HomeಮುಖಪುಟWriting With Fire: ದಲಿತ ಹೆಣ್ಣುಮಕ್ಕಳೇ ಕಟ್ಟಿದ ’ಖಬರ್ ಲಹರಿಯಾ’ ಕಥೆ

Writing With Fire: ದಲಿತ ಹೆಣ್ಣುಮಕ್ಕಳೇ ಕಟ್ಟಿದ ’ಖಬರ್ ಲಹರಿಯಾ’ ಕಥೆ

- Advertisement -
- Advertisement -

ಪತ್ರಿಕೋದ್ಯಮದ ಅಸಲು ವ್ಯಾಖ್ಯಾನ

ಅದು 2015ರ ಏಪ್ರಿಲ್ ತಿಂಗಳು, ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ಬದನವಾಳು ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿದ್ದರು. ಮುಖ್ಯವಾಹಿನಿಗಳಲ್ಲಿ ಸುಮಾರು ಒಂದು ವಾರ ಇದು ಪ್ರತಿ ದಿನ ಸುದ್ದಿ ಆಯಿತು. ಬಾಲಿವುಡ್‌ನ ಪ್ರಖ್ಯಾತ ಚಿತ್ರ ನಟ ಇರ್ಫಾನ್ ಖಾನ್ ಅವರು ಭಾಗವಹಿಸಿ ರೋಮಾಂಚನವನ್ನೆ ಉಂಟುಮಾಡಿದರು. ಇದೇ ಸಂದರ್ಭದಲ್ಲಿ ಬದನವಾಳು ಗ್ರಾಮದಲ್ಲಿ ಇಬ್ಬರು ದಲಿತ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇದು ಹೆಚ್ಚು ಸುದ್ದಿ ಆಗಲಿಲ್ಲ. ದಲಿತ ಸ್ಕಾಲರ್ ಡಾ.ಎಚ್.ಡಿ.ಉಮಾಶಂಕರ್ ಅವರು ತಮ್ಮ ಒಂದು ಪ್ರತಿಕ್ರಿಯೆಯಲ್ಲಿ ಮಾನ್ಯ ಪ್ರಸನ್ನ ಅವರು ’ಬದನವಾಳು ಗ್ರಾಮದಲ್ಲಿ ನಡೆದ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಎಳ್ಳಷ್ಟೂ ಪ್ರತಿಕ್ರಿಯಸದೆ ಮಾಡುತ್ತಿರುವ ಈ ಸಮಾವೇಶ ಆತ್ಮವಂಚನೆಯದು ಮತ್ತು ಸೋಗಲಾಡಿತನದ್ದು, ಈ ಸುಸ್ಥಿರ ಬದುಕು ಯಾರಿಗಾಗಿ’ ಎಂದು ಪ್ರಶ್ನೆ ಮಾಡಿದರು. ಇದೇ ರೀತಿ ಬಂದ ಇನ್ನೂ ಕೆಲವರ ತಕರಾರುಗಳಿಗೆ ಹಲವು ಪ್ರಗತಿಪರರು ’ಈ ಎರಡು ಸಂಗತಿಗಳನ್ನು ಒಟ್ಟಿಗೆ ಇಟ್ಟು ಹೋಲಿಕೆ ಮಾಡುವುದು ಸರಿಯಲ್ಲ. ಪ್ರಸನ್ನ ಅವರದು ಮನುಷ್ಯಪರ ಕೆಲಸ’ ಎಂದು ವಾದಿಸಿದರು.

ಖಬರ್ ಲಹರಿಯಾ (ಸುದ್ದಿಯ ಅಲೆಗಳು): ನಿಮ್ಮ ಸುದ್ದಿ ನಿಮ್ಮ ಭಾಷೆಯಲ್ಲಿ

Writing With Fire 2021ರ ಈ ಸಾಕ್ಷ್ಯಚಿತ್ರ ನೋಡಿದ ಮೇಲೆ ಇಷ್ಟು ವರ್ಷವಾದರೂ ಖಬರ್ ಲಹರಿಯಾ ಅಂತಹ ಸುದ್ದಿ ಮಾಧ್ಯಮವನ್ನ ಗಮನಿಸಿಯೇ ಇಲ್ಲವಲ್ಲ ಎಂಬ ತೀವ್ರ ವಿಷಾದವೊಂದು ಉಳಿದುಬಿಟ್ಟಿತು. ಗ್ರಾಮೀಣ ಪ್ರದೇಶದ ತಳ ಸಮುದಾಯದ ಅದರಲ್ಲೂ ದಲಿತ ಮಹಿಳೆಯರಿಂದಲೇ ನಡೆಸಲ್ಪಡುತ್ತಿರುವ ಈ ಪತ್ರಿಕೆ ಮತ್ತು ಮಾಧ್ಯಮ ಹುಟ್ಟಿದ್ದು 2002 ಮೇನಲ್ಲಿ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಕರವಿ ಪಟ್ಟಣದಲ್ಲಿ. ಅದೂ ಸ್ಥಳೀಯ ಭಾಷೆ ಬುಂದೇಲಿಯಲ್ಲಿ (ಹಿಂದಿಯ ಉಪ ಭಾಷೆ). ಇದು 2012ರ ಹೊತ್ತಿಗೆ ಲಕ್ನೊ, ಮಹೊಬಾ ಮತ್ತು ವಾರಣಾಸಿ ಜಿಲ್ಲೆಗಳಿಗೆ ವಿಸ್ತರಿಸುವುದಲ್ಲದೆ, ಬುಂದೇಲಿ ಜೊತೆಗೆ ಅವಧಿ ಮತ್ತು ಬೋಜ್ಪುರಿ ಭಾಷೆಯಲ್ಲಿ ಪ್ರಕಟವಾಗುತ್ತದೆ. ಸುಮಾರು 6000 ಮುದ್ರಣ ಪ್ರತಿಗಳು 600 ಹಳ್ಳಿಗಳಲ್ಲಿ ಮಾರಾಟವಾಗಿ ಸರಿಸುಮಾರು 20 ಸಾವಿರ ಓದುಗರನ್ನು ಹೊಂದಿರುತ್ತದೆ. 2013ರಲ್ಲಿ ತನ್ನದೇ ಅಂತರ್ಜಾಲ ತಾಣವನ್ನು ಉದ್ಘಾಟಿಸಿಕೊಳ್ಳುವ ಖಬರ್ ಲಹರಿಯಾ ಡಿಜಿಟಲ್ ಮಾಧ್ಯಮಕ್ಕೆ ತೆರೆದುಕೊಂಡಿದ್ದು 2016ರಲ್ಲಿ. ತನ್ನದೇ ಯುಟ್ಯೂಬ್ ಚಾನಲ್ ಹೊಂದಿದ್ದು, ಇವತ್ತಿಗೆ ಈ ನ್ಯೂಸ್ ಚಾನಲ್ ಫಾಲೋ ಮಾಡುತ್ತಿರುವವರ ಸಂಖ್ಯೆ ಒಂದು ಕೋಟಿಗೂ ಅಧಿಕ. ಪ್ರಾರಂಭದಲ್ಲಿ ಸ್ಥಳೀಯ ಸುದ್ದಿ, ಅಪರಾಧ, ದೌರ್ಜನ್ಯಗಳನ್ನು ಸುದ್ದಿ ಮಾಡುತ್ತಿದ್ದ ಖ.ಲ. ಮೊಟ್ಟಮೊದಲ ಬಾರಿಗೆ 2017ರ ಉತ್ತರ ಪ್ರದೇಶದ ಚುನಾವಣೆ ಸುದ್ದಿಗಳನ್ನು ಬಹಳ ಸಶಕ್ತವಾಗಿ ಸ್ಥಳೀಯ ವಾಸ್ತವಗಳೊಂದಿಗೆ ಕವರ್ ಮಾಡುತ್ತದೆ.

Writing With Fire 2021

ಹಿಂದಿ ಭಾಷೆಯ ಸುಮಾರು 94 ನಿಮಿಷಗಳ ಈ ಅದ್ಭುತವಾದ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದವರು ಸುಷ್ಮಿತ ಘೋಷ್ ಮತ್ತು ರಿಂಟು ಥಾಮಸ್. ಸಾಕ್ಷ್ಯಚಿತ್ರದ ವಸ್ತುವಿಗಾಗಿ ಇವರನ್ನು ಅಭಿನಂದಿಸಬೇಕೊ ಅಥವಾ ಅದನ್ನು ದೃಶ್ಯದಲ್ಲಿ ಕಟ್ಟಿದ ಅವರ ಕಲಾವಂತಿಕೆಗೆ ಅಭಿನಂದಿಸಬೇಕೆ ಎಂಬ ಜಿಜ್ಞಾಸೆಗೆ ಒಳಪಡಿಸುವಂತಿಗೆ 94 ನಿಮಿಷಗಳ ಈ ಚಿತ್ರ. ಒಂದೊಂದು ದೃಶ್ಯ, ಸಂಭಾಷಣೆ, ಘಟನೆ ಈ ಎಲ್ಲವನ್ನೂ ಕಿಂಚಿತ್ತೂ ನಿರಾಕರಿಸಲಾಗದಷ್ಟು ಅದ್ಭುತವಾಗಿ ಸಂಪಾದಿಸಿದ್ದಾರೆ. ಇದಕ್ಕೆ ಪೂರಕವಾಗಿ ಬರುವ ಸಂಗೀತವೂ ಅಷ್ಟೇ ಅದ್ಭುತವಾಗಿದೆ. ಖಬರ್ ಲಹರಿಯಾ ಪ್ರಿಂಟ್ ಮೀಡಿಯಾದಿಂದ ಡಿಜಿಟಲ್ ಮೀಡಿಯಾಗೆ ಸ್ಥಿತ್ಯಂತರಗೊಳ್ಳುತ್ತಿರುವ ಸಂದರ್ಭದಿಂದ ಅಂದರೆ 2016ರಿಂದ ಉತ್ತರ ಪ್ರದೇಶದ ಚುನಾವಣೆ ಪೂರ್ವದ ಮತ್ತು ನಂತರದ ಕಾಲಘಟ್ಟದಲ್ಲಿ ಖಬರ್ ಲಹರಿಯಾ ಸುದ್ದಿಗಳು, ಇದರ ರೂವಾರಿಗಳಾದ ಗ್ರಾಮೀಣ ಹಿನ್ನೆಲೆಯ ದಲಿತ ಮಹಿಳಾ ಪತ್ರಕರ್ತರು, ಮತ್ತವರು ತಮ್ಮ ವೈಯಕ್ತಿಕ ಸವಾಲುಗಳೊಂದಿಗೆ ಈ ಪತ್ರಿಕೆ ಮತ್ತು ಮಾಧ್ಯಮವನ್ನು ಕಟ್ಟಿ ಮುನ್ನಡೆಸಿದ ಸಂಗತಿಗಳ ನಿರೂಪಣೆ ಮನಮುಟ್ಟುತ್ತದೆ. ಪತ್ರಿಕೋದ್ಯಮ ಅಂದರೆ ಏನು, ಅದು ಯಾರನ್ನ ಪ್ರತಿನಿಧಿಸಬೇಕು, ಯಾರ ಪರವಾಗಿ ಧ್ವನಿಯಾಗಿರಬೇಕು ಮತ್ತು ಯಾರನ್ನ ಪ್ರಶ್ನಿಸಬೇಕು ಎಂಬುದರ ಬಗೆಗಿನ ಅವರ ಅರಿವು, ಆ ಅರಿವಿನಿಂದ ಮೂಡಿದ ಸುದ್ದಿಗಳಿಂದ ಆದ ಬದಲಾವಣೆಗಳ ಸಂಗತಿಗಳನ್ನೆಲ್ಲಾ ಈ ಸಾಕ್ಷ್ಯಚಿತ್ರ ಬಹಳ ಸಹಜ ಹಾಗು ಸರಳವಾಗಿ ಮತ್ತು ಅಷ್ಟೇ ಕಲಾವಂತಿಕೆಯಲ್ಲಿ ಕಟ್ಟಿಕೊಡುತ್ತದೆ.

ಈ ಸಾಕ್ಷ್ಯಚಿತ್ರವನ್ನು ನೋಡುವ ಅನಿವಾರ್ಯತೆ ಆದರೂ ಯಾಕೆ?

ಕಳೆದ ಏಳೆಂಟು ವರ್ಷದಿಂದೀಚೆಗೆ ಮಾಧ್ಯಮದಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನ ಕಾಣುತ್ತಿದ್ದೇವೆ. ಕಾರ್ಪೋರೆಟ್ ವಲಯದ ಮತ್ತು ಪ್ರಭುತ್ವದ ಬಿಗಿಹಿಡಿತ ಸುಲಭವಾಗಿ ಗೋಚರಿಸುತ್ತಿದೆ. ಹಿಂದೆ ಟಿಆರ್‌ಪಿ ಸಲುವಾಗಿ ಸುದ್ದಿಗಳನ್ನ ರೋಚಕಗೊಳಿಸುತ್ತಿದ್ದದ್ದು ಮಾತ್ರ ನಮ್ಮ ಗಮನಕ್ಕೆ ಬರುತ್ತಿತ್ತು. ಆದರೆ, ಇಂದು ಮಾಧ್ಯಮದ ವ್ಯಾಖ್ಯಾನವೇ ಬದಲಾಗಿಬಿಟ್ಟಿದೆ. ದೊಡ್ಡದೊಡ್ಡ ಮಾಧ್ಯಮಗಳು ಇವತ್ತು ಕಾರ್ಪೋರೇಟ್ ಸಂಸ್ಥೆಗಳ ಹಿಡಿತದಲ್ಲಿದ್ದು, ಇವು ಯಾವುದೊ ನಿರ್ದಿಷ್ಟ ಪ್ರಪೊಗಾಂಡದ ಮೇಲೆ ರಾಜಕೀಯ ಮಾಡುವ ಪ್ರಭುತ್ವದ ಏಜೆಂಟುಗಳಂತೆ ವರ್ತಿಸುತ್ತಿವೆ. ಸೂಟು ಬೂಟು ಧರಿಸಿ ದೊಡ್ಡ ದೊಡ್ಡ ಸ್ಟುಡಿಯೋಗಳಲ್ಲಿ ಕೂತುಕೊಂಡು ಸುದ್ದಿಯ ಅಣಿಮುತ್ತುಗಳನ್ನು ಉದುರಿಸುತ್ತಿರುವ ಇವರು ಶತಮಾನಗಳಿಂದ ಜಾತಿ ಮತ್ತು ವರ್ಗ ತಾರತಮ್ಯವನ್ನು ಪೋಷಿಸಿಕೊಂಡು ಬಂದ ಅದೇ ಮೇಲ್ವರ್ಗದ-ಶೋಷಕ ಜಾತಿಯ ಸಮುದಾಯ. ಇವತ್ತಿಗೂ ಅದನ್ನೇ ಮುಂದುವರಿಸಿದ್ದಾರೆ. ಇದರ ಜೊತೆಗೆ ಇವರು ಪ್ರಭುತ್ವ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಬೇಕಾದ ಅಭಿಪ್ರಾಯ ಮತ್ತು ಒಪ್ಪಿಗೆಯನ್ನು ಜನಸಮುದಾಯದೊಳಗೆ ಉತ್ಪಾದಿಸುವ ಕಾರ್ಖಾನೆಗಳಾಗಿದ್ದಾರೆ. ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ ಇವರ ಪರವಾಗಿ ಪ್ರಭುತ್ವವನ್ನು ಪ್ರಶ್ನಿಸುವ ಬದಲು ದೌರ್ಜನ್ಯಕ್ಕೆ ಒಳಗಾದವರನ್ನೆ ಹೀಯಾಳಿಸುವ, ಸಮುದಾಯದ ನಡುವಿನ ಸಾಮರಸ್ಯವನ್ನು ಹಾಳುಮಾಡಿ ದ್ವೇಷ ಹರಡುವ ಕೋಮು ವೈರಸ್‌ಗಳಾಗಿವೆ. ನಮ್ಮ ನಡುವಿನ ದೌರ್ಜನ್ಯಗಳಿಗೆ ಕನ್ನಡಿಯಾಗಿ ವ್ಯವಸ್ಥೆಗೆ ದಾರಿದೀಪವಾಗಬೇಕಾದ ಮಾಧ್ಯಮ ಇಂದು ಸೆಲೆಬ್ರಿಟಿಗಳ ಖಾಸಗಿ ಬದುಕಿನ ಸಂಗತಿಗಳನ್ನು ಪ್ರಪಂಚದ ತುರ್ತಿನ ಸಂಗತಿಗಳೇನೊ ಎಂಬಂತೆ ಅಹೋರಾತ್ರಿ ನೇರ ಪ್ರಸಾರ ಮಾಡುತ್ತಾ, ಜನರನ್ನು ವಾಸ್ತವದ ಸವಾಲುಗಳಿಂದ ದೂರಮಾಡಿ ಭ್ರಮೆಯಲ್ಲಿ ಮುಳುಗಿಸಿವೆ.

’ಖಬರ್ ಲಹರಿಯಾ’ದ ಮುಖ್ಯ ವರದಿಗಾರರಾದ ಮೀರಾ ಹೇಳುವ ಮಾತುಗಳು: ’ನನ್ನ ಪ್ರಕಾರ ಜರ್ನಲಿಸಂ ಅನ್ನುವುದು ಪ್ರಜಾಪ್ರಭುತ್ವದ ಜೀವಾಳ, ಪ್ರಜೆಗಳು ತಮ್ಮ ಹಕ್ಕುಗಳಿಗೆ ಒತ್ತಾಯಿಸಿದಾಗ, ಅವುಗಳನ್ನು ಸರ್ಕಾರದ ಮುಂದೆ ಕೊಂಡೊಯ್ಯುವುದು ಜರ್ನಲಿಸಂನ ಆದ್ಯ ಕರ್ತವ್ಯ. ಪತ್ರಕರ್ತರು ತಮ್ಮ ಅಧಿಕಾರವನ್ನು ಇದಕ್ಕಾಗಿ ಬಳಸಿಕೊಳ್ಳುವ ಹೊಣೆಗಾರಿಕೆಯನ್ನ ಹೊಂದಿರುತ್ತಾರೆ. ಇದು ಪ್ರಜಾಪ್ರಭುತ್ವದಲ್ಲಿ ನ್ಯಾಯಕ್ಕಾಗಿ ಹೋರಾಡುವ ವಿಧಾನ. ಇಲ್ಲಾಂದ್ರೆ ಜರ್ನಲಿಸಂ ಅನ್ನೋದು ಕೂಡ ದೊಡ್ಡದೊಡ್ಡ ಕಂಪನಿಗಳು ನಡೆಸುವ ದಂಧೆ ಮಾತ್ರವಾಗಿರುತ್ತದೆ’ ಎನ್ನುವ ಮಾತುಗಳು ಇಂದು ಮಾಧ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ಕಿವಿಮಾತಾಗಬೇಕಿದೆ. ಮೀರಾ ಪ್ರಿವಿಲೆಜ್ ಸಮುದಾಯಕ್ಕೆ ಸೇರಿದವರಲ್ಲ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದವರಲ್ಲ, ಜರ್ನಲಿಸಲಂಅನ್ನು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದವರಂತೂ ಖಂಡಿತ ಅಲ್ಲ. ತನ್ನ 14ನೇ ವಯಸ್ಸಿಗೆ ಮದುವೆಯಾಗಿ, 16ನೇ ವರ್ಷಕ್ಕೆ ಮಗು ಹೆತ್ತು, ಪ್ರತಿದಿನದ ಜಾತಿ ಅವಮಾನಗಳನ್ನು ಅನುಭವಿಸುತ್ತಾ, ಆ ನಂತರ ಎರಡು ಮೂರು ಪದವಿ ವ್ಯಾಸಂಗ ಮಾಡಿ, ಮೇಲ್ವರ್ಗದವರದೇ ಅದರಲ್ಲೂ ಪುರುಷರಿಗೆ ಮಾತ್ರವೇ ಎಂಬಂತಿದ್ದ ಪತ್ರಿಕಾ ವರದಿಯ ವೃತ್ತಿಯನ್ನು ಸವಾಲಿನಂತೆ ಸ್ವೀಕರಿಸಿ ಯಶಸ್ವಿ ಪತ್ರಕರ್ತೆಯಾಗಿರುವ ಮೀರಾ ಅವರ ಈ ಮೇಲಿನ ಮಾತುಗಳು ಜರ್ನಲಿಸಂನ ಅಸಲಿ ವ್ಯಾಖ್ಯಾನ ಅನಿಸುತ್ತದೆ.

ಕ್ರೈಂ ವರದಿ ಮಾಡುವ ಸುನೀತಾ ಅವರ ಖಬರ ಲಹರಿಯಾದಲ್ಲಿನ ಜರ್ನಿಯಂತೂ ಇನ್ನಷ್ಟು ರೋಚಕವಾದದ್ದು. ಗಣಿಗಾರಿಕೆ ಪ್ರದೇಶದಲ್ಲಿ ಕೂಲಿ ಆಳುಗಳಾಗಿ ಬದುಕುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ಇವರ ಕುಟುಂಬ ಕಡುಬಡತನದ್ದು. ಇಂದಿಗೂ ಸುನೀತಾ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಸ್ಥಳೀಯ ಮೈನಿಂಗ್ ಮಾಫಿಯಾಗಳನ್ನು ಎದುರು ಹಾಕಿಕೊಂಡು, ಕಾನೂನುಬಾಹಿರ ಗಣಿಗಾರಿಕೆ, ದಲಿತ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರ, ಕೊಲೆಗಳ ಬಗ್ಗೆ ಮಾಡುವ ಅವರ ವರದಿಗಳನ್ನ ನೋಡಿದರೆ ಸುನೀತಾ ಅವರ ಎದೆಗಾರಿಕೆಗೆ ಮನಸ್ಸು ಭಾರವಾಗುತ್ತದೆ. ಶಿಕ್ಷಣ ವಂಚಿತರಾದ ದೇವಿ ಅದೇ ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು. ಸ್ಮಾರ್ಟ್‌ಫೋನ್ ಬಳಕೆ ಮಾಡಲು ನನಗೆ ಬರುವುದಿಲ್ಲ ಎಂದು ಸಂಕೋಚದಿಂದಲೇ ಹೇಳಿಕೊಳ್ಳುವ ದೇವಿ, ತನ್ನ ಸಹೋದ್ಯೋಗಿ ಮೀರಾಳಿಂದ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸುವ, ಸುದ್ದಿಗಳ ವಿಡಿಯೋಗಳನ್ನು ಇ-ಮೇಲ್ ಮಾಡುವ, ಸುದ್ದಿಯನ್ನು ಗ್ರಹಿಸುವ ಆಂಗಲ್ ಯಾವುದು – ಈ ಎಲ್ಲಾ ಸಂಗತಿಗಳನ್ನು ಬಹಳ ಆಸ್ಥೆಯಿಂದ ಕಲಿಯುತ್ತಾರೆ. ಇದೇ ದೇವಿ ಪೊಲೀಸ್ ಠಾಣೆಯಲ್ಲಿ ಅತ್ಯಚಾರ ಪ್ರಕರಣವೊಂದರ ದೂರಿನ ಪ್ರತಿ ಸಂಗ್ರಹಿಸುವುದು, ಆ ಮುಖಾಂತರ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ತಂದೆಯನ್ನು ಸಂದರ್ಶಿಸುವ ಸಂದರ್ಭವಂತೂ ಮನಕಲಕುವಂತದ್ದು.

ಈ ಮೇಲಿನ ಸಂಗತಿಗಳು ಸಾಕ್ಷ್ಯ ಚಿತ್ರದಲ್ಲಿನ ಕೆಲವು ಉದಾಹರಣೆಗಳಷ್ಟೆ. ಇವತ್ತು ರಾಷ್ಟ್ರ ಮಟ್ಟದಲ್ಲಿ ಉಪಸ್ಥಿತರಿರುವ ದೊಡ್ಡದೊಡ್ಡ ಮಾಧ್ಯಮಗಳು ಮತ್ತು ಅದರಲ್ಲಿ ಕೆಲಸ ಮಾಡುವ ವೃತ್ತಿಪರ ಪತ್ರಕರ್ತರು ಖಬರ್ ಲಹರಿಯಾದಲ್ಲಿನ ಈ ದಲಿತ ಮಹಿಳಾ ವರದಿಗಾರರಿಂದ ಕಲಿಯಬೇಕಾದ ಸಾಕಷ್ಟು ಸಂಗತಿಗಳಿವೆ. ಇವತ್ತು ಮಾಧ್ಯಮಗಳಿಗೆ ಹಣ, ಹೊಸಹೊಸ ತಂತ್ರಜ್ಞಾನದ ಸಹಾಯ, ವೃತಿಪರ ಶಿಕ್ಷಣ ಪಡೆದ ಸಿಬ್ಬಂದಿ ಇನ್ನೂ ಹತ್ತು ಹಲವು ಸವಲತ್ತುಗಳು ಇವೆ. ಆದರೆ ’ಖಬರ್ ಲಹರಿಯಾ’ದಲ್ಲಿರುವ ಪ್ರಾಮಾಣಿಕತೆ, ಅಂತಃಕರಣ ಇವುಗಳಲ್ಲಿ ಕಾಣಿಯಾಗಿದೆ. ಖಬರ್ ಲಹರಿಯಾ ಕವರ್ ಮಾಡುವ ಸುದ್ದಿಗಳ ಆದ್ಯತೆಯನ್ನು ಒಮ್ಮೆ ನೋಡಬೇಕು: ಎಲ್ಲೋ ದೂರದ ಊರುಗಳಲ್ಲಿ ನಡೆಯುವ ಕಾನೂನುಬಾಹಿರ ಗಣಿಗಾರಿಕೆ, ಗಣಿ ಮಾಲೀಕರು ಸ್ಥಳೀಯರ ಮೇಲೆ ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ಸುದ್ದಿಗಳು ಮತ್ತು ಅವರ ಪರವಾಗಿ ನಡೆಯುವ ಕಾನೂನು ಹೋರಾಟ, ಶೌಚಾಲಯವಿಲ್ಲದ ದಲಿತ ಕೇರಿಗಳ ಕಥನ, ಗ್ರಾಮಗಳಲ್ಲಿ ವಿದ್ಯುತ್ ಮತ್ತು ವ್ಯವಸಾಯಕ್ಕೆ ನೀರು ಒದಗಿಸಲು ಒತ್ತಾಯಿಸುವ-ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವ ಸುದ್ದಿಗಳು ಹೀಗೆ. ಖಬರ್ ಲಹರಿಯಾದ ಪತ್ರಕರ್ತರ ಭಾಷೆ ಮತ್ತು ಗೆಸ್ಚರ್‌ಗಳನ್ನು ಗಮನಿಸಬೇಕಾದದ್ದು ಕೂಡ ಬಹಳ ಮುಖ್ಯವಾದದ್ದು.

ದೌರ್ಜನ್ಯಕ್ಕೆ ಒಳಗಾದ ವಿಕ್ಟಿಮ್‌ಗಳು ತಮ್ಮ ಕಷ್ಟಗಳನ್ನು ಭಯದಿಂದಲೊ ಮುಜಗರದಿಂದಲೋ ಯಾರೊಂದಿಗೂ ಹಂಚಿಕೊಳ್ಳದ ಸಂಗತಿಗಳನ್ನು, ನಮ್ಮವರೇ ಯಾರೊ ಆಲಿಸುತ್ತಿದ್ದಾರೆ ಮತ್ತು ಅದಕ್ಕೆ ಸ್ಪಂದಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಖಬರ್ ಲಹರಿಯಾದ ಪತ್ರಕರ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಇವರ ಭಾಷೆಯಲ್ಲಿ ಒಂದು ಮಾನವೀಯ ಸ್ಪರ್ಶವಿದೆ. ಉತ್ತರ ಪ್ರದೇಶದ ಚುನಾವಣಾ ರ್‍ಯಾಲಿ ಕುರಿತ ಸುದ್ದಿಗಳು, ನಂತರ ಚುನಾಯಿತವಾದ ಸರ್ಕಾರದ ಆದ್ಯತೆ, ಧರ್ಮದ ಹೆಸರಿನಲ್ಲಿ ಅದು ಮಾಡುತ್ತಿರುವ ರಾಜಕಾರಣ, ಕೋಮುಗಲಭೆಗಳು, ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಸುದ್ದಿಗಳು – ಇವೆಲ್ಲವನ್ನೂ ಯಾವುದೇ ಉದ್ವೇಗ ಇಲ್ಲದೆ, ಸಮಚಿತ್ತದಿಂದ ವರದಿ ಮಾಡುವುದಂತೂ ಖಬರ್ ಲಹರಿಯಾದ ಪ್ರೌಢಿಮೆಗೆ ಸಾಕ್ಷಿ.

ಸುಷ್ಮಿತ ಘೋಷ್ ಮತ್ತು ರಿಂಟು ಥಾಮಸ್

ಬಹಳ ಕಾಲದಿಂದ ಬಹುಪಾಲು ದೊಡ್ಡ ಮಾಧ್ಯಮಗಳು ತಾವು ಯಾವುದಕ್ಕೆ ಬದ್ಧ ಎಂದು ರುಜುವಾತು ಪಡಿಸಿವೆ. ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದ ಕೆಲವು ಘಟನೆಗಳನ್ನು ಗಮನಿಸಿದರೆ ಇದು ಇನ್ನಷ್ಟು ನಿಚ್ಚಳವಾಗಿ ಸ್ಪಷ್ಟವಾಗುತ್ತದೆ. ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಸಂವಿಧಾನಬದ್ಧ ಹಕ್ಕನ್ನು ನಿರಾಕರಿಸುವುದಕ್ಕೆ ಪೂರಕವಾಗಿ ಸುದ್ದಿ ಮಾಡಿ, ಈ ದೇಶದ ಸಂವಿಧಾನವನ್ನು ಅವಮಾನಿಸಿದ್ದು ಮಾತ್ರವಲ್ಲ, ಕೋಮು ಸೌಹಾರ್ದವನ್ನು ಹಾಳುಮಾಡಿ ಜನರ ನಡುವೆ ದ್ವೇಷ ಬಿತ್ತುವಲ್ಲಿ ಈ ಮಾಧ್ಯಮಗಳು ಯಶಸ್ವಿ ಆದವು. ಈ ದೇಶದ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರ ಫೋಟೋ ತೆಗೆಸಿ ಅಪಮಾನಿಸಿದ ನ್ಯಾಯಾಧೀಶರೊಬ್ಬರ ನಡೆ ಮಾಧ್ಯಮಗಳಿಗೆ ಚರ್ಚೆಯ ವಿಷಯವಾಗಲಿಲ್ಲ. ಈ ನ್ಯಾಯಾಧೀಶರ ಮೇಲೆ ಸರ್ಕಾರವಾಗಲಿ ನ್ಯಾಯಾಂಗವಾಗಲಿ ಯಾವುದೇ ಕ್ರಮ ಜರುಗಿಸದೇ ಇರುವುದಕ್ಕೆ
ಪ್ರತಿರೋಧವಾಗಿ ಅಂಬೇಡ್ಕರ್‌ವಾದಿಗಳಿಂದ ನಡೆದ ಬೃಹತ್ ಪ್ರತಿಭಟನೆಯನ್ನ ಈ ಮಾಧ್ಯಮಗಳು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿದವು. ಈ ದೇಶದ ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ ಮತ್ತು ನಿರ್ಗತಿಕರ ಮೇಲೆ ನಡೆಯುವ ದೌರ್ಜನ್ಯಗಳು ಮತ್ತು ಅವರ ಪ್ರತಿರೋಧಗಳು ಈ ಮಾಧ್ಯಮಗಳಿಗೆ ಸರ್ವೆಸಾಧಾರಣವಾದ ವಿಷಯ. ಮೂಲೆ ಬಾಕ್ಸ್ ಒಂದರಲ್ಲಿ ಸುದ್ದಿ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಸಿನಿಮಾ ತಾರೆಯ ನಿಶ್ಚಿತಾರ್ಥ, ಮದುವೆ, ಸೀಮಂತ, ವಿಚ್ಛೇದನ, ಸಾವು ಇವರಿಗೆ ಜೀವನ್ಮರಣದ ಸುದ್ದಿಗಳು. ಇವುಗಳನ್ನು ಅಹರ್ನಿಷಿ ಪ್ರಸಾರ ಮಾಡುತ್ತವೆ.

ಕೊನೆಯ ಮಾತುಗಳು

ಪೀಠಿಕೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಬಹುತೇಕ ಮಾಧ್ಯಮಗಳು ಜನವಿರೋಧಿಗಳಾಗಿರುವುದು ತಿಳಿದಿರುವಂತದ್ದೆ. ಇದರಲ್ಲಿ ಹೊಸದೇನು ಇಲ್ಲ. ಆದರೆ, ಯಾವ ಮಾಧ್ಯಮಗಳು ಜನಪರವಾದ ನಿಲುವುಗಳನ್ನು ಹೊಂದಿದ್ದವು ಮತ್ತು ಯಾವುವು ನಮಗೆ ತಿಳಿವಳಿಕೆ ಮೂಡಿಸಿ ಸಂವೇದನಾಶಿಲರನ್ನಾಗಿಸಿದ್ದವು ಎಂದು ನಂಬಿದ್ದೆವೋ ಅವುಗಳ ಆದ್ಯತೆಗಳನ್ನು ಹಿಂದಿರುಗಿ ನೋಡಿ, ಇವತ್ತು ಪರಾಮರ್ಶಿಸಿದರೆ, ನಮ್ಮ ಗ್ರಹಿಕೆಯಲ್ಲಿನ ತೊಡಕು, ಅಭಿಪ್ರಾಯದಲ್ಲಿನ ದ್ವಂದ್ವ, ಸ್ಪಷ್ಟ ವೈಚಾರಿಕ ನಿಲುವುಗಳ ಕೊರತೆಗಳಿಗೆ ಈ ಪತ್ರಿಕೆಗಳ ಕೊಡುಗೆಯೂ ಇದೆ ಅನಿಸುತ್ತದೆ. ಯಾಕೆಂದರೆ ಈ ಜನಪರವಾದ ಮಾಧ್ಯಮಗಳಲ್ಲಿ ಇದ್ದವರೂ ಅದೇ ಮೇಲ್ವರ್ಗದ ಸಮುದಾಯ. ಇವರಿಗೆ ತಳ ಸಮುದಾಯದ ಸಂಗತಿಗಳು ಕೇವಲ ಸುದ್ದಿಗಳು ಮಾತ್ರವಾಗಿದ್ದವು, ಕಾಲಕ್ರಮೇಣ ಸುದ್ದಿಯಿಂದಲೂ ಇವು ಕಣ್ಮರೆಯಾದವು.

Writing With Fire ಸಾಕ್ಷ್ಯಚಿತ್ರದ ಪ್ರಾರಂಭದಲ್ಲಿ ಒಂದು ದೃಶ್ಯವಿದೆ. ತನ್ನ ಹೆಂಡತಿ ಮೇಲೆ ಅತ್ಯಾಚಾರವಾದ ಸಂಗತಿಯನ್ನು ಬಿಚ್ಚಿಡುವ ವ್ಯಕ್ತಿ ಪತ್ರಕರ್ತೆಗೆ ಹೇಳುತ್ತಾನೆ, ’ಖಬರ್
ಲಹರಿಯಾ ನಮಗೆ ಉಳಿದಿರುವ ಕೊನೆಯ ಭರವಸೆ’ ಎಂದು. ಹೌದು. ಖಬರ್ ಲಹರಿಯಾ ಅಂತಹ ಸಣ್ಣಸಣ್ಣ ಸ್ವತಂತ್ರ ಮಾಧ್ಯಮಗಳು ಇವತ್ತಿನ ಭರವಸೆ. ತಳ ಸಮುದಾಯದ ಹೆಚ್ಚುಹೆಚ್ಚು ಮಂದಿ ಈ ಮಾಧ್ಯಮಗಳನ್ನು ಮುನ್ನಡೆಸುವಂತಾಗಿ, ದೌರ್ಜನ್ಯಕ್ಕೆ ಒಳಗಾದವರನ್ನು ಪ್ರತಿನಿಧಿಸುವ, ಸಂತೈಸುವ, ಅವರ ಹಕ್ಕುಗಳಿಗಾಗಿ ಹೋರಾಡುವಂತೆ ಅವು ಬದಲಾಗಿ, ಸುದ್ದಿಗಳಿಗೆ ಅಂತಃಕರಣ ಭಾಷೆಯ ಸ್ಪರ್ಷ ನೀಡುವಂತಾಗಲಿ.

ಸಾಕ್ಷ್ಯಚಿತ್ರ ಈಗಾಗಲೇ ಪ್ರಪಂಚದ ಮೂಲೆಮೂಲೆಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನವಾಗಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕೂಡ ಇದೆ. ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಕೊಡುವ ಮುಖಾಂತರ ಪ್ರಶಸ್ತಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲಿ ಎಂದು ಆಶಿಸೋಣ. ಈ ಸಾಕ್ಷ್ಯಚಿತ್ರದ ಮುಖಾಂತರ ’ಖಬರ್ ಲಹರಿಯಾ’ವನ್ನು ಪ್ರಪಂಚಕ್ಕೆ ಪರಿಚಯಿಸಿದ ಸುಷ್ಮಿತ ಘೋಷ್ ಮತ್ತು ರಿಂಟು ಥಾಮಸ್ ಅವರಿಗೆ ಅಭಿನಂದನೆಗಳು. ಖಬರ್ ಲಹರಿಯಾ ತಂಡಕ್ಕೆ ಕೃತಜ್ಞತೆಗಳು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read