Homeಕರ್ನಾಟಕರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

ರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

- Advertisement -
- Advertisement -

ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ತಮ್ಮ 84ನೇ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ರಾಜೇಶ್ವರಿ ಅವರ ಹೆಸರನ್ನು ಜನ ಹೆಚ್ಚಾಗಿ ಕೇಳಿದ್ದೇ ತೇಜಸ್ವಿ ಅವರ ಅಗಲಿಕೆಯ ನಂತರ. ಬಹುಶಃ ಅವರ ಆಪ್ತ ವಲಯದವರನ್ನು ಹೊರತುಪಡಿಸಿ ಇನ್ನಾರ ಗಮನಕ್ಕೂ ಬಾರದಂತೆ ನೇಪಥ್ಯದಲ್ಲಿಯೇ ಬದುಕಿದ್ದವರು.

ತೇಜಸ್ವಿ ಅವರ ಹಠಾತ್ ನಿರ್ಗಮನದ ನಂತರ ಹಲವು ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಕೆಲವೆಡೆ ತೇಜಸ್ವಿ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿಯೂ ರಾಜೇಶ್ವರಿ ಅವರು ಮಾತನಾಡಿದ್ದಿದೆ. ಅವರ ಎಲ್ಲ ಮಾತುಗಳು ಮತ್ತೆ ತೇಜಸ್ವಿ ಅವರನ್ನೇ ಸುತ್ತುವರೆದಿದ್ದವು. ಹೀಗಾಗಿ ರಾಜೇಶ್ವರಿ ಅವರ ಬಗ್ಗೆ ಬರೆಯುವುದೆಂದರೆ ಮತ್ತೆ ತೇಜಸ್ವಿ ಅವರ ಬಗ್ಗೆಯೇ ಮತ್ತೊಂದು ಮಗ್ಗುಲಿಂದ ಬರೆದಂತೆ.

ನಮ್ಮ ಮನೆಗೂ ಬಂದರು ಗಾಂಧೀಜಿ ಎಂಬ ಕೃತಿಯ ಮುನ್ನುಡಿಯಲ್ಲಿ ಎಲ್.ಸಿ. ಸುಮಿತ್ರ ಅವರು ಉಲ್ಲೇಖಿಸಿರುವ ಮಾತು. ’ನಿರುತ್ತರ’ಕ್ಕೆ ಭೇಟಿ ನೀಡಿದ್ದ ಮನೋರಖ್ಖಿತ ಭಂತೇಜಿ ಅವರು ರಾಜೇಶ್ವರಿ ಅವರಿಗೆ ಕೇಳಿದರಂತೆ; “ನೀವು ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದೀರಲ್ಲ, ನಿಮಗೆ ತತ್ವಶಾಸ್ತ್ರದ ಯಾವ ಸ್ಕೂಲ್ ಒಪ್ಪಿಗೆ?” ಎಂದು. “ತೇಜಸ್ವಿ ಪರಿಚಯವಾದ ನಂತರ ಅವೆಲ್ಲ ಸ್ಕೂಲ್‌ಗಳನ್ನು ತ್ಯಜಿಸಿ ತೇಜಸ್ವಿ ತತ್ವವನ್ನು ಒಪ್ಪಿಕೊಂಡವಳು ನಾನು”- ಇದು ರಾಜೇಶ್ವರಿ ಅವರ ಉತ್ತರವಾಗಿತ್ತು.

ರಾಜೇಶ್ವರಿ ಅವರು ಹುಟ್ಟಿದ್ದು 1937ರಲ್ಲಿ. ಓದಿ ಬೆಳೆದದ್ದು ಬೆಂಗಳೂರು – ಮೈಸೂರುಗಳಲ್ಲಿ. ರಾಜೇಶ್ವರಿ ಅವರ ತಂದೆ ಸರ್ಕಾರಿ ಇಲಾಖೆಯಲ್ಲಿ ಉನ್ನತ ನೌಕರಿಯಲ್ಲಿದ್ದು ನಿವೃತ್ತಿಯಾಗಿದ್ದರು. ತಮ್ಮ ಎರಡನೇ ಕೃತಿ ’ನಮ್ಮ ಮನೆಗೂ ಬಂದರು ಗಾಂಧೀಜಿ’ಯಲ್ಲಿ ಅವರೇ ಸ್ಮರಿಸಿರುವಂತೆ, ಅವರ ತಂದೆಯವರು ಯಾವಾಗಲೂ ಹೇಳುತ್ತಿದ್ದರಂತೆ: “ಹೆಣ್ಣು ಮಕ್ಕಳು ಮದುವೆಯಾಗಬೇಕು ನಿಜ, ಆದರೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ವಿದ್ಯಾಭ್ಯಾಸ ಕೊಡಿಸುವುದು ತಂದೆತಾಯಿಯರ ಆದ್ಯ ಕರ್ತವ್ಯ” ಎಂದು. ಹಾಗೆಯೇ ಈಗ್ಗೆ ಏಳೆಂಟು ದಶಕಗಳ ಹಿಂದೆಯೇ ತಮ್ಮ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದರು.

ರಾಜೇಶ್ವರಿ ಅವರು ತಮ್ಮ ಬದುಕಿನ ಕೊನೆಯ ಹತ್ತು ವರ್ಷಗಳನ್ನು ಹೊರತುಪಡಿಸಿ ಎಂದೂ ಹೆಚ್ಚು ಬರೆದವರಲ್ಲ. ತೇಜಸ್ವಿ ಅವರು ಆತ್ಮಕತೆಯೊಂದನ್ನು ಬರೆದಿರುತ್ತಿದ್ದರೆ ಬಹುಶಃ ಅವರಿಬ್ಬರ ಬದುಕಿನಲ್ಲಿ ಬರೆಯದೇ ಉಳಿಯುವಂಥದ್ದೇನೂ ಇರುತ್ತಿರಲಿಲ್ಲವೋ ಏನೋ ಅನ್ನಿಸುವುದೂ ಇದೆ. ತೇಜಸ್ವಿ ಎಂಬ ವರ್ಚಸ್ವಿ ಲೇಖಕನ ಸಂಗಾತಿಯಾಗಿ ತುಂಬು ಜೀವನ ಕಳೆದಿದ್ದ ಅವರ ಬದುಕಿನ ಸಮೃದ್ಧ ಅನುಭವಗಳು ಎಲ್ಲಿಯೂ ದಾಖಲಾಗಿರಲಿಲ್ಲ. ಯಾರೋ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈಗಿರುವ ಸಾಹಿತ್ಯದ ಭಾರಕ್ಕೆ ನಾನೊಂದಷ್ಟು ಹೊರೆಯೇಕೆ ಸೇರಿಸಲಿ ಎಂದಿದ್ದರಂತೆ.

ತೇಜಸ್ವಿ ಅವರ ಬಹುತೇಕ ಬರೆಹಗಳನ್ನು ಓದಿದವರಿಗೆ ಅವರ ಲೌಖಿಕ ಬದುಕಿನ ಎಲ್ಲ ಕೋನಗಳೂ ಅಲ್ಲಿ ಢಾಳಾಗಿ ದಾಖಲಾಗಿಬಿಟ್ಟಿವೆ ಎನಿಸಿರುತ್ತದೆ. ಇದಕ್ಕೆ ಕಾರಣ ಅವರ ಬಹುತೇಕ ಕೃತಿಗಳಲ್ಲಿ ಅವರೂ ಒಂದು ಪಾತ್ರವೇ ಆಗಿರುತ್ತಿದ್ದದು. ವಿಷಯ ಅಷ್ಟು ಸರಳವಿಲ್ಲವೆನಿಸುತ್ತದೆ. ನಾವೊಮ್ಮೆ ಅವರ ಮನೆಗೆ ಹೋದಾಗ ಶೋಕೇಸಿನಲ್ಲಿದ್ದ ಹಳೇ ಲಾಟೀನು ಕಂಡು, ಕೇಳಿದ್ದೆ. ಮೇಡಂ ಇದೇ ಲಾಟೀನ ನೀವು ಕರೆಂಟಿಲ್ಲದ ಮನೆಯಲ್ಲಿ ಇದ್ದಾಗ ಬಳಸ್ತಿದ್ದದ್ದು ಎಂದು. ಅವರು ಹೌದು ಎಂದು ನೆನಪಿನ ಲೋಕಕ್ಕೆ ಜಾರಿದ್ದರು. (ಇದು ತೇಜಸ್ವಿ ಬರೆದಿದ್ದಲ್ಲ, ರಾಜೇಶ್ವರಿ ಅವರು ದಾಖಲಿಸಿರೋದು)

1966ರಲ್ಲಿ ಕೆಲವೇ ಬಂಧು ಮತ್ತು ಸ್ನೇಹಿತರ ಸಮಕ್ಷಮದಲ್ಲಿ ಕೈಹಿಡಿದಿದ್ದ ರಾಜೇಶ್ವರಿ ಮತ್ತು ತೇಜಸ್ವಿ ಅವರು ಚಿತ್ರಕೂಟ ಎಂಬ ಹೆಸರಿನ ತೋಟದ ಮನೆಯಲ್ಲಿ ಹತ್ತಿರಹತ್ತಿರ ದಶಕದ ಕಾಲ ವಿದ್ಯುತ್ ಸಂಪರ್ಕವಿಲ್ಲದ ಮನೆಯಲ್ಲಿ ಲಾಟೀನಿನ ಆಸರೆಯಲ್ಲಿ ಬದುಕಿದ್ದರು. ಆ ಅವಧಿಯಲ್ಲಿ ತೇಜಸ್ವಿ ಎರಡು ಕಾದಂಬರಿ ಮತ್ತು ಕಥಾಸಂಕಲನಗಳನ್ನು ಪ್ರಕಟಿಸಿದ್ದನ್ನೂ ಹೇಳಿದರು. ಪತಿ-ಪತ್ನಿ ಇಬ್ಬರೂ ಮೈಸೂರು- ಬೆಂಗಳೂರುಗಳೆಂಬ ನಗರಗಳಲ್ಲಿ ಹುಟ್ಟಿ ಬೆಳೆದು ಬದುಕಿ ಹಾಗೆ ಕಾಡ ನಡುವೆ ಕರೆಂಟಿಲ್ಲದ ಸ್ಥಳದಲ್ಲಿ ಬದುಕುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ; ಜೀವನಪ್ರೀತಿಯ ಹುಚ್ಚುತನ.

ತೇಜಸ್ವಿ ಮನೆಗೆ ಬೀಗ ಹಾಕುವುದರ ವಿರುದ್ಧವಿದ್ದರಂತೆ. ಯಾರು ಬಂದು ಏನು ತೊಗೊಂಡು ಹೋಗ್ತಾರೆ ಬಿಡಮ್ಮ ಅನ್ನೋರಂತೆ. ಸಣ್ಣ ಪುಟ್ಟ ವ್ಯಾಪಾರ ಮಾಡೋವ್ರ ಬಳಿ ಚೌಕಾಸಿ ಮಾಡಿದರೆ ಅವ್ರೂ ಚೂರು ಎಂಪವರ್ ಆಗ್ಲಿ ಚೌಕಾಸಿ ಬಿಟ್ಟು ಕೊಟ್ಟು ಬಾ ಅನ್ನೋವ್ರಂತೆ. ಇನ್ನು ಪ್ರಯೋಗಶೀಲತೆಯಲ್ಲಿ ಇಬ್ಬರ ಈಡು-ಜೋಡು ಹೊಂದಿತ್ತು ಎಂದು ಕಾಣುತ್ತದೆ. ಭೂತನಕಾಡಿನಲ್ಲಿದ್ದಾಗ ಇಬ್ಬರೂ ಯಾವುದೋ ಕಾಡುಮರದ ಹಣ್ಣು ತಿಂದು ಹೊಟ್ಟೆ ನುಲಿತ ತಾಳಲಾರದೆ ಡಾಕ್ಟರ ಬಳಿ ಹೋದಾಗ ಅವರು ಹಾಗೆ ಸಿಕ್ಕ ಸಿಕ್ಕದ್ದೆಲ್ಲಾ ತಿನ್ನಬೇಡಿರಂದು ಬೈದು ಕಳಿಸಿದ್ದರಂತೆ.

ತೇಜಸ್ವಿ ಅವರ ನೂರಾರು ರೀತಿಯ ಸಾಹಸಗಳು ಸುಮ್ಮನೆ ಜರುಗಿದವಲ್ಲ, ಅವೆಲ್ಲಕ್ಕೂ ರಾಜೇಶ್ವರಿ ಅವರ ಒತ್ತಾಸೆ ಇದ್ದೇ ಇದೆ. ಅದು ಲಹರಿ ಪತ್ರಿಕೆಯಿಂದ ಹಿಡಿದು ಅವರ ಫೋಟೋಗ್ರಫಿಯವರೆಗೆ. ನನ್ನ ತೇಜಸ್ವಿ ಕೃತಿಯಲ್ಲಿ ಒಂದು ತಮಾಷೆಯ ಪ್ರಸಂಗ ದಾಖಲಾಗಿದೆ. ತೇಜಸ್ವಿ ಅವರು ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಅವುಗಳ ಅರಿವಿಗೆ ಬಾರದಂತ ’ಮರೆ’ಯೊಂದನ್ನು ಮಾಡಿಕೊಂಡಿದ್ದರಂತೆ. (ಹಾಗೆಂದರೆ ಪಕ್ಷಿಗಳಿಗೆ ತಮ್ಮ ಆವಾಸದ ಬಳಿಯೇ ಒಂದು ಕೃತಕ ರಚನೆ ಆಗಿದೆ ಎಂದು ತಿಳಿಯದಂತೆ ಏರ್ಪಡಿಸಿಕೊಳ್ಳುವ ವ್ಯವಸ್ಥೆ). ಪಕ್ಷಿಗಳು ಅತ್ಯಂತ ಚಂಚಲಚಿತ್ತದ ಮತ್ತು ಅತಿಜಾಗರೂಕ ಜೀವಿಗಳು. ಒಂದು ಸಣ್ಣ ಎಲೆಯ ಅಲುಗುವಿಕೆಯೂ ಅವು ಪುರ್ರನೆ ಹಾರಿಹೋಗುವಂತೆ ಮಾಡಿಬಿಡುತ್ತವೆ. ಒಮ್ಮೆ ತೇಜಸ್ವಿ ಹಲವು ಗಂಟೆಗಳ ಕಾಲ ಅಂಥ ಮರೆಯೊಂದರಲ್ಲಿ ಕೂತು ಕ್ಯಾಮರಾಗೆ ಕಣ್ಣು ಕೀಲಿಸಿ ಇನ್ನೇನು ಕ್ಲಿಕ್ಕಿಸಬೇಕು ಎಂದುಕೊಂಡಿರುವಾಗ ಅಲ್ಲಿಯೇ ಪಕ್ಕದಲ್ಲಿದ್ದ ಕರಿಬೇವಿನ ಗಿಡದ ಬಳಿಗೆ ಹಾಡು ಗುನುಗಿಕೊಂಡು ಬಂದ ರಾಜೇಶ್ವರಿ ಒಗ್ಗರಣೆಗೆ ಸೊಪ್ಪು ಕುಯ್ದುಕೊಂಡು ಹೋಗುವ ಹೊತ್ತಿಗೆ ಹಕ್ಕಿ ಹೆದರಿ ಹಾರಿ ಹೋಗಿತ್ತಂತೆ. ತೇಜಸ್ವಿ ಮೈಮುರಿಯುತ್ತ ಮರೆಯಿಂದ ಹೊರಬಂದಾಗ ನೆನಪಾಯ್ತಂತೆ ಅವರು ಅಲ್ಲಿ ಗಂಟೆಗಳಿಂದ ಕಾಯುತ್ತಿದ್ದ ಸಂಗತಿ!

ಇನ್ನೊಮ್ಮೆ, ರಾಜೇಶ್ವರಿ ಬೆಂಗಳೂರಿನಲ್ಲಿದ್ದಾಗ ತೇಜಸ್ವಿ ಬರೆದ ಪತ್ರ ಸಕಾಲಕ್ಕೆ ತಲುಪದೆ ಎದುರಾದ ಫಜೀತಿ ಬಗ್ಗೆ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಪತ್ರಗಳೆಂದಾಗ ನೆನಪಾಗುವ ಸಂಗತಿ. ರಾಜೇಶ್ವರಿ-ತೇಜಸ್ವಿ ಅವರ ನಡುವಿನ ಹತ್ತಾರು ಪತ್ರಗಳು ನನ್ನ ತೇಜಸ್ವಿ ಕೃತಿಯಲ್ಲಿ ಅಚ್ಚಾಗಿವೆ. ಅವೆಲ್ಲ ಪತ್ರಗಳ ಕಟ್ಟು ಒಮ್ಮೆ ಸಿಕ್ಕಾಗ ಇವುಗಳನ್ನು ತಾವು ಹೊಸ ಮನೆ ಕಟ್ಟುವಾಗ ಅದರ ಪಾಯದ ಮಣ್ಣಿಗೆ ಹಾಕಿಬಿಡೋಣೆಂದು ಇಬ್ಬರೂ ತೀರ್ಮಾನಿಸಿದ್ದರಂತೆ. ಆದರೆ ಮನೆ ಕಟ್ಟುವ ಕಾಲಕ್ಕೆ ಅವು ಕೈಗೆ ಸಿಗದ ಕಾರಣ ಉಳಿದವಂತೆ. ಈಗ ನನ್ನ ತೇಜಸ್ವಿ ಮಾತ್ರವಲ್ಲದೆ ತೇಜಸ್ವಿ ಪತ್ರಗಳು ಎಂಬ ಪತ್ರ ಸಂಕಲನದಲ್ಲಿಯೂ ನೂರಾರು ಪತ್ರಗಳು ದಾಖಲಾಗಿವೆ. ನರೇಂದ್ರ ರೈ ದೇರ್ಲ ಆ ಪತ್ರಗಳ ಸಂಯೋಜನೆಯನ್ನು ಮಾಡಿದ್ದಾರೆ. ಈ ಸಂಕಲನದಲ್ಲಿ ಕೂಡ ತೇಜಸ್ವಿ ಅವರಿಗೆ ರಾಜೇಶ್ವರಿ ಅವರು ಬರೆದ ಹಲವು ಪತ್ರಗಳಿವೆ. ಮದುವೆಯಾದ ಇಪ್ಪತ್ತು ವರ್ಷಗಳ ನಂತರ ಗಂಡ ಹೆಂಡಿರು ಪತ್ರದಲ್ಲಿ ಪರಸ್ಪರ ಕಾಲೆಳೆಯುವಂತ ಮಾತು ಬರೆದುಕೊಂಡುದನ್ನು ಓದುವುದೇ ಮಜಾ.

ರಾಜೇಶ್ವರಿ: ಈಶ (ಈಶಾನ್ಯೆ) ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರುವಳು. ಇನ್ನು ಅವಳ Englishನ ಬಗ್ಗೆ ನಕ್ಕು ಸಾಯಬೇಕು. ನಿಮ್ಮ ಮಗಳೇ ಅವಳು. ನೀವು ನನಗೆ ಬರೆದಿರುವ ಅಡ್ರೆಸ್ಸಿನಲ್ಲಿ ಎರಡು ತಪ್ಪಿವೆ!

ತೇಜಸ್ವಿ: (ಮಾರುತ್ತರದಲ್ಲಿ) ನಿನ್ನ ಕನ್ನಡ ಅಕ್ಷರಗಳು ಶೋಚನೀಯ ಸ್ಥಿತಿ ತಲುಪುತ್ತಿವೆ. ಯಾಕೆ ಒಂಚೂರು ಗಮನವಿಟ್ಟು ಬರೆಯಬಾರದು.

ತೇಜಸ್ವಿ ಅವರು ಬರೆಯದೇ ಉಳಿಸಿದ ಆತ್ಮಕತೆಯ ಕೊರತೆಯನ್ನು ತಮ್ಮದೇ ರೀತಿಯಲ್ಲಿ ತುಂಬಿಸಿದವರು ರಾಜೇಶ್ವರಿ ತೇಜಸ್ವಿ. ರಾಜೇಶ್ವರಿ ಅವರ ನೆನಪಿನ ಶಕ್ತಿ ಎಷ್ಟು ಶಕ್ತವಾದ್ದು ಎಂಬುದು ಅವರ ಬರೆಹ ಮತ್ತು ಮಾತುಗಳನ್ನು ಗಮನಿಸಿದವರಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ರಾಜೇಶ್ವರಿ ಆನರ್ಸ್ ಓದುವಾಗ ಯು.ಆರ್. ಅನಂತಮೂರ್ತಿ ಅವರಿಗೆ ಮೇಷ್ಟ್ರಂತೆ. ಆಗವರು ಹೇಳಿದ್ದ T.S. Eliotನ ಪದ್ಯವೊಂದನ್ನು ಯಥಾವತ್ತಾಗಿ ನೆನಪಿನ ಶಕ್ತಿಯಿಂದ ದಾಖಲಿಸಿದ್ದಾರೆ.

ಮುಂದೆ ಅದರ ಅರ್ಥವನ್ನು ತೇಜಸ್ವಿ ಅವರಿಂದ ಮನಗಾಣಿಸಿಕೊಂಡೆ ಎಂದಿದ್ದಾರೆ.

ತೇಜಸ್ವಿ ಅವರ ಬರಹದಲ್ಲಿ ಎಂದೂ ಇಣುಕದೇ ಇರುವ ಅವರ ಮನೆಕಟ್ಟುವಾಗಿನ ಪ್ರಯೋಗ, ಫೋಟೋ ಪ್ರಿಂಟ್ ಹಾಕಲು, ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಪಡುತ್ತಿದ್ದ ಪಡಿಪಾಟಲು, ಮನೆಗೆ ಗುಡ್ಡದಿಂದ ಶುದ್ಧ ನೀರು ಬರುವಂತೆ ಏರ್ಪಡಿಸಿಕೊಂಡಿದ್ದ ತಮ್ಮದೇ ಆದ ತಾಂತ್ರಿಕ ವ್ಯವಸ್ಥೆ, ತಮ್ಮ ಸ್ಕೂಟರು, ಜೀಪು ಇತ್ಯಾದಿಗಳನ್ನು ತಾವೇ ರಿಪೇರಿ ಮಾಡಿಕೊಳ್ಳುವ ಅವರ ಪ್ರಯೋಗಶೀಲ ಗುಣ, ಗೆಳೆಯರ ಜೊತೆ ಸುತ್ತಾಡಿ ಬೇಟೆ ಮಾಂಸ ತಂದರೆ ತಾವೇ ತಯಾರು ಮಾಡಿಕೊಳ್ಳುವ ಪಾಕ ಪ್ರಾವೀಣ್ಯ ಎಲ್ಲವೂ ಸಾದ್ಯಂತವಾಗಿ ದಾಖಲಾಗಿದ್ದು ರಾಜೇಶ್ವರಿ ಅವರ ’ನನ್ನ ತೇಜಸ್ವಿ’ ಕೃತಿಯ ಮೂಲಕವೆ.

ತಮ್ಮ ಎಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಲೇಖಕಿಯಾಗಿ ಇಷ್ಟು ಸಮರ್ಥವಾಗಿ ತಮ್ಮ ಚೊಚ್ಚಲ ಕೃತಿಯಲ್ಲಿಯೇ ಇಂಥ ಪ್ರಬುದ್ಧತೆ ಸಾಧಿಸಿದ್ದ ರಾಜೇಶ್ವರಿ ಅವರು ಕೆಲ ವರ್ಷ ಮುಂಚೆಯೇ ಬರೆಹ ಆರಂಭಿಸಿದ್ದರೆ ಇನ್ನೊಂದಷ್ಟು ಬರೆಯುತ್ತಿದ್ದರೇನೊ ಎಂದುಕೊಳ್ಳುವ ಊಹೆ, ತೇಜಸ್ವಿ ಅವರ ಲೋಕದಲ್ಲಿ ಕಳೆದೇ ಹೋಗುವಷ್ಟು ತನ್ಮಯತೆಯ ಕಾರಣಕ್ಕೆ ಸ್ವತಃ ಲೇಖಕಿಯೇ ಹಿಂದೆ ಸರಿದುಬಿಡುವರಲ್ಲವೆ ಎಂಬ ಸಂದೇಹದ ಜೊತೆಗೇ ಅಗಲಿದ ಅವರ ತುಂಬು ವ್ಯಕ್ತಿತ್ವಕ್ಕೆ ವಿದಾಯ ಹೇಳಬಹುದೇನೊ.

ರೋಹಿತ್ ಅಗಸರಹಳ್ಳಿ

ರೋಹಿತ್ ಅಗಸರಹಳ್ಳಿ
ಕನ್ನಡ ಉಪನ್ಯಾಸಕರು, ಸಿನೆಮಾ ಪ್ರೇಮಿ, ಅಗಸರಹಳ್ಳಿ, ಮಂಡ್ಯ ಜಿಲ್ಲೆ.


ಇದನ್ನೂ ಓದಿ: ತೇಜಸ್ವಿ ಕಂಡ ನಾಯಿ ಲೋಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...