1984ರ ಡಿಸೆಂಬರ್ 2-3  ರ ರಾತ್ರಿ ಯೂನಿಯನ್ ಕಾರ್ಬೈಡ್ ಎಂಬ ಕಂಪನಿ ಭೋಪಾಲಿನ 3000 ಕ್ಕೂ ಹೆಚ್ಚು ಮಂದಿಗೆ ಮಿಥೈಲ್ ಐಸೋಸಯನೇಟ್ ಎಂಬ ವಿಷ ಅನಿಲ ಕುಡಿಸಿ ಕೊಂದು ಹಾಕಿತ್ತು ಎಂದು ಸರ್ಕಾರದ ವರದಿಗಳು ಹೇಳುತ್ತವೆ. ಆದರೆ ಈ ಅನಿಲ ದುರಂತದಲ್ಲಿ ಮಡಿದ ಮತ್ತು ಬದುಕುಳಿದ ಜನರ ಪರವಾಗಿ ಹೋರಾಡುತ್ತಿರುವ ಸಂಘಟನೆಗಳು ಈ ದುರಂತದಿಂದಾಗಿ 25,000 ಜನ ಸಾವನಪ್ಪಿದ್ದಾರೆ ಎಂದು ವಾದಿಸುತ್ತಿದೆ. ಇಷ್ಟೆಲ್ಲದರ ನಡುವೆ ಪ್ರಪಂಚದ ಅತಿ ದೊಡ್ಡ ಔಧ್ಯಮಿಕ ದುರಂತದ ಈ ದುರ್ಘಟನೆ ನಡೆದು 36 ವರ್ಷ ಕಳೆದರೂ ಸಂತ್ರಸ್ತರಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ.

1984 ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಿಂದಾಗಿ 8000 ಜನ ಸತ್ತು, 5,25,000 ಜನ ಬಾಧಿತರಾಗಿದ್ದಕ್ಕೆ ಕೊನೆಗೂ ಯೂನಿಯನ್ ಕಾರ್ಬೈಡ್ ಕಂಪನಿ ಪರಿಹಾರವಾಗಿ ಕೊಟ್ಟಿದ್ದು 450 ಮಿಲಿಯನ್ ಡಾಲರ್ – ಅಂದರೆ 1,500 ಕೋಟಿ ರೂಪಾಯಿಗಳನ್ನು ಮಾತ್ರ. ಅಲ್ಲದೆ ಭೋಪಾಲ್‍ನಲ್ಲಿ ಮಡಿದ ಭಾರತೀಯರಿಗೂ ಅಮೆರಿಕದ ಮಾಲೀಕತ್ವದ ಯೂನಿಯನ್ ಕಾರ್ಬೈಡ್ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂಬಂತಲೇ ವರ್ತಿಸಿಕೊಂಡು ಬಂದಿರುವ ಈ ಕಂಪನಿಯು ತಾನು ಎಸಗಿದ ಕೊಲೆಗಳಿಂದ ಬಚಾವಾಗಲೂ ಮಾಡಿದ ಷಡ್ಯಂತ್ರಗಳು ಒಂದೆರಡಲ್ಲ. ಅವುಗಳಲ್ಲಿ ಪ್ರಮುಖವಾದದ್ದು 2000 ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯನ್ನೇ ಡೌ ಎಂಬ ಮತ್ತೊಂದು ಕಂಪನಿಗೆ ಮಾರಿದ್ದು. ಇದನ್ನು ಡೌ ಕಂಪನಿಯು ಕೊಂಡಿದ್ದೇ ಯೂನಿಯನ್ ಕಾರ್ಬೈಡ್‍ನ ಯಾವ ಹೊಣೆಗಾರಿಕೆಗೂ ತಾನು ಜವಾಬ್ದಾರನಲ್ಲ ಎಂಬ ಷರತ್ತಿನ ಮೇಲೆ.

ಹತ್ತು ವರ್ಷಗಳ ಹಿಂದೆ 2010ರಲ್ಲಿ ಭೋಪಾಲ್ ಕೋರ್ಟ್ ತೀರ್ಪು ನೀಡಿತು. ಸಾವಿರಾರು ಜನರ ಸಾವಿಗೆ. ಲಕ್ಷಾಂತರ ಜನರ ನೋವಿಗೆ ನ್ಯಾಯವಾಗಿ ಅಪರಾಧಿಗಲಿಗೆ ಕೋರ್ಟ್ ಕೊಟ್ಟ ಶಿಕ್ಷೆ ಕೇವಲ 2 ವರ್ಷದ ಸಜೆ! ಆ ದುರಂತದಲ್ಲಿ ಸತ್ತವರಲ್ಲಿ ಬಹಳಷ್ಟು ಜನ ಬಡವರು, ಕೂಲಿ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕೆಲ ವರ್ಗದವರು. ಹಾಗೆಯೇ ಆ ದುರಂತದಲ್ಲಿ ಸಂತ್ರಸ್ತರಾದ ಐದೂವರೆ ಲಕ್ಷ ಜನರೂ ಕಡುಬಡವರು. ಈ ಜನ ಮಾತ್ರ ಪರಿಹಾರಕ್ಕಾಗಿ 26 ವರ್ಷಗಳ ಕಾಲ ಕಾಯಬೇಕಾಯಿತು. ಆಗಲೂ ಅವರಿಗೆ ದೊರಕಿದ ಹಣವೆಷ್ಟು? ತಲಾ 15,000 ರೂಪಾಯಿಗಳು ಮಾತ್ರ. ಅಂದರೆ ಆ ದುರಂತ ಸಂಭವಿಸಿ ಅವರ ಬದುಕೇ ನುಚ್ಚುನೂರಾಗಿದ್ದರೂ ಅಂದಿನಿಂದ ಇಂದಿನತನಕ ಅವರು ಅನುಭವಿಸಿದ ಯಾತನೆಗೆ ನೀಡಿದ ಪರಿಹಾರ: ಪ್ರತಿದಿನಕ್ಕೆ ಕೇವಲ ಒಂದೂವರೆ ರೂಪಾಯಿಗಳು!

ಇನ್ನು ಭೋಪಾಲ್ ಅನಿಲ ದುರಂತ ಸಂಭವಿಸಿದ ಸಂದರ್ಭದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಓ ಆಗಿದ್ದವನು ವಾರೆನ್ ಆಂಡರ್ಸನ್. ಇಂತಹ ದೊಡ್ಡ ದುರಂತ ಸಂಭವಿಸಿ ಸಾವಿರಾರು ಜನ ಸಾಯುತ್ತಿದ್ದರೂ ಆತ ಅಮೆರಿಕಾಕ್ಕೆ ಪರಾರಿಯಾಗಲು ಆಗಿನ ಕಾಂಗ್ರೆಸ್ ಸರ್ಕಾರ ಸಹಾಯ ಮಾಡಿದೆ ಎಂಬ ಆರೋಪವಿದೆ. ಅಲ್ಲದೇ ಈ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ ಬಡಜನರ ಬದಲು ಕಂಪನಿಯೊಂದಿಗೆ ಶಾಮೀಲಾಗಿತ್ತು ಎಂದು ಹೋರಾಟಗಾರರು ದೂರಿದ್ದರು. ಸಂತ್ರಸ್ತರಿಗೆ ನ್ಯಾಯ ವಿಳಂಬವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣವಾಗಿತ್ತು.

ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಆದರೆ ಇದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಭೋಪಾಲ್ ಸಂತ್ರಸ್ತರಿಗೆ ಯಾವ ಸಹಾಯವನ್ನೂ ಮಾಡಲಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ ವಾಜಪೇಯಿ ಪ್ರಧಾನಿ ಆಗಿದ್ದಾಗ ಡೌ ಕಂಪನಿಯ ಮುಖ್ಯಸ್ಥನನ್ನು ಗಣರಾಜ್ಯೋತ್ಸವದ ಸಮಾರಂಭಕ್ಕೆ ಆಹ್ವಾನಿಸಿತ್ತು! ಮಾತ್ರವಲ್ಲ, ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದೂ ಅಮೆರಿಕಕ್ಕೆ ಓಡಿಹೋಗಿದ್ದ ಯೂನಿಯನ್ ಕಾರ್ಬೈಡ್‍ನ ಮುಖ್ಯಸ್ಥ ವಾರೆನ್ ಆಂಡರ್ಸನ್ ಅನ್ನು ಭಾರತಕ್ಕೆ ಒಪ್ಪಿಸಬೇಕೆಂದು ಒಮ್ಮೆಯೂ ಬಿಜೆಪಿ ಸರ್ಕಾರ ಅಮೆರಿಕವನ್ನು ಕೇಳಿಕೊಂಡಿರಲಿಲ್ಲ!

ಈ ರೀತಿಯಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ದುಷ್ಟತನ, ಹೊಣೆಗೇಡಿತನದಿಂದಾಗಿ ಸಾವಿರಾರು ಜನರ ಸಾವಿಗೆ ಕಾರಣವಾದ ವ್ಯಕ್ತಿ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಓ ವಾರೆನ್ ಆಂಡರ್ಸನ್ ತುಂಬು ಜೀವನ ನಡೆಸಿ 2014ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ನಿಧನನಾದನೇ ಹೊರತು ಶಿಕ್ಷೆಯಿಂದಲ್ಲ! ಶಿಕ್ಷೆ ಇರಲಿ ಆತ ಭಾರತೀಯ ಕೋರ್ಟುಗಳು ವಿಚಾರಣೆಗೂ ಹಾಜರಾಗಲಿಲ್ಲ ಎಂದರೆ ನಂಬಲೇಬೇಕು.

ಅನಿಲ ದುರಂತದ ಸಂತ್ರಸ್ತರ ಪರವಾಗಿ ಇಂದಿರಾ ಜೈಸಿಂಗ್, ಅನಿಲ್ ಸದ್ಗೋಪಾಲ್ ಸೇರಿದಂತೆ ಸಾವಿರಾರು ಜನ ಸುಧೀರ್ಘ ಹೋರಾಟ ನಡೆಸಿದ್ದಾರೆ. ಇಂದು ಸಂತ್ರಸ್ತರಿಗೆ ಅಷ್ಟೋ ಇಷ್ಟೊ ಪರಿಹಾರ ಸಿಗಲು ದೇಶದ ಲಕ್ಷಾಂತರ ಜನ ಬೀದಿಗಿಳಿದಿ ಹೋರಾಟ ಮಾಡಬೇಕಾದ ದುಸ್ಥಿತಿ ನಮ್ಮ ದೇಶದ್ದು. ಆದರು ಇಂದಿಗೂ ಎಲ್ಲರಿಗೂ ನ್ಯಾಯ ಮತ್ತು ಪರಿಹಾರ ಸಿಕ್ಕಿಲ್ಲ. 36 ವರ್ಷ ಕಳೆದರೂ ಇಂದಿಗೂ ಹಲವು ಸಂಘಟನೆಗಳು ದನಿಯೆತ್ತುತ್ತಲೇ ಇವೆ.

ಅನಿಲ ದುರಂತದಿಂದ ಬದುಕುಳಿದವರಿಗೆ ದೀರ್ಘಾವಧಿಯ ಗಾಯಗಳು ಮತ್ತು ರೋಗಗಳು ಬಾಧಿಸುತ್ತಿವೆ. ಇಂದಿನ ಕೋವಿಡ್ ಸಾಂಕ್ರಾಮಿಕವು ಅವರನ್ನು ಇನ್ನಷ್ಟು ತೊಂದರೆಗೀಡುಮಾಡಿದೆ. ಆರೋಗ್ಯ ಇಲಾಖೆಯ ಅಧಿಕೃತ ದಾಖಲೆಯ ಪ್ರಕಾರ ಭೋಪಾಲ್ ಜಿಲ್ಲೆಯ ಅನಿಲ ಪೀಡಿತ ಜನಸಂಖ್ಯೆಯಲ್ಲಿ ಕೋವಿಡ್ -19 ಸಾವಿನ ಪ್ರಮಾಣ 6.5 ಪಟ್ಟು ಹೆಚ್ಚಾಗಿದೆ ಎಂದು ಭೋಪಾಲ್ ಗ್ಯಾಸ್ ಪೀಡಿತ ಮಹಿಳಾ ಪುರುಷ ಸಂಘರ್ಷ ಮೋರ್ಚಾದ ಅಧ್ಯಕ್ಷ ನವಾಬ್ ಖಾನ್ ಹೇಳಿದ್ದಾರೆ.

ವಿಷಕಾರಿ ಪ್ರಕರಣದ ಪರಿಣಾಮಗಳನ್ನು ತಗ್ಗಿಸಲು ಸರ್ಕಾರಗಳು ಇಂದಿಗೂ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಸಂತ್ರಸ್ತರ ಪರವಾಗಿ ಹೋರಾಡುತ್ತಿರುವ ಭೋಪಾಲ್ ಗ್ಯಾಸ್ ಪೀಡಿತ ಸಂಘರ್ಷ ಸಹಯೋಗ್ ಸಮಿತಿ ಎಂಬ ಮತ್ತೊಂದು ಸಂಘಟನೆಯ ಸಂಚಾಲಕಿ ಸಾಧನಾ ಕಾರ್ನಿಕ್ ಹೇಳುತ್ತಾರೆ.

“ಸ್ಥಾವರದಿಂದ ಸೋರಿಕೆಯಾದ ಅನಿಲವು ನಗರದ ವಿಶಾಲ ಪ್ರದೇಶದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಕಡೆಯಿಂದ ಯಾವುದೇ ಪ್ರಾಮಾಣಿಕ ಪ್ರಯತ್ನಗಳಾಗುತ್ತಿಲ್ಲ. ಸಂತ್ರಸ್ತರಿಗಾಗಿ ನಿರ್ಮಾಣವಾದ ಭೋಪಾಲ್ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಬಿಎಮ್‌ಹೆಚ್‌ಆರ್‌ಸಿ)ವು ಅಸ್ತವ್ಯಸ್ತವಾಗಿದೆ. ಅಲ್ಲಿನ ಸೌಲಭ್ಯಗಳನ್ನು ಸುಧಾರಿಸಲು ಯಾರೂ ಮುಂದಾಗುತ್ತಿಲ್ಲ” ಎಂದು ಅವರು ದೂರಿದ್ದಾರೆ.

ಇನ್ನು ಮಧ್ಯಪ್ರದೇಶ ಸರ್ಕಾರವು “ಭೋಪಾಲ್ ಅನಿಲ ದುರಂತದ ಪರಿಹಾರ ಮತ್ತು ಪುನರ್ವಸತಿ ಖಾತೆ”ಯನ್ನು ಆರಂಭಿಸಿದೆ. ಅದರ ಸಚಿವ ವಿಶ್ವಸ್ ಸಾರಂಗ್ “ಪರಿಹಾರದ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದೆ. ಆದ್ದರಿಂದ, ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ದುರಂತದಿಂದ ಬದುಕುಳಿದವರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ರಾಜ್ಯದ ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಒಂದು ಆಸ್ಪತ್ರೆಯನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ” ಎನ್ನುತ್ತಾರೆ. ಇಂತಹ ಅಸೂಕ್ಷ್ಮ ವ್ಯಕ್ತಿಗಳು ಇರುವವರೆಗೂ ಸಂತ್ರಸ್ತರು ನ್ಯಾಯಕ್ಕಾಗಿ ಕಾಯುತ್ತಲೇ ಇರಬೇಕಿದೆ. justice delayed is justice denied ಎಂಬ ಆಂಗ್ಲಗಾದೆಯನ್ನು ಈ ದುರಂತ ನಿಜ ಮಾಡಿದೆ.


ಇದನ್ನೂ ಓದಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರದಲ್ಲಿಯೂ ತಾರತಮ್ಯ

LEAVE A REPLY

Please enter your comment!
Please enter your name here