Homeಮುಖಪುಟಭೋಪಾಲ್ ಅನಿಲ ದುರಂತಕ್ಕೆ 37 ವರ್ಷಗಳು; ಸಂತ್ರಸ್ತರ ಹೋರಾಟ ಮುಂದುವರೆದಿದೆ...

ಭೋಪಾಲ್ ಅನಿಲ ದುರಂತಕ್ಕೆ 37 ವರ್ಷಗಳು; ಸಂತ್ರಸ್ತರ ಹೋರಾಟ ಮುಂದುವರೆದಿದೆ…

- Advertisement -

ಭೋಪಾಲ್‌‌ ಅನಿಲ ದುರಂತ ನಡೆದು ಇಂದಿಗೆ 37 ವರ್ಷಗಳು ತುಂಬಿದೆ. ಸರ್ಕಾರವೇ ಒಪ್ಪಿಕೊಂಡಿರುವ ಹಾಗೆ ದುರಂತದಲ್ಲಿ ಮರಣ ಹೊಂದಿದವರು 3 ಸಾವಿರ ಜನರು. ಆದರೆ, ಅನಿಲ ದುರಂತ ಸಂತ್ರಸ್ತರ ಪ್ರಕಾರ ಅನಿಲ ಸೋರಿಕೆಯಿಂದ ಮೃತಪಟ್ಟವರು ಬರೋಬ್ಬರಿ 25 ಸಾವಿಕ್ಕೂ ಹೆಚ್ಚು. ಇದರಿಂದಾಗಿ ಗಾಯಗೊಂಡವರು ಮತ್ತು ವಿಕಲಚೇತನರಾದವರು 5.5 ಲಕ್ಷ ಜನರು. ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತದಿಂದ ಬದುಕುಳಿದ ಜನರು ಈಗಲೂ ತಮ್ಮ ವೈದ್ಯಕೀಯ ಆರೈಕೆ ಮತ್ತು ಪರಿಹಾರವನ್ನು ಪಡೆಯಲು ಹೋರಾಟ ನಡೆಸುತ್ತಲೇ ಇದ್ದಾರೆ.

1984 ರ ಡಿಸೆಂಬರ್ 2-3 ರ ಮಧ್ಯರಾತ್ರಿಯಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (UCIL) ಕೀಟನಾಶಕ ಕಾರ್ಖಾನೆಯಿಂದ ಸೋರಿಕೆಯಾದ ವಿಷಕಾರಿ ಅನಿಲಗಳು ಲಕ್ಷಾಂತರ ಜನರ ಬದುಕನ್ನೇ ನಾಶ ಮಾಡಿದೆ. ಆಶ್ಚರ್ಯ ಮತ್ತು ದುರಂತವೇನೆಂದರೆ ಈ ದುರಂತದ ಪ್ರಧಾನ ಆರೋಪಿ ವಾರೆನ್ ಆಂಡರ್ಸನ್‌ಗೆ ಶಿಕ್ಷೆ ಆಗಲೇ ಇಲ್ಲ. ಆತ ಘಟನೆ ನಡೆದ ನಂತರ ಭಾರತದಿಂದ ಪರಾರಿಯಾಗಿ ಅಮೆರಿಕಾದಲ್ಲಿ ತುಂಬು ಜೀವನ ನಡೆಸಿ ತನ್ನ 92 ನೇ ವರ್ಷದಲ್ಲಿ ಮರಣ ಹೊಂದಿದ. ಇತರ ಅಪರಾಧಿಗಳಿಗೆ ಕೇವಲ 2 ವರ್ಷಗಳ ಸಜೆ ಸಿಕ್ಕಿದೆ. ಉಳಿದಂತೆ ತಮ್ಮ ಬದುಕನ್ನೇ ಕಳೆದುಕೊಂಡ ಸಂತ್ರಸ್ಥರಿಗೆ ಸಿಕ್ಕ ಪರಿಹಾರ ಕೇವಲ 15 ಸಾವಿರ ರೂಪಾಯಿಗಳು ಮಾತ್ರ. ಅದು ಕೂಡಾ ಘಟನೆ ನಡೆದು 26 ವರ್ಷಗಳ ನಂತರ. ಅಂದರೆ ಸಿಕ್ಕ ಪರಿಹಾರದ ಲೆಕ್ಕ ದಿನಕ್ಕೆ ಪ್ರತಿಯೊಬ್ಬರಿಗೆ ಕೇವಲ ಒಂದುವರೆ ರುಪಾಯಿ!

ಇದನ್ನೂ ಓದಿ:ಶ್ರದ್ಧಾಂಜಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರ ದನಿ ಹಮೀದಾ ಬೀ

ದುರಂತದಲ್ಲಿ ತನ್ನ ಪತಿ ಮತ್ತು ಮಗಳು ಸೇರಿದಂತೆ ತನ್ನ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡ 64 ವರ್ಷದ ಅನಿಲ ಸಂತ್ರಸ್ತ ಮಹಿಳೆ ರಯೀಸಾ ಬಿ ಹೇಳುವಂತೆ, “ಆಹಾರ ಧಾನ್ಯಗಳು ಮತ್ತು ವೈದ್ಯಕೀಯ ಆರೈಕೆ, ಪರಿಹಾರ ಮತ್ತು ವಿಧವಾ ಪಿಂಚಣಿ ಇವೆಲ್ಲವೂ ನಮ್ಮ ಸುದೀರ್ಘ ಪ್ರತಿಭಟನೆಗಳು, ಮನವಿ ಪತ್ರಗಳನ್ನು ಸಲ್ಲಿಸಿದ ನಂತರವೇ ಬಂದಿವೆ. ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡುವುದು, ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಭೇಟಿ ಮತ್ತು ಸ್ಥಳೀಯ ನ್ಯಾಯಾಲಯದಲ್ಲಿ (ಭೋಪಾಲ್‌ನಲ್ಲಿ), ಹೈಕೋರ್ಟ್ (ಜಬಲ್‌ಪುರದಲ್ಲಿ) ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳು. ಒಟ್ಟಿನಲ್ಲಿ ಅನಿಲ ಸಂತ್ರಸ್ತರ ಜೀವನವು ಫುಟ್‌ಬಾಲ್‌ನಂತೆಯೇ ಇರುತ್ತದೆ ಎಂದು ನಾನು ಭಾವಿಸುತ್ತೇನೆ” ಎನ್ನುತ್ತಾರೆ.

“ದುರದೃಷ್ಟವಶಾತ್, ದುರಂತದ ಮೂರೂವರೆ ದಶಕಗಳ ನಂತರವೂ, ರಾಜ್ಯ ಅಥವಾ ಒಕ್ಕೂಟ ಸರ್ಕಾರವು ವಿಪತ್ತಿನ ಪರಿಣಾಮಗಳ ಸಮಗ್ರ ಮೌಲ್ಯಮಾಪನವನ್ನು ಕೈಗೊಳ್ಳಲು ಅಥವಾ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಲಿಲ್ಲ” ಎಂದು ರಯೀಸಾ ಬಿ ಹೇಳುತ್ತಾರೆ. ಅವರು ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ:ಭೋಪಾಲ್ ಅನಿಲ ದುರಂತ: ಇನ್ನೂ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

ಇಷ್ಟೆಲ್ಲಾ ಆದ ನಂತರವು ನಮ್ಮ ಸರ್ಕಾರ ದುರಂತ ನಡೆದ ಕಾರ್ಖಾನೆಯನ್ನು ಮುಚ್ಚಿಲ್ಲ, ಅದು ಈಗ ಮತ್ತೊಂದು ಬಹುರಾಷ್ಟ್ರೀಯ ಕಂಪೆನಿಯಾದ ‘ಡವ್‌ ಕೆಮಿಕಲ್‌’ನ ಮಾಲಿಕತ್ವದಲ್ಲಿದೆ. ಈ ಕಂಪೆನಿಯು ಇದನ್ನು ಕೊಂಡುಕೊಳ್ಳುವಾಗ UCIL ನ ಯಾವುದೆ ಹೊಣೆಗಾರಿಕೆ ತಾನು ಹೊತ್ತುಕೊಳ್ಳುವುದಿಲ್ಲ ಎಂದು ಹೇಳಿಯೇ ಪಡೆದುಕೊಂಡಿದೆ.

2012 ಆಗಸ್ಟ್ 9 ರಂದು ಸುಪ್ರೀಂ ಕೋರ್ಟ್‌, ಅನಿಲ ಸಂತ್ರಸ್ತರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಲು ಭಾರತ ಒಕ್ಕೂಟ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಇದನ್ನು ಜಾರಿಗೆ ತರಲು ಅನಿಲ ಸಂತ್ರಸ್ತರಿಗಾಗಿ ಕೆಲಸ ಮಾಡುವ ಸಂಘಟನೆಗಳು ಈಗಲೂ ಹೋರಾಟ ನಡೆಸುತ್ತಿವೆ. ಈ ಸಂಘಟನೆಗಳು ಇನ್ನೂ ಇತರ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಎಲ್ಲಾ ನಿರ್ಗತಿಕ ಅನಿಲ ಸಂತ್ರಸ್ತರಿಗೆ, ವಿಶೇಷವಾಗಿ ವಿಧವೆಯರಿಗೆ ಸರಿಯಾದ ಪುನರ್ವಸತಿ ಕಲ್ಪಿಸಿಕೊಡುವುದು; ಸುರಕ್ಷಿತ ಕುಡಿಯುವ ನೀರಿನ ಪೂರೈಕೆ; ಉಚಿತ ವೈದ್ಯಕೀಯ ಆರೈಕೆ; ಕಲುಷಿತ ನೀರು ಮತ್ತು ವಿಷಕಾರಿ ತ್ಯಾಜ್ಯದ ಎಲ್ಲಾ ಸಂತ್ರಸ್ತರಿಗೆ ಪರಿಹಾರ; ಮತ್ತು ಆರೋಪಿಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದು ಈ ಬೇಡಿಕೆಗಳಲ್ಲಿ ಸೇರಿದೆ.

ಇದನ್ನೂ ಓದಿ:ಭೋಪಲ್ ಅನಿಲ ದುರಂತ; ವಿಷಪೂರಿತ ತೀರ್ಪು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial