Homeಮುಖಪುಟಭಾರತ ಆಧ್ಯಾತ್ಮಿಕ ಗಣರಾಜ್ಯವೇ?

ಭಾರತ ಆಧ್ಯಾತ್ಮಿಕ ಗಣರಾಜ್ಯವೇ?

- Advertisement -
- Advertisement -

ಆರೆಸ್ಸೆಸ್ಸಿನ ವಕೀಲರ ಸಂಘಟನೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಒಂದು ಉಪನ್ಯಾಸದಲ್ಲಿ, “1976ರಲ್ಲಿ ಭಾರತದ ಸಂವಿಧಾನದ ಪೀಠಿಕೆಯೊಳಗೆ ’ಸಮಾಜವಾದಿ’ (ಸೋಶಿಯಲಿಸ್ಟ್) ಮತ್ತು ’ಸೆಕ್ಯುಲರ್’ (ಧರ್ಮ ನಿರಪೇಕ್ಷ/ಜಾತ್ಯತೀತ ಮುಂತಾದಾಗಿ ವ್ಯಾಖ್ಯಾನಿಸಲಾಗಿದೆ. ಮುಂದೆ ಇದನ್ನು ಸೆಕ್ಯುಲರ್ ಎಂದೇ ಉಳಿಸಿಕೊಳ್ಳಲಾಗಿದೆ) ಎಂಬ ಶಬ್ದಗಳನ್ನು ಸೇರಿಸಿದುದು ಸಂವಿಧಾನದ ’ಆಧ್ಯಾತ್ಮಿಕ ವರ್ಚಸ್ಸಿನ ವಿಸ್ತಾರ’ವನ್ನು ಸಂಕುಚಿತಗೊಳಿಸಿದೆ” ಎಂದು ಜಮ್ಮು-ಕಾಶ್ಮೀರ-ಲಢಾಖ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಪಂಕಜ್ ಮಿತ್ತಲ್ ಅವರು ಹೇಳಿದರು. ದೇಶವನ್ನು ’ಭಾರತ ಆಧ್ಯಾತ್ಮಿಕ ಗಣರಾಜ್ಯ’ ಎಂದು ಕರೆಯಬೇಕು ಎಂದೂ ಅವರು ಹೇಳಿದರು.

ಸಂವಿಧಾನದೊಳಗೆ 1976ರಲ್ಲಿ ಈ ಪರಿಕಲ್ಪನೆಗಳನ್ನು ಸೇರಿಸಿದ್ದನ್ನು ನ್ಯಾ. ಮಿತ್ತಲ್ ಅವರಿಗಿಂತ ಮೊದಲೂ ಸಹ ವಿಮರ್ಶೆ ಮಾಡಿದವರಿದ್ದಾರೆ: ಈ ಪರಿಕಲ್ಪನೆಗಳನ್ನು ಸಂವಿಧಾನ ಕರ್ತರು ತಿರಸ್ಕರಿಸಿದ್ದರು, ಅವನ್ನು ಇಂದಿರಾ ಗಾಂಧಿಯವರು ’ಆಮದು’ ಮಾಡಿಕೊಂಡಿದ್ದಾರೆ – ಎನ್ನುವುದು ಅದಕ್ಕೆ ಕೊಡಲಾಗಿರುವ ಕಾರಣ. ಸೆಕ್ಯುಲರ್ ಎಂಬ ಶಬ್ದವು ಭಾರತದ ಸಂವಿಧಾನಕ್ಕೆ ಹೊರಗಿನದು ಎಂಬ ವಿಮರ್ಶೆ ತಪ್ಪು ಎಂದು ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳ ವಿಶ್ಲೇಷಣೆಯ ಮೂಲಕವೂ, ಸುಪ್ರೀಂ ಕೋರ್ಟು ನೀಡಿದ ಒಂದು ತೀರ್ಪಿನ ಮೂಲಕವೂ ಈಗಾಗಲೇ ಸಾಬೀತು ಮಾಡಲಾಗಿದೆ.

ಸಂವಿಧಾನ ರಚನಾ ಸಭೆಯು ಸೆಕ್ಯುಲರ್ ಎಂಬ ಶಬ್ದವನ್ನು ಪೀಠಿಕೆಯಲ್ಲಿ ಸೇರಿಸಲು ಒಪ್ಪದೆ ಇದ್ದಾಗ್ಯೂ, ಸೆಕ್ಯುಲರಿಸಂನ ಮೂಲಭೂತ ತಳಹದಿಯಾದ, ತಾವು ನಂಬಿರುವ ಧರ್ಮವನ್ನು ಆಚರಿಸಲು ಎಲ್ಲ ವ್ಯಕ್ತಿಗಳಿಗೂ ಸ್ವಾತಂತ್ರ್ಯವಿದೆ ಹಾಗೂ ಪ್ರಭುತ್ವವು ಧರ್ಮದ ಆಧಾರದಲ್ಲಿ ಯಾವುದೇ ವ್ಯಕ್ತಿಯ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ವಿಚಾರದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂಬುದು ಅಲ್ಲಿ ಮಾತನಾಡಿದ ಅನೇಕ ಭಾಷಣಕಾರರ ಮಾತುಗಳಲ್ಲಿ ಸ್ಪಷ್ಟವಾಗಿತ್ತು. ಕೆ.ಎಂ.ಮುನ್ಷಿಯವರು ಸಭೆಯಲ್ಲಿ ಮಾತನಾಡುತ್ತಾ, ’… ನಮ್ಮ ಪ್ರಭುತ್ವಕ್ಕೆ ತನ್ನದೇ ಆದ ಒಂದು ಪ್ರಭುತ್ವ ಧರ್ಮ ಎಂಬುದು ಬಹುಶಃ ಇರಲು ಸಾಧ್ಯವಿಲ್ಲ’ ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿಶಾಲ ಸಹಮತಿ ವ್ಯಕ್ತವಾಗಿತ್ತು.

ಎಸ್.ಆರ್.ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ಸೆಕ್ಯುಲರಿಸಂ ಭಾರತೀಯ ಸಂವಿಧಾನದ ಮೂಲ ಸಂರಚನೆಯೊಳಗಿನ ಒಂದು ಅವಿಭಾಜ್ಯ ಭಾಗವಾಗಿದೆ ಎಂಬ ನಿಲುವಿಗೆ ತಲುಪಿತು ಹಾಗೂ 42ನೇ ಸಂವಿಧಾನ ತಿದ್ದುಪಡಿಯು ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿದ್ದ ಅಂಶವನ್ನು ಪ್ರಕಟವಾಗಿ ವ್ಯಕ್ತಪಡಿಸಿದೆ ಎಂದು ಸ್ಪಷ್ಟವಾಗಿ ತೀರ್ಮಾನ ಹೇಳಿತು. ಸಂವಿಧಾನದ ಪೀಠಿಕೆಯೇ ’ಚಿಂತನೆ, ಅಭಿವ್ಯಕ್ತಿ, ವಿಶ್ವಾಸ, (ಧಾರ್ಮಿಕ) ನಂಬಿಕೆ ಹಾಗೂ ಆರಾಧನೆಗಳ ಸ್ವಾತಂತ್ರ್ಯ’ಗಳ ಕುರಿತು ಹೇಳಿರುವುದರಿಂದಲೂ, ಧರ್ಮದ ಆಧಾರದಲ್ಲಿನ ತಾರತಮ್ಯವನ್ನು ಸಂವಿಧಾನದ 15ನೇ ವಿಧಿಯು ನಿಷೇಧಿಸಿರುವುದರಿಂದಲೂ, ಸೆಕ್ಯುಲರಿಸಂ ಎಂಬುದು ನಮ್ಮ ಸಂವಿಧಾನಕ್ಕೆ ಹೊರಗಿನದು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ವಾಸ್ತವದಲ್ಲಿ, ’ಧರ್ಮದ ಆಧಾರದಲ್ಲಿನ ತಾರತಮ್ಯದ ಬಗ್ಗೆ ಸಂವಿಧಾನವು ಅಸಹ್ಯವನ್ನೇ ವ್ಯಕ್ತಪಡಿಸಿದೆ.’

ಪಂಕಜ್ ಮಿತ್ತಲ್

ಪೀಠಿಕೆಯೊಳಗೆ ’ಸಮಾಜವಾದ’ ಶಬ್ದವನ್ನು ಸೇರಿಸುವುದನ್ನು ಕುರಿತ ತಿದ್ದುಪಡಿಯೊಂದನ್ನು ಸಂವಿಧಾನ ರಚನಾ ಸಭೆಯು ಸ್ಪಷ್ಟವಾಗಿ ತಿರಸ್ಕರಿಸಿತಾದರೂ, ಪೀಠಿಕೆಯಲ್ಲಿ ಹೇಳಲಾಗಿರುವ ’ನ್ಯಾಯ – ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ’ ಎಂಬ ಉಲ್ಲೇಖದಲ್ಲಿ ಸಮಾಜವಾದದ ಕೆಲವು ಅಂಶಗಳು ಅದಾಗಲೇ ಒಳಗೊಂಡಿದ್ದವು. ದೇಶದ ಅರ್ಥ ವ್ಯವಸ್ಥೆಯು ಸಂಪತ್ತಿನ ಕೇಂದ್ರೀಕರಣಕ್ಕೆ ದಾರಿ ಮಾಡದ ರೀತಿಯಲ್ಲಿ ಪ್ರಭುತ್ವ ನೀತಿ ಇರಬೇಕು ಎಂದು ’ರಾಜ್ಯ ನಿರ್ದೇಶಕ ತತ್ವಗಳ’ ಆರ್ಟಿಕಲ್ 38(b) ಸ್ಪಷ್ಟಪಡಿಸಿರುವುದರಲ್ಲಿ ಸಮಾಜವಾದಿ ಕಳಕಳಿಯೇ ವ್ಯಕ್ತವಾಗಿರುವುದು. ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ’ಜನಕಲ್ಯಾಣ ಸಮಾಜ ಮತ್ತು ಸಮಾನತೆಯ ಸಮಾಜ’ವನ್ನು ನಿರ್ಮಿಸುವುದು ’ಭಾರತ ಸಂವಿಧಾನದ ಮೂಲ ರಚನೆ’ಯ ಭಾಗವಾಗಿದೆ ಎಂದು ಸೂಚಿಸಿದೆ. ಇದೂ ಸಹ ಸಮಾಜವಾದಿ ತತ್ವದ ಉಲ್ಲೇಖವೇ ಆಗಿದೆ.

ಹೀಗೆ, ಸೆಕ್ಯುಲರಿಸಂ ಮತ್ತು ಸಮಾಜವಾದಗಳನ್ನು ಕುರಿತಂತೆ ಸುಭದ್ರವಾದ ಒಂದು ನ್ಯಾಯಿಕ ಮತ್ತು ಸಾಂವಿಧಾನಿಕ ಚರ್ಚೆ ನಡೆದುಬಂದಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನಾಧರಿಸಿ, 1976ರಲ್ಲಿ ಈ ಶಬ್ದಗಳನ್ನು ಸೇರ್ಪಡೆ ಮಾಡಿರುವ ವಿಚಾರದ ಪರವಾಗಿಯಾಗಲಿ ಅಥವಾ ವಿರುದ್ಧವಾಗಿಯಾಗಲಿ ವಾದ ಮಾಡುವುದು ಸಾಧ್ಯವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು – ಈ ಶಬ್ದಗಳನ್ನು ಸೇರ್ಪಡೆ ಮಾಡುವುದಾಗಲಿ ತೆಗೆದು ಹಾಕುವುದಾಗಲಿ ’ಭಾರತ ಸಂವಿಧಾನದ ಮೂಲ ರಚನೆ’ಯನ್ನು ನಾಶಪಡಿಸುವುದಿಲ್ಲ ಎನ್ನುವುದು.

ಮೇಲೆ ಹೇಳಿದ ಉಪನ್ಯಾಸದಲ್ಲಿ ಸದರಿ ಮುಖ್ಯ ನ್ಯಾಯಾಧೀಶರು ತಮ್ಮ ವ್ಯಾಖ್ಯಾನವನ್ನು ಮುಂದಿಡುವ ತವಕದಲ್ಲಿ, ’ಮೇಲ್ಪಂಕ್ತಿ’ಯ ಮೌಲ್ಯವಿರುವ ನ್ಯಾಯಿಕ ಚರ್ಚೆಗಳನ್ನೂ, ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಪರಿಕಲ್ಪನೆಗಳ ಜಾಡು ಹಿಡಿಯುವುದನ್ನೂ ಕಡೆಗಣಿಸಿದ್ದಾರೆ.

ಭಾರತದ ’ಆಧ್ಯಾತ್ಮಿಕ ಚಿತ್ರಣ’ದ ’ವಿಸ್ತಾರ’ವನ್ನು ’ಸೆಕ್ಯುಲರ್’ ಎಂಬ ಪದವು ಕಿರಿದಾಗಿಸುತ್ತದೆ ಎಂಬ ಹೇಳಿಕೆಯನ್ನು ಸಾಮಾನ್ಯರು ಹೇಳಿದ್ದರೆ ಅರ್ಥಮಾಡಿಕೊಳ್ಳಬಹುದು. ಆದರೆ ತನ್ನ ಪ್ರತಿಜ್ಞೆಯಲ್ಲಿ ’ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಇರಿಸುತ್ತೇನೆ’ ಎಂದಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರಿಂದ ಈ ಹೇಳಿಕೆ ಬಂದಾಗ ಅತಿಯಾದ ಗೊಂದಲ ಹುಟ್ಟುತ್ತದೆ.

ಈ ದೇಶವು ’ಭಾರತದ ಆಧ್ಯಾತ್ಮಿಕ ಗಣರಾಜ್ಯ’ವೆಂದು ಕರೆಯಲ್ಪಡಬೇಕೆಂದು ಪ್ರತಿಪಾದಿಸುವ ಮೂಲಕ, ಸಂವಿಧಾನ ರಚನಾ ಸಭೆಯು ’ಧರ್ಮ’ ಅಥವಾ ಆಧ್ಯಾತ್ಮವನ್ನು ಆಧಾರವಾಗಿ ಪರಿಗಣಿಸುವುದನ್ನು ಖಚಿತವಾಗಿ ತಿರಸ್ಕರಿಸಿತು ಮತ್ತು ಅದರ ಬದಲಿಗೆ ’ಭಾರತದ ಪ್ರಜೆಗಳಾದ ನಾವು’ಗಳ ಮೇಲೆ ನಂಬಿಕೆಯಿರಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳುವಲ್ಲಿ ಸೋತಿರಬೇಕು. ಮುಖ್ಯ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ ಬದಲಾವಣೆಗಳು ’ಸಂವಿಧಾನ ಎಲ್ಲರಿಗಾಗಿ’-ಆಸ್ತಿಕರು ಮತ್ತು ನಾಸ್ತಿಕರು ಎಲ್ಲರಿಗೂ- ಎಂಬ ತಿಳಿವಳಿಕೆಗೇ ಸವಾಲೆಸೆಯುತ್ತದೆ.

ಮುಖ್ಯ ನ್ಯಾಯಮೂರ್ತಿಗಳು ನೀಡಿದ ಈ ಹೇಳಿಕೆಯ ಕೆಲವು ದಿನಗಳಲ್ಲೇ ಬಾಬ್ರಿ ಮಸೀದಿ ಧ್ವಂಸ ಮಾಡಿದ 28ನೇ ವರ್ಷದ ದಿನ ಬಂದಿದ್ದು ಭಾರತದ ಸಮಾಜವನ್ನು ಇಂದು ಹಿಡಿದಿರುವ ಅತಿ ದೊಡ್ಡ ಸವಾಲಾದ ಸಂವಿಧಾನ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ. ಸಂವಿಧಾನವನ್ನು ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸುವ ನ್ಯಾಯಮೂರ್ತಿಗಳೂ ಈ ಅಲೆಯಿಂದ ಬಚಾವಾಗಿಲ್ಲವೆನ್ನುವುದು ಆತಂಕಕಾರಿಯಾದ ಸಂಗತಿಯಾಗಿದೆ.

ಸೆಕ್ಯುಲರ್ ಪದದ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳಿಗಿರುವ ತೊಂದರೆ ಮತ್ತು ’ಭಾರತವು ಅಧ್ಯಾತ್ಮಿಕ ಗಣರಾಜ್ಯ’ವೆಂಬ ಅವರ ವಕಾಲತ್ತು, ಭಾರತೀಯ ಸಂವಿಧಾನಕ್ಕೆ ಒಮ್ಮೆ ಕರಸೇವೆ ಮಾಡಬೇಕು ಎಂದು ಪರೋಕ್ಷವಾಗಿ ಹೇಳಿದಂತೆ ತೋರುತ್ತಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಅರವಿಂದ್ ನಾರಾಯಣ್ ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಪಂಚಾಯತ್ ವ್ಯವಸ್ಥೆ ಬಗ್ಗೆ ನಂಬಿಕೆ ಇದೆಯಾ? – ಹರಿಪ್ರಸಾದ್ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...