Homeಮುಖಪುಟಯುಪಿ 5ನೇ ಹಂತದ ಚುನಾವಣೆ ಇಂದು: ಬಿಜೆಪಿ ಭದ್ರಕೋಟೆ ಛಿದ್ರವಾಗುವುದೇ?

ಯುಪಿ 5ನೇ ಹಂತದ ಚುನಾವಣೆ ಇಂದು: ಬಿಜೆಪಿ ಭದ್ರಕೋಟೆ ಛಿದ್ರವಾಗುವುದೇ?

- Advertisement -
- Advertisement -

ಲಖನೌ: ಉತ್ತರ ಪ್ರದೇಶದ 12 ಜಿಲ್ಲೆಗಳಿಗೆ ಸೇರಿದ 61 ಕ್ಷೇತ್ರಗಳಲ್ಲಿ ಇಂದು ಐದನೇ ಹಂತದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಇಂದು ಮತದಾನ ನಡೆಯಲಿರುವ ಮಧ್ಯ ಯುಪಿ ಮತ್ತು ಅವಧ್ ‌ಪ್ರಾಂತ್ಯದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಪ್ರಭಾವ ಹೊಂದಿವೆ. ರಾಮ ಮಂದಿರ ನಿರ್ಮಾಣದ ಆಂದೋಲನದ ಕೇಂದ್ರಬಿಂದುವಾಗಿದ್ದ ಅಯೋಧ್ಯೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಪವನ್ ಪಾಂಡೆ ವಿರುದ್ಧ ಬಿಜೆಪಿ ಶಾಸಕ ವಿಪಿ ಗುಪ್ತಾ ಸ್ಪರ್ಧಿಸಲಿದ್ದಾರೆ.

ದೇವಾಲಯ ಅಭಿವೃದ್ಧಿ ಹೆಸರಲ್ಲಿ ಅಯೋಧ್ಯೆ ಸಣ್ಣ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಅಯೋಧ್ಯೆಯ ಚರ್ಚಾ ವಿಷಯವಾಗಿದೆ. ಯೋಗಿ ಆದಿತ್ಯನಾಥ್ ಅವರೂ ವ್ಯಾಪಾರಿಗಳ ಕೂಗು ಆಲಿಸುವುದಾಗಿ ಹೇಳಿದ್ದಾರೆ. ಎಸ್‌ಪಿ ಹಾಗೂ ಪ್ರತಿಪಕ್ಷಗಳು ಇದೇ ವಿಷಯವನ್ನು ಮುನ್ನೆಲೆಗೆ ತಂದಿದ್ದು, ರಾಮಮಂದಿರ ಸಂಗತಿಗೆ ಹಿನ್ನೆಡೆಯಾಗಿದೆ. (ಈ ಕುರಿತ ವಿಶೇಷ ವರದಿ ಇಲ್ಲಿ ಓದಿರಿ)

ಇದನ್ನೂ ಓದಿರಿ: ಯುಪಿ ಚುನಾವಣೆ 5ನೇ ಹಂತದ ಮತದಾನ: ಸಂಕಷ್ಟದಲ್ಲಿರುವ ಅಮೇಥಿ ಕ್ಷೇತ್ರದ ರೈತರು

ಪ್ರಯಾಗ್‌ರಾಜ್ (ಅಲಹಾಬಾದ್‌) ಭಾಗದಲ್ಲಿ ಇಂದು ಮತದಾನ ನಡೆಯಲಿದೆ. ಹಿಂದೂಗಳ ಪವಿತ್ರ ಸ್ಥಳವೆಂದೇ ಕರೆಯುವ ‘ಸಂಗಮ್‌‌’ ಇಲ್ಲಿದೆ. ಹಲವಾರು ಕೋಚಿಂಗ್ ಸೆಂಟರ್‌ಗಳಿಂದಾಗಿ ಎಲ್ಲಾ ಸಮುದಾಯಗಳ ವಿದ್ಯಾರ್ಥಿ ಸಮುದಾಯ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಹಿಂದಿನ ಕಾಂಗ್ರೆಸ್ ಭದ್ರಕೋಟೆಯಾದ ಅಮೇಠಿಯಲ್ಲಿಯೂ ಇಂದು ಮತದಾನ ನಡೆಯುತ್ತಿದೆ.

2017ರ ಚುನಾವಣೆಯಲ್ಲಿ ಇಲ್ಲಿನ 61 ಸ್ಥಾನಗಳಲ್ಲಿ 50 ಸ್ಥಾನಗಳನ್ನು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆದ್ದಿರುವುದರಿಂದ ಈ ಹಂತವು ಬಿಜೆಪಿಗೆ ನಿರ್ಣಾಯಕವಾಗಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಬಿಜೆಪಿಗೆ ದೊಡ್ಡ ಸವಾಲಾಗಿದೆ.

ಈ ಭಾಗದಲ್ಲಿ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ವಿರುದ್ಧ ಕ್ರಮ ವಹಿಸಿರುವುದಾಗಿ ಬಿಜೆಪಿ ಚುನಾವಣಾ ಪ್ರಚಾರ ಮಾಡಿದ್ದರೆ, ಪ್ರತಿಪಕ್ಷಗಳು ಬಿಡಾಡಿ ದನಗಳ ವಿಷಯದಲ್ಲಿ ಬಿಜೆಪಿಯ ವಿರುದ್ಧ ಕಹಳೆ ಊದಿವೆ. ನಿರುದ್ಯೋಗ ಮತ್ತು ಗ್ರಾಮೀಣ ಜನರ ಸಂಕಟಗಳ ಕುರಿತು ಪ್ರತಿಪಕ್ಷಗಳು ಮಾತನಾಡಿವೆ.

ಇದನ್ನೂ ಓದಿರಿ: ಯುಪಿ ಸಿಎಂ ರ್‍ಯಾಲಿ ನಡೆಯುವ ಮೈದಾನಕ್ಕೆ ಬಿಡಾಡಿ ದನಗಳನ್ನು ಬಿಟ್ಟ ರೈತರು!

ಇಂದು ಮತದಾನ ನಡೆಯಲಿರುವ ಜಿಲ್ಲೆಗಳಲ್ಲಿ ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಢ, ಕೌಶಂಬಿ, ಪ್ರಯಾಗ್‌ರಾಜ್, ಬಾರಾಬಕಿ, ಬಹ್ರೈಚ್, ಶ್ರಾವಸ್ತಿ ಮತ್ತು ಗೊಂಡಾ ಸೇರಿವೆ.

ಕೌಶಂಬಿ ಜಿಲ್ಲೆಯ ಸಿರತ್ತು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ 5ನೇ ಹಂತದ ಕಣದಲ್ಲಿ ಹಲವು ಪ್ರಮುಖರು ಕಣದಲ್ಲಿದ್ದಾರೆ. ಕೇಶವ್ ಪ್ರಸಾದ್ ಅವರು ಅಪ್ನಾ ದಳ (ಕಾಮರವಾಡಿ) ಅಭ್ಯರ್ಥಿ ಪಲ್ಲವಿ ಪಟೇಲ್ ಅವರನ್ನು ಎದುರಿಸುತ್ತಿದ್ದಾರೆ. ಅಲಹಾಬಾದ್ ಪಶ್ಚಿಮದಿಂದ ಸಿದ್ಧಾರ್ಥ್ ನಾಥ್ ಸಿಂಗ್, ಪಟ್ಟಿಯಿಂದ (ಪ್ರತಾಪಗಢದಿಂದ) ರಾಜೇಂದ್ರ ಸಿಂಗ್ ಅಲಿಯಾಸ್ ಮೋತಿ ಸಿಂಗ್, ಅಲಹಾಬಾದ್ ದಕ್ಷಿಣದಿಂದ ನಂದ ಗೋಪಾಲ್ ಗುಪ್ತ ನಾಡಿ ಮತ್ತು ಮಂಕಾಪುರದಿಂದ (ಗೊಂಡಾ) ರಮಾಪತಿ ಶಾಸ್ತ್ರಿ ಸ್ಪರ್ಧೆಯಲ್ಲಿರುವ ಸಚಿವರಾಗಿದ್ದಾರೆ.

1993ರಿಂದ ಕುಂದಾದಿಂದ ಶಾಸಕರಾಗಿರುವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರು ಮತ್ತೊಮ್ಮೆ ತಮ್ಮ ಪಕ್ಷ ಜನಸತ್ತಾ ದಳದಿಂದ ಕಣದಲ್ಲಿದ್ದಾರೆ. ಅವರ ಹಳೆಯ ಸಹಾಯಕ ಗುಲ್ಶನ್ ಯಾದವ್ ಅವರು ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ.

ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ತಾಯಿ ಮತ್ತು ಅಪ್ನಾ ದಳ (ಕೆ) ನಾಯಕ ಕೃಷ್ಣಾ ಪಟೇಲ್ ಕೂಡ ಪ್ರತಾಪಗಢ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಪ್ನಾ ದಳ (ಕೆ), ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರ ಮೋನಾ ಅವರು ಪ್ರತಾಪ್‌ಗಢದ ರಾಮ್‌ಪುರ ಖಾಸ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಫೆಬ್ರವರಿ 23ರಂದು ರಾಜ್ಯದಲ್ಲಿ ನಾಲ್ಕನೇ ಹಂತದ ಮತದಾನ ನಡೆದಿತ್ತು. ಯುಪಿಯ 403 ವಿಧಾನಸಭಾ ಸ್ಥಾನಗಳಲ್ಲಿ 231 ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ನಡೆದಿದೆ.


ಇದನ್ನೂ ಓದಿರಿ: ‘ನನ್ನನ್ನು ಕ್ಷಮಿಸಿ’: ವೇದಿಕೆ ಮೇಲೆಯೆ ಕಿವಿ ಹಿಡಿದು ‘ಬಸ್ಕಿ’ ಹೊಡೆದ ಯುಪಿ ಬಿಜೆಪಿ ಶಾಸಕ ಭೂಪೇಶ್ ಚೌಬೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮೋದಿ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ...

0
ಕರ್ನಾಟಕದಲ್ಲಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ ತಗುಲಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. "ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ...