ಮೂರು ಸೇನೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಮತ್ತು ಅವರ ಪತ್ನಿಯ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಸಂದರ್ಭದಲ್ಲಿ ಸಾವಿಗೀಡಾದ ಇತರ ಯೋಧರ ಮೃತದೇಹಗಳ ಪತ್ತೆ ಕಾರ್ಯ ಮುಂದುವರಿದಿದೆ. ಇಬ್ಬರು ಭಾರತೀಯ ಸೇನೆಯ ಯೋಧರು ಮತ್ತು ನಾಲ್ವರು ಐಎಎಫ್ ಸಿಬ್ಬಂದಿಗಳ ಮೃತ ದೇಹಗಳನ್ನು ಗುರುತಿಸಲಾಗಿದೆ.
ಡಿಎನ್‌ಎ ಪರೀಕ್ಷೆ ಪರಿಶೀಲಿಸಿದ ನಂತರ, ಪಾರ್ಥಿವ ಶರೀರಗಳನ್ನು ಅಂತಿಮ ವಿಧಿಗಳಿಗಾಗಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ.
“ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜ ಮತ್ತು ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಗುರುತಿಸಲಾಗಿದೆ. ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಂತರಿಸಲಾಗುವುದು” ಎಂದು ಸೇನಾ ಮೂಲಗಳು ತಿಳಿಸಿವೆ.
ಅಂತಿಮ ವಿಧಿವಿಧಾನಗಳಿಗಾಗಿ ಪಾರ್ಥಿವ ಶರೀರವನ್ನು ಸೂಕ್ತ ಸೇನಾ ಗೌರವದೊಂದಿಗೆ ವಿಮಾನ ಮೂಲಕ ಸ್ಥಳಾಂತರಿಸಲಾಗುವುದು. ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ ಅವರ ದೇಹವನ್ನು ಬೆಂಗಳೂರಿಗೆ ತರಲಾಗುವುದು. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ದೇಹವನ್ನು ಗಗ್ಗಾಲ್‌ಗೆ ತರಲಾಗುವುದು.
ಎಲ್ಲ ನಾಲ್ವರು ಐಎಎಫ್ ಸಿಬ್ಬಂದಿಯ ಗುರುತಿನ ಕಾರ್ಯ ಪೂರ್ಣಗೊಂಡಿದೆ. ವಿಂಗ್ ಕಮಾಂಡರ್ ಚೌಹಾಣ್ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ಆಗ್ರಾಕ್ಕೆ ತೆರಳಲಿದೆ. ಸ್ಕ್ವಾಡ್ರನ್ ಲೀಡರ್ ಕುಲದೀಪ್ ಅವರನ್ನು ಹೊತ್ತ ಎರಡನೇ ವಿಮಾನವು ಪಿಲಾನಿಗೆ ಹೋಗಲಿದೆ. JWO ಪ್ರದೀಪ್ ಮತ್ತು JWO ದಾಸ್ ಅವರ ಪಾರ್ಥಿವ ಶರೀರವನ್ನು ಕ್ರಮವಾಗಿ ಸೂಲೂರು ಮತ್ತು ಭುವನೇಶ್ವರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಕುಟುಂಬಗಳಿರುವಲ್ಲಿಗೆ ಕೊಂಡೊಯ್ಯಲಾಗುತ್ತದೆ.
ಹೆಲಿಕಾಪ್ಟರ್ ಅವಘಡದಲ್ಲಿ 13 ಮಂದಿ ಯೋಧರು ಮೃತಪಟ್ಟಿದ್ದಾರೆ. ಒಂಬತ್ತು ಜನರನ್ನು ಈಗ ಗುರುತಿಸಲಾಗಿದೆ. ಉಳಿದವರನ್ನು ಆದಷ್ಟು ಬೇಗ ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿರಿ: ಬಿಪಿನ್ ರಾವತ್ ಅವರನ್ನು ನಿಂದಿಸಿದರೆ ಕಾನೂನು ಕ್ರಮ: ಬೊಮ್ಮಾಯಿ ಎಚ್ಚರಿಕೆ


