Homeಕರ್ನಾಟಕದಿಢೀರ್‌ ಪಠ್ಯ ಬದಲಾವಣೆ ಸುತ್ತೋಲೆ: ಎನ್‌ಇಪಿಯಿಂದ ವಿದ್ಯಾರ್ಥಿಗಳು ಹೈರಾಣು

ದಿಢೀರ್‌ ಪಠ್ಯ ಬದಲಾವಣೆ ಸುತ್ತೋಲೆ: ಎನ್‌ಇಪಿಯಿಂದ ವಿದ್ಯಾರ್ಥಿಗಳು ಹೈರಾಣು

ತರಗತಿಗಳು ಆರಂಭವಾಗಿ ಒಂದು ತಿಂಗಳ ಮೇಲಾಗಿದೆ. ಈಗ ಪಠ್ಯಕ್ರಮ ಬದಲಿಸಲು ಸೂಚಿಸಿರುವುದು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ.

- Advertisement -
- Advertisement -

ಯಾವುದೇ ಚರ್ಚೆ, ಸಿದ್ಧತೆ, ಮುಂದಾಲೋಚನೆ ಇಲ್ಲದೆ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020 (ಎನ್‌ಇಪಿ-2020) ಶೈಕ್ಷಣಿಕ ವಲಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳು ಹೀಗಾಗಲೇ ಗೋಚರಿಸುತ್ತಿವೆ. ನೋಟ್ ಬ್ಯಾನ್‌ ಮಾಡಿದ ಬಳಿಕ ಸರ್ಕಾರ ಹೇಗೆ ಚಿತ್ರವಿಚಿತ್ರ ಬದಲಾವಣೆಯನ್ನು ತಂದು ಜನರನ್ನು ಆತಂಕಕ್ಕೆ ತಳ್ಳಿತೋ ಹಾಗೆಯೇ ಎನ್‌ಇಪಿ ಕಥೆಯೂ ಆಗುತ್ತಿರುವ ಸೂಚನೆಗಳು ಕಂಡು ಬರುತ್ತಿವೆ.

ಎನ್‌ಇಪಿಯನ್ನು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶೈಕ್ಷಣಿಕ ವಲಯದಲ್ಲಿರುವವರು ಸರಿಯಾಗಿ ಅರ್ಥಮಾಡಿಕೊಳ್ಳುವ ಮುನ್ನವೇ ಒಂದೊಂದೇ ಬದಲಾವಣೆಗಳನ್ನು ಜಾರಿಗೊಳಿಸುತ್ತಿರುವುದು ವಿದ್ಯಾರ್ಥಿಗಳ ಬದುಕನ್ನು ಹೈರಾಣಾಗಿಸಿದೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಶಿಕ್ಷಣ ವಲಯದಿಂದ ಹೊರದೂಡುವ ಷಡ್ಯಂತ್ರದಂತೆ ಎನ್‌ಇಪಿ ಈಗಾಗಲೇ ಭಾಸವಾಗತೊಡಗಿದೆ.

ಕೊರೊನಾದಿಂದ ಶೈಕ್ಷಣಿಕ ವಲಯ ಹದಗೆಟ್ಟ ಪರಿಸ್ಥಿತಿಯಲ್ಲಿ ಎನ್‌ಇಪಿ ಜಾರಿಯಾಯಿತು. ಕೊರೊನಾ ಕಾರಣದಿಂದಾಗಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಯಿತು. ಸುಮಾರು ಒಂದೂವರೆ ವರ್ಷ ಶಿಕ್ಷಣ ವ್ಯವಸ್ಥೆ ಹಳ್ಳಹಿಡಿದಿದ್ದರಿಂದ ಶೈಕ್ಷಣಿಕ ವಲಯ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗಿದ್ದು ಸುಳ್ಳಲ್ಲ.

ಕೊರೊನಾ ತಣ್ಣಗಾದ ಬಳಿಕ ತರಗತಿಗಳನ್ನು ಆರಂಭಿಸಲಾಯಿತು. ಪದವಿ ಕಾಲೇಜುಗಳಲ್ಲಿ ಪ್ರವೇಶಾತಿಯೂ ಗಣನೀಯವಾಗಿ ಹೆಚ್ಚಿತು. ಶಿಕ್ಷಣದತ್ತ ಮಾನಸಿಕವಾಗಿ ಇನ್ನೂ ಸಿದ್ಧವಾಗಿರದ ವಿದ್ಯಾರ್ಥಿಗಳ ಮೇಲೆ ದಿಢೀರ್‌ ಎನ್‌ಇಪಿ ಜಾರಿಗೊಳಿಸಲಾಯಿತು. ಈಗಾಗಲೇ ಅನೇಕ ವಿವಿಗಳಲ್ಲಿ ಒಂದು ತಿಂಗಳ ಹಿಂದೆಯೇ ತರಗತಿಗಳು ಆರಂಭವಾಗಿವೆ. ಹೀಗಿರುವ ಪಠ್ಯಕ್ರಮದಲ್ಲಿ ದಿಢೀರ್‌ ಬದಲಾವಣೆಯನ್ನು ಸರ್ಕಾರ ಸೂಚಿಸಿದೆ. ಅದರನ್ವಯ ವಿಶ್ವವಿದ್ಯಾನಿಲಯಗಳು ತರಾತುರಿಯಲ್ಲಿ ಸುತ್ತೋಲೆಗಳನ್ನು ಹೊರಡಿಸುವಂತಾಗಿದೆ.

ಏನಿದು ಹೊಸ ಸುತ್ತೋಲೆ?

‘ಓಪನ್‌ ಎಲೆಕ್ಟಿವ್‌’ (ಮುಕ್ತ ಐಚ್ಛಿಕ) ವಿಷಯದ ಕುರಿತು ಮಾಡಿರುವ ಸುತ್ತೋಲೆ ಆತಂಕ ಸೃಷ್ಟಿಸಿದೆ. “ಕಲಾ ವಿದ್ಯಾರ್ಥಿಗಳು- ‘ಓಪನ್ ಎಲೆಕ್ಟಿವ್‌’ ವಿಷಯವನ್ನು ‘ವಾಣಿಜ್ಯ’ ಅಥವಾ ‘ವಿಜ್ಞಾನ’ ವಿಷಯಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಬೇಕು. ವಾಣಿಜ್ಯ ವಿದ್ಯಾರ್ಥಿಗಳು- ಕಲಾ ಅಥವಾ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ವಿಜ್ಞಾನ ವಿದ್ಯಾರ್ಥಿಗಳು- ಕಲಾ ಅಥವಾ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂಬುದು ಸರ್ಕಾರ ಹೊರಡಿಸಿರುವ ಸೂಚನೆ. ಅದರನ್ವಯ ಮೈಸೂರು ವಿಶ್ವವಿದ್ಯಾನಿಲಯ ನೀಡಿರುವ ಹೊಸ ಸುತ್ತೋಲೆ ಲಭ್ಯವಾಗಿದೆ. ಉಳಿದ ವಿವಿಗಳಲ್ಲೂ ಪರಿಸ್ಥಿತಿಗೆ ಹೀಗೆಯೇ ಇದೆ ಎನ್ನುತ್ತವೆ ಮೂಲಗಳು.

ಇಲ್ಲಿಯವರೆಗೆ ವಿದ್ಯಾರ್ಥಿಗಳು ಬಹುಶಿಸ್ತೀಯ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಿದವರಲ್ಲ. ಪಿಯುಸಿಯಲ್ಲಿ ಕಲಾ ವಿಷಯವೆಂದರೆ ಕಲಾ ವಿಷಯವನ್ನಷ್ಟೇ ಓದಿಕೊಂಡು ಬಂದಿದ್ದಾರೆ. ವಿಜ್ಞಾನ, ವಾಣಿಜ್ಯ ವಿಷಯದ ವಿದ್ಯಾರ್ಥಿಗಳೂ ತಮ್ಮ ಆಯ್ಕೆಗಳಿಗೆ ಸೀಮಿತವಾಗಿದ್ದಾರೆ. ಎನ್‌ಇಪಿಯಿಂದಾಗಿ ಏಕಾಏಕಿ ಬಹುಶಿಸ್ತೀಯ ಪಠ್ಯಕ್ರಮಕ್ಕೆ ಹೋಗಬೇಕಾಗಿದೆ. ವಾಣಿಜ್ಯ ಹಾಗೂ ಸೈನ್ಸ್ ವಿದ್ಯಾರ್ಥಿಗಳು ಸುಲಭವಾಗಿ ಆರ್ಟ್ಸ್ ತೆಗೆದುಕೊಂಡು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳಿವೆ. ಆದರೆ ಕಲಾ ವಿದ್ಯಾರ್ಥಿಗಳು ವಿಜ್ಞಾನ ಅಥವಾ ವಾಣಿಜ್ಯ ವಿಷಯವನ್ನು ತೆಗೆದುಕೊಂಡು ಓದುವುದು ಕಷ್ಟವಾಗುತ್ತದೆ ಎಂಬುದು ಚರ್ಚೆಯ ವಿಷಯವಾಗಿದೆ.


ಇದನ್ನೂ ಓದಿರಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು


ಸರ್ಕಾರದ ಸೂಚನೆಯನ್ವಯ ಮೈಸೂರು ವಿಶ್ವವಿದ್ಯಾನಿಲಯ ಸುತ್ತೋಲೆ ಹೊರಡಿಸಿರುವುದು…
ಮುಕ್ತ ಐಚ್ಛಿಕ (ಓಪನ್‌ ಎಲೆಕ್ಟಿವ್) ಸಂಬಂಧಿಸಿದಂತೆ ವಿವಿ ಹೊಸ ಪಠ್ಯಕ್ರಮಕ್ಕೆ ಸುತ್ತೋಲೆ ಹೊರಡಿಸಿರುವುದು.

“ಗ್ರಾಮೀಣ ಭಾಗದ ಕೆಲವು ಪದವಿ ಕಾಲೇಜುಗಳಲ್ಲಿ ಬಿ.ಎ. ಮಾತ್ರ ಇದೆ. ಅಂತಹ ವಿದ್ಯಾರ್ಥಿಗಳಿಗೆ ವಿಜ್ಞಾನ ಅಥವಾ ವಾಣಿಜ್ಯ ವಿಷಯವನ್ನು ಯಾರು ಪಾಠ ಮಾಡುತ್ತಾರೆ?” ಎಂದು ಕೇಳಿದರೆ, ಮತ್ತೆ ಬೋಧಕರನ್ನು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಅಲೆದಾಡಿಸುವ ಉತ್ತರ ಬರುತ್ತಿದೆ. ಹೀಗಾದಾಗ ವಿದ್ಯಾರ್ಥಿಗಳೊಂದಿಗೆ ಬೋಧಕರು ತನ್ಮಯತೆ ಸಾಧಿಸಲು ಸಾಧ್ಯವೇ? ತರಗತಿಗಳನ್ನು ಮುಗಿಸುವುದೇ ಬೋಧಕರಿಗೆ ಆದ್ಯತೆಯಾಗುವುದಿಲ್ಲವೇ? ವಾರಕ್ಕೆ ಮೂರು ಗಂಟೆ ಐಚ್ಛಿಕ ವಿಷಯದಲ್ಲಿ ಪಾಠ ಮಾಡಬೇಕು ಎನ್ನಲಾಗಿದೆ. ಆದರೆ ನೇಮಕಾತಿಗಳೇ ನಡೆದಿಲ್ಲ. ಪ್ರಾಧ್ಯಾಪಕರ ಕೊರತೆ ಇರುವಾಗ, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಬೋಧಿಸುವವರು ಯಾರು?

ಮತ್ತೆ ಹೊಸ ಸುತ್ತೋಲೆಯ ವಿಚಾರಕ್ಕೆ ಬರೋಣ. ಮೈಸೂರು ವಿಶ್ವವಿದ್ಯಾನಿಲಯವನ್ನೇ ಉದಾಹರಣೆಯಾಗಿ ಹೇಳುವುದಾದರೆ ಈಗಾಗಲೇ ಒಂದು ತಿಂಗಳ ಹಿಂದೆಯೇ ತರಗತಿಗಳು ಆರಂಭವಾಗಿವೆ. ಬೇರೆ ಕಾಂಬಿನೇಷನ್‌ಗಳನ್ನು ತೆಗೆದುಕೊಂಡು ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತರಗತಿಗಳಿಗೆ ಹೋಗುತ್ತಿದ್ದಾರೆ. ಉದಾಹರಣೆಗೆ ಹಿಸ್ಟರಿ, ಎಕಾನಮಿಕ್ಸ್‌ ತೆಗೆದುಕೊಂಡಿರುವ ವಿದ್ಯಾರ್ಥಿ ಕನ್ನಡವನ್ನು ಐಚ್ಛಿಕವಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಈಗ ಏಕಾಏಕಿ ಪಠ್ಯಕ್ರಮವನ್ನು ಬದಲಿಸಿದ್ದು ಏತಕ್ಕೆ?

‘ಓಪನ್‌ ಎಲೆಕ್ಟಿವ್‌’ಗೆ ಅರ್ಥವಿದೆಯೇ?

ಓಪನ್‌ ಎಲೆಕ್ಟಿವ್‌ (ಮುಕ್ತ ಐಚ್ಛಿಕ) ವಿಷಯವು ಮಕ್ಕಳ ಆಯ್ಕೆಗೆ ಬಿಟ್ಟಿದ್ದು. ಮಕ್ಕಳೇ ಆಯ್ಕೆ ಮಾಡಿಕೊಳ್ಳಬೇಕಲ್ಲವೇ? ಆದರೆ ಸರ್ಕಾರ ಮುಕ್ತ ಐಚ್ಛಿಕ ವಿಷಯವನ್ನು ಮಕ್ಕಳ ಮೇಲೆ ಹೇರುತ್ತಿದೆ. ಮುಖ್ಯವಾಗಿ ಎನ್‌ಇಪಿ ಜಾರಿಯಾಗುತ್ತಿರುವುದು ಕೊರೊನಾದಿಂದಾಗಿ ಸುಮಾರು ಒಂದೂವರೆ ವರ್ಷ ಮನೆಯಲ್ಲಿದ್ದ ಮಕ್ಕಳ ಮೇಲೆ ಎಂಬುದನ್ನು ಗಮನಿಸಬೇಕು.

ಎನ್‌ಇಪಿ ವಿದ್ಯಾರ್ಥಿ ಸ್ನೇಹಿ ಎಂಬುದಕ್ಕೆ ಎಲ್ಲಿದೆ ಅರ್ಥ? ಈಗಾಗಲೇ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ಬಿ.ಎ. ವಿದ್ಯಾರ್ಥಿಗಳು ಬಿ.ಕಾಂ.ನಿಂದ ಓಪನ್ ಎಲೆಕ್ಟಿವ್‌ ಅಥವಾ ವಿಜ್ಞಾನದ ಓಪನ್ ಎಲೆಕ್ಟಿವ್ ತೆಗೆದುಕೊಂಡಿದ್ದಾರೆ. ಆದರೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ಒತ್ತಾಯವಿರಲಿಲ್ಲ. ದುರಂತವೆಂದರೆ ಹೀಗೆ ಒತ್ತಾಯಪೂರ್ವಕವಾಗಿ ಹೇರಿದಾಗ ಕೊನೆಯ ಪಂಕ್ತಿಯಲ್ಲಿರುವ ವಿದ್ಯಾರ್ಥಿಗಳು ಹೈರಾಣುತ್ತಾರೆ ಎಂಬುದು ಪ್ರಾಧ್ಯಾಪಕರ ಆತಂಕ.

ಒಂದು ಸೆಮಿಸ್ಟರ್‌‌ನಲ್ಲಿ 800 ಅಂಕಗಳಿಗೆ ಪರೀಕ್ಷೆಗಳನ್ನು ಬರೆಯಬೇಕಿದೆ. ಕನಿಷ್ಠ 8 ಗಂಟೆಗಳ ಕಾಲ ತರಗತಿಯಲ್ಲೇ ವಿದ್ಯಾರ್ಥಿಗಳು ಕಳೆಯಬೇಕಾದ ಪರಿಸ್ಥಿತಿ ಇದುರಾಗಿದೆ ಎಂಬುದು ಮತ್ತೊಂದು ಆತಂಕ.


ಇದನ್ನೂ ಓದಿರಿ: ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?


ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಹೇಳುವುದೇನು?

ಎನ್‌ಇಪಿ ಜಾರಿಯಲ್ಲಿ ಹೆಚ್ಚು ಧಾವಂತದಲ್ಲಿರುವ ವಿವಿಗಳಲ್ಲಿ ಮೈಸೂರು ವಿವಿಯೂ ಒಂದು. ಸರ್ಕಾರದ ಹೊಸ ನಿಯಮವನ್ನು ಜಾರಿಗೊಳಿಸುವಂತೆ ಮೈಸೂರು ವಿವಿ ಸುತ್ತೋಲೆ ಹೊರಡಿಸಿರುವ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, “ಪ್ರಥಮ ವರ್ಷದ ಪ್ರವೇಶಾತಿ ಡಿ.2ರಂದು ಆರಂಭವಾಗಿದೆ. ಈವರೆಗೆ ಕಾಲೇಜುಗಳು ಆರಂಭವಾಗಿರಲಿಲ್ಲ. ಹೀಗಾಗಿ ಈ ಸುತ್ತೋಲೆಯಿಂದ ತೊಂದರೆಯಾಗದು” ಎಂದರು.

‘ಗ್ರಾಮಾಂತರ ವಿದ್ಯಾರ್ಥಿಗಳ ಕಷ್ಟಕ್ಕೆ ಪರಿಹಾರವೇನು?’ ಎಂದು ಕೇಳಿದಾಗ, “ಎಲ್ಲಿಲ್ಲಿ ಇದು ಜಾರಿಗೆ ಸಾಧ್ಯವಿಲ್ಲವೋ ಅಲ್ಲಿ ಬಿಟ್ಟುಬಿಡಿ ಎಂದು ಸರ್ಕಾರ ಹೇಳಿದೆ. ಆರ್ಟ್ಸ್‌ ಇರುವ ಕಡೆ ಕಾಮರ್ಸ್ ಇದ್ದೇ ಇರುತ್ತದೆ. ಕಾಮರ್ಸ್ ವಿದ್ಯಾರ್ಥಿಗಳು ಆರ್ಟ್ಸ್ ವಿಷಯವನ್ನು, ಆರ್ಟ್ಸ್ ವಿದ್ಯಾರ್ಥಿಗಳು ಕಾಮರ್ಸ್ ತೆಗೆದುಕೊಳ್ಳಬಹುದು. ಎನ್‌ಇಪಿಯ ಮುಖ್ಯ ಉದ್ದೇಶ ಬಹುಶಿಸ್ತೀಯ ಪಠ್ಯಕ್ರಮ. ಕಲಾ ವಿದ್ಯಾರ್ಥಿ ವಾಣಿಜ್ಯದ ಒಂದು ವಿಷಯವನ್ನು, ವಿಜ್ಞಾನದ ಒಂದು ವಿಷಯವನ್ನು ತೆಗೆದುಕೊಂಡರೆ ಕೌಶಲ ವೃದ್ಧಿಯಾಗುತ್ತದೆ” ಎಂದು ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಕಷ್ಟವಾಗುವಂತೆ ಐಚ್ಛಿಕ ವಿಷಯವನ್ನು ಹೇರುವುದು ಸರಿಯೇ?’ ಎಂದು ಪ್ರಶ್ನಿಸಿದಾಗ, “ಐಚ್ಛಿಕ ವಿಷಯಗಳು ಕಷ್ಟವಾಗಿರುವುದಿಲ್ಲ. ಪ್ರಾಥಮಿಕ ವಿಷಯಗಳನ್ನಷ್ಟೇ ಪರಿಚಯಿಸಲಾಗುತ್ತದೆ. ಉದ್ಯೋಗ ಕೇಂದ್ರಿತ ವಿಷಯಕ್ಕೆ ಐಚ್ಛಿಕ ಆಯ್ಕೆ ಆದ್ಯತೆ ನೀಡುತ್ತದೆ” ಎಂದರು. ಐಚ್ಛಿಕ ವಿಷಯ ಕಷ್ಟವಾಗಿರುವುದಿಲ್ಲ ಆದರೆ ಉದ್ಯೋಗ ದೊರಕಿಸಿಕೊಡುತ್ತದೆ ಎಂಬುದು ಕುಲಪತಿಯವರ ಅಭಿಪ್ರಾಯ. ಆದರೆ ಬೋಧಕರ ಪ್ರಕಾರ, ಈ ಐಚ್ಛಿಕ ವಿಷಯಗಳು ವಿದ್ಯಾರ್ಥಿಗಳಿಗೆ ತಲೆಬಿಸಿಯಾಗುವಂತಿವೆ.


ಇದನ್ನೂ ಓದಿರಿ: NEP ವಿರೋಧಿಸಿ ಪ್ರತಿಭಟಿಸುತ್ತಿದ್ದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ತೀವ್ರ ಖಂಡನೆ


“ವಿದ್ಯಾರ್ಥಿಗಳು ಕನಿಷ್ಠ ಎಂಟು ಗಂಟೆ ತರಗತಿಯಲ್ಲಿ ಕೂರಲು ಸಾಧ್ಯವೇ?” ಎಂದು ಕೇಳಿದರೆ, “ಇದು ವಿದ್ಯಾರ್ಥಿಗಳ ಸಮಸ್ಯೆಯಲ್ಲ, ಬೋಧಕರ ಸಮಸ್ಯೆ. ಹೊಸದನ್ನು ಸ್ವೀಕರಿಸಲು ಬೋಧಕರು ಸಿದ್ಧವಿಲ್ಲ. ಹೊಸದಾಗಿ ಬಂದದ್ದನ್ನು ಸ್ವೀಕರಿಸಿದಾಗ ತಾನೇ ದೇಶ ಮುನ್ನೆಡೆಯಲು ಸಾಧ್ಯ? ವಾರ್ಷಿಕ ಶೈಕ್ಷಣಿಕ ವ್ಯವಸ್ಥೆಯಿಂದ ಸೆಮಿಸ್ಟರ್‌ ಶಿಕ್ಷಣಕ್ಕೆ ಬಂದಾಗಲೂ ಹೀಗೆಯೇ ಟೀಕೆಗಳು ವ್ಯಕ್ತವಾಗಿದ್ದವು” ಎಂದು ಎನ್‌ಇಪಿಯನ್ನು ಸಮರ್ಥಿಸಿಕೊಂಡರು.

‘ಮೊದಲು 600 ಅಂಕಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದವು. ಈಗ 800 ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗುತ್ತದೆ’ ಎಂದು ಕೇಳಿದರೆ, “ನೀವು ಸರಿಯಾಗಿ ತಿಳಿದುಕೊಳ್ಳಿ. 800 ಅಂಕಗಳಿಗೆ ಸಿಲಬಸ್ ಇರುವುದಿಲ್ಲ” ಎಂದು ಪ್ರಶ್ನೆ ಕೇಳಿದ್ದಕ್ಕೆ ಬುದ್ಧಿ ಹೇಳಿದರು.

ಎಲ್ಲಾ ಗೊಂದಲಮಯ

‘ಪ್ರಥಮ ಸೆಮಿಸ್ಟರ್‌ ಪ್ರವೇಶಾತಿ ಮುಗಿದಿರಲಿಲ್ಲ. ಈಗ ತರಗತಿಗಳು ಆರಂಭವಾಗುತ್ತವೆ’ ಎಂದು ಮೈಸೂರು ವಿವಿ ಕುಲಪತಿಯವರು ಹೇಳುವುದು ಸತ್ಯಕ್ಕೆ ದೂರವಾಗಿದೆ ಎಂಬುದು ಪ್ರವೇಶಾತಿಗೆ ಸಂಬಂಧಿಸಿದಂತೆ ಈ ಹಿಂದೆ ವಿವಿ ನೀಡಿರುವ ಸೂಚನೆಗಳೇ ಹೇಳುತ್ತವೆ.

ಡಿಸೆಂಬರ್‌ 2ರಂದು ಹೊಸ ಸುತ್ತೋಲೆ ಹೊರಡಿಸಿರುವ ಮೈಸೂರು ವಿವಿಯು, “2021-22ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ರೂ. 700 ದಂಡ ಶುಲ್ಕದೊಂದಿಗೆ ಪ್ರವೇಶಾತಿ ದಿನಾಂಕವನ್ನು ದಿನಾಂಕ 4-12-2021ರವರೆಗೆ ವಿಸ್ತರಿಸಲಾಗಿದೆ. ಇದು ಅಂತಿಮ ಕೊನೆ ದಿನಾಂಕವಾಗಿರುತ್ತದೆ” ಎಂದು ತಿಳಿಸಲಾಗಿರುತ್ತದೆ.

ಮುಂದುವರಿದು, “ಮೇಲೆ ತಿಳಿಸಿರುವ ದಿನಾಂಕದೊಳಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಏನಾದರೂ ಹಾಜರಾತಿ ಕೊರತೆಯಾದ್ದಲ್ಲಿ/ ಅಗತ್ಯವಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಹಾಜರಾತಿ ಸರಿದೂಗಿಸುವುದು” ಎಂದು ಸೂಚನೆ ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ‘ಹಾಜರಾತಿ ಕೊರತೆ’ಯ ಉಲ್ಲೇಖ. ತರಗತಿಗಳು ಕೊರತೆಯಾಗುವ ಪ್ರಮೇಯವೇನಿದೆ? ಐಚ್ಛಿಕ ವಿಷಯದ ಕುರಿತ ಸುತ್ತೋಲೆಯನ್ನು ಸರಿದೂಗಿಸಲು ಮೈಸೂರು ವಿವಿ ಈ ಹೊಸ ಸುತ್ತೋಲೆಯನ್ನು ಹೊರಡಿಸಿದೆಯೇ? ವಿದ್ಯಾರ್ಥಿಗಳು ಹೇಳುವ ಪ್ರಕಾರ ಹೀಗಾಗಲೇ ಒಂದು ತಿಂಗಳ ಹಿಂದೆಯೇ ತರಗತಿಗಳು ಆರಂಭವಾಗಿವೆ. ಹೆಚ್ಚೆಂದರೆ ಇನ್ನು ಎರಡೂವರೆ ತಿಂಗಳು ತರಗತಿಗಳು ನಡೆಯಬಹುದು!

ಪ್ರವೇಶಾತಿ ಇನ್ನೂ ಮುಗಿದಿಲ್ಲ ಎನ್ನುತ್ತಿರುವ ಮೈಸೂರು ವಿವಿಯ ಹೊಸ ಸುತ್ತೋಲೆ

ಈ ಹಿಂದೆ ಮೈಸೂರು ವಿವಿ ಹೊರಡಿಸಿರುವ ಸೂಚನೆಗಳು ತರಗತಿಗಳು ಹೀಗಾಗಲೇ ಆರಂಭವಾಗಿ ಬಹಳ ದಿನಗಳಾಗಿವೆ ಎಂಬುದನ್ನು ಹೇಳುತ್ತವೆ. 27-10-2021ರಿಂದ ಪ್ರಥಮ ಸೆಮಿಸ್ಟರ್ ತರಗತಿಗಳನ್ನು ಆರಂಭಿಸಬೇಕು ಎಂದು ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಫಸ್ಟ್‌ ಸೆಮಿಸ್ಟರ್‌ ಪ್ರವೇಶಾತಿಗೆ 30-10-2021 ಕೊನೆಯ ದಿನವೆಂದು ಸೂಚಿಸಲಾಗಿದೆ. ಅಂದರೆ ಅಕ್ಟೋಬರ್‌ ಅಂತ್ಯಕ್ಕೆ ಪ್ರವೇಶಾತಿ ಮುಗಿದಿತ್ತು. ಒಂದು ತಿಂಗಳ ನಂತರವೂ ಪ್ರವೇಶಾತಿಗೆ ಅವಕಾಶ ನೀಡುತ್ತಿರುವುದು ಏತಕ್ಕೆ?

ಹೀಗೆ ಎನ್‌.ಇ.ಪಿ. ಜಾರಿಯಾದ ಬಳಿಕ ದಿನಕ್ಕೊಂದು ನಿಯಮವನ್ನು ತರುತ್ತಿರುವುದು ಆತಂಕಕಾರಿಯಾಗಿದೆ. ಈ ಗೊಂದಲಕಾರಿ ಎನ್‌ಇಪಿ ವಿರುದ್ಧ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ. ಎನ್‌ಇಪಿಯು ಶೈಕ್ಷಣಿಕ ವಲಯವನ್ನು ಹಳ್ಳ ಹಿಡಿರುವ ಎಲ್ಲ ಸೂಚನೆಗಳು ಕಾಣುತ್ತಿವೆ. ಇಲ್ಲಿ ಮೈಸೂರು ವಿವಿಯೊಂದರೆ ಉದಾಹರಣೆಯನ್ನು ನೀಡಲಾಗಿದೆ ಅಷ್ಟೇ. ಬೇರೆ ವಿವಿಗಳ ಕಥೆಯೂ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ ಎಂದು ಮೂಲಗಳು ಹೇಳುತ್ತವೆ.


ಇದನ್ನೂ ಓದಿರಿ: ಕರ್ನಾಟಕ ಸರ್ಕಾರ ಎಪಿಎಂಸಿ-ಭೂ ಸುಧಾರಣೆ-ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ನಮಗೆ B A ಬಿಟ್ಟು ಬೇರೆ ಕಾಮರ್ಸ್ ವಿಷಯ ಬೇಡ ಅದಕ್ಕೆ ನಾವು ಹೋರಾಟ ಮಾಡುತ್ತೆವೆ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...