Homeಮುಖಪುಟಮುನವ್ವರ್ ಫಾರೂಕಿ ಮತ್ತು ಮಾಬ್

ಮುನವ್ವರ್ ಫಾರೂಕಿ ಮತ್ತು ಮಾಬ್

- Advertisement -
- Advertisement -

ಇಂಗ್ಲೀಷಿನಲ್ಲಿ ಮಾಬ್ ಎಂಬ ಪದವಿದೆ; ಮಾಬ್ ಎಂದರೆ ಕೇವಲ ಜನಸಮೂಹವಲ್ಲ, ಯಾವುದೋ ಒಂದು ದುಷ್ಕೃತ್ಯವನ್ನು ಮಾಡಲು ಅಣಿಯಾಗಿರುವ ಜನರ ಗುಂಪನ್ನು ಮಾಬ್ ಎಂದು ಕರೆಯಲಾಗುತ್ತೆ. ಮಾಬ್ ಮೆಂಟಾಲಿಟಿ ಎಂಬ ಪದವೂ ಬಳಕೆಯಲ್ಲಿದೆ. ಈ ಮಾಬ್ ಒಂದೆಡೆ ಸೇರಿಕೊಂಡಾಗ, ಅಷ್ಟೇನು ಕೆಟ್ಟವರಲ್ಲದಿದ್ದರೂ, ಊಹಿಸಲಾಗದಷ್ಟು ಕೆಟ್ಟ ಕೆಲಸ ಮಾಡುವ ಸಾಮರ್ಥ್ಯ ಬಂದುಬಿಡುತ್ತೆ. ಅದನ್ನು ಮಾಬ್ ಮೆಂಟಾಲಿಟಿ ಎಂದು ಕರಯುತ್ತಾರೆ. ಈ ಮಾಬ್ ಈಗ ಕೇವಲ ದೈಹಿಕವಾಗಿ ಒಂದೆಡೆ ಸೇರಬೇಕಿಲ್ಲ, ಸಾಮಾಜಿಕ ಜಾಲತಾಣಗಳ ಮೂಲಕವೂ, ಒಂದೇ ಉದ್ದೇಶದಿಂದ ಒಂದು ವರ್ಚುವಲ್ ಜಾಗದಲ್ಲಿ ಸೇರಿ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬಲ್ಲರು.

ಮೊನ್ನೆ ಭಾನುವಾರ 28ನೇ ತಾರೀಕಿನಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಒಂದು ಸ್ಟ್ಯಾಂಡ್‌ಅಪ್ ಕಾಮೆಡಿ ಶೋಅನ್ನು ರದ್ದುಗೊಳಿಸಲಾಯಿತು. ಸುಮಾರು 600 ಜನರು ಮುಂಗಡವಾಗಿ ಟಿಕೆಟ್ ಖರೀದಿಸಿಟ್ಟಿದ್ದರು. ಅದೇ ದಿನ ಬೆಳಗ್ಗೆ ಅಶೋಕನಗರದ ಪೊಲೀಸರು ಆಯೋಜಕರಿಗೆ ಪತ್ರಬರೆದು, ಅದರಲ್ಲಿ ಹಾಸ್ಯಗಾರ ಮುನವ್ವರ್ ಫಾರೂಕಿ ಅವರ ಮೇಲೆ ಪ್ರಕರಣ ನಡೆಯುತ್ತಿವೆಯೆಂದೂ, ಅವರು ವಿವಾದಾತ್ಮಕವಾದ ಕಾಮೆಡಿ ಮಾಡುತ್ತಾರೆಂದೂ, ಅವರ ಕಾರ್ಯಕ್ರಮದಿಂದ ಶಾಂತಿ ಭಂಗ ಆಗಬಹುದು ಎಂಬ ಕಾರಣಕ್ಕೆ ಶೋ ರದ್ದುಪಡಿಸಬೇಕು ಎಂದು ’ವಿನಮ್ರ’ವಾಗಿ ಸೂಚಿಸಿದ್ದರು. ಶೋ ರದ್ದಾಯಿತು. ’ಒಬ್ಬ ಕಲಾವಿದ ಸೋತ, ದ್ವೇಷ ಗೆದ್ದಿತು. ಸಾಕೀಗ, ಅಂತಿಮ ವಿದಾಯ’ ಎಂದು ಟ್ವೀಟ್ ಮಾಡಿದ ಆ ಕಲಾವಿದ.

ಈ ಕಾಮೆಡಿಯನ್, ಹಾಸ್ಯ, ವ್ಯಂಗ್ಯ ಎಂದರೆ ಏಕಿಷ್ಟು ಅಸಹನೆ? ಹ್ಮೂ, ನಮಿಷ್ಟ ಇಲ್ಲಪಾ, ನೀವು ಮಾಡಿಕೊಳ್ಳಿ, ನಾವು ನೋಡಲ್ಲ ಎಂದು ಹೇಳಬಹುದಲ್ಲವಾ? ಇತ್ತೀಚಿಗೆ ವೀರ್ ದಾಸ ಎಂಬ ಹಾಸ್ಯಗಾರ ಅಮೆರಿಕದ ವಾಶಿಂಗ್ಟನ್‌ನಲ್ಲಿರುವ ಕೆನಡಿ ಸೆಂಟರ್‌ನಲ್ಲಿ ’ಎರಡು ಭಾರತ’ ಎಂಬ ಪದ್ಯ ಓದಿದ್ದು, ಎಲ್ಲೆಡೆ ಪ್ರಸಾರವಾಯಿತು. ಅದನ್ನೂ ಸಹಿಸಿಕೊಳ್ಳಲಾಗಲಿಲ್ಲ ನಮಗೆ. ದಾಸ್ ನಿನ್ನೆ ಭಾರತಕ್ಕೆ ಮರಳಿ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದಾಗ, ’ಎರಡರಲ್ಲಿ ಯಾವ ಭಾರತಕ್ಕೆ ಮರಳಿದ್ದೀಯ?’ ಎಂದು ಕೇಳಿ ಪೀಡಿಸಲಾಯಿತು. ನಮ್ಮಲ್ಲಿಯ ವ್ಯಂಗಚಿತ್ರಕಾರರು ಎದುರಿಸುವ ಪಾಡೂ ಇಂಥದ್ದೇ. ಎಂಥೆಂಥ ಟೀಕೆಗಳಿಗೆ ಸುಮ್ಮನಿರುವ ಮಾಬ್‌ಗಳು ವ್ಯಂಗ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಬಹುಶಃ ವ್ಯಂಗ ಬೇಗನೇ ತಟ್ಟುತ್ತಿರಬಹುದು, ವಿಮರ್ಶೆಯ ಒಂದು ಬರಹ ಅರ್ಥಮಾಡಿಕೊಳ್ಳುವುದು ಕಷ್ಟವಲ್ಲವೇ.

ಈ ಪಟ್ಟಿ ತುಂಬಾ ಉದ್ದವಿದೆ. ಪತ್ರಕರ್ತರಾದ ರವೀಶ್ ಕುಮಾರ್, ರಾಣಾ ಅಯೂಬ್, ಪುಣ್ಯಪ್ರಸೂನ್ ವಾಜಪಯಿ ಮುಂತಾದವರು ಆನ್‌ಲೈನ್ ಟ್ರಾಲ್‌ನಲ್ಲಿ ಎದುರಿಸುವ ಮಾನಸಿಕ ದಾಳಿ ಅಷ್ಟಿಷ್ಟಿಲ್ಲ. ಟ್ರಾಲ್‌ಗಳ ಈ ದಾಳಿಗೆ ಬೇಸತ್ತು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದನ್ನು ಬಿಟ್ಟಿದ್ದಾರೆ. ಇನ್ನೂ ಕೆಲವರು ಗಟ್ಟಿಯಾಗಿ ಎದುರಿಸುತ್ತಿದ್ದಾರೆ.

ಧ್ವನಿಗಳನ್ನು ಹತ್ತಿಕ್ಕುವ ಕೆಲಸವನ್ನು ಈ ಮಾಬ್‌ಗಳಿಗೆ ಮಾತ್ರ ಬಿಟ್ಟಿಲ್ಲ. ರೈತ ಚಳವಳಿಯ ಬಗ್ಗೆ ಒಂದು ವೆಬಿನಾರ್ ಮಾಡಿದಾಗ, ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಕ್ಕಾಗಿ, ಬೆಂಗಳೂರಿನ ಪರಿಸರವಾದಿ 21 ವಯಸ್ಸಿನ ದಿಶಾ ರವಿಯನ್ನು ಬಂಧಿಸಲಾಯಿತು. ದೆಹಲಿ ಪೊಲೀಸರು ಅವಳ ಮೇಲೆ ದೇಶದ್ರೋಹದ ಪ್ರಕರಣ ಜಡಿದರು. ಸಿಎಎ ವಿರೋಧಿ ಆಂದೋಲನ ನಡೆಯುತ್ತಿದ್ದ ಸಮಯದಲ್ಲಿ ನಟಿ ದೀಪಿಕಾ ಪಡುಕೊಣೆ ದೆಹಲಿಯ ಜೆಎನ್‌ಯುನಲ್ಲಿ ನಡೆಯುತ್ತಿದ್ದ ಒಂದು ಸಭೆಗೆ ಹಾಜರಾದರು ಎಂಬ ಕಾರಣಕ್ಕೆ ಅವರ ಮೇಲೆ ಆರೋಪ ಹೊರಿಸಿ, ವಿಚಾರಣೆ ನಡೆಸಿ ಪೀಡಿಸಲಾಯಿತು. ಇಂಥದ್ದೇನಾದರೂ ಮಾಡೀರಿ ಜೋಕೆ ಎಂಬ ಸಂದೇಶವನ್ನು ರವಾನಿಸಲಾಯಿತು. ಇನ್ನೂ ಹಲವಾರು ಕಾರ್ಯಕರ್ತರನ್ನು ಗಂಭೀರ ಪ್ರಕರಣ ದಾಖಲಿಸಿ, ವಿಚಾರಣೆ ಕೂಡ ಶುರು ಮಾಡದೇ ಬಂಧನದಲ್ಲಿಟ್ಟು ಕೊಳೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಆದರೆ ಈಗ ನಾವು ಚರ್ಚಿಸುತ್ತಿರುವುದು ಈ ಮಾಬ್‌ಗಳ ಬಗ್ಗೆ. ಮುಂದೊಂದು ದಿನ ಮಾಬ್‌ಗಳೇ ನಮ್ಮನ್ನು ರೂಲ್ ಮಾಡಲಿದ್ದಾರೆಯೇ? ಬೆಂಗಳೂರಿನಲ್ಲಿ ಮುನವ್ವರ್ ಫಾರೂಕಿಯ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಗುಜರಾತಿನ ಹಲವಾರು ಪಟ್ಟಣಗಳಲ್ಲಿ ಬೀದಿಬದಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ ಎಂದು ಫರ್ಮಾನು ಹೊರಡಿಸಲಾಗಿದೆ. ಹಬ್ಬದ ದಿನಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿದೆ. ವಿಧಾನಸೌಧದ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಚರ್ಚ್‌ಗಳು ಪ್ರಾರ್ಥನೆ ನಡೆಸಬಾರದೆಂದು ಪೊಲೀಸರು ಸೂಚಿಸಿದ್ದರು, ಯಾರದೋ ಜನ್ಮದಿನದಂದು ಮಾಂಸಾಹಾರ ಮಾರಾಟ ಮಾಡಬಾರದೆಂದು ಜಿಲ್ಲಾಧಿಕಾರಿಗಳಿಂದ ಸುತ್ತೋಲೆ ಹೋಗುತ್ತಿವೆ. ಗುಡಗಾಂವ ಅಂದರೆ ಈಗಿನ ಗುರುಗ್ರಾಮದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವಂತಿಲ್ಲ ಎಂದು ಆದೇಶ ಹೊರಡಿಸಲಾಯಿತು. ಅಂದಹಾಗೆ, ಕಳೆದ ತಿಂಗಳು, ಪತ್ರಕರ್ತರ ಒಂದು ಪ್ರಶ್ನೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ’ಸಮಾಜದಲ್ಲಿ ಹಲವಾರು ಭಾವನೆಗಳಿವೆ, ಆ ಭಾವನೆಗಳಿಗೆ ಧಕ್ಕೆ ಬರದ ರೀತಿಯಲ್ಲಿ ನಡಕೊಳ್ಳಬೇಕಾಗ್ತದೆ, ಆ ಭಾವನೆಗಳಿಗೆ ಧಕ್ಕೆಯಾದಾಗ ಆಕ್ಷನ್ ರಿಯಾಕ್ಷನ್ ಆಗ್ತವೆ..’ ಎಂದು ಮಾತನಾಡಿ, ಸಮಾಜದಲ್ಲಿ ನೈತಿಕತೆ ಇಲ್ಲದಿದ್ದರೆ ಹೇಗೆ ಎಂದರು. ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ’ದೇಶದಲ್ಲಿ ಹಿಂದೂಗಳ ಬೆಳವಣಿಗೆಯ ವಿರುದ್ಧ ಅಸಹನೆ ಬೆಳೆಯುತ್ತಿದೆ, ಅದು ನಮ್ಮ ಸಹನೆಯ ದೌರ್ಭಾಗ್ಯ’ ಎಂದು ’ಇದಕ್ಕೆ ಸರಕಾರ ಎಷ್ಟು ಸಾಧ್ಯವೋ ಅಷ್ಟು ಕಡಿವಾಣ ಹಾಕಬೇಕು, ಹಾಗೆಂದು ಜನರ ವಿರೋಧಗಳನ್ನು ನೇರವಾಗಿ ಕಾನೂನು ಮೂಲಕ ಹತ್ತಿಕ್ಕುವುದು ಸರಿಯಲ್ಲ’ ಎಂದರು. ನಿರ್ದಿಷ್ಟವಾಗಿ ಏನನ್ನು ಹತ್ತಿಕ್ಕಬೇಕು, ಯಾವ ಅಸಹನೆ, ಯಾಕೆ ಹತ್ತಿಕ್ಕಬೇಕು, ಸರಕಾರವಲ್ಲದಿದ್ದರೆ ಮತ್ಯಾರು ಹತ್ತಿಕ್ಕಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಲಿಲ್ಲ, ಆ ಪ್ರಶ್ನೆ ಕೇಳಲು ಅವಕಾಶವೂ ಇಲ್ಲದೇ ಇರಬಹುದು.

ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ಇದು ಕೇವಲ ಧಾರ್ಮಿಕತೆ ಮತ್ತು ಆಹಾರಕ್ಕೆ ಮೀಸಲಾಗಿಲ್ಲ, ಜೀವನಶೈಲಿಗೂ ವಿರೋಧ, ನಿರ್ಬಂಧನೆಗಳು ಕಾಣಿಸಿಕೊಂಡಿವೆ. ಮಂಗಳೂರಿನ ಪಬ್ ದಾಳಿ ಮರೆಯಲು ಸಾಧ್ಯವೇ? ಮಹಾರಾಷ್ಟ್ರದ ಮತ್ತು ಕರ್ನಾಟಕದ ಕೆಲವು ಚಿಂತಕರನ್ನು ಅವರ ಚಿಂತನೆಗಳ ಕಾರಣಕ್ಕಾಗಿಯೇ ಕೊಲೆ ಮಾಡಲಾಯಿತು? ಹೌದು, ಇವೆಲ್ಲವುಗಳನ್ನೂ ಒಂದು ಮಾಬ್ ಸೇರಿಯೇ ಮಾಡಿತು ಎಂದು ಹೇಳಲು ಆಗುವುದಿಲ್ಲ. ಆದರೆ ಅಲ್ಲಿ ಚಲಾವಣೆ ಆಗಿದ್ದು ಮಾಬ್‌ಗಳ ಉದ್ದೇಶ. ತಮಗಿಷ್ಟವಿಲ್ಲದ್ದು ಯಾವುದೂ ಆಗಬಾರದು ಎಂಬುದೇ ಇವರ ಆಶಯ; ಅಂದಹಾಗೆ ಯಾರಿವರು? ಸಾಧಾರಣವಾಗಿ ಅಂತಹ ಆಶಯ ಎಲ್ಲರಲ್ಲಿಯೂ ಇರುತ್ತವೆ, ಆದರೆ ಎಲ್ಲರ ಉದ್ದೇಶವೂ ಈಡೇರುವುದಿಲ್ಲ. ಇವರುಗಳ ಉದ್ದೇಶ ಈಡೇರುವುದು ಶುರುವಾಗಿದ್ದು ಇತ್ತೀಚೆಗೆಯೇ. ಜನ ಹೀಗರಬೇಕು ಹಾಗಿರಬೇಕು ಎಂಬ ಇವರ ಗುಪ್ತ ಆಸೆಗೆ ರೆಕ್ಕೆಪುಕ್ಕ ಬಂದಿವೆ. ಅವುಗಳನ್ನು ಈಗ ಚಲಾಯಿಸುತ್ತಿದ್ದಾರೆ. ಜನರು ಮಾತನಾಡುವುದು ಇವರಿಗೆ ಇಷ್ಟವಾಗುವುದಿಲ್ಲ, ಪ್ರಶ್ನೆ ಕೇಳಿದರೆ ಇವರಿಗೆ ಇಷ್ಟವಾಗುವುದಿಲ್ಲ, ಅವರಿಗೆ ಬೇಕಾದ ಆಹಾರ ಸೇವಿಸಿದರೂ ಇವರಿಗೆ ಇಷ್ಟವಾಗುವುದಿಲ್ಲ, ಒಬ್ಬರಿಗೆ ಪುಸ್ತಕ ಓದಿದರೆ ಆಗುವುದಿಲ್ಲ, ತಮ್ಮತಮ್ಮ ಬಾಳಸಂಗಾತಿಯ ಆಯ್ಕೆ ಮಾಡುವುದು ಇವರು ಸಹಿಸುವುದಿಲ್ಲ, ಇವರಿಗೆ ಇಷ್ಟವಾಗದ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ, ಎಲ್ಲವೂ ತಮ್ಮ ಮೂಗಿನ ನೇರಕ್ಕೆ ನಡೆಯಬೇಕು, ಎಲ್ಲವೂ ತಮ್ಮ ನಿಯಂತ್ರಣದಲ್ಲಿರಬೇಕು ಎಂಬುದು ಇವರ ಮಹದಾಸೆ. ಲೈಂಗಿಕ ಸ್ವಾತಂತ್ರ್ಯ ಬಿಡಿ, ಲೈಂಗಿಕತೆಯ ಮಾತೂ ಇವರಿಗೆ ವರ್ಜ್ಯ. ಇವರೆಂದೂ ತಮ್ಮ ಉದ್ದೇಶಗಳಿಗೆ, ತಮ್ಮ ದ್ವೇಷಕ್ಕೆ ನಿಜವಾದ ಕಾರಣ ಏನು ಎಂದು ಕೇಳಿಕೊಳ್ಳುವುದಿಲ್ಲ. ತಾವೂ ಸ್ವತಂತ್ರರಾಗಿರಬಹುದು ಎಂಬುದು ಇವರಿಗೆ ಹೊಳೆಯುವುದಿಲ್ಲ, ತಮ್ಮೊಳಗೆ ಹುದುಗಿರುವ ಅಸೂಯೆಯನ್ನು ಇವರು ಬಗೆಹರಿಸುವುದಿಲ್ಲ. ವೈವಿಧ್ಯತೆ ಇವರಿಗೆ ತಿಳಿಯುವುದಿಲ್ಲ, ಹಿಂಸೆ ಉನ್ಮಾದ ನೀಡುತ್ತೆ.

ಈಗ ಇವರಿಗೆ ಅಂದರೆ ಮಾಬ್‌ಗಳಿಗೆ ನಿಧಾನವಾಗಿ ಹೆಚ್ಚೆಚ್ಚು ಅಧಿಕಾರ ಸಿಗುತ್ತಿದೆ. ಬೆಂಗಳೂರಿನಂತಹ, ಸಹಿಷ್ಣುತೆಗೆ ಹೆಸರಾದ, ಬಲವಾದ ಪ್ರಗತಿಪರ, ಲೇಖಕರ, ಚಿಂತಕರ, ಹೋರಾಟಗಾರರ ತವರಾದ ಈ ಊರಿನಲ್ಲಿಯೂ ಈ ಮಾಬ್‌ಗಳು ಹೇಳಿದಂತೆ ಅಧಿಕಾರಶಾಹಿ ವರ್ತಿಸುವುದು ಕಾಣಿಸುತ್ತಿದೆ. ಎಚ್ಚೆತ್ತುಕೊಳ್ಳುವರೆ ನಮ್ಮ ಬೆಂಗಳೂರಿಗರು? ಸಮಸ್ಯೆಯ ಮೂಲಕ್ಕೆ ಹೋಗಿ, ಅದನ್ನು ಬಗೆಹರಿಸುವ ಪ್ರಯತ್ನ ಮಾಡುವರೆ? ಬೆಂಗಳೂರಿನ ವೈವಿಧ್ಯತೆಯನ್ನು ಕಾಪಾಡುವ ದೀರ್ಘ ಕಾಲಿಕ ಮಿಷನ್ ಕೈಗೊತ್ತಿಕೊಳ್ಳುವರೆ? ಪ್ರಯತ್ನಗಳಂತೂ ನಡೆದಿವೆ. ಮುಂದೇನಾಗುತ್ತೆ ನೋಡಬೇಕು, ನಮ್ಮ ಜವಾಬ್ದಾರಿ ಏನೆಂದು ಗುರುತಿಸಿಕೊಂಡು, ನಿಭಾಯಿಸುವುದು ಎಲ್ಲರ ಕರ್ತವ್ಯ.

ಪೋಸ್ಟ್‌ಸ್ಕ್ರಿಪ್ಟ್: ಒಬ್ಬ ವಿಜ್ಞಾನಿ ಅಧಿಕಾರಕ್ಕೆ ಬಂದರೆ ವೈಜ್ಞಾನಿಕ ವಲಯದವರು ಸಹಜವಾಗಿಯೇ ಖುಷಿಯಾಗುತ್ತಾರೆ, ವೈಜ್ಞಾನಿಕ ಪ್ರತಿಪಾದನೆಗಳನ್ನು ಗಟ್ಟಿಯಾಗಿ ಮಾಡತೊಡಗುತ್ತಾರೆ, ಒಬ್ಬ ನಿಜವಾದ ಕಲಾವಿದ, ಲೇಖಕಿ ಅಧಿಕಾರಕ್ಕೆ ಬಂದರೆ, ಆ ಕ್ಷೇತ್ರದವರಿಗೆ ಬಲತುಂಬಿದಂತಾಗುತ್ತೆ, ತಮ್ಮ ಕೆಲಸಗಳನ್ನು ಹುರುಪಿನಿಂದ ಮಾಡತೊಡಗುತ್ತಾರೆ. ಇದು ಸಹಜ ಪ್ರಕ್ರಿಯೆ. ಇಂದು ಈ ಮಾಬ್‌ಗೆ ಹುರುಪು ತುಂಬಲಾಗಿದೆ; ಕಾರಣ ಸ್ಪಷ್ಟ. ಇದನ್ನು ಎದುರಿಸಲು ಹೊಸದೊಂದು ರಾಜಕೀಯ ಶಕ್ತಿ ಉದಯವಾಗಲಿದೆಯೇ ಎಂಬುದೇ
ನಮ್ಮೆದುರಿಗಿರುವ ಪ್ರಶ್ನೆ.


  • ರಾಜಶೇಖರ ಅಕ್ಕಿ, ಸಿನಿಮಾ ಉತ್ಸಾಹಿ ಮತ್ತು ಸಾಮಾಜಿಕ ಕಾರ್ಯಕರ್ತ

ಇದನ್ನೂ ಓದಿ: ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...