Homeಮುಖಪುಟಮತಾಂತರ ನಿಷೇಧ ಎಂಬ ಅಸಂವಿಧಾನಾತ್ಮಕ ಮಸೂದೆ

ಮತಾಂತರ ನಿಷೇಧ ಎಂಬ ಅಸಂವಿಧಾನಾತ್ಮಕ ಮಸೂದೆ

- Advertisement -
- Advertisement -

“ಮತಾಂತರ ಎನ್ನುವುದು ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ನೆಲದ ಸಂವಿಧಾನ ನಮಗೆ ನೀಡಿದೆ. ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ಮೂಲಕ ಶೋಷಿತ ವರ್ಗಗಳು, ಸಮಾನತೆಯ ತವಕದಲ್ಲಿರುವ ಎಲ್ಲರೂ ಸಹ ತಮಗಿಷ್ಟ ಬಂದ ಧರ್ಮವನ್ನು ಆರಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು.”


ಮತಾಂತರ ಎನ್ನುವುದು ಸ್ವಾತಂತ್ರ್ಯಾ ನಂತರದಿಂದಲೂ ಕೋಮುವಾದಿ ಶಕ್ತಿಗಳಿಗೆ ಸಮಾಜವನ್ನು ಒಡೆಯುವ ತಂತ್ರಗಳಲ್ಲೊಂದಾಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಪ್ರಕೃತಿ ವಿಕೋಪದಂತೆ ಆಗಿದ್ದಾಂಗೆ, ವಿಶೇಷವಾಗಿ ಚುನಾವಣೆಯ ಸಂದರ್ಭಗಳಲ್ಲಿ ಅಥವಾ ಸಮಾಜದಲ್ಲಿ ತಮ್ಮ ವಿರೋಧದ ವಾತಾವರಣ ಮಡುಗಟ್ಟಿದಾಗ, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನದ ಭಾಗವಾಗಿ ಮತಾಂತರ ಎಂಬ ಸವಕಲು ಅಸ್ತ್ರವನ್ನು ಬಳಸಿ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವುದು ಇತ್ತೀಚೆಗೆ ತೀರಾ ಸಾಮಾನ್ಯವಾಗಿದೆ. ಅದೇ ರೀತಿ, ಸಮಾನತೆಯನ್ನು ಇಡೀ ಜಗತ್ತಿಗೆ ಸಾರಿದ ಸಾಮರಸ್ಯದ ಬೀಡಾದ ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಕೃಪಾಕಟಾಕ್ಷ ಇರುವ ಈ ಶಕ್ತಿಗಳು ಮತಾಂತರದ ವಿಷಯವನ್ನು ಮುನ್ನಲೆಗೆ ತಂದಿದ್ದಾರೆ. ಮುಂಬರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನೂ ಸರ್ಕಾರ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮತಾಂತರ ಎಂಬ ವಿಷಯದಲ್ಲಿ ನಮ್ಮ ಸಂವಿಧಾನ ಏನು ಹೇಳುತ್ತದೆ? ಇಂತಹ ಪ್ರಕರಣಗಳಲ್ಲಿ ಈ ದೇಶದ ಘನ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ಏನು? ಎಂಬುದನ್ನು ಈ ಲೇಖನದಲ್ಲಿ ವಿಶ್ಲೇಷಿಸುತ್ತಿದ್ದೇನೆ.

ಸಂವಿಧಾನ ಮತ್ತು ಮತಾಂತರ

ಭಾರತದ ಸಂವಿಧಾನವು ಅನುಚ್ಛೇದ 25ರಲ್ಲಿ ಈ ದೇಶದ ಪ್ರತಿ ಪ್ರಜೆಗೂ ಸಹ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಅದಲ್ಲದೆ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಪ್ರಚಾರಮಾಡಬಹುದು ಎಂದೂ ಸಹ ಹೇಳಿದೆ. ಈ ಕುರಿತು ಇದೇ ವರ್ಷ ಏಪ್ರಿಲ್ 2021ರಲ್ಲಿ ಭಾರತದ ಸುಪ್ರೀಂ ಕೋರ್ಟ್ ನಡೆಸಿದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ)ಯ ವಿಚಾರಣೆಯನ್ನು ಗಮನಿಸಬಹುದು. ಅಡ್ವೊಕೇಟ್ ಅಶ್ವಿನಿ ಕುಮಾರ್ ಉಪಾಧ್ಯಾಯ್ ಅವರು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಮತಾಂತರಗಳು ಆಗುತ್ತಿವೆ ಎಂದು ಆರೋಪಿಸಿ, ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ರೋಹಿಂಟನ್ ಎಫ್ ನಾರಿಮನ್ “18 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯು ಯಾಕೆ ಬೇರೆ ಧರ್ಮವನ್ನು ಆರಿಸಿಕೊಳ್ಳಬಾರದು? ಇದ್ಯಾವ ರೀತಿಯ ಅರ್ಜಿ” ಎಂದು ಅರ್ಜಿದಾರರನ್ನು ಪ್ರಶ್ನಿಸಿ, ಈ ರೀತಿಯ ಅಸಂಬದ್ಧ ಅರ್ಜಿಗಳನ್ನು ಹಾಕಿದರೆ ನಿಮ್ಮ ಮೇಲೆ ದೊಡ್ಡ ಮಟ್ಟದ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. “ಮೊದಲು ಈ ಅರ್ಜಿ ಹಿಂತೆಗೆದುಕೊಳ್ಳಿ ಅಥವಾ ಇದರ ಪರ ವಾದಿಸಿ, ಮುಂದೆ ಬರುವ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿರಿ” ಎಂದದ್ದಲ್ಲದೆ, ಮುಂದುವರೆದು ಸಂವಿಧಾನದ 25ನೇ ಅನುಚ್ಛೇದ ಕುರಿತು ತಿಳಿಹೇಳಿದರು. ಈ ದೇಶದ ಯಾವುದೇ ವ್ಯಕ್ತಿ ತನಗಿಷ್ಟವಾದ ಧರ್ಮವನ್ನು ಆಚರಿಸಲು, ಹಾಗೂ ಪ್ರಚಾರಮಾಡಲು ಸ್ವತಂತ್ರನಾಗಿದ್ದಾನೆ ಎಂದು ಸಂವಿಧಾನವೇ ಹೇಳಿರುವಾಗ ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತದೆ ಸುಪ್ರೀಂ ಕೋರ್ಟ್.

ಇನ್ನು ಇದೇ ವರ್ಷ, “ಪಿ. ಮುನೀಶ್ವರಿ ವರ್ಸಸ್ ದಿ ಸೆಕ್ರೆಟರಿ ಟು ತಮಿಳುನಾಡು ಗವರ್ನಮೆಂಟ್ ಆಂಡ್ ಅದರ್ಸ್” ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠವು ಕೇವಲ ಚರ್ಚಿಗೆ ಹೋಗುವುದರಿಂದ ಅಥವಾ ಶಿಲುಬೆಯನ್ನು ಮತ್ತು ಫೋಟೊಗಳನ್ನು ಮನೆಯಲ್ಲಿ ತೂಗುಹಾಕುವುದರಿಂದ ಅಥವಾ ಕೊರಳಲ್ಲಿ ಧರಿಸುವುದರಿಂದ ಒಬ್ಬ ವ್ಯಕ್ತಿ ಆ ಧರ್ಮಕ್ಕೆ ಮತಾಂತರವಾಗಿದ್ದಾನೆ ಎಂದು ಭಾವಿಸಲಾಗದು ಎಂಬ ವಿಶೇಷ ತೀರ್ಪನ್ನು ನೀಡಿದೆ. ಇನ್ನೂ ಹತ್ತೂ ಹಲವು ಮತಾಂತರ ಪ್ರಕರಣಗಳಲ್ಲಿ ಈ ದೇಶದ ಘನತೆವೆತ್ತ ನ್ಯಾಯಾಲಯಗಳು ಮತಾಂತರಕ್ಕೆ ಸಂವಿಧಾನದಲ್ಲಿ ಅವಕಾಶ ಇವೆ ಎನ್ನುತ್ತಾ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿವೆ.

ಮತಾಂತರ ನಿಷೇಧ ಕಾಯ್ದೆ

ಸಂವಿಧಾನದ 25ನೇ ಅನುಚ್ಛೇದದಲ್ಲಿರುವ “ಪ್ರಚಾರ” (ಧರ್ಮವನ್ನು ಪ್ರಚಾರಮಾಡುವುದು) ಎಂಬ ಪದವು ಸಂವಿಧಾನ ರಚನಾ ಸಮಿತಿಯಲ್ಲಿ ಸಾಕಷ್ಟು ಚರ್ಚೆಗೊಳಪಟ್ಟಿದೆ. ಸಂವಿಧಾನದ ಇತರೆಲ್ಲಾ ವಿಷಯಸೂಚಿಗಳಿಗಿಂತ ಈ ಪದವೇ ಅತಿ ಹೆಚ್ಚು ಕಾಲ ಚರ್ಚೆಗೊಳಗಾಗಿದ್ದು ಎನ್ನುತ್ತಾರೆ ಸಂವಿಧಾನ ತಜ್ಞರು. ನಂತರ ಸಾಕಷ್ಟು ಚರ್ಚೆ ಮತ್ತು ಸಂವಾದಗಳ ನಂತರ ಈ ಪದವನ್ನು ಸಂವಿಧಾನದಲ್ಲಿ ಆಳವಡಿಸಲಾಯಿತು. ಇದು ಭಾರತದಲ್ಲಿ ಯಾವುದೇ ವ್ಯಕ್ತಿಯು ತನ್ನ ಧರ್ಮವನ್ನು ಪ್ರಚಾರ ಮಾಡಲು ಸ್ವತಂತ್ರನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಪ್ರಸ್ತುತ ದೇಶದಲ್ಲಿ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಈಗ ಜಾರ್ಖಂಡ್ ಹಾಗೂ ಕರ್ನಾಟಕ ರಾಜ್ಯಗಳೂ ಸಹ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿವೆ.

ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕವೇ?

ರಾಜ್ಯಗಳು ಜಾರಿಗೊಳಿಸುವ ಮತಾಂತರ ನಿಷೇಧ ಕಾಯ್ದೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿವೆಯಲ್ಲದೆ, ಅವು ಸಂವಿಧಾನ ವಿರೋಧಿಯಾಗಿವೆ ಎನ್ನುತ್ತಾರೆ ಹಿರಿಯ ನ್ಯಾಯವಾದಿ ಹಾಗೂ ಸಿಕ್ಕಿಂ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರುವ ಜಸ್ಟೀಸ್ ಪೆರ್ಮೊದ್ ಕೊಹ್ಲಿ. “ಬಲವಂತದ ಹಾಗೂ ಆಮಿಷಗಳನ್ನು ನೀಡಿ ಮಾಡುವ ಮತಾಂತರದ ಕುರಿತು ಈಗಾಗಲೇ ಸಂವಿಧಾನವು ಹಲವು ಕ್ರಮಗಳನ್ನು ಉಲ್ಲೇಖಿಸಿರುವಾಗ, ಮತ್ತೆ ಮತಾಂತರ ನಿಷೇಧ ಕಾಯ್ದೆಯನ್ನು ತರುವುದು ಅದನ್ನು ಪುನರಾವರ್ತಿಸಿದಂತಾಗುತ್ತದೆ. ರಾಜ್ಯಗಳಲ್ಲಿ ಮತಾಂತರವನ್ನೇ ನಿಷೇದಿಸುವುದು ಸಂವಿಧಾನದ 25ನೇ ಅನುಚ್ಛೇದದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅದರ ಬದಲು ಬಲವಂತದ ಹಾಗೂ ಆಮಿಷಗಳನ್ನು ನೀಡಿ ಮಾಡುವ ಮತಾಂತರದ ಕುರಿತು ಮಾತ್ರ ಕಾನೂನುಗಳನ್ನು ತರುವುದು ಒಳಿತು” ಎಂದು ಜಸ್ಟಿಸ್ ಕೊಹ್ಲಿ ಅಭಿಪ್ರಾಯ ಪಡುತ್ತಾರೆ.

ಹಿರಿಯ ನ್ಯಾಯವಾದಿ ಹಾಗೂ ಪ್ರಖ್ಯಾತ ಸಂವಿಧಾನ ತಜ್ಞರು ಆಗಿರುವ ಆರ್ ಎಸ್ ಚೀಮಾ ಮತಾಂತರ ನಿಷೇಧ ಕಾಯ್ದೆಯ ಕುರಿತು ಮಾತನಾಡುತ್ತಾ “ಸಂಪೂರ್ಣ ಮತಾಂತರ ನಿಷೇಧವನ್ನು ಮಾಡುವುದು ಸಾಧ್ಯವಿಲ್ಲ. ಹಾಗೆ ಒಂದು ವೇಳೆ ನಿಷೇಧಿಸಬೇಕೆಂಬ ಕಾನೂನುಗಳನ್ನು ತಂದರೆ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಸಂವಿಧಾನ ರಚನೆಯ ವೇಳೆ ಮತಾಂತರ ವಿಷಯದ ಕುರಿತು ಸಾಕಷ್ಟು ಅವಲೋಕಿಸಿಯೇ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಗೂ ಧರ್ಮವನ್ನು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನಮ್ಮ ಪೂರ್ವಸೂರಿಗಳು ನೀಡಿದ್ದಾರೆ.” ಎಂದು ಹೇಳುತ್ತಾರೆ. ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಗೊಂಡರೆ ಆ ಕಾಯ್ದೆಯ ಮೂಲ ಉದ್ದೇಶ ಮರೆಯಾಗಿ ಅದನ್ನು ಕಿಡಿಗೇಡಿಗಳು ಅಲ್ಪಸಂಖ್ಯಾತರನ್ನು ಹಿಂಸಿಸಲು, ಅವರಿಗೆ ಸಮಸ್ಯೆ ಸೃಷ್ಟಿಸಲು ಉಪಯೋಗಿಸಿಕೊಳ್ಳುತ್ತಾರೆ ಎಂದೂ ಸಹ ಅನೇಕ ನ್ಯಾಯವಾದಿಗಳು ಅಭಿಪ್ರಾಯ ಪಡುತ್ತಾರೆ.

ಉತ್ತರ ಪ್ರದೇಶ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ಅನೇಕ ನ್ಯಾಯಾಧೀಶರು, ವಕೀಲರು ಹಾಗೂ ಸಂವಿಧಾನ ತಜ್ಞರು ಅದು ಸಂವಿಧಾನ ವಿರೋಧಿ ಕಾನೂನಾಗಿದೆ ಎಂದು ಹೇಳಿದ್ದಾರೆ. ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಹಾಗೂ ರಾಷ್ಟ್ರೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷರು ಆಗಿರುವ ಜಸ್ಟೀಸ್ ಎ ಪಿ ಷಾ “ಮತಾಂತರ ನಿಷೇಧ ಕಾಯ್ದೆ ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳಾದ ಜೀವಿಸುವ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಕಸಿದುಕೊಳ್ಳುವಂತಿದೆ. ಕೂಡಲೇ ಈ ಕಾಯ್ದೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸುತ್ತಾರೆ. ಇನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಾದಂತಹ ಜಸ್ಟೀಸ್ ಮದನ್ ಬಿ ಲೋಕೂರ್ “ಈ ಕಾಯ್ದೆಯು ಸಾಂವಿಧಾನಿಕವಾಗಿ ಸಿಂಧುವಾಗಬೇಕೆಂದರೆ ಒಂದು ದೊಡ್ಡ ಪವಾಡವೇ ನಡೆಯಬೇಕು. ಮೂಲತಃ ಇದು ಸಂವಿಧಾನದ ಮೂಲಭೂತ ಹಕ್ಕನ್ನೇ ಪ್ರಶ್ನಿಸಿರುವುದರಿಂದ, ಇದರ ಸಾಂವಿಧಾನಿಕ ಸಿಂಧುತ್ವಕ್ಕೆ ಅವಕಾಶವೇ ಇಲ್ಲ ಎಂದು ದೃಢವಾಗಿ ಹೇಳುತ್ತಾರೆ.

ಬಲವಂತದ, ಆಮಿಷವೊಡ್ಡಿ ಮಾಡುವ ಮತಾಂತರ vs ಸ್ವಇಚ್ಛೆಯ ಮತಾಂತರ

ಬಲವಂತವಾಗಿ ಒಬ್ಬರನ್ನು ಮತಾಂತರ ಮಾಡುವುದು ಅಥವಾ ಆಮಿಷಗಳನ್ನು ನೀಡಿ ಮತಾಂತರ ಮಾಡುವುದು ನಿಸ್ಸಂದೇಹವಾಗಿ ತಪ್ಪು. ಕಥೋಲಿಕ್ ಚರ್ಚು ಸಹ ಇದೇ ಅಭಿಪ್ರಾಯವನ್ನು ಹೊಂದಿದೆ. ನನಗನಿಸಿದಂತೆ ಬಲವಂತದ ಮತಾಂತರ ಪ್ರಕರಣಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಣಸಿಗುವುದು ಬಹಳ ಕಡಿಮೆ. ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವಂತೂ ಬಲವಂತದ ಮತಾಂತರಗಳು ಬಹುತೇಕ ಇಲ್ಲವಾಗಿದೆ. ಇನ್ನು ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದೂ ಸಹ ತಪ್ಪಾದರೂ ಇಂತಹ ಪ್ರಕರಣಗಳಿಗೆ ಒಂದು ನಿರ್ದಿಷ್ಟ ಪರಿಹಾರಾತ್ಮಕ ಚೌಕಟ್ಟು ಇಲ್ಲ ಎನ್ನಬಹುದು. ಆಮಿಷ ಪಡೆದುಕೊಂಡವರು ಯಾರೂ ತಮ್ಮನ್ನು ಆಮಿಷದ ಮೂಲಕ ಮತಾಂತರ ಮಾಡುತ್ತಿದ್ದಾರೆ ಎಂದು ದೂರು ನೀಡುವುದಿಲ್ಲ. ಆಮಿಷದ ಮೂಲಕ ಮತಾಂತರ ಮಾಡಿದರೂ ಸಹ ಫಲಾನುಭವಿಗಳಿಗೆ ತಾವು ಇತರೆ ಧರ್ಮಕ್ಕೆ ಮತಾಂತರವಾಗುತ್ತಿದ್ದೇವೆ ಎಂಬ ಸ್ಪಷ್ಟ ಅರಿವು ಇರುತ್ತದೆ.

ಇನ್ನು ಮೇಲೆ ಹೆಸರಿಸಲಾದ ಐದು ರಾಜ್ಯಗಳಲ್ಲಿ ಜಾರಿಯಾಗಿರುವ ಮತಾಂತರ ನಿಷೇಧ ಕಾಯ್ದೆಯ ಸಾರಾಂಶವನ್ನು ನೋಡಿದರೆ ಇಲ್ಲಿ ಸಾಕ್ಷಿಗಳನ್ನು ಪ್ರಸ್ತುತಪಡಿಸಬೇಕಾದ ಹೊಣೆಗಾರಿಕೆಯನ್ನು ಆರೋಪಿಗಳ ಮೇಲೆ ಹೊರಿಸಲಾಗಿದೆ. ಸಂವಿಧಾನಾತ್ಮಕವಾಗಿ ಯಾವುದೇ ಒಂದು ಬಲವಂತದ ಮತಾಂತರ ಕಂಡು ಬಂದರೆ ಅದನ್ನು ನಿರೂಪಿಸಲು ಅಭಿಯೋಗ (ಪ್ರಾಸಿಕ್ಯೂಷನ್) ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ಆದರೆ, ಈ ಹೊಸ
ಕಾಯ್ದೆಗಳ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದ ಹೊಣೆಗಾರಿಕೆ ಆರೋಪಿಯ ಮೇಲೆ ಬೀಳುತ್ತದೆ. ಅಂದರೆ ಯಾರೇ ಆರೋಪ ಮಾಡಲಿ ಆ ಆರೋಪಗಳಿಗೆಲ್ಲ ಆರೋಪಿಯೇ ಸಾಕ್ಷಿಗಳನ್ನು ಹುಡುಕುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಹೀಗಿರುವಾಗ ಈ ಕಾಯ್ದೆಯ ಸ್ಪಷ್ಟ ಉದ್ದೇಶ ಅಲ್ಪಸಂಖ್ಯಾತರನ್ನು ಹಣಿಯುವುದೇ ಆಗಿದೆ. ಒಂದುವೇಳೆ ಈ ಕಾಯ್ದೆ ಜಾರಿಯಾದರೆ ಖಂಡಿತವಾಗಿಯೂ ಇದನ್ನು ಕೋಮುವಾದಿ ಶಕ್ತಿಗಳು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವ ಆಯುಧವನ್ನಾಗಿ ಮಾಡಿಕೊಳ್ಳುತ್ತಾರೆ.

ಮತಾಂತರ ಎನ್ನುವುದು ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ನೆಲದ ಸಂವಿಧಾನ ನಮಗೆ ನೀಡಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ಮೂಲಕ ಶೋಷಿತ ವರ್ಗಗಳು, ಸಮಾನತೆಯ ತವಕದಲ್ಲಿರುವ ಎಲ್ಲರೂ ಸಹ ತಮಗಿಷ್ಟ ಬಂದ ಧರ್ಮವನ್ನು ಆರಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು. ಬಲವಂತದ ಪ್ರಕರಣಗಳು ನಡೆದಿದ್ದು ಆ ಕುರಿತು ಯಾರಾದರು ದೂರು ನೀಡಿದರೆ ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಲಿ. ಆದರೆ ಒಂದೆರಡು ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಸಮುದಾಯಕ್ಕೆ ಮಾರಕವಾಗುವಂತಹ ಅಸಂವಿಧಾನಿಕ ಕಾನೂನನ್ನು ತರುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. 2018ರಲ್ಲಿ ನಡೆದಂತಹ ಚರ್ಚ್ ದಾಳಿಗಳಂತಹ ಅನೇಕ ಪ್ರಕರಣಗಳು ಮತಾಂತರದ ಹೆಸರಿನಲ್ಲಿ ಪುನರಾವರ್ತಿಸುವ ಸಂಭವಗಳನ್ನೂ ಸಹ ತಳ್ಳಿಹಾಕುವಂತಿಲ್ಲ.

ಅಜಯ್ ರಾಜ್

ಅಜಯ್ ರಾಜ್
ಬೆಂಗಳೂರಿನ ಭೈರತಿಯವರಾದ ಅಜಯ್ ಪ್ರಸ್ತುತ ಅಮೆರಿಕನ್ ವಿಶ್ವವಿದ್ಯಾಲಯದ ಆಂಟಿ ರೇಸಿಸಮ್ ರಿಸರ್ಚ್ ಅಂಡ್ ಪಾಲಿಸಿ ಸೆಂಟರ್‌ನಲ್ಲಿ ಅನುವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ  ಮತಾಂತರ ನಿಷೇಧ ಕಾನೂನು: ಬಸವರಾಜ ಬೊಮ್ಮಾಯಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...