್ಕೆ ಆಟೋ ಚಲಾಯಿಸಿದ್ದಾರೆ. ಅಂದರೆ ಅವರು ಮಾನಸಿಕವಾಗಿ ಸ್ಥಿಮಿತದಲ್ಲಿದ್ದಾರೆ ಮತ್ತು ಬೇಕಂತಲೇ ಈ ಕೃತ್ಯ ಎಸಗಿಸಿದ್ದಾರೆ ಎಂದು ಸಿಬಿಐ ಹೇಳಿದೆ. ಆದರೆ ಯಾವ ಕಾರಣಕ್ಕಾಗಿ ಕೊಂದರು ಎಂಬುದನ್ನು ಬಹಿರಂಗಪಡಿಸಿಲ್ಲ.
ಈ ಮೊದಲು ಜಾಮೀನು ನಿರಾಕರಿಸಿದ ಕಾರಣಕ್ಕೆ ನ್ಯಾಯಾಧೀಶರ ಕೊಲೆಯಾಗಿದೆ ಎಂದು ಶಂಕಿಸಲಾಗಿತ್ತು. ಸುಪ್ರೀಂ ಕೋರ್ಟ್ ಸುಮೋಟೊ ಪ್ರಕರಣ ದಾಖಲಿಸಿತ್ತು.
ಇದನ್ನೂ ಓದಿ: ಜಾಮೀನು ನೀಡದ ನ್ಯಾಯಾಧೀಶನ ಬರ್ಬರ ಕೊಲೆ: ಸುಮೊಟೋ ಪ್ರಕರಣದ ದಾಖಲಿಸಿದ ಸುಪ್ರೀಂ


