Homeಮುಖಪುಟನಮ್ಮ ನರೇಟಿವ್ ನಮ್ಮನ್ನು ಕುರುಡಾಗಿಸಬಲ್ಲದೇ?

ನಮ್ಮ ನರೇಟಿವ್ ನಮ್ಮನ್ನು ಕುರುಡಾಗಿಸಬಲ್ಲದೇ?

- Advertisement -
- Advertisement -

ಇದನ್ನು ಬರೆಯಲು ಶುರು ಮಾಡಿದಾಗ ಬಂದ ಮೊದಲ ಪ್ರಶ್ನೆ; ನರೇಟಿವ್ ಎಂದರೇನು?
ಕನ್ನಡದಲ್ಲಿ ಇದಕ್ಕೆ ಸಂಕಥನ, ಕಥನ ಕೊಗೆತ, ನಿರೂಪಣೆ, ಆಖ್ಯಾನ ಎಂಬಿತ್ಯಾದಿ ಪದಗಳನ್ನು ಬಳಸಲಾಗುತ್ತದೆ. ಈ ನರೇಟಿವ್ ಒಂದು ಘಟನೆಯ ಬಗ್ಗೆ ಆಗಿರಬಹುದು, ಒಂದು ಕಥೆಯ ಬಗ್ಗೆ ಆಗಿರಬಹುದು, ಸಾಮಾಜಿಕ ಬೆಳವಣಿಗೆಯ ಬಗ್ಗೆ ಆಗಿರಬಹುದು ಅಥವಾ ಒಬ್ಬ ವ್ಯಕ್ತಿ ಅಥವಾ ವಸ್ತು ಬಗ್ಗೆಯೂ ಆಗಿರಬಹುದು. ಆಯಾ ವಿಷಯದ ಸುತ್ತ ನಾವು ಹೇಗೆಲ್ಲ ಚಿಂತಿಸುತ್ತೇವೆ, ಮಾತನಾಡುತ್ತೇವೆ, ಆ ಒಂದು ಬೆಳವಣಿಗೆ, ಅಥವಾ ವಾಸ್ತವದ ಬಗ್ಗೆ ನಾವು ಯಾವ ರೀತಿಯಲ್ಲಿ ಏನನ್ನು ಪ್ರತಿಪಾದಿಸುತ್ತೇವೆ ಎಂಬುದಕ್ಕೆ ನರೇಟಿವ್ ಎಂಬ ಪದ ಬಳಸಬಹುದು.

ಈಗ ನಾವು ಮಾತನಾಡುತ್ತಿರುವುದು ಸಮಾಜದಲ್ಲಿಯ ವಿದ್ಯಮಾನಗಳು, ಬದಲಾವಣೆಗಳು ಅದಕ್ಕಿಂತ ಮುಖ್ಯವಾಗಿ ಮುಂದೇನು ಎಂಬುದರ ಬಗ್ಗೆ. ದೇಶ ಸಂಕಷ್ಟದ ಸಮಯದಲ್ಲಿ ಹಾದುಹೋಗುತ್ತಿರುವಾಗ, ಮಾನವ ಸಂಬಂಧಗಳೂ ಒಂದು ರೀತಿಯ ಟ್ರಾನ್ಸಿಷನ್‌ನಲ್ಲಿ ಹಾದುಹೋಗುತ್ತಿರುವಾಗ, ಭವಿಷ್ಯದ ಬಗ್ಗೆ ನಮ್ಮ ಪರಿಕಲ್ಪನೆ ಹಾಗೂ ಅದನ್ನು ನನಸಾಗಿಸಲು ಅಥವಾ ಮುಂಬರಬಹುದಾದ ಇನ್ನೂ ಹೆಚ್ಚಿನ ವಿಪತ್ತುಗಳನ್ನು ತಡೆಯಲು ಚಾಲ್ತಿಯಲ್ಲಿರುವ ನರೇಟಿವ್‌ಗಳ ಬಗ್ಗೆ. ಸಹಜವಾಗಿಯೇ ಹಲವಾರು ನರೇಟಿವ್‌ಗಳು ಚಾಲ್ತಿಯಲ್ಲಿವೆ, ಇರಬೇಕು ಕೂಡ. ಆದರೆ ಸಮಸ್ಯೆ ಇರುವುದು, ನಾವು ನಮ್ಮ ನಂಬಿಕೆಯನ್ನೇ ಅಂತಿಮ ಸತ್ಯ ಎಂದುಕೊಳ್ಳುವುದು, ನಮ್ಮ ನಂಬಿಕೆಗಳು ಕೇವಲ ಒಂದು ನರೇಟಿವ್ ಆಗಿರಬಹುದು ಎಂಬ ಪ್ರಜ್ಞೆ ಇಲ್ಲದೇ ಇರುವುದು.

ಇನ್ನು ನರೇಟಿವ್‌ಅನ್ನು ಬಯಾಸ್ ಅಂದರೆ ನಮ್ಮ ಪಕ್ಷಪಾತದ ನಿಲುವುಗಳಿಂದ ಇರುವ ವ್ಯತ್ಯಾಸ ಸ್ಪಷ್ಟಪಡಿಸಿಕೊಳ್ಳಬೇಕಿದೆ. ಬಯಾಸ್‌ಗಳು ಸುಳ್ಳು ಅಥವಾ ತಪ್ಪು ಮಾಹಿತಿಯಿಂದ ಉಂಟಾಗುವ ಅಭಿಪ್ರಾಯಗಳು. ಕೆಲವೊಮ್ಮೆ ದುರುದ್ದೇಶಪೂರಿತವೂ ಆಗಿರಬಹುದಾಗಿರುವವು. “ಒಂದು ಕೋಮಿನವರು ಹೀಗಿದ್ದಾರೆ/ಹಾಗಿದ್ದಾರೆ,” “ಒಂದು ಜಾತಿಯ ಜನ ಹೀಗೆ/ಹಾಗೆ,” “ಮಹಿಳೆಯರಿಗೆ ಅವೆಲ್ಲಾ ತಿಳಿಯುವುದಿಲ್ಲ” ಇತ್ಯಾದಿಗಳೆಲ್ಲ ಬಯಾಸ್‌ಗಳೇ ಹೊರತು ನರೇಟಿವ್‌ಗಳಲ್ಲ. ಹೌದು ಕೆಲವು ಸಲ ಇವೆರಡರ ನಡುವಿನ ಗೆರೆ ಅಸ್ಪಷ್ಟವಾಗಿಯೂ ಇರಬಹುದು. ಈ ಲೇಖನ ಬಯಾಸ್‌ಗಳ ಬಗ್ಗೆ ಅಲ್ಲ.

ಈ ನರೇಟಿವ್‌ನ ಕೆಲವು ಉದಾಹರಣೆಗಳನ್ನು ನೋಡುವ.

ಪ್ರಾಣಿ ಪ್ರೀತಿ. ’ಎನಿಡೇ ಐ ಲೈಕ್ ಎನಿಮಲ್ಸ್ ಮೋರ್ ದ್ಯಾನ್ ಹ್ಯೂಮನ್ಸ್’. ಇಂತಹ ಹೇಳಿಕೆಗಳು ಅನೇಕರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ನಲ್ಲಿ ಕಾಣಸಿಗುತ್ತವೆ. ಪ್ರಾಣಿಗಳು ಅನುಭವಿಸುತ್ತಿರುವ ಹಿಂಸೆ, ಅವುಗಳ ಮೇಲಿನ ಮಾನಸಿಕ ಒತ್ತಡ, ಅವುಗಳ ಖಿನ್ನತೆ, ಈ ಪ್ರಾಣಿಗಳು ಎಷ್ಟೆಲ್ಲ ಪ್ರೀತಿ ತೋರಿಸಬಹುದು, ಮಾನವನಿಗೆ ಎಲ್ಲಕ್ಕಿಂತ ಒಳ್ಳೆಯ ಸ್ನೇಹಿತರಾಗಬಹುದು, ಎಷ್ಟೆಲ್ಲ ಇಮೋಷನಲ್ ಇಂಟೆಲಿಜೆನ್ಸ್ ಈ ಪ್ರಾಣಿಗಳು ಹೊಂದಿರಬಹುದು ಎಂಬ ಈ ವಿಷಯಗಳನ್ನು ಸಮಾಜದ ಒಂದು ಭಾಗ ಸದಾ ಚಿಂತಿಸುತ್ತಿರುತ್ತದೆ, ಮಾತನಾಡುತ್ತಿರುತ್ತದೆ. ಡೆಕ್ಕನ್ ಹೆರಾಲ್ಡ್‌ನಲ್ಲಿ ಸತತವಾಗಿ ಈ ’ಪ್ರೀತಿ’ಯ ಪ್ರಾಣಿಗಳ ಬಗ್ಗೆ, ಅವುಗಳ ಆರೈಕೆಗಳ ಬಗ್ಗೆ ಲೇಖನಗಳನ್ನು ಕಾಣಬಹುದು.

’ಪಾಲಿಟಿಕ್ಸ್ ಎಂಬುದು ತುಂಬಾ ಕೆಟ್ಟದ್ದು ಕಣೋ; ದೂರ ಇರಬೇಕು ಅದರಿಂದ.’ ನಮಗೆಲ್ಲ ಪದೇಪದೇ ಕೇಳಿಸುವ ಮಾತು.

’ನಮ್ಮ ಕಾಲದಲ್ಲಿ ಹಿಂಗಿರ್ತಿದ್ದಿಲ್ಲ. ಹಿಂದೆ ಸಂಬಂಧಗಳು ಎಷ್ಟು ಗಟ್ಟಿಯಾಗಿರ್ತಿದ್ವು. ಈಗ ಎಲ್ಲ ಹಳಸಿಹೋಗಿವೆ.’

(ಇದೇ ರೀತಿ ಮುಂಚೆ ಎಲ್ಲರೂ ಆರೋಗ್ಯವಂತರಾಗಿರ್ತಿದ್ರು, ರೋಗಗಳೆಲ್ಲ ಈಗಲೇ ಹುಟ್ಟಿಕೊಂಡಿದ್ದವು ಎಂಬ ಮಾತುಗಳೂ ಕೇಳಿಬರುತ್ತವೆ. ಆದರೆ ಅದು ಕೇವಲ ತಪ್ಪು ಮಾಹಿತಿಯಿಂದ ಹುಟ್ಟುವ ಅಭಿಪ್ರಾಯವಾಗಿದ್ದು, ಇಲ್ಲಿ ಅನ್ವಯವಾಗುವುದಿಲ್ಲ.)

ಸಮಾಜದಲ್ಲಿ ಬದಲಾವಣೆ ತರುವ ವಿಷಯ ಬಂದಾಗ ಕಂಡುಬರುವ ನರೇಟಿವ್‌ಗಳು;

’ಸಮಾಜದಲ್ಲಿ ಏನೇ ಬದಲಾವಣೆ ತರಬೇಕಾದರೂ ತಳಮಟ್ಟದಿಂದ ಶುರು ಮಾಡಬೇಕು; ಬೆಂಗಳೂರಿನಂತಹ ಕೇಂದ್ರಸ್ಥಾನದಲ್ಲಿದ್ದುಕೊಂಡು ಏನನ್ನೂ ಮಾಡಲು ಆಗುವುದಿಲ್ಲ, ಮೊದಲು ಹಳ್ಳಿಗಳಿಗೆ ಹೋಗಿ ಅಲ್ಲಿಂದ ಶುರು ಮಾಡಿ. ಈ ಲೇಖನ, ಕಥೆ ಬರೆಯೋದರಿಂದ ಏನೂ ಆಗುವುದಿಲ್ಲ, ತಳಮಟ್ಟದಲ್ಲಿ ಕೆಲಸ ಶುರು ಮಾಡಿದರೆ ಮಾತ್ರ ಏನಾದರೂ ಆಗಬಹುದು.’

’ಸಮಾಜದಲ್ಲಿ ಬದಲಾವಣೆ ತರಬೇಕಾದರೆ ರಾಜಕೀಯ ಮಾಡಬೇಕೆಂದಿಲ್ಲ, ಮನುಷ್ಯ ತನ್ನೊಳಗಿನ ದುಷ್ಟತೆಯನ್ನು ನಿವಾರಿಸಿದರೆ ಸಾಕು. ಬದಲಾವಣೆ ತರಬೇಕಾಗಿರುವುದು ನಮ್ಮೊಳಗೆ, ಅದಾಗ ರಾಜಕೀಯ ತಂತಾನೇ ಬದಲಾಗುತ್ತೆ. ಕಲೆಯೊಂದೇ ನಮ್ಮ ಸಮಾಜವನ್ನು ಬದಲಿಸಬಹುದು, ಸರಿದಾರಿಗೆ ತರಬಲ್ಲದು.’

’ದೇಶದಲ್ಲಿ ಜಾತಿವ್ಯವಸ್ಥೆ ಗಟ್ಟಿಗೊಳ್ಳುತಲೇ ಇದೆ. ನಗರೀಕರಣದಿಂದ (ಜಾಗತೀಕರಣದಿಂದ ಆದ ಬದಲಾವಣೆಗಳಿಂದಲೂ) ಜಾತಿವ್ಯವಸ್ಥೆಗೆ ಯಾವುದೇ ಪೆಟ್ಟು ಬಿದ್ದಿಲ್ಲ. ಈ ಜಾತಿ ಎಂಬುದು ಹೊಸ ರೂಪ ಪಡೆದುಕೊಳ್ಳುತ್ತಿದೆಯೋ ಹೊರತು ದುರ್ಬಲಗೊಳ್ಳುತ್ತಿಲ್ಲ.’ ಇದಕ್ಕೆ ವಿರುದ್ಧವಾಗಿ, ಮುಂಬಯಿಯಲ್ಲಿರುವ ಕರ್ನಾಟಕದ ಪ್ರಸಿದ್ಧ ಲೇಖಕರೊಬ್ಬರು ’ಮುಂಬಯಿಯಲ್ಲಿ ಜಾತಿ ಎಂಬುದು ಕಾಣಿಸುವುದೇ ಇಲ್ಲ’ ಎಂದು ಹೇಳುತ್ತಿರುತ್ತಾರೆ. ಅದರೊಂದಿಗೆ ಅನೇಕರು ಸಮಾಜದಲ್ಲಿ ಜಾತಿ ಎಂಬುದು ಗಟ್ಟಿಯಾಗಿಯೇ ಇದ್ದರೂ, ಆ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎಂದು ವಾದಿಸುವವರೂ ಇದ್ದಾರೆ.

’ಸಮಾಜದಲ್ಲಿ ಯಾವುದೇ ಬದಲಾವಣೆ ಬರುವುದು ಮೂಲತಃವಾಗಿ ರಾಜಕೀಯ ಪಕ್ಷಗಳಿಂದ ಮಾತ್ರ, ಅಧಿಕಾರದಿಂದ ಮಾತ್ರ. ಹಾಗಾಗಿ ಈ ರಾಜಕೀಯ ಪಕ್ಷಗಳನ್ನು, ಅಲ್ಲಿಯ ಜನರನ್ನು, ಅವರ ವಿಚಾರಗಳನ್ನು ಪ್ರಭಾವಿಸುವುದು ನಾವು ಮಾಡಬೇಕಿರುವ ಕೆಲಸ.’

ಹಾಗೂ ದೇಶವು ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ಅಡಿಯಲ್ಲಿ ಸಿಕ್ಕಿ ನಲುಗುತ್ತಿದೆ ಎಂದು ನಂಬಿದವರ ಕೆಲವರು ಮುಂದಿಡುವ ಒಂದು ನರೇಟಿವ್ ಕಾಂಗ್ರೆಸ್ ಪಕ್ಷದ ಬಗ್ಗೆ. ದೇಶ ಈ ದಾಳಿಯನ್ನು ಎದುರಿಸಬೇಕಾದರೆ ನಮ್ಮ ಕಡೆ ಇರುವ ಒಂದೇ ಒಂದು ದಾರಿ ಕಾಂಗ್ರೆಸ್ ಪಕ್ಷ. ನಮ್ಮಲ್ಲಿ ಸಕ್ರಿಯವಾಗಿರುವ ಹೆಚ್ಚಿನ ಜಾತ್ಯತೀತರು, ಸಂವಿಧಾನದಲ್ಲಿ ಬಲವಾದ ನಂಬಿಕೆಯಿಟ್ಟುಕೊಂಡವರು, ಪ್ರಗತಿಪರರು ಈ ಆಸೆ ಇಟ್ಟುಕೊಂಡಿದ್ದಾರೆ, ಕಾಂಗ್ರೆಸ್‌ಗೆ ಈ ಶಕ್ತಿ ಇದೆ ಎಂದು ಪ್ರತಿಪಾದಿಸುತ್ತಾರೆ. ಇಷ್ಟೆಲ್ಲ ಸೋಲನ್ನುಂಡರೂ ಪ್ರತಿ ಚುನಾವಣೆಯಲ್ಲಿ ಸುಮಾರು 25% ಮತಗಳನ್ನು ಪಡೆಯುವ ಕಾಂಗ್ರೆಸ್ ಪಕ್ಷದ ಮೇಲಿನ ಈ ನಿರೀಕ್ಷೆಗೆ ಆಧಾರಗಳೂ ಇವೆ.

ಇನ್ನೂ ಕೆಲವರು ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಸಮಯ ಬಂದಿದೆಯೆಂದು, ಈಗಿರುವ ರಾಜಕೀಯ ಪಕ್ಷಗಳು ರಾಜಕೀಯ ಪಕ್ಷಗಳೇ ಅಲ್ಲ, ಇವುಗಳೆಲ್ಲ ಕೆಲವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಇರುವ ಬಣಗಳು ಎಂದು ವಾದಿಸುತ್ತಾರೆ. ಜನರು ಕಾನ್ಷಿಯಸ್ ಆಗಿ ಅಥವಾ ಅನ್‌ಕಾನ್ಷಿಯಸ್ ಆಗಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ರಾಜಕೀಯ ಶಕ್ತಿಗಾಗಿ ಕಾಯುತ್ತಿದ್ದಾರೆ. ಈ ಜನರೇ ಸೇರಿ ಒಂದು ರಾಜಕೀಯ ಶಕ್ತಿಯನ್ನು ಹುಟ್ಟುಹಾಕಬಲ್ಲರು ಎಂದು ಗಟ್ಟಿಯಾಗಿ ವಾದಿಸುತ್ತಾರೆ.

ಈ ಮೇಲಿನ ನರೇಟಿವ್‌ಗೆ ವಿರುದ್ಧವಾಗಿ ಇರುವ ನರೇಟಿವ್ ಅತ್ಯಂತ ಬಲವಾದ ನರೇಟಿವ್ ಆಗಿದೆ. ಅದು;

ಈ ದೇಶದಲ್ಲಿ ಏನನ್ನೂ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಭಾರತವೆಂಬುದು ಒಂದು ಕಳಪೆ ದೇಶ, ಇಲ್ಲಿಯ ಜನರು ಮೂರ್ಖರು, ದುಷ್ಟರು, ಜಾತಿಗ್ರಸ್ತರು, ಇಲ್ಲಿ ಏನಾದರೂ ಆಗಬಹುದು ಎಂದು ನಿರೀಕ್ಷಿಸುವುದೇ ಅತ್ಯಂತ ದೊಡ್ಡ ಮೂರ್ಖತನ. ಈ ಹಿಂದೆ ಆದ ಬೆಳವಣಿಗೆಗಳನ್ನು, ಬದಲಾವಣೆಗಳ ಉದಾಹರಣೆಗಳನ್ನು ಹೆಸರಿಸಿದಾಗ, ಜಗತ್ತಿನ ಇತರ ಭಾಗಗಳಲ್ಲಿ ಆದ ಕ್ರಾಂತಿಯ ಬಗ್ಗೆ ಬೊಟ್ಟು ಮಾಡಿ, ಅವುಗಳೊಂದಿಗೆ ಹೋಲಿಸಿ, ಈ ದೇಶದಲ್ಲಿ ಆಗಿದ್ದೆಲ್ಲ ಜೋಕು ಎನ್ನುತ್ತಾರೆ. ನೆನಪಿಡಿ, ಇವರ್‍ಯಾರೂ ಇತಿಹಾಸ ಗೊತ್ತಿಲ್ಲದ ಅಥವಾ ದೇಶದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಅರಿವಿಲ್ಲದೇ ಇರುವ ಜನರಲ್ಲ. ಎಲ್ಲಾ ತಿಳಿದುಕೊಂಡವರೆ. ಹಾಗೂ ಇವರ ಸಂಖ್ಯೆಯೂ ಗಣನೀಯವಾಗಿದೆ ಹಾಗೂ ಜನರನ್ನು, ಸಮಾಜವನ್ನು ಪ್ರಭಾವಿಸುವ ಸ್ಥಾನದಲ್ಲಿ ಇರುವವರು ಈ ಗುಂಪಿನಲ್ಲಿದ್ದಾರೆ.

ಏಕಕಕಾಲಕ್ಕೆ ಇವೆಲ್ಲವೂ ಸುಳ್ಳಾಗಿರಲು ಅಥವಾ ಸತ್ಯವಾಗಿರಲು ಹೇಗೆ ಸಾಧ್ಯ? ಇವೆಲ್ಲವುಗಳಿಗೂ ಆಧಾರವಿದೆಯಲ್ಲವೇ? ಇವುಗಳಿಗೆ ಇತಿಮತಿಗಳಿವೆ ಎಂದಾದರೂ ಒಪ್ಪಿಕೊಳ್ಳಬೇಕಲ್ಲವೇ?

ಮುಂದಿನ ಭಾಗ ಬರೆಯುವುದಕ್ಕೆ ಮುನ್ನ ಒಂದು ಸ್ಪಷ್ಟನೆ ನೀಡಬೇಕಿದೆ; ಈ ಲೇಖಕನೂ ಒಂದು ನರೇಟಿವ್‌ಅನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಾನೆ. ತಾನು ಬಲವಾಗಿ ಪ್ರತಿಪಾದಿಸುವ ವಾದಗಳನ್ನು ಒಂದು ನರೇಟಿವ್ ಎಂದು ಒಪ್ಪಿಕೊಳ್ಳುತ್ತಾನೆ ಎಂಬುದನ್ನು ಬಿಟ್ಟರೆ ಇತರರಿಗಿಂತ ಅಂತಹ ಭಿನ್ನವಾಗೇನಿಲ್ಲ. ಹಾಗೂ ತಾನು ವಿರೋಧಿಸುವ ನರೇಟಿವ್ ಸಮಾಜಕ್ಕೆ ಹೇಗೆ ಮಾರಕ ಎಂಬುದನ್ನು ತಿಳಿಸುವ ನಾಟ್ ಸೊ ಹಿಡನ್ ಅಜೆಂಡಾ ಇಟ್ಟುಕೊಂಡೇ ಈ ಲೇಖನ ಬರೆಯಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.

ಇನ್ನೂ ಹಲವಾರು ನರೇಟಿವ್‌ಗಳು ಚಾಲ್ತಿಯಲ್ಲಿವೆ. ಈ ನರೇಟಿವ್‌ಗಳು ಹೇಗೆ ಪ್ರಚಲಿತವಾದವು, ಹೇಗೆ ಇಷ್ಟು ಆಳವಾಗಿ ಬೇರುಬಿಟ್ಟವು ಎಂಬುದಕ್ಕೆ ಉತ್ತರ ಹುಡುಕುವುದೂ ಸ್ವಾರಸ್ಯಕರವಾಗಿದೆ.

ನಮಗೆ ಮನುಷ್ಯರಿಗಿಂತ ಪ್ರಾಣಿಗಳೇ ಇಷ್ಟ ಎನ್ನುವ ಪ್ರಾಣಿಪ್ರಿಯರು; ಯಾರ ಮನೆಯಲ್ಲೋ, ಸಿನೆಮಾದಲ್ಲೋ, ಮತ್ತೆಲ್ಲೋ ನೋಡಿದ ನಾಯಿ/ಪ್ರಾಣಿ ಪೀತಿಯ ಕಥೆಗಳನ್ನು ನೋಡಿದ ಇವರಿಗೂ ಪ್ರೀತಿ ಉಕ್ಕುವುದನ್ನು ತಡೆಯಲಾಗುವುದಿಲ್ಲ. ಮನುಷ್ಯ ಸಹಜವಾದ ಈ ಪ್ರೀತಿ ಬೆಳೆಯುತ್ತಲೇ ಹೋಗಿ, ಇವರ ಕಣ್ಣಿಗೆ ಪ್ರಾಣಿಗಳನ್ನು ಬಿಟ್ಟರೆ ಮತ್ತೇನೂ ಕಾಣಿಸುವುದಿಲ್ಲ, ಅವರು ಮನೆಯ ಹೊರಗಿದ್ದಾಗಲಾದರೂ ಕಾಣಿಸಬಹುದಾದ ಮನುಷ್ಯರ ಲೋಕಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ, ಅಲ್ಲಿ ಇಲ್ಲಿ ಕಂಡುಬರುವ ನಾಯಿಗಳನ್ನು ನೋಡಿ, ’ಓ ಸೋ ಕ್ಯೂಟ್ ಎಂದು ಉದ್ಗಾರ ತೆಗೆಯುತ್ತಾರೆ. ಅವರ ಇನ್‌ಸ್ಟಾಗ್ರಂ, ಫೇಸ್‌ಬುಕ್ ಮತ್ತಿತರ ಫೀಡ್‌ಗಳಲ್ಲಿ ಕಾಣುವುದು ಈ ಕ್ಯೂಟಾದ ನಾಯಿಬೆಕ್ಕುಗಳೇ, ಅವುಗಳ ಕತೆಗಳೇ. ನಾಯಿಗಳು ಪರಸ್ಪರ ಕಚ್ಚಾಡುವುದು, ಮಕ್ಕಳನ್ನು ಹರಿದು ತಿಂದು ಹಾಕಿರುವ ಸುದ್ದಿಗಳು ಇವರಿಗೇ ತಲುಪುವುದೇ ಇಲ್ಲ. ಸಾಮಾಜಿಕ ಜಾಲತಾಣ ಇವರ ನರೇಟಿವ್‌ಅನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಆದರೆ ಇಲ್ಲಿ ಸಮಸ್ಯೆ ಏನು ಎಂಬ ಪ್ರಶ್ನೆ ಹುಟ್ಟಬಹುದು. ಸಿನೆಮಾಗಳಲ್ಲಿ ಪ್ರಾಣಿ ಹಿಂಸೆ ತಡೆಗಟ್ಟಲು ಎಷ್ಟೊಂದು ನಿರ್ಬಂಧಗಳಿವೆ ನೋಡಿ, ಅವೇ ಕಟ್ಟುನಿಟ್ಟಿನ ನಿಯಮಗಳು ಸಿನೆಮಾದಲ್ಲಿ ಕೆಲಸ ಮಾಡುವ ಮಕ್ಕಳಿಗಾಗಲೀ, ಕಾರ್ಮಿಕರಿಗಾಗಲೀ ಅನ್ವಯಿಸುವುದಿಲ್ಲ. ಈ ಪ್ರಾಣಿಪ್ರಿಯರ ಕಣ್ಣಿಗೆ ಕಾಣುವದೂ ಇಲ್ಲ.

ಭಾರತ ಒಂದು ಕಳಪೆ ದೇಶ ಎಂದು ವಾದಿಸುವವರೂ ಇದೇ ತರದ ಗುಂಪಿಗೆ ಸೇರಿರುತ್ತಾರೆ. ಇದರಲ್ಲಿ ಖಂಡಿತವಾಗಿಯೂ ಒಂದು ಕನ್ಫರ್ಮೇಷನ್ ಬಯಾಸ್ ಕೂಡ ಅಡಗಿದೆ. (ತಮ್ಮ ಅಭಿಪ್ರಾಯಕ್ಕೆ ಪೂರಕವಾದ ಉದಾಹರಣೆಗಳನ್ನು ಮಾತ್ರ ಹೆಕ್ಕಿಹೆಕ್ಕಿ ತೆಗೆಯವುದು). ತಮ್ಮ ಬದುಕನ್ನು ಸುಂದರಗೊಳಿಸಲು ಕಷ್ಟಪಟ್ಟು ದುಡಿದು, ಜೀವನದ ’ಫೈನರ್ ಥಿಂಗ್ಸ್’ಗಳನ್ನು ಎಂಜಾಯ್ ಮಾಡುವ ಇವರು ಒಳ್ಳೆಯವರೆ, ಆದರೆ ತಮ್ಮ ಮೇಲೆಯೂ ಒಂದಿಷ್ಟು ಜವಾಬ್ದಾರಿ ಇದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ, ಅದು ತಮ್ಮ ಕೆಲಸ ಅಲ್ಲ ಎಂದು ತಳ್ಳಿಹಾಕುತ್ತಾರೆ. ಹಾಗೂ ಅವರ ಜೀವನಶೈಲಿಗೆ ಈ ನರೇಟಿವ್ ಮಾತ್ರ ಸೂಟ್ ಆಗುತ್ತೆ ಎಂಬುದನ್ನು ಅವರು ಒಪ್ಪಿಕೊಳ್ಳುವುದಿಲ್ಲ.

ಇನ್ನೂ ಹೆಚ್ಚು ಪ್ರಚಲಿತವಿರುವ ರಾಜಕೀಯವನ್ನೇ ದ್ವೇಷಿಸುವ ನರೇಟಿವ್ ಅನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ. ಬದುಕಲ್ಲಿ ಆಗುವ ಪ್ರತಿಯೊಂದನ್ನು ಪ್ರಭಾವಿಸುವ ರಾಜಕೀಯವನ್ನೇ ದೂರ ಮಾಡಿದರೆ ಏನಾದರೂ ಒಳ್ಳೆಯದನ್ನು ಅಪೇಕ್ಷಿಸುವುದು ಹೇಗೆ ಎಂಬುದಕ್ಕೆ ಉತ್ತರ ಬೇರೆಲ್ಲೋ ಅಡಗಿರುತ್ತೆ. ಮೊದಲನೆಯ ಕಾರಣ ತುಂಬಾ ಸ್ಪಷ್ಟ. ಈ ಮೊದಲ ಕಾರಣ ಇನ್ನಿತರ ಎಲ್ಲಾ ನರೇಟಿವ್‌ಗೂ ಅನ್ವಯಿಸುತ್ತದೆ. ಆ ಮಾತನ್ನು ಪದೇಪದೇ ಕೇಳಿಸುತ್ತಾರೆ. ಸುತ್ತಲೆಲ್ಲ ಈ ಮಾತನ್ನು ಹೇಳುವವರೇ ತುಂಬಿರುತ್ತಾರೆ. ಒಂದು ಸಮಯದ ನಂತರ ಅದನ್ನೇ ನಂಬಲು ಶುರು ಮಾಡುತ್ತಾರೆ ಹಾಗೂ ಆ ವಾದಕ್ಕೆ ಪೂರಕವಾಗುವಂತ ಉದಾಹರಣೆಗಳನ್ನು ಹೆಕ್ಕಿಹೆಕ್ಕಿ ತೆಗೆಯುತ್ತಾರೆ. (ಕನ್ಫರ್ಮೇಷನ್ ಬಯಾಸ್). ಇನ್ನೊಂದು ಕಾರಣ; ರಾಜಕೀಯ ತಮ್ಮ ಬದುಕಿಗೆ ನೇರವಾಗಿ ಪ್ರಭಾವ ಬೀರದೇ ಇರುವ ಸ್ಥಿತಿಗೆ ತಲುಪಿದ್ದೂ ಇರಬಹುದು. ಮೂರನೆಯ ಕಾರಣ; ನಾವು ಎಂದಿಗೂ ಸೇಫ್ ಆಗಿರಬೇಕು ಎಂದು ತೀರ್ಮಾನಿಸಿರುವುದು. ರಾಜಕೀಯ ಎಂದ ಕೂಡಲೇ ತಮ್ಮ ಸುರಕ್ಷಿತ ವಲಯದ ಹೊರಗಿನ ವಲಯ. ಅಲ್ಲಿ ಕಾಲಿಟ್ಟರೆ ಸತ್ತೇ ಹೋಗುವೆ ಎಂಬ ಭಯವೂ ಈ ನರೇಟಿವ್‌ನ್ನು ಗಟ್ಟಿಗೊಳಿಸುತ್ತಲೇ ಇರುತ್ತದೆ. (ಈ ಸೇಫ್ ಇರುವುದರ ಬಗ್ಗೆ ಇನ್ನಷ್ಟು ಆಳವಾಗಿ ಚಿಂತಿಸಬಹುದು, ಅದೊಂದು ದೀರ್ಘ ವಿಷಯವಾದುದರಿಂದ ಇಷ್ಟಕ್ಕೆ ಬಿಡುವ.)

ಇನ್ನು ಈ ನಿರ್ದಿಷ್ಟವಾದ, ರಾಜಕೀಯ ಮಾಡಬೇಕೆಂದು ಪ್ರತಿಪಾದಿಸುತ್ತಿರುವಾಗಲೇ ಚುನಾವಣಾ ರಾಜಕೀಯದಿಂದ ದೂರವಿದ್ದುಕೊಂಡೇ ಕೆಲಸ ಮಾಡಬೇಕೆನ್ನುವುದು, ಜನಪರ ಕೆಲಸ ಮಾಡುತ್ತಿರುವಾಗಲೂ, ರಾಜಕೀಯದ ಆಧ್ಯಾತ್ಮದ ಆಯಾಮದಲ್ಲಿ ದುಡಿಯುವವರೂ, ಸ್ವಸಹಾಯ ಸಂಘಗಳು, ಮತ್ತಿತರ ಗುಂಪು ಕಟ್ಟಿಕೊಂಡು ಸಮಾಜಕ್ಕಾಗಿ ದುಡಿಯುತ್ತ ಇರುವಾಗಲೇ ಚುನಾವಣಾ ರಾಜಕೀಯದಿಂದ ಅತ್ಯಂತ ದೂರದಲ್ಲಿರುತ್ತಾರೆ ಹಾಗೂ ಅಷ್ಟಕ್ಕೆ ನಿಲ್ಲದೇ ಚುನಾವಣಾ ರಾಜಕೀಯದಿಂದ ಏನೂ ಆಗುವುದಿಲ್ಲ, ನಮ್ಮ ಮಾರ್ಗವೇ ಸರಿಯಾದ ಮಾರ್ಗ ಎಂದು ಪ್ರತಿಪಾದಿಸುತ್ತಾರೆ. ಇದರ ಹುಟ್ಟಿಗೂ ಇತರ ನರೇಟಿವ್‌ಗಳ ಹುಟ್ಟಿಗೂ ಅಂತಹ ವ್ಯತ್ಯಾಸವೇನೂ ಕಾಣಿಸುವುದಿಲ್ಲ.

ಕೊನೆಯದಾಗಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವವರ ನರೇಟಿವ್. ಭಾರತದ ಗಣರಾಜ್ಯ ಎದುರಿಸುತ್ತಿರುವ ಸವಾಲನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಮರ್ಥವೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ನೀಡದೇ, ಅದುವೆ ನಮ್ಮ ಎದುರಿನ ದಾರಿ ಎಂಬ ನರೇಟಿವ್. ಇವರೆಲ್ಲರೂ ಭಾರತದ ಸಂವಿಧಾನ, ಜಾತ್ಯತೀತತೆ, ಸಮಾನತೆ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವರು. ಅವುಗಳ ಬಗ್ಗೆ ಸದಾ ಚಿಂತಿಸುವವರು, ಲೇಖನ ಬರೆಯುವವರು, ರಿಸರ್ಚ್ ಮಾಡುವವರು, ಕಥೆ ಕವನ ಬರೆಯುವವರು ಹಾಗೂ ಹಿಂದೊಮ್ಮೆ ಕಾಂಗ್ರೆಸ್‌ಅನ್ನು ಕಡುವಾಗಿ ವಿರೋಧಿಸಿದವರೇ. ಕಾಂಗ್ರೆಸ್ ಆಡಳಿತದಲ್ಲಿರುವ ಸಮಯದಲ್ಲಿ ಅವರ ತಪ್ಪುಗಳನ್ನು ಎತ್ತಿತೋರಿಸುವವರು. ಕಾಂಗ್ರೆಸ್‌ನ ನಾಯಕರಲ್ಲಿಯೇ ಪದೇಪದೇ ಕಾಣಿಸಿಕೊಳ್ಳುವ ಭ್ರಷ್ಟತೆ, ಜಾತಿವಾದ, ಕೋಮುವಾದವನ್ನು ಕಂಡವರು. ಅಷ್ಟಾದರೂ ಈ ಸಮಯದಲ್ಲಿ ಮತ್ತೇ ಕಾಂಗ್ರೆಸ್ ಒಂದೇ ಆಶಾಕಿರಣ ಎಂಬಂತೆ ನೋಡುವವರು. ಇಷ್ಟೆಲ್ಲ ಇದ್ದರೂ, ಮಾತುಬಲ್ಲ, ಆರ್ಟಿಕ್ಯುಲೇಟ್ ಆಗಿರುವ ಈ ಸಾವಿರಾರು ಜನರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದವರೆಷ್ಟು, ಕಾಂಗ್ರೆಸ್ ಪಕ್ಷಕ್ಕೆ ನೇರವಾಗಿ ದುಡಿವರೆಷ್ಟು ಜನ ಎಂದು ಹುಡುಕಿದರೆ, ರಾಜ್ಯದಲ್ಲಿ ಬೆರಳೆಣಿಕೆಯಲ್ಲಿ ಸಿಗಬಹುದಾದಷ್ಟು ಜನರಷ್ಟೇ. ಕಾಂಗ್ರಸ್‌ನ ಲೋಪದೋಷಗಳನ್ನು ಎತ್ತಿಹಿಡಯುತ್ತ, ನೋಡಿ ಕಾಂಗ್ರೆಸ್ ಈ ಅವಕಾಶ ಬಳಸಿಕೊಳ್ಳಲಿಲ್ಲ, ಇದನ್ನು ಮಾಡಬಹುದಾಗಿತ್ತು ಆದರೆ ಇಷ್ಟೂ ಮಾಡಲು ಆಗಲಿಲ್ಲ, ಅಷ್ಟೂ ಮಾಡಲು ಆಗಲಿಲ್ಲ ಎಂದು ಗೊಣಗುವ ಇವರಿಗೆ ತಾವೇ ಆ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬಹುದು ಎಂಬುದು ಹೊಳೆಯುವುದಿಲ್ಲ. ಈ ನರೇಟಿವ್‌ಗೆ ಕಾರಣವೂ ಭಿನ್ನವಾಗಿಲ್ಲ.

ಕಟ್ಟಕಡೆಯದಾಗಿ, ಹೊಸ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಪರಿಕಲ್ಪನೆ. ರಾಜಕೀಯವೇ ದೇಶ ಎದುರಿಸುತ್ತಿರುವ ಸವಾಲನ್ನು ಎದುರಿಸಬಹುದು ಹಾಗೂ ಜನಸಾಮಾನ್ಯರೆಲ್ಲರೂ ಪಾಲ್ಗೊಳ್ಳಬಹುದಾಂತಹ ಹೊಸ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವುದು ಸಾಧ್ಯ ಎಂದು ಪ್ರತಿಪಾದಿಸುವವರು. ಇದೂ ಒಂದು ನರೇಟಿವ್ ಆಗಿದೆಯೇ? ಹೌದು. ಇದೊಂದು ಅಸಾಧ್ಯವಾದ ರಮ್ಯ ಕಲ್ಪನೆಯ ನರೇಟಿವ್ ಆಗಿದೆ, ಹಿಂದೆ ಎಷ್ಟೊಂದು ಇಂತಹ ಪ್ರಯೋಗಗಳಾಗಿದ್ದು, ಅವ್ಯಾವೂ ಯಶಸ್ವಿಯಾಗಿಲ್ಲ ಎಂದು ವಾದಿಸಬಹುದು ಹಾಗೂ ಯಶಸ್ವಿಯಾದ ಪ್ರಯೋಗಗಳಿಗೆ ಕಾಲ ಕೂಡಿಬಂದಿತ್ತು ಹಾಗಾಗಿ ಅವುಗಳು ಯಶಸ್ವಿಯಾದವೂ ಎಂದು ಈ ನರೇಟಿವ್ ಅನ್ನು ತಳ್ಳಿಹಾಕಲಾಗುತ್ತದೆ. ಆದರೂ, ಜಗತ್ತು ಬದಲಾಗಿದ್ದು, ಈ ಮೇಲ್ನೋಟಕ್ಕೆ ಪ್ರ್ಯಾಕ್ಟಿಕಲ್ ಅಲ್ಲ ಎನಿಸುವ ಪರಿಕಲ್ಪನೆಗಳಿಂದಲೇ ಎಂದು ಒಂದಿಷ್ಟು ಡಿಸ್ಕೌಂಟ್ ನೀಡಬಹುದು. ಮತ್ತೇ ಈ ನರೇಟಿವ್‌ಗೂ ಕಾರಣಗಳಿವೆ. ಅದು ಈ ಮೇಲಿನ ಎಲ್ಲಾ ನರೇಟಿವ್‌ಗಳಿಗೂ ಅನ್ವಯಿಸುತ್ತದೆ.

ಅದುವೇ ಆಯಾ ಜನರ ಕಮ್ಫರ್ಟ್ ಜೋನ್. ಈ ಎಲ್ಲಾ ನರೇಟಿವ್‌ಗಳೂ ಮೂಲಭೂತವಾದ ಕಾರಣ ಅದೇ ಆಗಿದೆ. ಆಯಾ ವಾದಗಳನ್ನು ಪ್ರತಿಪಾದಿಸುವವರಿಗೆ ಅವರಿರುವ ಸ್ಥಾನವು ಅದಕ್ಕೆ ಅನುವು ಮಾಡಿಕೊಡುತ್ತೆ. ತಮ್ಮ ವಾದಕ್ಕೆ ಪ್ರತಿಕೂಲವಾದ ನರೇಟಿವ್‌ಅನ್ನು ಒಪ್ಪಬೇಕಾದರೆ ಅವರುಗಳು ತಮ್ಮ ಕಮ್ಫರ್ಟ್ ಜೋನ್‌ನಿಂದ ಹೊರಬರಬೇಕಾಗುತ್ತದೆ. ಇದು ಭೌತಿಕವಾದ ಕಮ್ಫರ್ಟ್ ಜೋನ್ ಎಂದು ತಿಳುದಕೊಂಡರೆ ಅದು ತಪ್ಪಾಗುತ್ತದೆ. ಇದು ಅವರವರ ಚಿಂತನೆಯ ಕಮ್ಫರ್ಟ್ ಜೋನ್. ಹಲವರು ತಮ್ಮ ಕಮ್ಫರ್ಟ್ ಜೋನ್‌ಗಳನ್ನು ಮುರಿದು ಈ ದೇಶ ಕಟ್ಟಿದ್ದಾರೆ. ಈಗ ನಮ್ಮ ಸರದಿ.

ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ, ನಾವು ಅಂದುಕೊಂಡಿರುವ ಸತ್ಯಗಳು, ಮಂಡಿಸುವ ವಾದಗಳು ಒಂದು ರೀತಿಯ ನರೇಟಿವ್ ಆಗಿವೆಯೇ ಎಂಬ ಪ್ರಶ್ನೆ ಕೇಳಿಕೊಳ್ಳುವ, ಇಲ್ಲ, ಇದು ನರೇಟಿವ್ ಅಲ್ಲ, ಇದುವೇ ಅಂತಿಮ ಸತ್ಯ ಎಂಬ ಉತ್ತರವಿದ್ದಲ್ಲಿ, ಆ ದಾರಿಯಲ್ಲಿ ಮುನ್ನೆಡೆಯುವ, ಒಂದು ವೇಳೆ ಹೌದು, ಇದೂ ಒಂದು ನರೇಟಿವ್ ಎಂಬ ಉತ್ತರ ಸಿಕ್ಕಲ್ಲಿ ಇನ್ನೊಂದು ಪ್ರಶ್ನೆ ಕೇಳುವ, ನಾನು ಇದೇ ನರೇಟಿವ್‌ಗೆ ಅಂಟಿಕೊಳ್ಳಬೇಕೋ ಅಥವಾ ಇನ್ನೊಂದು ನರೇಟಿವ್‌ನಿಂದ ದೇಶಕ್ಕೆ ಎದುಗಿರುವ ಸವಾಲನ್ನು ಎದುರಿಸಬಹುದೋ ಎಂದು, ಈ ದೇಶಕ್ಕೆ ಬೇಕಾಗಿರುವ ನರೇಟಿವ್ ಅನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಇದು.

ನೆನಪಿಡಿ, 2019ರಲ್ಲಿ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಎರಡನೆಯ ಬಾರಿ ಗೆದ್ದಿದ್ದು, ದೇಶದ ಚಿಂತನಾವಲಯದ ಸೋಲೂ ಆಗಿತ್ತು.


ಇದನ್ನೂ ಓದಿ: Writing With Fire: ದಲಿತ ಹೆಣ್ಣುಮಕ್ಕಳೇ ಕಟ್ಟಿದ ’ಖಬರ್ ಲಹರಿಯಾ’ ಕಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read