Homeಮುಖಪುಟಕೃಷಿ ಕಾಯಿದೆಗಳ ವಾಪಸಾತಿ; ದಣಿವರಿಯದ ಹೋರಾಟ ಕಲಿಸಿದ ಪಾಠಗಳೇನು?

ಕೃಷಿ ಕಾಯಿದೆಗಳ ವಾಪಸಾತಿ; ದಣಿವರಿಯದ ಹೋರಾಟ ಕಲಿಸಿದ ಪಾಠಗಳೇನು?

- Advertisement -
- Advertisement -

ಜೂನ್ 2020ರಲ್ಲಿ ಇಡೀ ದೇಶ ಲಾಕ್‌ಡೌನ್ ಹೊಡೆತದಿಂದ ಬಸವಳಿದಿತ್ತು. ಕಾರ್ಮಿಕರು, ಕೃಷಿಕರು, ತಳಸ್ತರದ ಜನರು ಮೂರು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಕೇಂದ್ರ ಸರಕಾರ ಕೃಷಿ ಸುಧಾರಣೆ ಹೆಸರಲ್ಲಿ ಮೂರು ಕಾಯಿದೆಗಳನ್ನು ಆರ್ಡಿನೆನ್ಸ್ ಮೂಲಕ ಜಾರಿಗೆ ತಂದಿತ್ತು. ಆ ಕಾಯಿದೆಗಳು ಇಂತಿವೆ 1) ದಿ ಫಾರ್ಮರ್‍ಸ್ ಪ್ರೊಡ್ಯುಸ್ ಟ್ರೇಡ್ ಅಂಡ್ ಕಾಮರ್ಸ್ ( ಪ್ರೊಮೊಶನ್ ಅಂಡ್ ಫೆಸಿಲಿಟೇಶನ್) ಆಕ್ಟ್, 2020. ಇದನ್ನು ಎಪಿಎಮ್‌ಸಿ ಬೈಪಾಸ್ ಕಾಯಿದೆ ಎನ್ನಬಹುದು. 2) ದಿ ಫಾರ್ಮ್‌ರ್‍ಸ್ ಎಂಪವರ್‌ಮೆಂಟ್ ಅಂಡ್ ಪ್ರೊಟೆಕ್ಷನ್ ಆಗ್ರಿಮೆಂಟ್ ಆನ್ ಪ್ರೈಸ್ ಎಸುರೆನ್ಸ್ ಅಂಡ್ ಫಾರ್ಮ್ ಸರ್ವಿಸಸ್ ಆಕ್ಟ್ 2020. ಇದನ್ನು ಕಾಂಟ್ರಕ್ಟ್ ಫಾರ್ಮಿಂಗ್ ಕಾಯಿದೆ ಎನ್ನಬಹುದು. 3) ಎಸೆನ್ಸಿಯಲ್ ಕಮೋಡಿಟೀಸ್ (ಎಮೆಂಡ್‌ಮೆಂಟ್) ಆಕ್ಟ್ 202. ಆರ್ಡಿನೆನ್ಸ್ ಮೂಲಕ ಜಾರಿಗೆ ತಂದ ಈ ಮೂರು ಕಾಯಿದೆಗಳಿಗೆ ಸೆಪ್ಟಂಬರ್ ತಿಂಗಳಲ್ಲಿ ಪಾರ್ಲಿಮೆಂಟಿನ ಒಪ್ಪಿಗೆ ಪಡೆಯಲಾಯಿತು. ಕಾಯಿದೆಗೆ ಪಾರ್ಲಿಮೆಂಟ್ ಒಪ್ಪಿಗೆ ನೀಡಿದ ಕೆಲವೇ ದಿನಗಳಲ್ಲಿ ಆಲ್ ಇಂಡಿಯಾ ಕಿಸಾನ್ ಮೋರ್ಚ ಈ ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಧರಣಿ ಆರಂಭಿಸಿತು.

ಕಿಸಾನ್ ಮೋರ್ಚಾದ ಪ್ರತಿಭಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಅಷ್ಟುಮಾತ್ರವಲ್ಲ ಪ್ರತಿಭಟಿಸುತ್ತಿದ್ದ ರೈತರನ್ನು ಖಲಿಸ್ತಾನಿಗಳು, ಪಾಕಿಸ್ತಾನಿಗಳು, ಅರ್ಬನ್ ನಕ್ಸಲ್‌ಗಳು, ದೇಶದ್ರೋಹಿಗಳೆಂದು ಜರಿಯಲಾಯಿತು. ರೈತರ ಮೇಲೆ ಲಾಠಿ ಚಾರ್ಜ್, ನೀರಿನ ದಾಳಿ, ಗೂಂಡಾಗಳಿಂದ ದಾಳಿ ನಡೆಸಲು ಹೇಸಲಿಲ್ಲ. ರೈತರನ್ನು ಜಾತಿ, ಧರ್ಮ, ಪ್ರದೇಶಗಳ ನೆಲೆಯಲ್ಲಿ ಧ್ರುವೀಕರಿಸುವ ಪ್ರಯತ್ನಗಳು ನಡೆದವು. ಹಲವು ಸುತ್ತಿನ ಮಾತುಕತೆ ಮೂಲಕ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸುವ ಯತ್ನಗಳು ನಡೆದವು. ರೈತರು ದೇಶದ ರಾಜಧಾನಿಗೆ ಬರದಂತೆ ರಸ್ತೆಯಲ್ಲಿ ಮುಳ್ಳು ಬೇಲಿಗಳನ್ನು, ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕಲಾಯಿತು. ಪ್ರತಿಭಟನೆಗೆ ಕುಳಿತ ಸ್ಥಳಕ್ಕೆ ನೀರು, ಇಂಟರ್‌ನೆಟ್, ವಿದ್ಯುತ್ ಪೂರೈಕೆಗಳನ್ನು ಸ್ಥಗಿತಗೊಳಿಸಲಾಯಿತು. ಬಹುತೇಕ ಹಿಂದಿ ಮತ್ತು ಇಂಗ್ಲಿಷ್ ಟಿವಿ ಚ್ಯಾನಲ್‌ಗಳು ಪ್ರತಿಭಟಿಸುತ್ತಿರುವ ರೈತರ ನಿಲುವನ್ನು ಟೀಕಿಸುತ್ತಾ ಸರಕಾರ ಜಾರಿಗೆ ತಂದ ಮಸೂದೆಗಳ ಗುಣಗಾನ ಮಾಡಿದವು. ಇವೆಲ್ಲ ಪ್ರತಿರೋಧಗಳನ್ನು ರೈತರು ಸಮರ್ಥವಾಗಿ ಎದುರಿಸಿದರು. ಕರಾಳ ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕೆನ್ನುವ ತಮ್ಮ ನಿಲುವಿನಿಂದ ಒಂದಿಂಚು ಕದಲಿಲಲ್ಲ. ರೈತರ ಹೋರಾಟಕ್ಕೆ ಮಣಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 19, 2021ರಂದು ಮೂರು ಕೃಷಿ ಮಸೂದೆಗಳನ್ನು ಸರಕಾರ ಹಿಂದಕ್ಕೆ ಪಡೆಯುತ್ತಯೆಂದು ಘೋಷಿಸಿದರು.

ಸರಕಾರ ಜಾರಿಗೆ ತಂದ ಕೃಷಿ ಮಸೂದೆಗಳು ಮತ್ತು ಅವುಗಳ ವಿರುದ್ಧ ನಡೆದ ಪ್ರತಿಭಟನೆಗಳು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಒಂದು, ಇಷ್ಟೊಂದು ಬಲವಾದ ಮತ್ತು ದೀರ್ಘ ಪ್ರತಿಭಟನೆಯ ಅನಿವಾರ್‍ಯತೆ ಇತ್ತೇ? ಎರಡು, ಮಸೂದೆಗಳನ್ನು ಹಿಂದಕ್ಕೆ ಪಡೆಯುವ ಸರಕಾರದ ನಿರ್ಧಾರದ ಹಿಂದೆ ಚುನಾವಣೆಯ ಲೆಕ್ಕಚಾರಗಳಿಲ್ಲವೇ? ಮೂರು, ರೈತರ ಈ ಗೆಲುವು ಅವರ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದೇ? ನಾಲ್ಕು, ರೈತರ ಒಂದು ವರ್ಷದ ಸುದೀರ್ಘ ಹೋರಾಟದಿಂದ ನಾವೇನು ಪಾಠ ಕಲಿಯಬಹುದು?

ಎರಡು ಮೂರು ಕಾರಣಗಳಿಗೆ ಬಲವಾದ ಪ್ರತಿಭಟನೆಯ ಅನಿವಾರ್‍ಯತೆ ಇತ್ತು. ಒಂದು, ಕೃಷಿ ರಾಜ್ಯ ಲಿಸ್ಟ್‌ನಲ್ಲಿ ಬರುವ ವಿಷಯ. ಅಂದರೆ ಕೃಷಿಗೆ ಸಂಬಂಧಪಟ್ಟ ಮಸೂದೆಗಳನ್ನು ರಾಜ್ಯ ಸರಕಾರ ಮಾಡಬೇಕು. ಆದರೆ ಈ ಮೂರು ಮಸೂದೆಗಳನ್ನು ರಾಜ್ಯಗಳೊಂದಿಗೆ ಚರ್ಚೆ ಮಾಡದೆ ಕೇಂದ್ರ ಸರಕಾರ ಜಾರಿಗೆ ತಂದಿದೆ. ಎರಡು, ನಮ್ಮ ದೇಶದ ಸರಿ ಅರ್ಧದಷ್ಟು ಕುಟುಂಬಗಳು ಕೃಷಿ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬಿತವಾಗಿವೆ. ಅವರ ಬದುಕನ್ನು ಈ ಮೂರು ಮಸೂದೆಗಳು ಗಾಢವಾಗಿ ಪ್ರಭಾವಿಸುತ್ತಿವೆ. ಇಂತಹ ಕಾಯಿದೆಗಳನ್ನು ರೂಪಿಸುವಾಗ ಅವರೊಂದಿಗೆ ಪ್ರಾತಿನಿಧಿಕವಾಗಾದರೂ ಚರ್ಚಿಸಬೇಕೆನ್ನುವ ಕನಿಷ್ಠ ಸೌಜನ್ಯವನ್ನು ಕೇಂದ್ರ ಸರಕಾರ ತೋರಿಸಿಲ್ಲ. ಜೊತೆಗೆ ದೇಶದ ಬಹುತೇಕರ ಬದುಕನ್ನು ಪ್ರಭಾವಿಸುವ ಕಾಯಿದೆಗಳನ್ನು ಪಾರ್ಲಿಮೆಂಟ್‌ನಲ್ಲಿ ಪಾಸು ಮಾಡುವ ಮುನ್ನ ಪರಿಶೀಲನಾ ಸಮಿತಿಗೆ ಒಪ್ಪಿಸುವ ಕ್ರಮ ಇದೆ. ಆದರೆ ಈ ಮೂರು ಕಾಯಿದೆಗಳನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಿದೆ ಪಾಸು ಮಾಡಲಾಗಿದೆ. ಮೂರು, ಮಸೂದೆಗಳಲ್ಲಿ ಅಂತರ್ಗತಗೊಂಡಿರುವ ಹಲವು ಅಂಶಗಳು ಕೃಷಿಕರ ಮತ್ತು ತಳಸ್ತರದ ಜನರ ಬದುಕನ್ನೇ ದುರ್ಬರಗೊಳಿಸುವ ಸಾಧ್ಯತೆ ಇದೆ.

ಎಪಿಎಮ್‌ಸಿ ಬೈಪಾಸ್ ಕಾಯಿದೆ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ ಮತ್ತು ಇವೇ ಕಾರಣಕ್ಕೆ ರೈತರು ಮಸೂದೆಯನ್ನು ವಿರೋಧಿಸಿದರು – 1) ಎಪಿಎಮ್‌ಸಿಗಳ ಜೊತೆಗೆ ಖಾಸಗಿ ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸುವ ಸ್ವಾತಂತ್ರ್ಯವನ್ನು ಈ ಕಾಯಿದೆ ನೀಡುತ್ತಿದೆ. ಅಷ್ಟು ಮಾತ್ರವಲ್ಲ ಖಾಸಗಿ ವ್ಯಾಪಾರಿಗಳು ಎಲ್ಲೂ ನೊಂದಾಯಿಸುವ ಅಗತ್ಯವಿಲ್ಲ. ಜೊತೆಗೆ ಅವರು ಎಪಿಎಮ್‌ಸಿಯಲ್ಲಿ ವ್ಯವಹರಿಸುವವರು ನೀಡುವಂತೆ ಮಾರುಕಟ್ಟೆ ಕಮಿಶನ್ ನೀಡುವ ಅಗತ್ಯವಿಲ್ಲ. ಈ ಎಲ್ಲ ಕಾರಣಗಳಿಂದ ಆರಂಭದಲ್ಲಿ ಖಾಸಗಿ ಮಂಡಿಗಳು ಎಪಿಎಮ್‌ಸಿಗಳಿಂದ ಹೆಚ್ಚಿನ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆ ಇದೆ. ಹೆಚ್ಚಿನ ಬೆಲೆ ಎಪಿಎಮ್‌ಸಿಯಿಂದ ಖಾಸಗಿ ಮಂಡಿಗಳತ್ತ ರೈತರನ್ನು ಆಕರ್ಷಿಸುತ್ತದೆ. ಖಾಸಗಿ ಮಂಡಿಗಳ ಆಕರ್ಷಣೆ ಹೆಚ್ಚಿದಂತೆ ಎಪಿಎಮ್‌ಸಿಗಳು ಮುಚ್ಚುವ ಅನಿವಾರ್‍ಯತೆ ಸೃಷ್ಟಿ ಆಗುತ್ತದೆ. 2) ಎಪಿಎಮ್‌ಸಿಗಳು ಮುಚ್ಚಿದರೆ ರೈತರಿಗೆ ಎರಡು ನಷ್ಟಗಳಿವೆ. ಒಂದು, ಎಪಿಎಮ್‌ಸಿಗಳಲ್ಲಿ ಕೃಷಿ ಉತ್ಪನ್ನಗಳು ಹರಾಜು ಮೂಲಕ ಮಾರಾಟವಾಗುತ್ತವೆ. ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಪಾರದರ್ಶಕವಾಗಿ ನಿಗದಿ ಆಗುತ್ತಿದೆ. ಖಾಸಗಿ ಮಂಡಿಗಳಲ್ಲಿ ವ್ಯಾಪಾರಿಗಳು ತೀರ್ಮಾನಿಸಿದ ಬೆಲೆ ನಡೆಯುತ್ತದೆ. ಎಲ್ಲ ಎಪಿಎಮ್‌ಸಿಗಳು ಮುಚ್ಚಿದ ನಂತರ ವ್ಯಾಪಾರಿಗಳೆಲ್ಲ ಒಟ್ಟು ಸೇರಿ ಅತ್ಯಂತ ಕಡಿಮೆ ಬೆಲೆ ನಿಗದಿ ಪಡಿಸಿ ರೈತರ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆ ಇದೆ. ಎರಡು, ಒಂದು ವೇಳೆ ಹರಾಜಿನಲ್ಲಿ ರೈತರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗದಿದ್ದರೆ ಸರಕಾರ ಮಧ್ಯಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ. ಸರಕಾರ ಘೋಷಿಸುವ ಕನಿಷ್ಠ ಬೆಲೆಯಿಂದ ಕಡಿಮೆ ಬೆಲೆಗೆ ವ್ಯಾಪಾರಿಗಳು ಖರೀದಿಸುವುದು ಕಾನೂನುಬಾಹಿರ ಆಗುತ್ತದೆ. ಆದರೆ ಹೊಸ ಕಾಯಿದೆಯಲ್ಲಿ ಎಪಿಎಮ್‌ಸಿ ಹೊರಗೆ ಖರೀದಿಸುವ ವ್ಯಾಪಾರಸ್ಥರು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕೆನ್ನುವ ಷರತ್ತು ಇಲ್ಲ.

ಕಾಂಟ್ರಾಕ್ಟ್ ಫಾರ್ಮಿಂಗ್ ಮಸೂದೆಯನ್ನು ಈ ಕೆಳಗಿನ ಕಾರಣಕ್ಕೆ ರೈತರು ವಿರೋಧಿಸಿದರು. ಈ ಮಸೂದೆ ರೈತರಿಗೆ ಕಂಪೆನಿಗಳೊಂದಿಗೆ ನೇರ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ. ಇದು ಉತ್ತಮ ಬೆಳವಣಿಗೆ ಎನ್ನಬಹುದು. ಆದರೆ ಇಲ್ಲೊಂದು ಸಮಸ್ಯೆ ಇದೆ. ಅದೇನೆಂದರೆ ಒಂದು ವೇಳೆ ಕಂಪೆನಿ ಮತ್ತು ಒಪ್ಪಂದ ಮಾಡಿಕೊಂಡ ಕೃಷಿಕರ ನಡುವೆ ಭಿನ್ನಾಭಿಪ್ರಾಯಗಳು ಅಥವಾ ತಕರಾರು ಹುಟ್ಟಿಕೊಂಡರೆ ಅವುಗಳ ನಿವಾರಣೆಗೆ ರೈತರು ಕೋರ್ಟ್ ಮೆಟ್ಟಲು ಹತ್ತಲು ಈ ಮಸೂದೆ ಅವಕಾಶ ನೀಡುವುದಿಲ್ಲ. ತಕರಾರು ಪರಿಹಾರಕ್ಕೆ ಕೋರ್ಟ್ ಬದಲು ತಕರಾರು ಪರಿಹಾರ ಸಮಿತಿಗಳನ್ನು ಈ ಕಾಯಿದೆ ರಚಿಸಿದೆ. ತಾಲ್ಲೂಕು ಮಟ್ಟದಲ್ಲಿ ತಹಸಿಲ್ದಾರರು ಅಥವಾ ಎಸಿ ನೇತೃತ್ವದಲ್ಲೊಂದು ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚನೆ ಆಗಿದೆ. ಈ ಸಮಿತಿಗಳಲ್ಲಿ ಸರಕಾರಿ ಅಧಿಕಾರಿಗಳ ಜೊತೆಗೆ ಕಂಪೆನಿ ಪ್ರತಿನಿಧಿಗಳು ಮತ್ತು ರೈತರ ಪ್ರತಿನಿಧಿಗಳಿರುತ್ತಾರೆ. ತಕರಾರು ಪರಿಹಾರ ಸಮಿತಿ ಮೇಲೆ ರೈತರಿಗೆ ನಂಬಿಕೆ ಇಲ್ಲ. ಏಕೆಂದರೆ ಇಡೀ ಸಮಿತಿ ರೈತ ಪರ ಕೆಲಸ ಮಾಡುವುದಕ್ಕಿಂತ ಹೆಚ್ಚು ಉದ್ದಿಮೆ ಪರ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನುವ ಗುಮಾನಿ ಇದೆ. ಇದು ಸರಿ ಕೂಡ. ಏಕೆಂದರೆ ಸರಕಾರಿ ಅಧಿಕಾರಿಗಳ ಮತ್ತು ಉದ್ದಿಮೆಗಳ ಆಸಕ್ತಿಗಳು ಮೇಳೈಸಿದಷ್ಟು, ಬಡ ರೈತರ ಆಸಕ್ತಿಗಳು ಅಧಿಕಾರಿಗಳ ಜೊತೆ ಮೇಳೈಸುವುದಿಲ್ಲ. ಇತರ ವಿಚಾರಗಳನ್ನೂ ಸೇರಿಸಿ ಮುಖ್ಯವಾಗಿ ಈ ಕಾರಣಕ್ಕಾಗಿ ಕಾಂಟ್ರಕ್ಟ್ ಫಾರ್ಮಿಂಗ್ ಮಸೂದೆಯನ್ನು ರೈತರು ವಿರೋಧಿಸುತ್ತಿದ್ದಾರೆ.

ಕೃಷಿಕರು ಕೇವಲ ತಮ್ಮ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಚಳವಳಿ ನಡೆಸುತ್ತಿದ್ದರೆ ಅವಶ್ಯಕ ಸರಕುಸೇವೆಗಳ ಕಾಯಿದೆಗಳನ್ನು ಇಷ್ಟು ವಿರೋಧಿಸುವ ಅಗತ್ಯವಿರಲಿಲ್ಲ. ಏಕೆಂದರೆ ಅದು ಅವರನ್ನು ಪ್ರಭಾವಿಸುವುದಕ್ಕಿಂತ ನಮ್ಮ ದೇಶದ ಶೇ.೭೦ರಷ್ಟು ಬಡಜನರನ್ನು ಹೆಚ್ಚು ಪ್ರಭಾವಿಸುತ್ತಿದೆ. ಎಪ್ಪತ್ತರ ದಶಕದ ಹಸಿರು ಕ್ರಾಂತಿ ನಡೆಯುವವರೆಗೆ ಭಾರತ ಆಹಾರ ಕೊರತೆ ಅನುಭವಿಸುತ್ತಿತ್ತು. ಲಕ್ಷಾಂತರ ಜನ ಹೊಟ್ಟೆತುಂಬಾ ಊಟಕ್ಕಾಗಿ ಪರದಾಡುತ್ತಿದ್ದರು. ಹಸಿರು ಕ್ರಾಂತಿ ನಡೆದ ನಂತರ ಭಾರತ ಆಹಾರ ಕೊರತೆಯಿಂದ ಆಹಾರ ಮಿಗತೆ ದೇಶವಾಗಿದೆ. ಇಂದು ಲಕ್ಷಗಟ್ಟಲೆ ಟನ್ ಆಹಾರ ಉತ್ಪನ್ನಗಳು ಸರಕಾರಿ ಗೋದಾಮುಗಳಲ್ಲಿ ಇದೆ. ಲಾಕ್‌ಡೌನ್ ಸಂದರ್ಭದಲ್ಲಿ ಕೋಟಿಗಟ್ಟಲೆ ಜನರಿಗೆ ಉಚಿತ ಆಹಾರ ವಿತರಣೆ ಸಾಧ್ಯವಾಗಿದ್ದು ಸರಕಾರ ದೊಡ್ಡ ಪ್ರಮಾಣದಲ್ಲಿ ಆಹಾರ ಸಂಗ್ರಹಣೆ ಮಾಡಿದ್ದರಿಂದ. ಆದರೆ ಅವಶ್ಯಕ ಸರಕುಸೇವೆಗಳ ತಿದ್ದುಪಡಿ ಮಸೂದೆ ಇಂತಹ ಮಿಗತೆ ಆಹಾರದ ಸ್ಥಿತಿಯನ್ನು ಬುಡಮೇಲು ಮಾಡಿ ತಳಸ್ತರದ ಜನರು ಹಿಂದಿನಂತೆ ಊಟಕ್ಕೆ ಪರದಾಡುವ ಸ್ಥಿತಿಗೆ ತಳ್ಳಲಿದೆ ಎನ್ನುವ ಗುಮಾನಿ ರೈತರನ್ನು ಕಾಡಿದೆ. ಅವರ ಗುಮಾನಿಯಲ್ಲಿ ಸತ್ಯಾಂಶ ಇದೆ. ಏಕೆಂದರೆ ಅವಶ್ಯಕ ಸರಕುಸೇವೆಗಳ ತಿದ್ದುಪಡಿ ಮಸೂದೆ, ಎಲ್ಲ ಆಹಾರ ಉತ್ಪನ್ನಗಳ ಸಂಗ್ರಹ ಮತ್ತು ಶೇಖರಣೆಯನ್ನು ಮಾಡಲು ಖಾಸಗಿ ಮಂಡಿಗಳಿಗೆ ಮುಕ್ತಗೊಳಸಿದೆ. ಅಂದರೆ ಖಾಸಗಿ ಉದ್ದಿಮೆಗಳು ಲಕ್ಷಾಂತರ ಟನ್ ಆಹಾರ ಉತ್ಪನ್ನಗಳನ್ನು ಶೇಖರಣೆ ಮಾಡಬಹುದು ಮತ್ತು ಬೇಕಾದಾಗ ದುಬಾರಿ ಬೆಲೆಗೆ ಮಾರಾಟ ಮಾಡಬಹುದು. ಖಾಸಗಿ ಮಂಡಿಗಳ ಬೆಲೆ ಮೇರೆಮೀರಿದರೆ ಮಾತ್ರ ಸರಕಾರ ಮಧ್ಯಪ್ರವೇಶಿಸುವ ಅವಕಾಶವನ್ನು ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳನ್ನು ಗಗನದೆತ್ತರ ಏರಿಸಿ ಜನರ ಬದುಕನ್ನು ಬೀದಿಪಾಲು ಮಾಡುವ ಸರಕಾರಕ್ಕೆ ಖಾಸಗಿ ಉದ್ದಿಮೆಗಳು ನಿಗದಿಪಡಿಸುವ ಬೆಲೆ ಸುಲಭದಲ್ಲಿ ಮೇರೆಮೀರಿದಂತೆ ಕಾಣಲಾರದು. ಇಂದು ಖಾಸಗಿ ಉದ್ದಿಮೆಗಳು ನಡೆಸುವ ಶಿಕ್ಷಣ, ಆರೋಗ್ಯ, ಸಾರಿಗೆಗಳು ಬಡಜನರಿಗೆ ಶಕ್ತಿಗೆ ಮೀರಿದವೆ ಆಗಿವೆ. ಹೀಗಿದ್ದೂ, ಸರಕಾರ ಮಧ್ಯಪ್ರವೇಶ ಮಾಡಿ ಅವನ್ನು ಬಡಜನರಿಗೆ ಲಭ್ಯವಾಗುವಂತೆ ಮಾಡಲಿಲ್ಲ. ಇಂತಹ ಸ್ಥಿತಿಯಲ್ಲಿ ಆಹಾರ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟವನ್ನು ಮುಕ್ತಗೊಳಿಸಿ ಖಾಸಗಿ ಉದ್ದಿಮೆಗಳ ಸ್ವಾಧೀನ ನೀಡುವುದು ಬಡಜನರ ತಟ್ಟೆಯಿಂದ ಅನ್ನ ಕಿತ್ತುಕೊಳ್ಳುವುದಕ್ಕೆ ಸಮ.

ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯುವುದರಲ್ಲಿ ಚುನಾವಣೆಯ ಲೆಕ್ಕಚಾರ ಇಲ್ಲವೇ? ಎನ್ನುವ ಪ್ರಶ್ನೆಗೆ ಖಂಡಿತವಾಗಿಯೂ ಇದೆ ಎನ್ನುವುದೇ ಉತ್ತರ. ಪ್ರಜಾಪ್ರಭುತ್ವವನ್ನು ಚುನಾವಣೆಗೆ ಸೀಮಿತಗೊಳಿಸುವುದರಲ್ಲಿ ಎಲ್ಲ ಪಕ್ಷಗಳ ಪಾಲು ಇದ್ದರೂ ಬಿಜೆಪಿಯವರಷ್ಟು ನಿರ್ಭೀತಿಯಿಂದ ಅದನ್ನು ಸಾಬೀತುಪಡಿಸಲು ಇತರ ಪಕ್ಷಗಳು ಪ್ರಯತ್ನಪಟ್ಟಿಲ್ಲ. ಬಿಜೆಪಿಯವರಿಗೆ ಚುನಾವಣೆ ಗೆಲ್ಲುವುದು ಬಿಟ್ಟರೆ ಪ್ರಜಾಪ್ರಭುತ್ವದ ಇತರ ಅಂಶಗಳು – ನ್ಯಾಯಾಂಗ, ಮಾಧ್ಯಮ, ಶಾಸಕಾಂಗ, ಸಂಸ್ಥೆಗಳ ಸ್ವಾಯತ್ತತೆ, ಪಾರ್ಲಿಮೆಂಟ್ ಚರ್ಚೆ, ಜನಾಭಿಪ್ರಾಯ, ಆಡಳಿತ ಪಕ್ಷದ ನೀತಿಗಳನ್ನು ಪ್ರಶ್ನಿಸುವುದು – ಇವು ಯಾವುವು ಸಹಿಸಲು ಸಾಧ್ಯವಿಲ್ಲದ ಸಂಗತಿಗಳಾಗಿವೆ. ಹೀಗೆ ಚುನಾವಣಾ ಗೆಲುವಿಗೆ ಅತೀ ಮಹತ್ವ ನೀಡುವ ಬಿಜೆಪಿ ಪಕ್ಷಕ್ಕೆ ಪಶ್ಚಿಮ ಬಂಗಾಳದ ಸೋಲು, ಇತ್ತೀಚಿನ ಉಪಚುನಾವಣೆಗಳ ಸೋಲು ಮತ್ತು ಮುಂದಿನ ವರ್ಷ ಬರುವ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಚುನಾವಣೆಗಳು ಮಹತ್ವದ ಸಂಗತಿಗಳಾಗಿವೆ. ಮುಂದೆ ಬರುವ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳ ಚುನಾವಣೆ ಮೇಲೆ ರೈತ ಹೋರಾಟದ ಪ್ರಭಾವವನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಒಂದು ವರ್ಷ ನಡೆದ ರೈತರ ಹೋರಾಟದಲ್ಲಿ ಅತೀ ಹೆಚ್ಚು ರೈತರು ಪಾಲುಗೊಂಡದ್ದು ಇವೇ ರಾಜ್ಯಗಳಿಂದ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರ ತಳೆಯಲಾಗಿದೆ.

ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆದ ಕೂಡಲೇ ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಏಕೆಂದರೆ ಅವರ ಸಮಸ್ಯೆ ಕೇವಲ ಮಾರುಕಟ್ಟೆ ಮತ್ತು ಬೆಲೆ ನಿಗದಿಗೆ ಸೀಮಿತವಾಗಿಲ್ಲ. ಅದಕ್ಕಿಂತಲೂ ಮುಂದೆ ಹೋಗಿ ಉತ್ಪಾದನೆಗೂ ಅವರ ಸಮಸ್ಯೆಗಳು ವಿಸ್ತರಿಸಿವೆ. ನೀರಾವರಿ, ಹಣಕಾಸು, ಮೂಲಸೌಕರ್ಯ ಕೊರತೆಗಳು ರೈತರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗಳು. ಮೂರನೇ ಒಂದರಷ್ಟು ಕೃಷಿ ಪ್ರದೇಶ ಮಾತ್ರ ನೀರಾವರಿ ಹೊಂದಿದೆ. ಮೂರನೇ ಎರಡರಷ್ಟು ಪ್ರದೇಶದ ರೈತರು ಪ್ರಾಕೃತಿಕ ಹವಾಮಾನವನ್ನು ನಂಬಿ ಕೃಷಿ ಮಾಡುವ ಸ್ಥಿತಿ ಇನ್ನೂ ಬದಲಾಗಿಲ್ಲ. ಸರಕಾರಿ ಸಾಲದ ಶೇ.18ರಷ್ಟು ಮಾತ್ರ ಕೃಷಿಗೆ ಹೋಗುತ್ತಿದೆ. 2008ರವರೆಗೆ ಆ ಶೇ.18 ಕೂಡ ದೊಡ್ಡ ಮತ್ತು ಮಧ್ಯಮ ಗಾತ್ರದ ರೈತರ ಪಾಲಾಗುತ್ತಿತ್ತು. 2008ರ ನಂತರ ಸ್ಥಿತಿ ಸ್ವಲ್ಪ ಬದಲಾದರೂ ಸಣ್ಣ ಮತ್ತು ಅತೀ ಸಣ್ಣ ಕೃಷಿಕರ ಹಣಕಾಸು ಸಮಸ್ಯೆ ಪರಿಹಾರವಾಗಿಲ್ಲ.

ಶೇ.80ರಷ್ಟಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಅಂದು ಮತ್ತು ಇಂದು ಕೂಡ ಖಾಸಗಿಯವರಿಂದ ಅತೀ ಹೆಚ್ಚು ಬಡ್ಡಿಗೆ ಸಾಲ ಪಡೆಯುವುದು ತಪ್ಪಿಲ್ಲ. ಕಡಿಮೆ ಬಡ್ಡಿಗೆ ಸಾಲ ಸಿಗದಿರುವುದು ಮತ್ತು ಹೆಚ್ಚು ಬಡ್ಡಿಗೆ ಪಡೆದ ಸಾಲ ಕಟ್ಟಲಾಗದಿರುವುದೇ ಅತೀ ಹೆಚ್ಚು ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಸರ್ವಋತು ರಸ್ತೆ ಇಲ್ಲದಿರುವುದು, ವಿದ್ಯುತ್ ಪೂರೈಕೆ ಕೊರತೆ, ಗೋದಾಮುಗಳ ಕೊರತೆ, ಕೋಲ್ಡ್ ಸ್ಟೋರೇಜ್‌ಗಳ ಕೊರತೆ, ಮಾರುಕಟ್ಟೆ ನೆಟ್‌ವರ್ಕ್ ಕೊರತೆ ಇತ್ಯಾದಿ ಮೂಲಸೌಕರ್ಯಗಳ ಕೊರತೆಗಳು ರೈತರನ್ನು ಕಾಡುತ್ತಿವೆ. ಇಂತಹ ಕಠಿಣ ಸವಾಲುಗಳ ಬಗ್ಗೆ ಗಮನಹರಿಸುವ ಬದಲು ಖಾಸಗಿ ಉದ್ದಿಮೆಗಳಿಗೆ ಪರಭಾರೆ ಮಾಡುವುದು, ಮಾರುಕಟ್ಟೆ ಸುಧಾರಣೆ ಹಾಗೂ ವಿನಿಯೋಜನೆ ಇಲ್ಲದೆ ನಡೆಯುವ ಕ್ರಮಗಳನ್ನು ಹೆಚ್ಚೆಚ್ಚು ಮುಂಚೂಣಿಗೆ ತಂದು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ಸಂಬಂಧಿಸಿದಂತೆ ಇನ್ನೂ ಕೂಡ ಕನಿಷ್ಠ ಬೆಂಬಲ ಬೆಲೆ ಕಡ್ಡಾಯಗೊಂಡಿಲ್ಲ. ಅಂದರೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆನ್ನುವ ಕಾನೂನು ಬಂದಿಲ್ಲ.

ರೈತರ ಹೋರಾಟ ನಮಗೆಲ್ಲ ಹಲವು ಪಾಠಗಳನ್ನು ಕಲಿಸಿದೆ. ಒಂದು, ಪ್ರಜಾಪ್ರಭುತ್ವ ಎಂದರೆ ಚುನಾವಣೆ ಮಾತ್ರ ಅಲ್ಲ, ಚುನಾವಣೆಯ ನಂತರವೂ ಜನಾಭಿಪ್ರಾಯನ್ನು ಪರಿಗಣಿಸಬೇಕೆನ್ನುವ ಪಾಠವನ್ನು ಮೆಜಾರಿಟಿ ಸೀಟುಗಳನ್ನು ಪಡೆದು ಆಡಳಿತ ನಡೆಸುವ ಪಕ್ಷಕ್ಕೆ ಮಾಡಿದೆ. ಎರಡು, ರಾಜಕೀಯ ಸಮಸ್ಯೆಯನ್ನು ರಾಜಕೀಯವಾಗಿಯೇ ಪರಿಹರಿಸಬೇಕೇ ಹೊರತು ನ್ಯಾಯಾಂಗ ಮೂಗು ತೂರಿಸಬಾರದೆನ್ನುವ ಪಾಠವನ್ನು ನ್ಯಾಯಾಂಗಕ್ಕೆ ಮಾಡಿದೆ. ಮೂರು, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಆಡಳಿತ ಪಕ್ಷದ ಪರ ವಕಾಲತು ಮಾಡುವುದಲ್ಲ, ಜನರ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸಬೇಕೆನ್ನುವ ಪಾಠವನ್ನು ಮಾಧ್ಯಮಕ್ಕೆ ಮಾಡಿದೆ. ಜಾತಿ, ಧರ್ಮದ ಹೆಸರಲ್ಲಿ ಜನರನ್ನು ಧ್ರುವೀಕರಿಸಿ ಅಧಿಕಾರಕ್ಕೆ ಬರುವ ಪಕ್ಷಗಳಿಂದ ಜನ ನೆಮ್ಮದಿಯ ಬದುಕಿನ ಕನಸು ಕಾಣಲು ಸಾಧ್ಯವಿಲ್ಲ. ದೃಢ ನಿರ್ಧಾರದಿಂದ ಆಹಿಂಸಾತ್ಮಕವಾಗಿ ಸತತ ಹೋರಾಟ ಮಾಡುವುದರಿಂದ ಮಾತ್ರ ತಳಸ್ತರದ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದೆನ್ನುವ ಪಾಠವನ್ನು ಜನಸಾಮಾನ್ಯರಿಗೆ ಮಾಡಿದೆ. ಈ ದೇಶದ ಸಂಪನ್ಮೂಲಗಳು ಕೇವಲ ಕೆಲವೇ ಕೆಲವು ಶ್ರೀಮಂತರಿಗೆ ಮತ್ತು ಮಧ್ಯಮ ವರ್ಗದವರಿಗೆ ಮೀಸಲು ಅಲ್ಲ, ದೇಶದ ಎಲ್ಲ ಪ್ರಜೆಗಳಿಗೂ ಅದರಲ್ಲಿ ಪಾಲಿದೆ ಎನ್ನುವ ಪಾಠವನ್ನು ನಮ್ಮ ಸಮಾಜದ ಗಣ್ಯರಿಗೆ ಮಾಡಿದೆ. ಬುದ್ಧಿಜೀವಿಗಳು ತಮ್ಮ ಬುದ್ಧಿಯ ಅಲ್ಪ ಭಾಗವನ್ನಾದರೂ ಸಮಾಜದ ತಳಸ್ತರದ ಜನರ ಹಕ್ಕನ್ನು ರಕ್ಷಿಸಲು ಬಳಸಬೇಕೆನ್ನುವ ಪಾಠವನ್ನು ಅವರಿಗೆ ಮಾಡಿದೆ.

ತೊಂಬತ್ತರ ನಂತರ ಎಲ್ಲ ಸಮಸ್ಯೆಗಳಿಗೂ ಖಾಸಗೀಕರಣ ಪರಿಹಾರವೆಂದು ಸರಕಾರ ಹೇಳುತ್ತಿದೆ. ಇದೇ ನೀತಿಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸುವ ಉದ್ದೇಶದಿಂದ ಮೇಲಿನ ಮೂರು ಮಸೂದೆಗಳನ್ನು ಜಾರಿಗೆ ತರಲಾಯಿತು. ಈ ಮಸೂದೆಗಳು ಕೃಷಿ ಉತ್ಪಾದನೆ, ಸಂಗ್ರಹ, ಮಾರಾಟ ಎಲ್ಲವನ್ನು ಉದ್ದಿಮೆಗಳ ಸ್ವಾಧೀನ ಕೊಡುವ ಉದ್ದೇಶ ಹೊಂದಿದ್ದವು. ರೈತ ಹೋರಾಟದಿಂದ ಕೃಷಿ ಕ್ಷೇತ್ರವನ್ನು ಉದ್ದಿಮೆಗಳ ಸ್ವಾಧೀನಕ್ಕೆ ಒಪ್ಪಿಸುವುದು ಸದ್ಯಕ್ಕೆ ನಿಂತಿದೆ. ಆದರೆ ಸರಕಾರ ಸೋತ ಕಡೆ, ಖಾಸಗಿ ಉದ್ದಿಮೆಗಳು ಪರಿಹಾರ ಎನ್ನುವು ನೀತಿ-ಚಿಂತನೆ ಎಲ್ಲಿ ತನಕ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಇದಕ್ಕೆ ಪರಿಹಾರವಿಲ್ಲ. ಆದುದರಿಂದ ಇಂದು ನಡೆಯುವ ಪಬ್ಲಿಕ್ ವರ್ಸಸ್ ಪ್ರೈವೆಟ್ ಚರ್ಚೆಯನ್ನು ಭಿನ್ನ ರೂಪದಲ್ಲಿ ನೋಡುವ ಅಗತ್ಯ ಇದೆ. ಇಂದಿನ ಚರ್ಚೆಗಳು ಪ್ರೈವೆಟ್ ಅಂದರೆ ಎಫಿಶಿಯಂಟ್, ಲಾಭದಾಯಕ, ಕಡಿಮೆ ವಿನಿಯೋಜನೆ, ಉಪಯುಕ್ತ ಹಾಗೂ ಪಬ್ಲಿಕ್ ಅಂದರೆ ಇವಕ್ಕೆ ವಿರುದ್ಧ ಎನ್ನುವ ಚಿತ್ರಣವನ್ನು ನೀಡುತ್ತಿವೆ. ಅದರ ಬದಲು ಪಬ್ಲಿಕ್ ಅಂದರೆ ಯಾರು? ಪಬ್ಲಿಕ್‌ನ ಮ್ಯಾನೇಜ್‌ಮೆಂಟ್‌ಗೆ ಯಾರು ಜವಾಬ್ದಾರರು? ಪಬ್ಲಿಕ್ ಸೋತರೆ ಯಾರನ್ನು ಹೊಣೆಗಾರರನ್ನಾಗಿಸಬೇಕು? ಇತ್ಯಾದಿ ಚರ್ಚೆಗಳು ನಡೆಯುತ್ತಿಲ್ಲ. ಪಬ್ಲಿಕ್ ಅಂದರೆ ಎಲ್ಲರೂ ಅಥವಾ ಎಲ್ಲ ಜನರೆನ್ನುವ ಅರ್ಥದಲ್ಲಿ ಬಳಸಲಾಗುತ್ತಿದೆ. ನಮ್ಮಂತಹ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಪಬ್ಲಿಕ್ ಅಂದರೆ ಎಲ್ಲ ಜನರಲ್ಲ. ನಾವು ಚುನಾಯಿಸಿದ ಪ್ರತಿನಿಧಿಗಳು ಇಲ್ಲಿ ಪಬ್ಲಿಕ್. ನಾವು ಚುನಾಯಿಸಿದ ಪ್ರತಿನಿಧಿಗಳು ಪಬ್ಲಿಕ್‌ನ ನಿರ್ವಹಣೆಗೆ ಜವಾಬ್ದಾರರು. ಆದುದರಿಂದ ಪಬ್ಲಿಕ್ ನಷ್ಟದಲ್ಲಿದೆ, ಸೋತಿದೆ, ಎಫಿಶಿಯಂಟ್ ಅಲ್ಲ ಅಥವಾ ಉಪಯುಕ್ತ ಅಲ್ಲ ಎಂದಾದರೆ ನಮ್ಮ ಪ್ರತಿನಿಧಿಗಳು ಸೋತಿದ್ದಾರೆ ಎಂದರ್ಥ. ಆರ್ಥಿಕ, ರಾಜಕೀಯ ಕ್ಷೇತ್ರದ ಸಂಸ್ಥೆಗಳನ್ನು ನಿರ್ವಹಿಸಲು ನಮ್ಮ ಪ್ರತಿನಿಧಿಗಳು ಸಂಪೂರ್ಣ ಸೋತಿದ್ದಾರೆ ಎಂದರ್ಥ ಅದು. ಇದಕ್ಕೆ ಪರಿಹಾರ – 1) ಪ್ರತಿನಿಧಿಗಳನ್ನು ಚುನಾಯಿಸುವ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಾವಣೆ 2) ಪ್ರತಿನಿಧಿಗಳು ಮತ್ತು ಅಧಿಕಾರಗಳು ಹೊಣೆಗಾರಿಕೆಯನ್ನು ನಿರ್ಧರಿಸುವುದು 3) ಪ್ರತಿನಿಧಿಗಳ ಮತ್ತು ಅಧಿಕಾರಗಳ ನಿರ್ಧಾರದಿಂದ ಆಗುವ ನಷ್ಟಗಳನ್ನು ಅವರೇ ತುಂಬಿಕೊಡುವ ಮಸೂದೆಗಳನ್ನು ಜಾರಿಗೆ ತರುವುದು.

ಎಂ. ಚಂದ್ರ ಪೂಜಾರಿ

ಎಂ. ಚಂದ್ರ ಪೂಜಾರಿ
ಅಭಿವೃದ್ಧಿ-ಅರ್ಥಶಾಸ್ತ್ರ ಚಿಂತಕರು. ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು. ’ಸಂಶೋಧನೆ: ಏನು? ಏಕೆ? ಹೇಗೆ?’, ’ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ’, ’ಅಭಿವೃದ್ಧಿ ಮತ್ತು ರಾಜಕೀಯ’, ’ರಾಜಕೀಯದ ಬಡತನ’, ’ಬಡತನ ಮತ್ತು ಪ್ರಜಾಪ್ರಭುತ್ವ’ ಚಂದ್ರ ಪೂಜಾರಿಯವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸರ್ವಾಧಿಕಾರದ ಅಹಂ ಮುರಿದ ಸಮರ ಸತ್ಯಾಗ್ರಹ: ನೂರ್ ಶ್ರೀಧರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...