ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ತೆರಳಿದ್ದ ವೇಳೆ, ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ ಸ್ಥಳಕ್ಕೆ ಧಾವಿಸಿದ್ದ ನಟ ಚೇತನ್ ಅಹಿಂಸಾ ಅವರಿಗೆ ಮತೀಯವಾದಿಗಳು ಅಡ್ಡಿಪಡಿಸುವ ಬೆಳವಣಿಗೆ ನಡೆದಿದೆ.

ಹಂಸಲೇಖ ಅವರು ನೀಡಿದ ಹೇಳಿಕೆ ಸಂಬಂಧ ಸೃಷ್ಟಿಯಾಗಿರುವ ವಿವಾದ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಹಂಸಲೇಖ ಅವರು ಕ್ಷಮೆಯಾಚಿಸಿದ ಬಳಿಕವೂ ವಿವಾದವನ್ನು ದೊಡ್ಡದು ಮಾಡಿ, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಹೀಗಾಗಿ ವಿಚಾರಣೆಗೆ ಹಂಸಲೇಖ ಅವರು ಹಾಜರಾಗಿದ್ದರು. ಕನ್ನಡ ಚಿತ್ರರಂಗದಲ್ಲಿನ ಬೆರಳೆಣಿಯಷ್ಟು ಮಂದಿ ಮಾತ್ರ ಹಂಸಲೇಖರ ಪರ ಹೇಳಿಕೆ ನೀಡಿದ್ದು, ಅದರಲ್ಲಿ ನಟ ಚೇತನ್‌ ಕೂಡ ಒಬ್ಬರಾಗಿದ್ದಾರೆ.

“ನನ್ನನ್ನು ಯಾವ ಸಮುದಾಯ ಟಾರ್ಗೆಟ್‌ ಮಾಡಿತ್ತೊ ಅದೇ ಸಮುದಾಯದ ಲಾಬಿಗಳು ಇಂದು ಹಂಸಲೇಖ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಯಾವ ಅಡಿಯಲ್ಲಿ ಪೋಲಿಸ್‌ ದೂರು ದಾಖಲಾಗಿತ್ತೊ ಅದೇ ಅಡಿಯಲ್ಲಿ ಹಂಸಲೇಖ ಅವರಿಗೂ ಆಗಿದೆ. ಅದೇ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ನಟ ಚೇತನ್‌ ಹೇಳಿದ್ದರು. ಹೀಗಾಗಿ ಚೇತನ್‌ ಅವರು ಸ್ಥಳಕ್ಕೆ ಬರಬಾರದೆಂದು ಚೇತನ್‌ ವಿರೋಧಿಗಳು ಗಲಾಟೆ ಶುರು ಮಾಡಿದರು.

ಸಾಮಾಜಿಕ ನ್ಯಾಯದ ಪರ ಇರುವ ವೇದಿಕೆಗಳಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿರುವ ನಟ ಚೇತನ್‌ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಬ್ರಾಹ್ಮಣ್ಯಕ್ಕೆ ಸಂಬಂಧಿಸಿದಂತೆ ಚೇತನ್‌ ತಾಳಿದ ನಿಲುವುಗಳಿಂದಾಗಿ ಚರ್ಚೆ ಶುರುವಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್‌ ಚಿಂತನೆಗಳ ಕುರಿತು ಸದಾ ಮಾತನಾಡುವ ನಟ ಚೇತನ್‌, ಪಕ್ಷಾತೀತವಾಗಿ ನಿಲ್ಲುವ ವ್ಯಕ್ತಿ. ಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಚೇತನ್‌ ಅವರಿಗೂ ಕೋಮುವಾದಿಗಳಿಗೂ ತಿಕ್ಕಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ. ಕನ್ನಡ ಚಿತ್ರರಂಗದ ಪ್ರತಿನಿಧಿಯೂ ಆಗಿರುವ ಚೇತನ್‌, ಹಂಸಲೇಖರ ಪರ ದನಿ ಎತ್ತಿದ್ದಾರೆ. ಇಂತಹ ಚೇತನ್‌ ಸ್ಥಳಕ್ಕೆ ಬರಬಾರದೆಂದು ಅಡ್ಡಿಪಡಿಸಲು ಯತ್ನಿಸಲಾಗಿದೆ.

ಅಡ್ಡಿಗಳನ್ನು ದಾಟಿ ಬಸವನಗುಡಿ ಪೊಲೀಸ್ ಠಾಣೆಯ ಬಳಿ ಬಂದು ಮಾತನಾಡಿದ ಚೇತನ್‌, “ಇದು ಮಾಂಸಾಹಾರಿ, ಸಸ್ಯಾಹಾರಿಗಳ ಪ್ರಶ್ನೆ ಅಲ್ಲ. ಸಂವಿಧಾನದ ಅಡಿಪಾಯವಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕಾಗಿದೆ. ಹಂಸಲೇಖರ ಮಾತು ಇಷ್ಟವಾಗದವರು, ಕ್ಷಮೆ ಕೇಳಿದರೂ ಹಂಸಲೇಖರ ಮೇಲೆ ದೂರು ನೀಡಲಾಗಿದೆ. ಮಾತನಾಡಿದರೆ ಜೈಲಿಗೆ ಹಾಕಿಸಲು ತಮ್ಮ ಅನುಕೂಲಕರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇದನ್ನು ಒಪ್ಪಲು ಆಗಲ್ಲ. ನಾಳೆ ನವೆಂಬರ್‌ 26ರಂದು ಹಂಸಲೇಖರ ಪರ ಸೇರುತ್ತಿದ್ದೇವೆ. ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌‌ವರೆಗೆ ಜಾಥಾ ನಡೆಯಲಿದೆ” ಎಂದು ತಿಳಿಸಿದರು.

“ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ, ಮಹಿಳಾಪರ ಸಂಘಟನೆಗಳೆಲ್ಲ ಸೇರುತ್ತಿವೆ. ಹಂಸಲೇಖರ ಮೇಲೆ ಆಗುತ್ತಿರುವ ದಾಳಿಯನ್ನು ಯಾರೂ ಸಹಿಸಲು ಆಗಲ್ಲ. ಅವರ ಮಾತನ್ನು ಒಪ್ಪಲಿ, ಒಪ್ಪದಿರಲಿ ಅವರ ಮೇಲಿನ ದಾಳಿಯನ್ನು ಸಹಿಸಲು ಆಗಲ್ಲ. ವಾಕ್ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಬನ್ನಿ. ಜೈ ಕರ್ನಾಟಕ, ಜೈ ಬಸವ, ಜೈ ಭೀಮ್‌” ಎಂದಿದ್ದಾರೆ.

1 COMMENT

 1. ವಾಕ್ ಸ್ವಾತಂತ್ರ್ಯ ಏನೆಂದು ಕೆಲವರು ಅರಿತಿಲ್ಲ.

  ವಾಕ್ ಸ್ವಾತಂತ್ರ್ಯ ಇದೇ ಇಂದು ಯಾವ ವ್ಯಕ್ತಿಯ ಅಥವಾ ಸಮುದಾಯದ ಗೌರವ ಕ್ಕೆ ದಕ್ಕೆ ಬರುವಹಾಗೆ, ಕೋಮುವಾದಕ್ಕೆ ದಾರಿ ಮಾಡಿಕೊಡುವಂತೆ ಯಾರಿಗೂ ಅಧಿಕಾರ ಕೊಟ್ಟಿಲ್ಲ

  ಎಲ್ಲ ಮಹಾಕೆಲಸ ಮಾಡಿರೋ ಮಹಾ ವ್ಯಕ್ತಿಗಳ ಬಗ್ಗೆ ಎಲ್ಲರೂ ಒಳ್ಳೇದು ಮಾತಾಡಿ, ಅವರು ಮಾಡಿರೋ ಒಳ್ಳೆ ಕಾರ್ಯಗಳನ್ನು ಜನರರಿಗೆ ತಿಳಿಸಬೇಕು. ಶಾಂತಿ ಇಂದ ನಡೆದು ಕೊಳ್ಳ ಬೇಕು.

  ಯಾವ ಬುದ್ಧಿಜೀವಿಗಳು ತಮ್ಮ ತಂದೆ, ತಾಯಿ, ಗುರು ಹಿರಿಯರು, ಆತ್ಮೀಯರ ಮುಂತಾದ ಇಷ್ಟ ವಸ್ತುಗಳ ಬಗ್ಗೆ ಅವಹೇಳನಾಕಾರಿ ಮಾತು ಕೇಳಲು ಇಷ್ಟ ಪಡುವುದಿಲ್ಲ ಮತ್ತೆ ಸಂವಿಧಾನದಲ್ಲಿ ಈ ರೀತಿ ಪುರಾವೆ ಇಲ್ಲದ ಮಾತುಗಳಿಗೆ ವಾಕ್ ಸ್ವಾತಂತ್ರನು ಕೊಟ್ಟಿಲ್ಲ.

  ಶ್ರೀ ಪೇಜಾವರ ಶ್ರೀಗಳು, ಶ್ರೀ ಅಂಬೇಡಿಕರ್ ಅವರು ಹೇಳಿದಂತೆ ಎಲ್ಲರೂ ಸಮಾನರು ಎಂದು ಸಮಾಜಕ್ಕೆ ತೋರುಸಿದ್ದಾರೆ. ದಲಿತರ ಪರ ನಿಂತು ಅವರಿಗೆ ಬಹಳಷ್ಟು ಒಳ್ಳೆ ಕೆಲಸಗಳು ಮಾಡಿದಾರೆ. ಗಂಗಾನದಿ ಸ್ವಚ್ಛತೆ, ರಾಮ ಮಂದಿರ ನಿರ್ಮಾಣಕ್ಕೆ ಅವರಿಗೆ ಭಾರತ ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಭಾಯಿಸಿದ್ದಾರೆ. ಯಾರಿಗೂ, ಏನು ಮಾಡದೆ ಭಾರತ ರತ್ನ ಕೊಡುವುದಿಲ್ಲ. ಶ್ರೀಗಳಿಗೆ ಕೊಟ್ಟಿದ್ದಾರೆ…ಅಂತವರ ಬಗ್ಗೆ ಮಾತಾಡಿದರೆ ಖಂಡಿತ ಬೇಸರವಾಗುತ್ತೆ.

  ಚೇತನ್ ಅವರು “ನನ್ನನ್ನು ಯಾವ ಸಮುದಾಯ ಟಾರ್ಗೆಟ್‌ ಮಾಡಿತ್ತೊ ಅದೇ ಸಮುದಾಯದ ಲಾಬಿಗಳು ಇಂದು ಹಂಸಲೇಖ ಅವರಿಗೆ ಕಿರುಕುಳ ನೀಡುತ್ತಿದ್ದಾರೆ.” ಎಂದು ಹೇಳಿದ್ದಾರೆ. ಬಹುತೇಕ ಬೇರೆ ದೇಶದಲ್ಲಿದ್ದ ಅವರಿಗೆ, ಹಿಂದೂಸ್ತಾನದ ಬಗ್ಗೆ ಗೊತ್ತಿಲ್ಲ ಅನ್ನಿಸುತ್ತೆ. ಇಲ್ಲಿ ಎಲ್ಲ ಶಾಂತಿ ಇಂದ ಇರುತ್ತಾರೆ. ನೀವು ಏನಾದ್ರು ಹೇಳಿ ಕೆಣಕಿದರೆನೆ ಕೋಮುವಾದಗಲ್ಲು ಹುಟ್ಟುವುದು. ಶ್ರೀಗಳು ಅದನ್ನೇ ಬೇಡ ಅಂತ ನಮಗೆ ತೋರಿಸಿಕೊಟ್ಟಿದ್ದಾರೆ..ಎಲ್ಲಾರು ಶಾಂತಿ ಕಾಪಾಡಲು ಬದ್ಧವಾಗಿರಬೇಕು.

LEAVE A REPLY

Please enter your comment!
Please enter your name here