ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ ಇಂದು ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್‌ ಪಕ್ಷ (TMC) ಕ್ಕೆ ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ಕಳೆದೊಂದು ವಾರದಿಂದ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದಿದ್ದಾರೆ.  ಅಭಿಜಿತ್ ಮುಖರ್ಜಿ ಜಂಗಿಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಕೂಡ ಆಗಿದ್ದಾರೆ.

“ಬಿಜೆಪಿಯ ಕೋಮುವಾದದ ವಿರುದ್ಧ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಹೋರಾಟವನ್ನು ಗಮನಿಸಿದರೆ ಅದೇ ಮುಂದಿನ ಭವಿಷ್ಯ ಎಂದೆನಿಸುತ್ತದೆ. ಎಲ್ಲರೂ ಅವರನ್ನು ಬೆಂಬಲಿಸಿದರೆ ಮಮತಾ ದೀದಿ ಇಡೀ ಭಾರತದಲ್ಲಿ ತಮ್ಮ ಪ್ರಯತ್ನವನ್ನು ಮುಂದುವರಿಸಲು ಸಾಧ್ಯ” ಎಂದು ಅವರು ಟಿಎಂಸಿ ಸೇರ್ಪಡೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ಜಂಗಿಪುರ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿ ಅಭಿಜಿತ್ ಮುಖರ್ಜಿ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಹುಲ್ ಗಾಂಧಿಯವರ ಆಪ್ತ ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆಗೊಂಡಿದ್ದರು. ಆ ಸಂದರ್ಭದಲ್ಲಿ ನಾನು ತೃಣಮೂಲ್ ಅಥವಾ ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ಅಭಿಜಿತ್ ಮುಖರ್ಜಿ ಹೆಳುತ್ತಲೇ ಬಂದಿದ್ದರು.

ಬಂಗಾಳ ವಿಧಾನಸಭಾ ಚುನಾವಣೆ ಸೋಲಿನ ನಂತರ ಕಾಂಗ್ರೆಸ್‌ ಮತ್ತು ಬಿಜೆಪಿಯ ಒಬ್ಬೊಬ್ಬರೇ ನಾಯಕರು TMC ಸೇರ್ಪಡೆಗೊಳ್ಳುತ್ತಿದ್ದಾರೆ. ಅಭಿಜಿತ್ ಮುಖರ್ಜಿ ನಂತರ ಇನ್ನೂ ಕೆಲವು ಕಾಂಗ್ರೆಸ್‌ ನಾಯಕರು ಟಿಎಂಸಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಜಂಗಿಪುರ ಕ್ಷೇತ್ರದಿಂದ ಪ್ರಣಬ್‌ ಮುಖರ್ಜಿಯವರು ಎರಡು ಅವಧಿಗೆ ಸಂಸದರಾಗಿದ್ದರು. 2012ರಲ್ಲಿ ರಾಷ್ಟ್ರಪತಿ ಹುದ್ದೆಗೇರಿದ ನಂತರ ಅವರ ಮಗ ಅಭಿಜಿತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2014ರ ಲೋಕಸಭೆ ಚುನಾವಣೆಯಲ್ಲೂ ಅಭಿಜಿತ್ ಜಂಗೀಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರ ಚುನಾವಣೆಯಲ್ಲಿ ಅವರು ಟಿಎಂಸಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.


ಇದನ್ನೂ ಓದಿ: ಬಿಜೆಪಿ ಬಿಟ್ಟು ಟಿಎಂಸಿ ಸೇರಿದ ಮುಕುಲ್ ರಾಯ್‌: Z ರಕ್ಷಣೆ ವಾಪಸ್ ಪಡೆದ ಕೇಂದ್ರ

LEAVE A REPLY

Please enter your comment!
Please enter your name here