ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನ್ (ಬಿಜಿಪಿಎಂಯುಎಸ್) ಸಂಘಟನೆಯ ಅಧ್ಯಕ್ಷೆ ಮತ್ತು ದಣಿವರಿಯದ ಆಕ್ಟಿವಿಸ್ಟ್ ಆಗಿದ್ದ ಹಮೀದಾ ಬೀ ಡಿಸೆಂಬರ್ 29 ರಂದು ನಿಧನರಾಗಿದ್ದಾರೆ.
‘ಆಕೆಯ ಸಾವಿಗೆ ಕಾರಣ ಮುದಿ ವಯಸ್ಸಲ್ಲ; ಯುನಿಯನ್ ಕಾರ್ಬೈಡ್ ಪ್ಲ್ಯಾಂಟ್’ ಎನ್ನುತ್ತಾರೆ ಹಮೀದಾ ಬೀ ಅವರ ಬಹುಕಾಲದ ಗೆಳತಿ ಮತ್ತು ಬಿಜಿಪಿಎಂಯುಎಸ್ ಸದಸ್ಯೆ ರಯಿಸಾ ಬೀ.

ಸ್ವತಃ ಆ ದುರಂತದ ಸಂತ್ರಸ್ತೆಯಾಗಿದ್ದ ಹಮೀದಾ, ಮನುಷ್ಯ ನಿರ್ಮಿತ ಆ ದುರಂತದಿಂದ ಸಂತ್ರಸ್ತರಾದವರನ್ನು ಒಗ್ಗೂಡಿಸಿ ಭೋಪಾಲದ ಬೀದಿ-ರಸ್ತೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತ, ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಡಿದರು. ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಹಾರ ಲಭಿಸಬೇಕೆಂಬ ಬೇಡಿಕೆಗಳನ್ನು ಮುನ್ನೆಲೆಗೆ ತಂದಿದ್ದರು. ಇಂತಹ ಹೋರಾಟದ ಪರಿಣಾಮವಾಗಿ ಅಷ್ಟಿಷ್ಟಾದರೂ ನ್ಯಾಯ ದೊರಕಿದೆ. ಆದರೆ ಈ ಹೋರಾಟ ಮುಂದುವರೆದೇ ಇದೆ.

‘ಸಮಾಜದ ಅಶಕ್ತ ವಿಭಾಗಗಳಿಗೆ ಸೇರಿದ ಅನಿಲ ದುರಂತದ ಸಂತ್ರಸ್ತರಿಗೇಕೆ ಒಂದು ಸರಿಯಾದ ಬದುಕು ಇರಬಾರದು?’ -ಸಾಯುವ ತಿಂಗಳು ಮೊದಲು ಅವರ ಮಗಳ ಮನೆಯಲ್ಲಿ ಕಟ್ಟಿಗೆ ಮಂಚದಲ್ಲಿ ಮಲಗಿದ್ದ ಅವರು ಈ ಬರಹಗಾರರನ್ನು ಕೇಳಿದ್ದರು.

ಭೋಪಾಲ್‌ನಲ್ಲಿ ಜನಿಸಿದ ಹಮೀದಾ ಬೀ ಅವರ ಪ್ರತಿಭಟನೆ ಹೋರಾಟ ಸುದೀರ್ಘವಾದದ್ದು ಮತ್ತು ಸ್ಥಿರವಾದದ್ದು. ದುರಂತದಲ್ಲಿ ಅವರ ಸಂಬಂಧಿಗಳನೇಕರು ಅಸು ನೀಗಿದ್ದಾರೆ.

ಜನವರಿ 23, 1986ರಿಂದ ಪ್ರತಿ ಶನಿವಾರ (ಲಾಕ್‌ಡೌನ್ ಶುರುವಾಗುವವರೆಗೂ) ಬಿಜಿಪಿಎಂಯುಎಸ್ ಸಭೆಗಳಿಗೆ ಹಾಜರಾಗಲು ಇಬ್ರಾಹಿಂಪುರದ ತಮ್ಮ ಮನೆಯಿಂದ ಸೆಂಟ್ರಲ್ ಲೈಬ್ರರಿ ಸಮೀಪದ ಪಾರ್ಕಿಗೆ ಅವರು ನಡೆದೇ ಹೋಗುತ್ತಿದ್ದರು. ಅಲ್ಲಿ ಸಂತ್ರಸ್ತರ ಸಮಸ್ಯೆಗಳಿಗೆ ದನಿಯಾಗುತ್ತಿದ್ದ ಅವರು, ಹಕ್ಕು ಪಡೆಯಲು ಮುಂದೆ ಮಾಡಬೇಕಾದ ಹೋರಾಟದ ಬಗ್ಗೆ ಅವರನ್ನು ಸಂಘಟಿಸುತ್ತಿದ್ದರು.

ವಾರದ ಉಳಿದ ದಿನಗಳಂದು ಬಿಜಿಪಿಎಂಯುಎಸ್‌ನ ಸ್ವಾಭಿಮಾನ ಕೇಂದ್ರದಲ್ಲಿ ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ, ಹೆಣಿಕೆ ತರಹದ ಜೀವನೋಪಾಯದ ಕೌಶಲ್ಯಗಳನ್ನು ಕಲಿಸುತ್ತಿದ್ದರು.

ಹೋರಾಟದ ಮೂಲಕ ಮತ್ತು ನ್ಯಾಯಾಲಯದ ಮೂಲಕ ಸಂತ್ರಸ್ತರಿಗೆ ಎಷ್ಟು ಸಾಧ್ಯವೋ ಅಷ್ಟು ನೆರವು-ಪರಿಹಾರ, ಚಿಕಿತ್ಸೆ ಸಿಗುವಂತೆ ಹಮೀದಾ ಶ್ರಮಿಸಿದರು. ಬಿಜಿಪಿಎಂಯುಎಸ್ ಸಂಘಟನೆಯ ಸಂಚಾಲಕರಾಗಿ ಸಂತ್ರಸ್ತರ ಹೋರಾಟಕ್ಕೆ ಒಂದು ದೃಢ ಸಂಕಲ್ಪ ರೂಪಿಸಿದ್ದ ಅಬ್ದುಲ್ ಜಬ್ಬಾರ್ ನಿಧನದ ನಂತರ ಹಮೀದಾರನ್ನು ಅಧ್ಯಕ್ಷೆಯನ್ನಾಗಿ ಸಂತ್ರಸ್ತರು ನೇಮಿಸಿಕೊಂಡಿದ್ದರು.

ಅವರ ಪತಿ ಇದ್ರಿಸ್ ಭಾಯ್ ಕೂಡ ಈ ಹೋರಾಟಕ್ಕೆ ಜೀವನ ಮೀಸಲಿಟ್ಟು ನಿಧನರಾದರು. ಹೋರಾಟಗಾರ್ತಿಯಾಗುವ ಮೊದಲು ಸಾಮಾನ್ಯ ಗೃಹಿಣಿಯಾಗಿದ್ದ ಅವರು ಸಂಪ್ರದಾಯಸ್ಥ ವ್ಯವಸ್ಥೆಯ ನಿರ್ಬಂಧಗಳಲ್ಲೇ ಬದುಕಿದ್ದರು. ಆದರೆ ಆ ಮನುಷ್ಯ ನಿರ್ಮಿತ ದುರಂತ ಉಂಟು ಮಾಡಿದ ಆಘಾತ, ನೋವು ಅವರನ್ನು ಸಂತ್ರಸ್ತರ ದನಿಯಾಗುವಂತೆ ಪ್ರೇರೆಪಿಸಿತು.

-ಅನೂಪ್ ದತ್ತಾ

(ಬರಹ ಕೃಪೆ: ದಿ ವೈರ್)


ಇದನ್ನೂ ಓದಿ; ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್‌ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!

LEAVE A REPLY

Please enter your comment!
Please enter your name here