Homeಕರ್ನಾಟಕಮತ್ತೆ ಮತ್ತೆ ದುರಂತಗಳಿಗೆ ಸಾಕ್ಷಿಯಾಗುತ್ತಿದೆ ಚಾಮರಾಜನಗರ ಜಿಲ್ಲೆ

ಮತ್ತೆ ಮತ್ತೆ ದುರಂತಗಳಿಗೆ ಸಾಕ್ಷಿಯಾಗುತ್ತಿದೆ ಚಾಮರಾಜನಗರ ಜಿಲ್ಲೆ

- Advertisement -
- Advertisement -

ಚಾಮರಾಜನಗರ ಜಿಲ್ಲೆ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಒಳಗಾಗುವುದು ಒಂದು ಕಡೆಯಾದರೆ, ಮತ್ತೆ ಮತ್ತೆ ಯಾವುದಾದರೊಂದು ದುರಂತಕ್ಕೆ ಈಡಾಗುತ್ತಿರುವುದು ಮತ್ತೊಂದು ರೀತಿಯ ಸಮಸ್ಯೆಯಾಗಿ ಪರಿಣಮಿಸಿದೆ.

2018ನೇ ಇಸವಿ ಡಿಸೆಂಬರ್‌  14ರಂದು ಚಾಮರಾಜನಗರ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಹನೂರು ತಾಲ್ಲೂಕಿನ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿದ್ದರಿಂದ 17 ಜನರು ಕೊನೆಯುಸಿರೆಳೆದಿದ್ದರು. 129 ಜನ ಸಂತ್ರಸ್ತರಾದರು.

ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ಕಿರಿಯ ಇಮ್ಮಡಿ ಮಹದೇವಸ್ವಾಮೀಜಿ ಕೃತ್ಯದಲ್ಲಿ ಭಾಗಿಯಾಗಿದ್ದರು. ದೇವಾಲಯದ ಟ್ರಸ್ಟಿಗಳ ನಡುವಿನ ದ್ವೇಷವು ಭಕ್ತರಿಗೆ ವಿಷ ಹಾಕುವ ಮಟ್ಟಕ್ಕೆ ಹೋಗಿತ್ತು. ವಿಷ ಹಾಕಿದ್ದ ಈಗ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಈ ಕರಾಳ ನೋವು ಮಾಸುವ ಮುನ್ನವೇ ಕೋವಿಡ್ ಸಂದರ್ಭದಲ್ಲಿ ಮತ್ತೊಂದು ದುರಂತಕ್ಕೆ ಚಾಮರಾಜನಗರ ಸಾಕ್ಷಿಯಾಯಿತು. ಆಕ್ಸಿಜನ್ ಸಿಗದೆ ಜನರು ಮೃತಪಟ್ಟರು. “ಒಟ್ಟು 37 ಮೃತರ ಕುಟುಂಬಸ್ಥರ ಪೈಕಿ ಕೇವಲ 24 ಮಂದಿಯ ಕುಟುಂಬಸ್ಥರಿಗೆ ಅಲ್ಪಸ್ವಲ್ಪ ಪರಿಹಾರ ದೊರೆತಿದೆ. ಇನ್ನು 13 ಸಂತ್ರಸ್ಥ ಕುಟುಂಬಸ್ಥರಿಗೆ ಪರಿಹಾರದ ಒಂದು ನಯಾಪೈಸೆಯೂ ನೀಡಿರುವುದಿಲ್ಲ” ಎಂಬ ಆರೋಪಗಳು ಬರುತ್ತಿವೆ.

ಕ್ವಾರಿ ಗುಡ್ಡ ಕುಸಿತ ದುರಂತ

ಗಾಯದ ಮೇಲೆ ಉಪ್ಪು ಸವರಿದಂತೆ ಮತ್ತೊಂದು ದುರಂತ ಚಾಮರಾಜನಗರ ಜಿಲ್ಲೆಯಲ್ಲಿ ಮಾ.4ರಂದು ಘಟಿಸಿದೆ. ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯ ಗುಡ್ಡ ಕುಸಿತದಲ್ಲಿ ಕಾರ್ಮಿಕರು ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ.

ಮಣ್ಣು, ಬಂಡೆಗಳ ಅಡಿ ಸಿಲುಕಿರುವ ಮೂವರು ಕಾರ್ಮಿಕರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಅವರು ಜೀವಂತ ಬದುಕಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಹೊರಕ್ಕೆ ತೆಗೆಯಲಾದ ಮೃತ ದೇಹವನ್ನು ಉತ್ತರಪ್ರದೇಶದ ಗೋರಖ್‌ ಪುರದ ಅಜೀಂ ಉಲ್ಲಾ ಅಲಿಯಾಸ್‌ ಬಬ್ಲೂ (24) ಎಂದು ಗುರುತಿಸಲಾಗಿದೆ. ಕಲ್ಲು ಬಂಡೆಗಳ ಅಡಿಯಲ್ಲಿ ಸಿಲುಕಿರುವ ಇನ್ನಿಬ್ಬರು ಮಿರಾಜ್ (28) ಹಾಗೂ ಸರ್ಫ್ರಾಜ್ (18) ಕೂಡ ಉತ್ತರ ಪ್ರದೇಶದ ಗೋರಖ್‌ಪುರದವರೇ ಆಗಿದ್ದಾರೆಂದು ಹೇಳಲಾಗುತ್ತಿದೆ.

ಅಜೀಂ ಉಲ್ಲಾ ಹಾಗೂ ಮಿರಾಜ್‌ ಅವರು ಹಿಟಾಚಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಸರ್ಫ್ರಾಜ್‌ ಸಹಾಯಕರಾಗಿದ್ದರು. ಕಲ್ಲು ಬಂಡೆಗಳ ಅಡಿಯಲ್ಲಿ ಮುಚ್ಚಿ ಹೋಗಿದ್ದ ಹಿಟಾಚಿಯಲ್ಲಿ ಸಿಲುಕಿದ್ದ ಅಜೀಂ ಉಲ್ಲಾ ಅವರ ಶವವನ್ನು ರಾಷ್ಟ್ರೀಯ ವಿಪತ್ತು ಕಾರ್ಯಪಡೆ ಹಾಗೂ ರಾಜ್ಯ ವಿಪತ್ತು ಕಾರ್ಯ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಹೊರತೆಗೆದ್ದಾರೆ.

ಅಲ್ಲಿಗೆ ಸಮೀಪದಲ್ಲೇ ಬಂಡೆಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಮತ್ತೊಂದು ಹಿಟಾಚಿ ಕಡೆಯಿಂದ ದುರ್ವಾಸನೆ ಬರುತ್ತಿರುವುದರಿಂದ, ಉಳಿದಿಬ್ಬರ ಮೃತದೇಹವಿರಬಹುದೆಂಬ ಶಂಕೆಯಿಂದ ಅಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ನ ತಲಾ 20 ಮಂದಿ, ಅಗ್ನಿ ಶಾಮಕ ದಳದ 50 ಸಿಬ್ಬಂದಿ ಶನಿವಾರ ಬೆಳಿಗ್ಗೆ 6.30ಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಫ್ರಾನ್ಸಿಸ್‌ (ಮಾರ್ಟಳ್ಳಿ, ಕೊಳ್ಳೇಗಾಲ), ಆಶ್ರೀಫ್‌ (ಗೋರಖ್‌ಪುರ್‌, ಉತ್ತರ ಪ್ರದೇಶ), ಬಬ್ಲು (ಗೋರಖ್‌ಪುರ್‌‌, ಉತ್ತರ ಪ್ರದೇಶ), ಮೀರಜ್‌ ಖಾನ್‌ (ಉತ್ತರ ಪ್ರದೇಶ), ನೂರುದ್ದೀನ್‌ (ಕ್ಯಾಲಿಕಟ್‌, ಕೇರಳ) ಎಂಬವರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಭೇಟಿ ನೀಡಿದ್ದರು. “ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲ ಗಣಿ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗುವುದು. ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಖುದ್ದಾಗಿ ಗಣಿಗಳಿಗೆ ಭೇಟಿ ನೀಡಿ, ಎಲ್ಲವೂ ನಿಯಮ ಪ್ರಕಾರ ನಡೆಯುತ್ತಿದ್ದರೆ, ಗಣಿಗಾರಿಕೆಗೆ ಅವಕಾಶ ನೀಡಲಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ಆದರೆ ಹೆಸರು ಹೇಳಲಿಚ್ಛಿಸದ ಮೂಲಗಳ ಪ್ರಕಾರ, “ಚಾಮರಾಜನಗರ ಜಿಲ್ಲೆಯಲ್ಲಿ ಇಂತಹ ದುರಂತಗಳು ಆಗಾಗ್ಗೆ ಸಂಭವಿಸುತ್ತಿವೆ. ಆದರೆ ಬೆಳಕಿಗೆ ಬರುತ್ತಿಲ್ಲ. ಅಕ್ರಮ ಕಲ್ಲುಗಣಿಗಾರಿಕೆ ಮಿತಿಮೀರಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ಗಣಿಗಾರಿಕೆಗೆ ಕಡಿವಾಣ ಇಲ್ಲವಾಗಿದೆ”.


ಇದನ್ನೂ ಓದಿರಿ: ‘ಕೋವಿಡ್‌ ಆಕ್ಸಿಜನ್ ದುರಂತ: ಚಾ.ನಗರ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...