Homeಮುಖಪುಟಪತ್ರಿಕೋದ್ಯಮ ಜಾಗದಲ್ಲಿ ಪ್ರತ್ಯಕ್ಷವಾದ ದ್ವೇಷ; ಸುದ್ದಿರಹಿತ ಸುದ್ದಿ ಮಾಧ್ಯಮಗಳಾದ ಕನ್ನಡ ಟಿವಿಗಳ ಪ್ರಕರಣ

ಪತ್ರಿಕೋದ್ಯಮ ಜಾಗದಲ್ಲಿ ಪ್ರತ್ಯಕ್ಷವಾದ ದ್ವೇಷ; ಸುದ್ದಿರಹಿತ ಸುದ್ದಿ ಮಾಧ್ಯಮಗಳಾದ ಕನ್ನಡ ಟಿವಿಗಳ ಪ್ರಕರಣ

- Advertisement -
- Advertisement -

“ಯಾವ ಪ್ರಶ್ನೆಗೆ ಬರುತ್ತೆ ಅಂದ್ರೆ, ಕುಂಕುಮ ಮತ್ತು ಬಳೆಯ ಪ್ರಶ್ನೆನ ಮಾಡ್ತಾ ಇರುವಂತವರು, ನಾಳೆ ಭಾರತ ಮಾತಾ ಯಾಕೆ, ಬೇಬಿ ಜಾನ್ ಅಂತ ಹೆಸರು ಇಡಿ ಅಂತ ಕೇಳೋದ್ರಲ್ಲಿ ಯಾವ ಅನುಮಾನಾನೂ ಇಲ್ಲ ಅಂತ ಅನ್ಸುತ್ತೆ. ಆ ಮಟ್ಟಕ್ಕು ಬರಬಹುದೇನೋ. ಭಾರತ ಮಾತಾಗೆ ಯಾಕ್ರೀ ಕುಂಕುಮ ಮತ್ತು ಬಳೆ ಹಾಕ್ತಿರಾ.. ಅವರಿಗೂ ಬುರ್ಖಾ ಹಾಕಿ. ನಮಗೂ ಹಕ್ಕಿದೆ ಅಂತ ಕೇಳುವ ಪ್ರಸಂಗ ಬರಬಹುದೇನೋ.. ಯಾಕೆ ಭಾರತದಲ್ಲಿ ಹಿಂದೂ ನದಿಗಳು ಇರಬೇಕು, ಹಿಂದೂ ಹೆಸರು ಇಡಬೇಕು, ಅದಕ್ಕೂ ಮುಸ್ಲಿಂ ಹೆಸರು ಇಡೀ ಅಂತ ಹೇಳಬಹುದು. ಆಶ್ಚರ್ಯ ಏನು ಇಲ್ಲ ಅಲ್ವ ಸರ್… ಈಗ ಹಿಜಾಬ್ ಕೇಳ್ತಾಯಿದ್ದಾರೆ, ಬುರ್ಖಾನು ಕೇಳ್ತಾಯಿದ್ದಾರೆ, ನಾಳೆ ಶುಕ್ರವಾರ ನಮಗೆ ನಮಾಜ್‌ಗೆ ಅವಕಾಶ ಮಾಡಿಕೊಡಬೇಕು ಅಂತನು ಕೇಳ್ತಾರೆ. ಸಂಡೆ ಯಾಕೆ ರಜ ಕೊಡ್ತೀರಾ, ನಮಗೆ ಶುಕ್ರವಾರನೇ ರಜ ಕೊಡಬೇಕು ಅಂತ ಕೇಳ್ತಾರೆ. ಅದಾದನಂತರ ಏಪ್ರಿಲ್‌ನಲ್ಲಿ ಯಾಕ್ರೀ ರಜ ಬೇಕು, ನಮಗೆ ರಂಜಾನ್‌ನಲ್ಲಿ ರಜ ಬೇಕು ಅಂತ ಕೇಳ್ತಾರೆ. ಇದು ಹಾಗೆ ಮುಂದುವರಿಯುತ್ತ ಇನ್ಮೇಲೆ ಅಂತ”

ಇದು ಹಿಜಾಬ್ ವಿವಾದ ಬಗ್ಗೆ ಪಬ್ಲಿಕ್ ಟಿವಿಯ ಒಬ್ಬ ಪುರುಷ ಸುದ್ದಿ ನಿರೂಪಕ
’ರಾಜಕಾರಿಣಿಗಳು ಮತ್ತು ಧಾರ್ಮಿಕ ಚಿಂತಕರೊಂದಿಗೆ’ ತನ್ನ ಚರ್ಚೆ ಶುರು ಮಾಡುವ ಮುಂಚೆ ಆಡಿದ ಮಾತುಗಳು. ಆತ ಏನು ಸೂಚಿಸುತ್ತಿದ್ದಾನೆ ಎಂಬುದು ಎಲ್ಲ ವೀಕ್ಷಕರಿಗೆ ಸ್ಪಷ್ಟವಾಗಿತ್ತು. ’ಈ ಮುಸ್ಲಿಮರ’ ಹಿಜಾಬ್ ಧರಿಸುವ ಈ ಒಂದು ’ಇಚ್ಛೆ’ಗೆ ಒಪ್ಪಿಗೆ ಸೂಚಿಸಿಬಿಟ್ಟರೆ, ಅವರು ಇಡೀ ಭಾರತವನ್ನೇ ವಶಪಡಿಸಿಕೊಂಡು, ಎಲ್ಲವನ್ನೂ ’ಅವರು’ ಹೇಗೆ ಬೇಕೋ ಹಾಗೆ ಬದಲಾವಣೆ ಮಾಡುವಂತೆ ಕೇಳತೊಡಗುತ್ತಾರೆ ಎಂಬಂತೆ ಕೇಳುತ್ತಿತ್ತು. ಕಳೆದ ಒಂದು ವಾರದಲ್ಲಿ ಕನ್ನಡದ ಟಿವಿ ಮಾಧ್ಯಮಗಳಲ್ಲಿ, ಈ ರೀತಿಯ ಹೇಳಿಕೆಗಳು ಬರುತ್ತಲೇ ಇವೆ ಹಾಗೂ ಇದಕ್ಕೆ ’ಹಿಜಾಬ್ ವರ್ಸಸ್ ಸಿಂಧೂರ್’ ಮತ್ತು ’ಧರ್ಮ ಯುದ್ಧ’ ಎಂಬ ಶೀರ್ಷಿಕೆಗಳನ್ನು ಇಟ್ಟು ಪ್ರಸಾರ ಮಾಡಲಾಗುತ್ತಿದೆ.

ಇದು ಪತ್ರಿಕೋದ್ಯಮ ಅಲ್ಲ. ಇದು ಸಕ್ರಿಯವಾಗಿ, ಉದ್ದೇಶಪೂರ್ವಕವಾಗಿ ಮುಸ್ಲಿಮರ ವಿರುದ್ಧ ದ್ವೇಷ ಸೃಷ್ಟಿಸುವ ಹಾಗೂ ಕರ್ನಾಟಕದಲ್ಲಿ ಅವರ ಅಸ್ತಿತ್ವಕ್ಕೆ ಬೆದರಿಕೆ ಹಾಕುವ ಕೆಲಸವಾಗಿದೆ. ಇದು ತಮ್ಮ ’ಸಂಸ್ಕೃತಿ’ಗೆ ಮುಸ್ಲಿಮರಿಂದ ಅಪಾಯ ಇದೆ ಎಂದು ಸುಳ್ಳುಸುಳ್ಳೇ ನಂಬಿಸಿ ಪ್ರಚೋದಿಸುವ ಕೆಲಸವೂ ಆಗಿದೆ. ಹಿಂದೂ ಪದ್ಧತಿಗಳನ್ನು ಪ್ರಶ್ನಿಸದೇ, ಹಿಜಾಬ್ ಎಂಬುದು ಧಾರ್ಮಿಕ ಸಂಕೇತ ಎಂಬ ಕಾರಣಕ್ಕಾಗಿ ನಿಷೇಧಿಸಿರುವ ಬಗ್ಗೆ ಮುಸ್ಲಿಮರು ಪ್ರಶ್ನೆ ಎತ್ತಿದ್ದಕ್ಕೆ ಇಂತ ಪ್ರಚೋದನೆಯ ಕೆಲಸ ನಡೆಯುತ್ತಿದೆ.

ಯಾವುದೇ ಜಾತ್ಯತೀತ, ಪ್ರಜಾಪ್ರಭುತ್ವದ ದೇಶದಲ್ಲಿ ಇದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಪದೇಪದೇ ಕಿರುಕುಳ ನೀಡುವುದು ಮತ್ತು ಅವಮಾನಿಸುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಜಾಗವಿರಬಾರದು. ಬಹುಸಂಖ್ಯಾತ ಸಮುದಾಯದ ಸಾಮಾನ್ಯ ಜನರಿಗೆ, ಅಲ್ಪಸಂಖ್ಯಾತರಿಂದ ತಮ್ಮ ಸಂಸ್ಕೃತಿ ಅಪಾಯಕ್ಕೊಳಗಾಗಿದೆ ಎಂದು ಪದೇಪದೇ ಹೇಳುವುದು ಸರಿಯಲ್ಲ. ಇಂದು ನಮ್ಮ ಕರ್ನಾಟಕದಲ್ಲಿ ಭ್ರಾತೃತ್ವದ ಸಂಬಂಧಗಳು
ಮುರಿದುಬೀಳುತ್ತಿವೆ ಹಾಗೂ ಅದಕ್ಕೆ ಪ್ರಮುಖ ಕಾರಣ ಈ ಟಿವಿ ಸುದ್ದಿ ವಾಹಿನಿಗಳಾಗಿವೆ.

ಉಡುಪಿಯಲ್ಲಿ ಈ ವಿವಾದ ಶುರುವಾದ ದಿನದಿಂದ, ಕನ್ನಡ ಟಿವಿ ಮಾಧ್ಯಮಗಳು ದ್ವೇಷವನ್ನು ಸೃಷ್ಟಿಸುತ್ತಲೇ ಇವೆ. ಎಲ್ಲಾ ಚಾನೆಲ್‌ಗಳು ಈ ಸುದ್ದಿಯನ್ನು ಮಾಡಿದ ರೀತಿಯು ಒಂದೇ ತೆರನಾಗಿದೆ:

1. ಮುಸ್ಲಿಂ ಮಹಿಳೆಯರಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪದ್ಧತಿಯಾಗಿರುವ ಹಿಜಾಬ್‌ಅನ್ನು ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸುವುದಕ್ಕೆ ಸಮನಾಗಿ ನೋಡಬಹುದೇ ಎಂಬ ಯಾವ ಪ್ರಶ್ನೆಯಾಗಲಿ, ಚರ್ಚೆಯಾಗಲಿ ಕಾಣಲಿಲ್ಲ.

2. ಹಿಜಾಬ್‌ಅನ್ನು ಧರಿಸುವ ಹಕ್ಕನ್ನು ಕೇಳಿ, ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ನಿಯಮಗಳನ್ನು ಪಾಲಿಸಲು ಬಯಸುವುದಿಲ್ಲ ಹಾಗೂ ಯಾವಾಗಲೂ ವಿನಾಯತಿಗಳನ್ನು ಕೇಳುತ್ತಿರುತ್ತಾರೆ ಎಂದು ಗಟ್ಟಿಯಾಗಿ ಹೇಳಲಾಯಿತು.

3. ಹಿಜಾಬ್‌ಅನ್ನು ಧರಿಸುತ್ತೇವೆ ಎಂದು ನಿಲುವು ತೆಗೆದುಕೊಳ್ಳುವುದರ ಅರ್ಥ ಮುಸ್ಲಿಮರು ಮುಖ್ಯವಾಹಿನಿಯೊಂದಿಗೆ ಬೆರೆಯಲು ಬಯಸುವುದಿಲ್ಲ ಹಾಗೂ ಆಧುನಿಕವಾಗಲು ಬಯಸದೇ ಯಾವಾಗಲೂ ಸಾಂಪ್ರದಾಯಿಕವಾಗಿ ಇರಲು ಬಯಸುತ್ತಾರೆ ಎಂದು ಪದೇಪದೇ ಹೇಳಲಾಯಿತು.

4. ಹಿಂದೂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಏಕಾಏಕಿ ಕೇಸರಿ ಶಾಲುಗಳನ್ನು ಹಾಕಿಕೊಳ್ಳಲು ಮತ್ತು ಜೈ ಶ್ರೀರಾಮ್ ಎಂದು ಗಟ್ಟಿಯಾಗಿ ಕೂಗಲು ಹೇಗೆ ಸಜ್ಜುಗೊಳಿಸಲಾಯಿತು, ಅವರಿಗೆ ಶಾಲುಗಳನ್ನು ವಿತರಿಸಿದ್ದು ಯಾರು ಅಥವಾ ಈ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಬಸವರಾಜ ಬೊಮ್ಮಾಯಿ ಸರಕಾರ ಏನೂ ಮಾಡಲಿಲ್ಲವೇಕೆ ಎಂಬ ಪ್ರಶ್ನೆಗಳನ್ನು ಚರ್ಚಿಸಲಿಲ್ಲ.

ಈ ವಿಷಯವನ್ನು ಕೇವಲ ಮುಸ್ಲಿಂ ವಿದ್ಯಾರ್ಥಿಗಳ ಮತ್ತು ಮುಸ್ಲಿಂ ವಿರೋಧಿ ರೀತಿಯಲ್ಲಿ ರೂಪಿಸುವ ಮೂಲಕ, ಕನ್ನಡ ಟಿವಿಗಳು, ಮುಸ್ಲಿಂರ ವಿರುದ್ಧ ಬಹಳಕಾಲದಿಂದ ಇರುವ ಪೂರ್ವಾಗ್ರಹದ ಅಭಿಪ್ರಾಯಗಳನ್ನು ಬಳಸಿಕೊಂಡರು. ಅವು: ಮುಸ್ಲಿಮರು ಎಂದರೆ ಹಿಂದುಳಿದ ಸಮುದಾಯ, ಅವರಿಗೆ ದೇಶ ಅಥವಾ ಶಿಕ್ಷಣ ಮುಖ್ಯ ಅಲ್ಲ, ಹಾಗೂ ಮುಸ್ಲಿಂ ಮಹಿಳೆಯರನ್ನು ದಬ್ಬಾಳಿಕೆಗೆ ಒಳಪಡಿಸಲಾಗುತ್ತದೆ ಹಾಗೂ ತಲೆಯನ್ನು ಮುಚ್ಚುವ ಸಲುವಾಗಿ ಹಿಜಾಬ್‌ನಂತಹ ವಸ್ತ್ರಗಳನ್ನು ಧರಿಸಲು ಬಲವಂತ ಮಾಡಲಾಗುತ್ತದೆ, ಎಂಬಿತ್ಯಾದಿ. ಯಾವುದೇ ಮುಸ್ಲಿಂ ಮಹಿಳೆಗೆ ಹಿಜಾಬ್‌ನೊಂದಿಗೆ ಅವರ ಸಂಬಂಧ ಏನು, ಹಿಜಾಬ್ ಎಂಬುದು ಅವರ ಧಾರ್ಮಿಕ ಅಸ್ಮಿತೆ ಅಥವಾ ದೈಹಿಕ ಸಮಗ್ರತೆಗೆ ಹೇಗೆ ಮುಖ್ಯ ಎಂಬ ಪ್ರಶ್ನೆಗಳನ್ನು ಕೇಳದೇ, ಹಿಂದೂ ಸಮುದಾಯದ ಈ ಪುರುಷ ಆಂಕರ್‌ಗಳು ಹಿಜಾಬ್‌ನ ನಿಷೇಧವನ್ನು ಮುಸ್ಲಿಂ ಮಹಿಳೆಯರಿಗೆ ’ವಿಮೋಚನೆ’ ಎಂದು ಪ್ರಸ್ತುತಪಡಿಸಿದರು ಹಾಗೂ ತಮಗೆ ಹಿಜಾಬ್‌ಅನ್ನು ಧರಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಲು ಯಾವುದೇ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದರು.

ಕರ್ನಾಟಕದ ಉಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿದ ನಂತರ, ಕನ್ನಡದ ಟಿವಿ ಚಾನೆಲ್‌ಗಳು ತಾವೇ ಖುದ್ದಾಗಿ ತೀರ್ಮಾನಿಸಿದ್ದೇನೆಂದರೆ, ಈ ಆದೇಶ ಶಾಲೆ ಕಾಲೇಜುಗಳ ಎಲ್ಲಾ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರಿಗೆ ಅನ್ವಯವಾಗುತ್ತದೆ ಎಂದು. 14ನೇ ಫೆಬ್ರುವರಿಯಂದು ಶಾಲೆಗಳು ಮತ್ತೆ ಶುರುವಾದಾಗ (ಅಲ್ಲಿಯತನಕ ಕರ್ನಾಟಕ ಸರಕಾರ ಶಾಲೆಗಳನ್ನು ರಜೆ ಘೋಷಿಸಿತ್ತು.) ಈ ಟಿವಿ ಚಾನೆಲ್‌ಗಳು ಶಾಲೆಗಳಿಗೆ ದೌಡಾಯಿಸಿದವು.

ಅಲ್ಲಿ ಇವರು ತರಗತಿಗಳ ಒಳಗೆ ನುಗ್ಗಿದರು, ತರಗತಿಗಳಲ್ಲಿ ಹಿಜಾಬ್ ಧರಿಸಿ ಕೂತ ಮುಖಗಳನ್ನು ಪದೇಪದೇ ಬಿತ್ತರಿಸಿದರು, ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ತಥಾಕಥಿತ ’ಉಲ್ಲಂಘನೆ’ಯ ಬಗ್ಗೆ, ಶಾಲೆಯ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳನ್ನು
ಪ್ರಶ್ನಿಸಿದರು. ಕೊನೆಗೆ, ’ನೋಡಿ ವಿದ್ಯಾರ್ಥಿಗಳು ಹಿಜಾಬ್ ಇಲ್ಲದೇ ತರಗತಿಗಳಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ’ ಎಂದು ತೋರಿಸಿ, ಇದನ್ನು ತಮ್ಮ ವರದಿಗಾರಿಕೆಯ ’ಪರಿಣಾಮ’ ಎಂದು ಸಂಭ್ರಮಿಸಿದರು. ಶಾಲೆ ಮತ್ತೆ ಪ್ರಾರಂಭವಾದ ನಂತರದ ಮೊದಲ ಎರಡು ದಿನಗಳಲ್ಲಿ, ಕನಿಷ್ಠ ಮೂರು ಟಿವಿ ಚಾನೆಲ್‌ಗಳು ಹೈದರಾಬಾದ್-ಕರ್ನಾಟಕದ ಅಲ್ಪಸಂಖ್ಯಾತ ಶಾಲೆಗಳಿಗೆ ಹೋದವು ಹಾಗೂ ಅಲ್ಲಿ ಶಾಲೆಯ ಆಡಳಿತದೊಂದಿಗೆ ವಿದ್ಯಾರ್ಥಿಗಳು ಹಿಜಾಬ್‌ಅನ್ನು ತೆಗೆಸುವಂತೆ ಬೆದರಿಸಿದವು.

ಒಂದು ನಿರ್ದಿಷ್ಟ ಭಯಾನಕ ಪ್ರಕರಣದಲ್ಲಿ ದಿಗ್ವಿಜಯ ಟಿವಿಯು ಒಂದು ವಿಡಿಯೋ ಬಿತ್ತರಿಸಿತು, ಅದರಲ್ಲಿ ಒಬ್ಬ ವರದಿಗಾರನು (ಈತ ಬೇರೆ ಚಾನೆಲ್ ಒಂದಕ್ಕೆ ಸೇರಿದ್ದು ವರದಿಯಾಗಿದೆ) ಒಬ್ಬ ಪುಟ್ಟ ಬಾಲಕಿಯನ್ನು ಅಟ್ಟಾಡಿಸಿಕೊಂಡು ಹೋಗುತ್ತಾನೆ, ಅಲ್ಲಿಯ ಶಿಕ್ಷಕಿಯೊಬ್ಬರು ಆ ಮಗುವನ್ನು ಅವಳ ಪಾಡಿಗೆ ಬಿಟ್ಟುಬಿಡಿ, ಹಿಜಾಬ್‌ಅನ್ನು ತರಗತಿಯ ಒಳಗೆ ತೆಗೆಸುತ್ತೇನೆ ಎಂದು ಪದೇಪದೇ ಹೇಳಿದರೂ ಆ ವರದಿಗಾರ ಬಿಡದೇ ಬೆಂಬತ್ತಿದ್ದಾನೆ. ಅದೇ ಸಮಯದಲ್ಲಿ, ವರದಿಗಾರರು ಮತ್ತು ಕ್ಯಾಮರಾಮನ್‌ಗಳು ಶಾಲಾಕಾಲೇಜುಗಳ ಬಳಿ ಮುಸ್ಲಿಂ ಮಹಿಳೆಯರ, ಅವರು ಹಿಜಾಬ್ ತೆಗೆಯುತ್ತಿರುವ ಹಲವಾರು ವಿಡಿಯೋಗಳನ್ನು ಅವರ ಅಪ್ಪಣೆಯಿಲ್ಲದೇ ಸೆರೆಹಿಡಿದಿದ್ದಾರೆ ಹಾಗೂ ಅವುಗಳನ್ನು ’ಸುದ್ದಿ’ ಎಂದು ಪ್ರಸಾರ ಮಾಡಿದ್ದಾರೆ.

ಮಾಧ್ಯಮದ ಈ ರೀತಿಯ ಕವರೇಜ್‌ನ ಎಲ್ಲ ಮಾದರಿಗಳು ಕೇವಲ ವಲ್ಚರ್ ಜರ್ನಲಿಸಂನ (ರಣಹದ್ದುಗಳ ಪತ್ರಿಕೋದ್ಯಮ. ಈ ಪದವು ಟ್ವಿಟರ್‌ನಲ್ಲಿ ಹುಟ್ಟಿಕೊಂಡಿತ್ತು) ಉದಾಹರಣೆಗಳಷ್ಟೇ ಅಲ್ಲ, ಇವು ಅದಕ್ಕಿಂತ ಹಚ್ಚಾಗಿ ವ್ಯಕ್ತಿಗಳ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಗಳಿಗೆ ಉದಾಹರಣೆಗಳಾಗಿವೆ. ಮುಸ್ಲಿಂ ಮಹಿಳೆಯರು ಹಿಜಾಬ್/ಬುರ್ಖಾ ತೆಗೆಯುವ ಅಥವಾ ಧರಿಸುವ ವಿಡಿಯೋಗಳನ್ನು ಅವರ ಅನುಮತಿಯಿಲ್ಲದೇ ಬಿತ್ತರಿಸುವುದು ಆರ್ಟಿಕಲ್ 21 ಅಡಿಯಲ್ಲಿ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ರೀತಿಯಲ್ಲಿ ಕವರೇಜ್ ಮಾಡುವುದು, ಘನತೆಯ ಹಕ್ಕಿನ ಮೇಲೆಯೂ ಗಂಭೀರ ಪೆಟ್ಟು ನೀಡಿದಂತಾಗುತ್ತದೆ. ಚಿತ್ರೀಕರಣ ಮಾಡುವುದು, ಬಟ್ಟೆಯ ಒಂದು ಭಾಗವನ್ನು ತೆಗೆಯುವಂತೆ ಬಲವಂತ ಮಾಡುವುದು ಇವೆಲ್ಲ ಮಾಧ್ಯಮಗಳ ಅಧಃಪತನ ಮತ್ತು ದ್ವೇಷದ ಮಟ್ಟವನ್ನು ತೋರಿಸುತ್ತವೆ ಹಾಗೂ ತನ್ನ ವೀಕ್ಷಕರನ್ನೂ ಅದೇ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಮಾಧ್ಯಮಗಳ ಮೊದಲ ಬದ್ಧತೆ ಸಂವಿಧಾನಕ್ಕೆ ಇರಬೇಕಾಗಿದೆ. ಆದರೆ ಅವುಗಳು ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಡಿಜಿಟಲ್ ಸ್ಟ್ಯಾಂಡರ್ಡ್ ಅಥಾರಿಟಿಯ ನೀತಿ ಸಂಹಿತೆಯಲ್ಲಿ ಪ್ರತಿಪಾದಿಸಿರುವ ಖಾಸಗಿತನ, ತಟಸ್ಥತೆ, ವಸ್ತುನಿಷ್ಠತೆ ಹಾಗೂ ನಿಷ್ಪಕ್ಷಪಾತದ ಮೂಲಭೂತ ತತ್ವಗಳನ್ನೂ ಎತ್ತಿಹಿಡಿಯುವಲ್ಲಿಯೂ ವಿಫಲವಾಗಿವೆ.

ಈ ವಿಷಯದ ಬಗ್ಗೆ ಬಹು ಆಯಾಮಗಳ ದೃಷ್ಟಿಕೋನಗಳನ್ನು ನೀಡದೇ, ಕನ್ನಡದ ಟಿವಿ ಚಾನೆಲ್‌ಗಳ ಆಂಕರ್‌ಗಳು, ಇದನ್ನು ಒಂದೇ ಚೌಕಟ್ಟಿಗೆ ಸಂಕುಚಿತಗೊಳಿಸಿದರು, ಅದು ಸಂಘಪರಿವಾರದ ಚಿಂತಕರು ಬಯಸುವ ರೀತಿಯಲ್ಲಿಯೇ ಇದೆ. ಮುಸ್ಲಿಂ ಮಹಿಳೆಯರಿಗೆ ಇರುವ ಶಿಕ್ಷಣದ ಹಕ್ಕಿನ ಬಗ್ಗೆ ಇರುವ ಈ ವಿಷಯವನ್ನು ತಿರುಚಿ, ಮುಸ್ಲಿಂ ಬಾಲಕಿಯರು ಮತ್ತು ಮಹಿಳೆಯರು ಶಿಕ್ಷಣವನ್ನು ಪಡೆಯುವ ಸಮಯದಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ಗಟ್ಟಿಯಾಗಿ ಪ್ರತಿಪಾದಿಸುವ ’ಮೊಂಡುತನ’ದ ವಿಷಯವನ್ನಾಗಿಸಿವೆ. ಈ ನಿಟ್ಟಿನಲ್ಲಿ, ವಿದ್ಯಾರ್ಥಿನಿಯರು ತಮ್ಮನ್ನು ಶಾಲಾ ಆವರಣದೊಳಗೆ ಬಿಡಲು ಆಡಳಿತದವರೊಂದಿಗೆ ವಾದ ಮಾಡುತ್ತಿರುವ, ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಯನ್ನು ಕೂಡ ಬರೆಯದೆ ಶಾಲೆಯಿಂದ ಮರಳಿ ಬರುತ್ತಿರುವ ದೃಶ್ಯಗಳನ್ನು ಪದೇಪದೇ ಬಿತ್ತರಿಸುವ ಕೆಲಸ ಮಾಡಿವೆ. ಮುಸ್ಲಿಮರು ಕೇಂದ್ರದಲ್ಲಿರುವ ಇತರೆ ಯಾವುದೇ ವಿಷಯದಲ್ಲಿ ಆಗುವಂತೆ, ಹಿಜಾಬ್ ಬಗ್ಗೆ ಆದ ಪ್ರತಿಭಟನೆಗಳಲ್ಲಿ ’ಐಎಸ್‌ಐಎಸ್ ಕೈವಾಡ ಇದೆ ಎಂಬ ಆಧಾರರಹಿತ ಪಿತೂರಿಯ ಕಥೆಗಳನ್ನು ಬೇಕಾಬಿಟ್ಟಿ ಹರಿಬಿಡಲಾಗಿದೆ.

ಹಿಜಾಬ್ ವಿವಾದದ ಸುತ್ತ ಆಗಿರುವ ಮಾಧ್ಯಮ ಕವರೇಜ್‌ಗಳು ಒಂದು ನಿರ್ವಿವಾದದ ಸತ್ಯವನ್ನು ಎತ್ತಿತೋರಿಸುತ್ತವೆ. ಇಂದಿನ ಕನ್ನಡ ಟಿವಿ ಮಾಧ್ಯಮಗಳಲ್ಲಿ ಮುಸ್ಲಿಮರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಾರೆ ಎಂದು ಅಪೇಕ್ಷಿಸಲು ಸಾಧ್ಯವಿಲ್ಲ, ಅವರ ವಿಷಯಗಳನ್ನು ಯಾವುದೇ ಪೂರ್ವಾಗ್ರಹ ಅಭಿಪ್ರಾಯಗಳಿಲ್ಲದೇ ವಸ್ತುನಿಷ್ಠವಾಗಿ ತೋರಿಸಲಾಗುವುದು ಎಂದು ಹೇಳಲು ಸಾಧ್ಯವಿಲ್ಲ. ಇನ್ನೂ ಮುಖ್ಯವಾದ ವಿಷಯವೇನೆಂದರೆ, ಇವರು ಎತ್ತಿತೋರಿಸುವ ’ಹಿಂದೂ’ ಧ್ವನಿಗಳು ಕೇವಲ ಹಿಂಸಾತ್ಮಕ ವ್ಯಕ್ತಿಗಳಾದ ಪ್ರಮೋದ್ ಮುತಾಲಿಕ್‌ನಂತವರು ಹಾಗೂ ಯಾವುದೇ ಘಟನೆಗ ಬಗೆಗನ ಬಿಜೆಪಿಯ ನಿಲುವಿಗೆ ಬದ್ಧರಾಗಿರುವ ಚಕ್ರವರ್ತಿ ಸೂಲಿಬೆಲೆಯಂತವರ ಮಾತ್ರ.

ಇವೆಲ್ಲವುಗಳನ್ನು ನೋಡಿದ ಮೇಲೆ ಹುಟ್ಟುವ ಪ್ರಶ್ನೆ ಏನೆಂದರೆ, ಒಂದು ನರಮೇಧ ಕಾರಣವಾಗುವಂತೆ ನಡೆಸುವ ಪತ್ರಿಕೋದ್ಯಮವನ್ನು ಪತ್ರಿಕೋದ್ಯಮ ಎನ್ನಲು ಸಾಧ್ಯವೇ? ಜೆನೋಸೈಡ್ ವಾಚ್ ಎಂಬ ಅಂತರರಾಷ್ಟ್ರೀಯ ಸಂಸ್ಥೆಯು ಭಾರತವನ್ನು ಒಂದು ಒಂದು ’ಎಮೆರ್ಜನ್ಸಿ’ ದೇಶ ಎಂದು ಗುರುತಿಸಿದೆ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಜನೋಸೈಡ್ ವಾಚ್ ಪ್ರಕಾರ ಭಾರತವು ಈಗ 6 ನೇ ಹಂತದಲ್ಲಿದೆ: ಅದು ಧ್ರುವೀಕರಣ. 7ನೇ ಹಂತ ಸಿದ್ಧತೆಯದ್ದು, 8ನೆಯ ಹಂತ ದಮನ ಹಾಗೂ 10ನೆಯ ಹಂತ ನಿರಾಕರಣೆ. ಐತಿಹಾಸಿಕವಾಗಿಯೂ ರ್‍ವಾಂಡಾ ಮತ್ತು ಜರ್ಮನಿಯಲ್ಲಿ ದ್ವೇಷದ ಪ್ರಚಾರ ಮಾಡಲು ಹಾಗೂ ಸಮುದಾಯಗಳ ಮಧ್ಯೆ ವಿಭಜನೆಯನ್ನು ಹೆಚ್ಚಿಸಲು ಸ್ಟಿರಿಯೋಟೈಪ್‌ಗಳನ್ನು ಬಂಡವಾಳವಾಗಿಸಿಕೊಂಡು ಮಾಧ್ಯಮವು ನಿರ್ಣಾಯಕ ಪಾತ್ರವನ್ನು ವಹಿಸಿದೆ.

ಇಂದು ಕನ್ನಡ ಟಿವಿ ಮಾಧ್ಯಮಗಳಲ್ಲಿ ನಾವು ಅದನ್ನೇ ಕಾಣುತ್ತಿದ್ದೇವೆಯೇ?

ಸ್ವಾತಿ ಶಿವಾನಂದ
ಆಧುನಿಕ ಇತಿಹಾಸದಲ್ಲಿ ಡಾಕ್ಟೊರೆಟ್ ಪದವಿ ಪಡೆದಿರುವ ಸ್ವಾತಿ ಸ್ವತಂತ್ರ ಸಂಶೋಧಕರು. ದ್ವೇಷದ ಭಾಷಣದ ವಿರುದ್ಧದ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಮಾನವಿ ಅತ್ರಿ
ವಕೀಲರು. ಕಾನೂನು ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ದ್ವೇಷದ ಭಾಷಣದ ವಿರುದ್ಧದ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.


ಇದನ್ನೂ ಓದಿ: ಹಿಜಾಬ್‌ಗಾಗಿ ಹೋರಾಡುತ್ತಿರುವ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಹಂಚಿಕೊಂಡು ವಿಕೃತಿ ಮೆರೆದ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ವಿಚಾರವನ್ನು ಮಾದ್ಯಮದವರು ಮಾಡಿದ್ದರೆ ಇ ಪರಿಸ್ಥಿತಿ ನಿರ್ಮಾಣವಾಗಿರುತಿದ್ದಿಲ್ಲಾ ಇದಕ್ಕೆಲ್ಲ ಗೋದಿ ಮಿಡಿಯಾ ಕಾರಣ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...