ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅದಕ್ಷ, ಅಪ್ರಜಾತಾಂತ್ರಿಕ ಬಿಜೆಪಿ ಆಡಳಿತವನ್ನು ಕೊನೆಗೊಳಿಸಲು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಗೋವಾ ಫಾರ್ವಾಡ್ ಪಾರ್ಟಿ ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ.
“ನನ್ನ ಸಹೋದ್ಯೋಗಿಗಳಾದ ಪ್ರಸಾದ್ ಗಾಂವ್ಕರ್ ಮತ್ತು ವಿನೋದ್ ಪಾಲ್ಯೇಕರ್ ಅವರೊಂದಿಗೆ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿಯಾದೆ. ಬಿಜೆಪಿಯ ಸಂಪೂರ್ಣ ಭ್ರಷ್ಟ, ಅಸಮರ್ಥ ಮತ್ತು ಪ್ರಜಾಸತ್ತಾತ್ಮಕವಲ್ಲದ ಆಳ್ವಿಕೆಯನ್ನು ಕೊನೆಗೊಳಿಸಲು ಗೋವಾದ ಜನತೆಯ ಪರವಾಗಿ ದೃಢವಾಗಿ, ಪೂರ್ಣ ಹೃದಯದಿಂದ ಮತ್ತು ಒಗ್ಗಟ್ಟಿನಿಂದ ಹೋರಾಡಲು ನಾವು ಒಪ್ಪಿಕೊಂಡಿದ್ದೇವೆ” ಎಂದು ಅವರು ಟ್ವೀಟ್ ಮೂಲಕ ಘೋಷಿಸಿದ್ದಾರೆ.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಕೋಮುವಾದಿ ಮತ್ತು ಗೋವಾದ ವಿರೋಧಿ ಎಂದು ಕರೆದ ವಿಜಯ್ ಸರ್ದೇಸಾಯಿ, ಬಿಜೆಪಿ ಅಧಿಕಾರದಡಿಯಲ್ಲಿ ಗೋವಾ ಮುಂದುವರಿಯಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಒಂದು ತಿಂಗಳ ಹಿಂದಷ್ಟೆ ವಿಜಯ್ ಸರ್ದೇಸಾಯಿ ಟಿಎಂಸಿ ಜೊತೆ ಮೈತ್ರಿಗೆ ಮುಂದಾಗಿದ್ದರು. “ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಸೋಲಿಸೋಣ ಎಂದು ಕರೆ ನೀಡಿದ್ದ ಅವರು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದರು. ಆದರೆ ಮೈತ್ರಿ ಕುದುರದೆ ಅಂತಿಮವಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.
ಗೋವಾದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ದಿನೇಶ್ ಗುಂಡೂರಾವ್ ಸಹ ಟ್ವೀಟ್ ಮೂಲಕ ಗೋವಾ ಫಾರ್ವಾಡ್ ಪಾರ್ಟಿ ಜೊತೆಗಿನ ಮೈತ್ರಿಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಈ ವರ್ಷ 40 ನಾಗರಿಕರು ಕೊಲ್ಲಲ್ಪಟ್ಟಿದ್ದು, 72 ಮಂದಿ ಗಾಯಗೊಂಡಿದ್ದಾರೆ: ಒಪ್ಪಿಕೊಂಡ ಒಕ್ಕೂಟ ಸರ್ಕಾರ


