ಸಹಪಂಕ್ತಿ ಭೋಜನ ಮಾಡಿದ ಕಾರಣಕ್ಕೆ ದಲಿತ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಉತ್ತರಖಾಂಡ್ ರಾಜ್ಯದ ಚಂಪಾಪತ್ ಜಿಲ್ಲೆಯ ಮದುವೆ ಕಾರ್ಯಕ್ರಮವೊಂದರಲ್ಲಿ ನಡೆದಿದೆ.
45 ವರ್ಷದ ದಲಿತ ವ್ಯಕ್ತಿ ‘ರಮೇಶ್ ರಾಮ್’ ಮೇಲ್ಜಾತಿಯವರೊಂದಿಗೆ ಮದುವೆಯಲ್ಲಿ ಊಟಕ್ಕೆ ಕುಳಿತ್ತಿದ್ದನ್ನು ನೋಡಿ, ಹಲವು ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಗಿದೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅವರು ಮೃತಪಟ್ಟಿದ್ದಾರೆ ಎಂದು ‘ದಿ ವೈರ್’ ಸುದ್ದಿ ಜಾಲತಾಣ ವರದಿ ಮಾಡಿದೆ.
“ದೈಹಿಕವಾಗಿ ಹಲವು ಗಂಟೆಗಳ ಕಾಲ ಅವರಿಗೆ ಹಿಂಸೆ ನೀಡಲಾಯಿತು. ಲೋಹಾಘಾಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗೆ ಹಲ್ದಾವನಿಯ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದಾಗ ಅಸುನೀಗಿದರು” ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ಚಂಪಾವತ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಗೆ ವಿವಿಧ ಸಂಬಂಧಿತ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದೆ, ಆದರೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.
ಸಂತ್ರಸ್ತೆಯ ಪತ್ನಿಯ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ ಅವರು ‘ದಿ ವೈರ್’ಗೆ ಪ್ರತಿಕ್ರಿಯಿಸಿ, “ನಾವು ಪ್ರಕರಣವನ್ನು ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ. ಮದುವೆಯ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮದುವೆಗೆ ಆಗಮಿಸಿದ್ದ ಅತಿಥಿಗಳನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಜೇನುಕುರುಬ ಆದಿವಾಸಿ ಯುವಕನಿಗೆ ಅರಣ್ಯ ಸಿಬ್ಬಂದಿಯಿಂದ ಗುಂಡೇಟು: ಭುಗಿಲೆದ್ದ ಆಕ್ರೋಶ
ರಮೇಶ್ ರಾಮ್ ಅವರನ್ನು ಮದುವೆ ಸಮಾರಂಭಕ್ಕೆ ಕರೆಯಲಾಗಿತ್ತು ಎಂದು ಹೇಳಿರುವ ಪೊಲೀಸ್ ವರಿಷ್ಠಾಧಿಕಾರಿ, “ಮದುವೆಯನ್ನು ಹಮ್ಮಿಕೊಂಡಿದ್ದ ದುಂಗರ್ ಸಿಂಗ್ ಅವರ ಕುಟುಂಬವನ್ನು ಸ್ಥಳೀಯ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ಆದರೆ ದುಂಗರ್ ಸಿಂಗ್ ಕುಟುಂಬವು ಸಂತ್ರಸ್ತ ಕುಟುಂಬದ ಆರೋಪಗಳನ್ನು ನಿರಾಕರಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
“ನನ್ನ ಪತಿ ದೇವಿಧುರದ ಕೇದಾರನಾಥ ಗ್ರಾಮದಲ್ಲಿ ಟೈಲರ್ ಅಂಗಡಿಯನ್ನು ನಡೆಸುತ್ತಿದ್ದರು. ಅಂಗಡಿ, ಬಾಡಿಗೆ ಸ್ಥಳ, ದುಂಗರ್ ಸಿಂಗ್ ಮಾಲೀಕತ್ವದಲ್ಲಿದೆ. ಸಿಂಗ್ ಅವರ ಆಹ್ವಾನದ ಮೇರೆಗೆ ಅವರು ನವೆಂಬರ್ 28ರಂದು ಮದುವೆಗೆ ಹೋಗಿದ್ದರು” ಎಂದು ಕೊಲೆಯಾದ ರಮೇಶ್ ರಾಮ್ ಅವರ ಪತ್ನಿ ತುಳಸಿ ದೇವಿ ಅವರು ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲಾಗಿದೆ.
ರಾತ್ರಿಯಾದರೂ ರಾಮ್ ಮನೆಗೆ ಬಾರದಿದ್ದಾಗ ತುಳಿಸಿದೇವಿಯವರು ಗಂಡನಿಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿಯೊಬ್ಬ, “ನಿಮ್ಮ ಪತಿ ಮದುವೆ ಸಮಾರಂಭದಲ್ಲಿದ್ದು, ಮರುದಿನ ಬೆಳಿಗ್ಗೆ ಮನೆಗೆ ಬರುತ್ತಾರೆ” ಎಂದು ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಬೆಳಿಗ್ಗೆ ತುಳಸಿ ದೇವಿ ಅವರಿಗೆ ಮತ್ತೊಂದು ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿಯು, “ನಿಮ್ಮ ಗಂಡ ಪ್ರಜ್ಞೆ ತಪ್ಪಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದನು. ಬೆಳಿಗ್ಗೆ ನನ್ನ ಮಗನಿಗೆ ಆಂಬ್ಯುಲೆನ್ಸ್ ಆಪರೇಟರ್‌ನಿಂದ ಕರೆ ಬಂದಿತು. ನಿಮ್ಮ ಗಂಡನನ್ನು ಲೋಹಾಘಾಟ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿಗೆ ತಕ್ಷಣ ಬರಬೇಕು ಎಂದು ತಿಳಿಸಿದರು” ಎಂದು ತುಳಸಿದೇವಿ ವಿವರಿಸಿದ್ದಾರೆ.
ಇದನ್ನೂ ಓದಿರಿ: 2 ತಿಂಗಳಿನಿಂದ ವೇತನವಿಲ್ಲ: ಎಐಸಿಸಿಟಿಯು ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಾರ್ಮಿಕರ ಪ್ರತಿಭಟನೆ
ನವೆಂಬರ್ 29ರಂದು ಬೆಳಿಗ್ಗೆ ಕುಟುಂಬವು ಲೋಹಘಾಟ್‌ನಲ್ಲಿರುವ ಆಸ್ಪತ್ರೆಗೆ ಧಾವಿಸಿದಾಗ, ಗಾಯಗೊಂಡ ವ್ಯಕ್ತಿ ನಿತ್ರಾಣರಾಗಿ ನೆಲದ ಮೇಲೆ ಮಲಗಿದ್ದರು. ನಂತರ, ಅಲ್ಲಿನ ವೈದ್ಯರು ರಾಮ್ ಅವರನ್ನು ಹಲ್ದಾವನಿಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು ಎಂದು ಎಫ್‌ಐಆರ್ ಹೇಳಿದೆ.
“ನನ್ನ ತಂದೆಯ ಸ್ಥಿತಿಯನ್ನು ನೋಡಿ ನಮಗೆಲ್ಲರಿಗೂ ಆಘಾತವಾಯಿತು. ಅವರ ಮೈಮೇಲೆಲ್ಲ ಗಾಯದ ಗುರುತುಗಳಿದ್ದವು. ಎಲ್ಲರೊಂದಿಗೆ ಜೊತೆಯಲ್ಲಿ ಕುಳಿತು ಊಟ ಮಾಡಿದ್ದಕ್ಕಾಗಿ ಥಳಿಸಲಾಯಿತು ಎಂದು ಆಂಬ್ಯುಲೆನ್ಸ್‌ನಲ್ಲಿ ಹಲ್ದಾವನಿಗೆ ತೆರಳುವಾಗ ತಿಳಿದುಬಂತು” ಎಂದು ರಾಮ್ ಅವರ ಪುತ್ರ ಸಂಜಯ್ ಹೇಳಿದ್ದಾರೆ.
ಹಲ್ದಾವನಿಯ ಆಸ್ಪತ್ರೆಯಲ್ಲಿ ನವೆಂಬರ್ 29ರಂದು ರಾಮ್ ಮೃತಪಟ್ಟಿದ್ದು, ಕೊನೆಯುಸಿರೆಳೆಯುವ ಮೊದಲು ಸಿ.ಟಿ. ಸ್ಕ್ಯಾನ್ ಜೊತೆಗೆ ಕೆಲವು ಪರೀಕ್ಷೆಗಳನ್ನು ವೈದ್ಯರು ಮಾಡಿದ್ದಾರೆ.
“ಮದುವೆಯಲ್ಲಿ ಎಲ್ಲರೊಂದಿಗೆ ಊಟಕ್ಕೆ ಕುಳಿತ್ತಿದ್ದಕ್ಕೆ ನನ್ನ ಗಂಡನಿಗೆ ಚಿತ್ರ ಹಿಂಸೆ ನೀಡಲಾಯಿತು. ನವೆಂಬರ್ 28ರ ರಾತ್ರಿ ಅವರನ್ನು ಭೀಕರವಾಗಿ ಥಳಿಸಲಾಯಿತು. ನಮಗೆ ತಿಳಿಸದೆ ಮರುದಿನ ಬೆಳಿಗ್ಗೆ ಲೋಹಘಾಟ್ ಆಸ್ಪತ್ರೆಗೆ ಕರೆತರಲಾಯಿತು ಎಂಬುದು ನಮಗೆ ಖಚಿತವಾಗಿದೆ” ಎಂದು ತುಳಸಿ ದೇವಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: Manual Scavenging: ಮಲದ ಗುಂಡಿ ಸ್ವಚ್ಛಗೊಳಿಸುವವರಲ್ಲಿ 73.31% ಪರಿಶಿಷ್ಟ ಜಾತಿಯವರು


