ಮೈಸೂರಿನ ಮಹಾರಾಣಿ ವಿದ್ಯಾರ್ಥಿನಿಲಯದಲ್ಲಿ ಎರಡು ತಿಂಗಳಿಂದ ಊಟ ನೀಡುತ್ತಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಊಟದ ವ್ಯವಸ್ಥೆಯಾಗಿಲ್ಲ ಎಂದು ಆರೋಪಿಸಿ ಮಹಾರಾಣಿ ವಿಜ್ಞಾನ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ನೂರಾರು ವಿದ್ಯಾರ್ಥಿನಿಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅ.18ರಿಂದ ಕಾಲೇಜು ಪುನಾರಾರಂಭಗೊಂಡಿದೆ. ಹೀಗಿದ್ದರೂ, ವಿದ್ಯಾರ್ಥಿನಿಲಯದಲ್ಲಿ ಊಟದ ವ್ಯವಸ್ಥೆಯನ್ನು ಇನ್ನೂ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎರಡು ತಿಂಗಳಿಂದ ಹೋಟೆಲ್‌ನಲ್ಲಿ ಊಟ ಮಾಡುತ್ತಿದೇವೆ. ಹೋಟೆಲ್ ಊಟದಿಂದ ಬಹುತೇಕ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರಾಗಿ, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದರಿಂದ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಎಲ್ಲ ವಿದ್ಯಾರ್ಥಿನಿಯರು ದಿನದ ಮೂರು ಹೊತ್ತು ಹೋಟೆಲ್‌ನಲ್ಲಿಯೇ ತಿನ್ನುವಷ್ಟು ಸ್ಥಿತಿವಂತರಲ್ಲ ಎಂದು ತಿಳಿಸಿದರು.
ಎಷ್ಟೋ ವಿದ್ಯಾರ್ಥಿನಿಯರು ಒಂದೆರಡು ದಿನ ಉಪವಾಸ ಮಾಡಿದ್ದಾರೆ. ಮನೆಯಿಂದ ಬರುವ ವಿದ್ಯಾರ್ಥಿನಿಯರು ಊಟ ತಂದು ಕೊಟ್ಟಿದ್ದಾರೆ. ಒಟ್ಟಾರೆ ಎರಡು ತಿಂಗಳಿಂದ ವಿದ್ಯಾರ್ಥಿನಿಯರ ಪಾಡು ಹೇಳತೀರದಾಗಿದೆ ಎಂದು ಪ್ರತಿಭಟನಾನಿತರ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. ಅದಷ್ಟು ಬೇಗ ಊಟದ ವ್ಯವಸ್ಥೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದ ಪರದಾಡಬೇಕಿದೆ. ಹಣ ಕೊಟ್ಟು ಪ್ರತಿನಿತ್ಯ ಹೊರಗಿನಿಂದ ನೀರು ತರಬೇಕಾದ ದುಸ್ಥಿತಿ ನಮ್ಮದು. ಶೀಘ್ರವೇ ಕುಡಿಯವ ನೀರಿನ ವ್ಯವಸ್ಥೆ ಮಾಡಬೇಕಿದೆ. ವಾರ್ಡನ್ ಹಾಗೂ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದೇವೆ. ಪ್ರಾಂಶುಪಾಲರು ವಿದ್ಯಾರ್ಥಿನಿಯರ ಪರವಾಗಿ ಅವರ ಕೈಯಲ್ಲಿ ಆದ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಈ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ . ಹಾಗಾಗೀ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿನಿಯರು ಇಲ್ಲಿ ಸೇರಿದ್ದೇವೆ ಎಂದು ತಿಳಿಸಿದರು.
15 ದಿನಗಳ ತಾತ್ಕಾಲಿಕ ಊಟದ ವ್ಯವಸ್ಥೆ: ಶಾಸಕ
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, “ಊಟದ ವ್ಯವಸ್ಥೆ ಆರಂಭಿಸಲು ಉಂಟಾಗಿರುವ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಈ ಕುರಿತು ಶಿಕ್ಷಣ ಇಲಾಖೆ ಆಯುಕ್ತ ಮಾತನಾಡದ್ದೇನೆ. ಇನ್ನೂ 15 ದಿನ ಕಾಲ ವಿದ್ಯಾರ್ಥಿನಿಯರಿಗೆ ತಾತ್ಕಾಲಿಕ ಊಟ ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಮಹಾರಾಣಿ ಕಾಲೇಜಿನಲ್ಲೇ ಓದಬೇಕೆಂಬ ಹಠ ಏಕೆ?
ಸರಕಾರ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪದವಿ ಕಾಲೇಜು ಆರಂಭಿಸಿದೆ. ವಿದ್ಯಾರ್ಥಿನಿಯರು ತಮಗೆ ಹತ್ತಿರ ಆಗುವ ಕಾಲೇಜುಗಳಲ್ಲಿಯೇ ಸೇರಿಕೊಳ್ಳಬೇಕು. ಮಹಾರಾಣಿ ಕಾಲೇಜಿನಲ್ಲಿಯೇ ಓದಬೇಕೆಂಬುದು ಸರಿಯಾದ ವರ್ತನೆಯಲ್ಲ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಎನ್‌ಇಪಿ ಪಠ್ಯಕ್ರಮ ಬದಲು ಫಜೀತಿ
ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಊಟದ ವ್ಯವಸ್ಥೆ ಮಾಡಿಲ್ಲ ಎಂಬುದು ಮಹಾರಾಣಿ ಕಾಲೇಜಿನ ಸಮಸ್ಯೆಯಾದರೆ, ತರಗತಿಗಳು ಆರಂಭವಾಗಿ ಒಂದು ತಿಂಗಳಾದ ಬಳಿಕ ಪಠ್ಯಕ್ರಮ ಬದಲಿಸಿ ಮತ್ತೊಂದು ಯಡವಟ್ಟು ಮಾಡಲು ಮೈಸೂರು ವಿವಿ ಹೊರಟಿದೆ. ಈ ದಿಢೀರ್ ಬದಲಾವಣೆಯನ್ನು ಖಂಡಿಸಿ ಇತ್ತೀಚೆಗೆ ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಎನ್‌ಇಪಿ ಜಾರಿಯಲ್ಲಿ ಮುಂಚೂಣಿಯಲ್ಲಿರುವ ಮೈಸೂರು ವಿವಿಯು ಹಲವು ಎಡವಟ್ಟುಗಳನ್ನು ಮಾಡುತ್ತಲೇ ಇದೆ. ಬಹುಶಿಸ್ತೀಯ ಪಠ್ಯಕ್ರಮದ ಹೆಸರಲ್ಲಿ ವಿದ್ಯಾರ್ಥಿಗಳ ಆಯ್ಕೆಗೆ ವಿರುದ್ಧವಾಗಿ ಪಠ್ಯವನ್ನು ಹೇರಲು ಹೊರಟು ವಿವಿ ಈಗ ಸುದ್ದಿಯಲ್ಲಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಮೈಸೂರು ವಿವಿಯು ವಿದ್ಯಾರ್ಥಿಗಳ ಇಷ್ಟ-ಕಷ್ಟಗಳನ್ನು ಆಲಿಸುತ್ತಿಲ್ಲ ಅನಿಸುತ್ತದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.


