ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನೆ ಆರಂಭವಾಗಿ ನವೆಂಬರ್ 26 ಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ’ದೆಹಲಿ ಚಲೋ’ಗೆ ಕರೆ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರೈತರು ಮತ್ತು ಹೋರಾಟಗಾರರು ಗಡಿಗಳತ್ತ ತೆರಳುತ್ತಿದ್ದಾರೆ.
ನವೆಂಬರ್ 26 ರಂದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಂದ ರೈತರು ಬಂದು ದೆಹಲಿಯ ಗಡಿಗಳಲ್ಲಿ ಚಳವಳಿಯಲ್ಲಿ ಭಾಗವಹಿಸುವಂತೆ ರೈತ ಮುಖಂಡರು ಕಳೆದ ತಿಂಗಳು ಒತ್ತಾಯಿಸಿದ್ದರು.
ಈಗಾಗಲೇ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಸಂಸತ್ತಿನಲ್ಲಿ ಮಸೂದೆ ಮಂಡನೆಗೂ ಒಪ್ಪಿಗೆ ದೊರೆತಿದೆ. ಹೀಗಾಗಿ ರೈತರ ಖೂಷಿ ದ್ವಿಗುಣಗೊಂಡಿದ್ದು, ಸಂಭ್ರಮ ಆಚರಿಸಲು ಮತ್ತು ಎಂಎಸ್‌ಪಿ ಕಾಯ್ದೆ ಜಾರಿ ಮಾಡಲು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ದೆಹಲಿ ಗಡಿಗಳತ್ತ ಹೊರಟಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ಮೊದಲೇ ವಾಪಸ್ ಪಡೆದಿದ್ದರೇ 700 ರೈತರ ಜೀವ ಉಳಿಸಬಹುದಿತ್ತು: ಬಿಜೆಪಿ ನಾಯಕ
ವಯಸ್ಸಿನ ಹಂಗು ತೊರೆದು ಟ್ಯ್ರಾಲಿಗಳು, ರೈಲುಗಳು, ಬಸ್‌ಗಳು, ಲಾರಿಗಳು ಮತ್ತು ಬೈಕ್‌ಗಳ ಮೂಲಕ ತಂಡೋಪತಂಡವಾಗಿ ಪ್ರತಿಭಟನಾ ಗಡಿಗಳಿಗೆ ಜನ ತೆರಳುತ್ತಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್‌ನ ವಿವಿಧ ಬಣಗಳ ಸದಸ್ಯರು ನೂರಾರು ಸಂಖ್ಯೆಯಲ್ಲಿ ಗಡಿಗಳಿಗೆ ತೆರಳುತ್ತಿದ್ದಾರೆ.
’ನವೆಂಬರ್ 26ಕ್ಕೆ ಸಾವಿರಾರು ರೈತರು ಹೋರಾಟಕ್ಕೆ ಬಂದು ಸೇರುವ ನಿರೀಕ್ಷೆ ಇದ್ದು, ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ನವೆಂಬರ್ 26 ರಂದು ಚಳವಳಿಯ ’ಭಾಗಶಃ ವಿಜಯ’ ಆಚರಿಸಲಾಗುವುದು ಮತ್ತು ಉಳಿದ ಹಕ್ಕೊತ್ತಾಯಗಳನ್ನು ಪೂರೈಸುವಂತೆ ಒತ್ತಾಯಿಸಲಾಗುವುದು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಿಳಿಸಿದೆ.
ಇನ್ನು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಕೊನೆಗೊಳ್ಳುವುದಿಲ್ಲ. ನಮ್ಮ ಮುಂದಿನ ಯೋಜನೆಯನ್ನು ನವೆಂಬರ್ 27ರಂದು ನಿರ್ಧರಿಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಬುಧವಾರ ಹೇಳಿದ್ದಾರೆ.


