Homeಸಾಮಾಜಿಕತೇಜಸ್ವಿ ಕಂಡ ನಾಯಿ ಲೋಕ

ತೇಜಸ್ವಿ ಕಂಡ ನಾಯಿ ಲೋಕ

- Advertisement -
- Advertisement -

ತೇಜಸ್ವಿಯವರು ತೀರಿಕೊಂಡ ಮೇಲೆ ಮನಸ್ಸಿನ ಕಳವಳ ಹೆಚ್ಚಾಗಿತ್ತು. ಅದೇಕೋ ಶ್ರೀಮತಿ ರಾಜೇಶ್ವರಿ ಅವರನ್ನು ಕಂಡು ಮಾತಾಡಿಸುವ ಆಸೆ ಹೆಚ್ಚಾಗಿತ್ತು. ನಮ್ಮೊಳಗೂ ತೇಜಸ್ವಿ ಸಾವಿನ ನೋವು ಜೀರ್ಣವಾಗಿರಲಿಲ್ಲ. ತವರಿನ ಜನ ತಮ್ಮಕ್ಕನಿಗೆ ಭಾವನ ಅಗಲಿಕೆಯ ಸಾಂತ್ವನ ಹೇಳಲು ಹೊಸ ಸೀರೆ ಕೊಂಡು ಹೋಗುತ್ತಾರೆ. ನಾವೆಲ್ಲಾ ಅದೇ ಥರ ನಿರುತ್ತರಕ್ಕೆ ಹೋದೆವು. ಮಾತಿನಲ್ಲಿ ಅವರನ್ನು ಸಮಾಧಾನ ಪಡಿಸುವ ಶಕ್ತಿ ನಮಗಿರಲಿಲ್ಲ. ಮಾತುಗಳ ಕೇಂದ್ರ ಸೆಳೆತ ಸಹಜವಾಗಿ ತೇಜಸ್ವಿಯೇ ಆಗಿದ್ದರು. ಸಹಜವಾಗಿ ಇರಲು ಯತ್ನಿಸುತ್ತಿದ್ದ ರಾಜೇಶ್ವರಿಯವರ ಆಳದಲ್ಲಿ ಕಣ್ಣೀರ ಝರಿ ಸದ್ದಿಲ್ಲದೆ ಹರಿಯುತ್ತಿತ್ತು. ಯಾವ ಕ್ಷಣದಲ್ಲಾದರೂ ಅವರ ದುಃಖ ಸ್ಪೋಟಗೊಂಡೀತು ಎಂಬ ದುಗಡದಲ್ಲೇ ಇದ್ದೆವು. ತೇಜಸ್ವಿ ಅವರ ಬದುಕಿನ ವಿಶೇಷಗಳ ಹೇಳುತ್ತಾ ಸಹಜವಾಗಿದ್ದ ಮೇಡಂ ತಮ್ಮ ಮನೆ ನಾಯಿ `ಕಿವಿಯ’ ವಿಷಯ ಬಂದಾಗ ಮಾತ್ರ ತಡೆಯಲಾರದೆ ಹೋದರು.
ನಾಯಿ `ಕಿವಿಗೆ’ ವಯೋ ಸಹಜ ಕೊನೆಗಾಲ ಸಮೀಪಿಸಿತ್ತು. ಅದು ನಡೆಯಲಾಗದೆ ದೃಷ್ಟಿ ಮಂದವಾಗಿ ಕೂತಲ್ಲೇ ಚಡಪಡಿಸುತ್ತಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಕಾಡೆಲ್ಲ ಸುತ್ತ್ತುತ್ತಿದ್ದ ತೇಜಸ್ವಿ ಅವರ ಚಲನೆಯನ್ನೂ ಕಿವಿ ಕಟ್ಟಿ ಹಾಕಿತ್ತು. ಚಲನೆ ನಿಂತ ಕಿವಿ ಮಂಕಾಗಿತ್ತು. ಅದರ ಸಾವು ನಿಶ್ಚಯವಾದ ಕೊನೇ ದಿನ ತೇಜಸ್ವಿ ಅದನ್ನು ಮಗುವಿನಂತೆ ಎದೆಗವುಚಿಕೊಂಡು ಮನೆ, ತೋಟ ಎಲ್ಲಾ ಕಡೆ ಸುತ್ತಾಡಿಸಿದರಂತೆ. “ನೋಡೋ ಕಿವಿ ಈ ಜಾಗದಲ್ಲಿ ನೀನು ಹಾವೊಂದನ್ನು ಹೆದರಿ ಓಡಿಸಿದ್ದೆ. ಅಗೋ ಆ ತಾವಿನಲ್ಲಿ ನಿನ್ನ ಗಂಟಲಲ್ಲಿ ಸಿಕ್ಕ ಮೂಳೆ ಚೂರು ನಾನು ಎಳೆದು ತೆಗೆದಿದ್ದೆ. ಪ್ಯಾರನ ಜತೆ ನೀನಿಲ್ಲಿ ತಕರಾರು ಮಾಡಿದ್ದೆ. ಇಗೋ ಅಲ್ಲಿ ಜೇನುನೊಣಗಳು ನಿನ್ನ ಕಚ್ಚಿ ಸತಾಯಿಸಿದ್ದವು. ಈ ಕಿರುದಾರಿಯಲ್ಲೇ ನಾನು ನೀನು ಕಾಡಿಗೆ ಹೋಗುತ್ತಿದ್ದೆವು. ಇದೆಲ್ಲ ನಿನಗೆ ನೆನಪಿದೆ ಅಲ್ವೇನೋ” ಎಂದು ಮಮತೆ ತುಂಬಿ ಕಿವಿಯನ್ನು ಒಪ್ಪಿಸುತ್ತಿದ್ದರು. ಏಕಪಾತ್ರಾಭಿನಯದಂತೆ ಕಾಣುತ್ತಿದ್ದ ಈ ಘಟನೆಯಲ್ಲಿ ತೇಜಸ್ವಿಯ ನಿರಂತರ ಮಾತು, ಕಿವಿಯ ಭಯಾನಕ ಮೌನ ಇಡೀ ಸಂದರ್ಭದ ಸಂಕಟ ಹೆಚ್ಚಿಸಿತ್ತು. ಹೀಗೆ ಸಾಕು ನಾಯಿಯ ಹೊತ್ತುಕೊಂಡು ಅಲೆದಾಡಿ ಚಡಪಡಿಸಿದ ಸಂದರ್ಭ ಕೇಳುತ್ತಾ ರಾಜೇಶ್ವರಿ ಮೇಡಂ ಗೊಳೋ ಎಂದು ರೋಧಿಸತೊಡಗಿದರು. ಆ ಕ್ಷಣ ನಾವೆಲ್ಲಾ ಮಾತು ಮರೆತು ಥಂಡ ಹೊಡೆದು ಕೂತೆವು. ತುಂಬಾ ಹೊತ್ತು ನೀರವ ಮೌನ ಆವರಿಸಿತು. ಮನಸ್ಸಿನಲ್ಲಿ ತೇಜಸ್ವಿ ಗೆಳೆತನಕ್ಕೆ ಅಷ್ಟು ಹತ್ತಿರವಾಗಿದ್ದ ಆ ಕಿವಿಯ ಅದೃಷ್ಟ ನೆನೆದು ಹೆಮ್ಮೆ ಎನಿಸಿತು.
ಸಾಕು ನಾಯಿಯೊಂದು ಗೆಳೆಯನಂತಾಗಿ ಮನೆ ಯಜಮಾನನ ಮನಸ್ಸಿಗೆ ಆಪ್ತ್ತವಾಗುವ ಈ ಪ್ರೀತಿಯ ಸೆಲೆಯೇ ವಿಶಿಷ್ಟ ಎನಿಸುತ್ತದೆ. ಮಲೆನಾಡಿನ ಜನ ನಾಯಿಯನ್ನು ತಮ್ಮ ಪ್ರಾಣದಷ್ಟೇ ಗೌರವಿಸುತ್ತಾರೆ. ಅನೇಕ ಆಪತ್ಕಾಲಗಳಲ್ಲಿ ಅವು ಹಿತೈಷಿಗಿಂತ ಹೆಚ್ಚಾಗಿ ನಡೆದುಕೊಂಡಿರುತ್ತವೆ. ಕುಪ್ಪಳ್ಳಿಗೆ ಹೋದವರು ಕುವೆಂಪು ಬಾಲ್ಯದ ಫೋಟೋವೊಂದನ್ನು ಅಲ್ಲಿ ನೋಡಿರಬಹುದು. ಅಲ್ಲಿ ಪುಟ್ಟಪ್ಪನವರು ತಂದೆ ವೆಂಕಟಪ್ಪನವರ ಜೊತೆ ಕೂತು ತೆಗೆಸಿಕೊಂಡ ಅಪರೂಪದ ಫೋಟೋ ಒಂದಿದೆ. ಅಲ್ಲಿ ಕುಟುಂಬದ ಸದಸ್ಯರಂತೆ ಫೋಸು ಕೊಟ್ಟಿರುವ ಅನೇಕ ಶ್ವಾನಗಳನ್ನು ನೋಡಬಹುದು. ಇದು ಮಲೆನಾಡಿನ ಜನರ ಬದುಕಿನೊಳಗೆ ಪ್ರಾಣಿಲೋಕ ಮಿಳಿತಗೊಂಡು ಒಂದಾಗಿರುವ ಬಗೆ. ಕುವೆಂಪು ಕಾದಂಬರಿಯ ‘ಹುಲಿಯಾ’ ತೇಜಸ್ವಿ ಕಥನಗಳ ‘ಕಿವಿ’ ಎರಡೂ ಪ್ರಾಣಿಗಳು ಅವರ ಸಾಹಿತ್ಯದಲ್ಲಿ ಗಳಿಸಿರುವ ಪ್ರಾಮುಖ್ಯತೆಯೇ ಇದಕ್ಕೆ ಸಾಕ್ಷಿ. ಶಿಕಾರಿಯಲ್ಲಿ ಜತೆಯಾಗಿ, ಮನೆಗೆ ಕಾವಲಾಗಿ, ಕಾಡುಪ್ರಾಣಿಗಳ ಆಕ್ರಮಣದಿಂದ ಜೀವ ಕಾಪಾಡುವ ನಾಯಿಗಳ ನಿಯತ್ತು ಮಲೆನಾಡಿಗರಿಗೆ ಇಷ್ಟವಾಗಿದೆ. ಬಯಲು ಸೀಮೆಯ ಕುರಿ ಕಾಯುವ ಜನರೂ ನಾಯಿಗಳನ್ನು ಒಡಹುಟ್ಟಿದವರಂತೆ ಕಾಣುತ್ತಾರೆ. ಅವರ ಇಡೀ ಕುರಿಮಂದೆಯನ್ನು ಜೋಪಾನ ಮಾಡುವ ಬಯಲಿನ ಆಕ್ರಮಣಗಳಿಂದ ಅವರನ್ನು ಕಾಪಾಡುವ ಪ್ರಾಣಿಲೋಕವನ್ನು ಬಲು ಶ್ರದ್ಧೆಯಿಂದ ಗೌರವಿಸುತ್ತಾರೆ.
ತೇಜಸ್ವಿ ತಮ್ಮ ನಾಯಿ ಕಿವಿ ಕುರಿತು “ಕಿವಿ ನನ್ನ ಬಳಿ ಇದ್ದ ಒಂದು ಸ್ಪಾನಿಯಲ್ ಜಾತಿಯ ಬಿಳಿಯ ನಾಯಿ. ಮನೆ ಕಾಯುವುದರಿಂದ ಹಿಡಿದು ಶಿಕಾರಿಯವರೆಗೆ ಎಲ್ಲದರಲ್ಲೂ ಅದ್ವಿತೀಯನಾಗಿದ್ದ. ಅದರ ಗುಣ ಬುದ್ದಿವಂತಿಕೆಗಳನ್ನು ನೋಡಿ ಅನೇಕ ಬಾರಿ ನಾನೂ ಆಶ್ಚರ್ಯಪಡುತ್ತಿದ್ದೆ. ಕೇವಲ ಜಾನಪದ ಗೀತೆಗಳಲ್ಲಿ, ದಂತಕತೆಗಳಲ್ಲಿ ಮಾತ್ರ ಆ ರೀತಿಯ ನಾಯಿ ಇರುತ್ತದೆಂದು ಕೇಳಿದ್ದೆ. ಕಿವಿಯನ್ನು ಸಾಕಿದ ಅನಂತರ ಅದನ್ನು ಸಾಕ್ಷಾತ್ತಾಗಿ ನೋಡಿದಂತಾಗಿತ್ತು” ಎನ್ನುತ್ತಾರೆ.
ಪ್ರಾಣಿಲೋಕದಿಂದಲೂ ಮನುಷ್ಯ ಕಲಿಯಬೇಕಾದ ಜ್ಞಾನದ ಅನೇಕ ಪಾಠಗಳಿವೆ ಎನ್ನುತ್ತಿದ್ದರು ತೇಜಸ್ವಿ. ಪ್ರಕೃತಿ ಹಾಗೂ ಮನುಷ್ಯನ ನಡುವೆ ಅರ್ಥವಾಗದ ಅನೇಕ ಸಂಗತಿಗಳಿರುತ್ತವೆ. ಕೆಲವು ಮನುಷ್ಯನ ಅರಿವಿಗೆ ಬಾರದ ಸೂಕ್ಷ್ಮ ವಿಷಯಗಳು. ಇಂಥವನ್ನು ಮೊದಲು ಕಾಣುವ ಶಕ್ತಿ ನಾಯಿಗಿದೆ. ಈ ನಿಸರ್ಗದ ಸಣ್ಣ ಶಬ್ದ, ಭಿನ್ನ ನಡೆ, ಸೂಕ್ಷ್ಮ ಬದಲಾವಣೆಗಳನ್ನು ನಾಯಿ ಬಲು ಬೇಗ ಗ್ರಹಿಸುತ್ತದೆ. ನಾಯಿಯ ಈ ಪ್ರತಿಭೆಯಿಂದ ನಿಸರ್ಗದ ಜ್ಞಾನದ ಎಳೆಗಳನ್ನು ಹುಡುಕಬಹುದು. ನಾಯಿಯೆಂಬ ಪ್ರಾಣಿಯನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುವ ಅನೇಕರಿಗೆ ನಾಯಿಯ ಕುರಿತ ಇಷ್ಟೊಂದು ವ್ಯಾಖ್ಯಾನಗಳು ವಿಚಿತ್ರ ಎನಿಸಬಹುದು.
ನಾಯಿಯನ್ನು ಕುರಿತ ವ್ಯಾಮೋಹ, ಅದನ್ನು ಸಾಕುವ ಕಳಕಳಿ ತೇಜಸ್ವಿ ಅವರಿಗೆ ಮೊದಲಿನಿಂದಲೂ ಇದ್ದ ಹಾಗೆ ಕಾಣುತ್ತದೆ. ಅವರ ಪರಿಸರದ ಕಥೆ ಶುರುವಾಗುವುದೇ ನಾಯಿಯ ಮೂಲಕ. ಅನ್ವೇಷಣೆ ಮಾಡುವ ಆನುಷಂಗಿಕ ಗುಣ ನಿರೂಪಕನಲ್ಲಿ ಹೆಚ್ಚಾಗಲು ನಾಯಿ ಜೊತೆಗಿನ ಗೆಳೆತನವೇ ಕಾರಣವಾಗಿರಬೇಕು. ಇದು ಮಲೆನಾಡಿನ ಸಾಕಷ್ಟು ಜನರಿಗೆ ಸಿಕ್ಕಿರುವ ಒಂದು ಪ್ರಾಕೃತಿಕ ವರ. ಕುವೆಂಪು ಅವರಿಗೆ ತೇಜಸ್ವಿ ಬಾಲಕರಾಗಿದ್ದಾಗ “ನಮಗೆ ಎರಡು ನಾಯಿ ಮರಿ ಬೇಕೇಬೇಕು. ಮಾವನಿಗೆ ಕಾಗದ ಬರೆಯುತ್ತಾ ನಮಗೆ ಒಂದು ಹೆಣ್ಣು ನಾಯಿ ಮರಿ ಬೇಕು ಎಂದು ಬರೆಯಿರಿ” ಎಂದು ಒತ್ತಾಯಿಸಿ ಬರೆದಿರುವ ಮೊದಲ ಪತ್ರ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ.
ತೇಜಸ್ವಿ ತಮ್ಮ ಮಿಲನಿಯಮ್ ಸರಣಿಯಲ್ಲಿ ‘ಜರ್ಮನ್ ಷಪರ್ಢ್’ ನಾಯಿಯ ಬಗ್ಗೆ ಬರೆಯುತ್ತಾರೆ. ನಮ್ಮಲ್ಲಿನ ‘ಪರಮವೀರ ಚಕ್ರ’ ಪ್ರಶಸ್ತಿಗೆ ಸಮನಾದ ‘ಡಿಕೆನ್ಸ್ ಕ್ರಾಸ್’ ಪ್ರಶಸ್ತಿಯನ್ನು ಈ ಜರ್ಮನ್ ನಾಯಿ ಗಳಿಸುತ್ತದೆ. ಅದಕ್ಕಿಟ್ಟ ಹೆಸರು ‘ಅಂಟಿಸ್’ ಎಂದು. ಯುದ್ಧದಲ್ಲಿ ತೋರಿದ ಧೈರ್ಯ, ಸಾಹಸ, ಪರಾಕ್ರಮಗಳಿಗೆ ಪ್ರಶಸ್ತಿ ಪಡೆಯುವ ಅಂಟಿಸ್ ಅಸಾಧಾರಣ ಬುದ್ಧಿಶಕ್ತಿಯ ನಾಯಿ ಎನಿಸಿತ್ತು, ಜನರ ಕಿವಿಗೆ ಕೇಳಿಸದ ನಿಗೂಢ ಸದ್ದು ಅದಕ್ಕೆ ಮೊದಲೇ ಕೇಳಿಸುತ್ತಿತ್ತು. ತನ್ನ ಅಧ್ಭುತ ಶಕ್ತಿಯಿಂದ, ಜ್ಞಾನಪ್ರತಿಭೆಯಿಂದ ನೂರಾರು ಜನರ ಹಾಗೂ ಸೈನಿಕರ ಪ್ರಾಣವನ್ನು ಯುದ್ಧದಲ್ಲಿ ಉಳಿಸಿದ ಈ ನಾಯಿಯ ಬಗ್ಗೆ ತೇಜಸ್ವಿ ಹೆಮ್ಮೆಯಿಂದ ಬರೆಯುತ್ತಾರೆ. ನಾಯಿಯ ಇಂದ್ರಿಯಗಳ ಅಸಾಧಾರಣ ಸೂಕ್ಷ್ಮಜ್ಞತೆ, ಅವುಗಳಿಗಿರುವ ಅಸಾಧಾರಣ ಬುದ್ಧಿಶಕ್ತಿಯ ಬಗ್ಗೆ ಹೆಚ್ಚು ಒಲವಿದ್ದ ಕಾರಣಕ್ಕೆ ತೇಜಸ್ವಿ ಕಥನಗಳು ನಾಯಿಯ ಕುರಿತು ಹೆಚ್ಚು ಶ್ರದ್ಧೆ ತೋರುತ್ತವೆ.
‘ಪರಿಸರ ಕಥೆ’ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ‘ಕರ್ವಾಲೊ’ ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿ ಬರುವ ಕಿವಿ ಎಂಬ ನಾಯಿಯ ಪಾತ್ರವನ್ನು ತೇಜಸ್ವಿ ಬಲು ಜತನದಿಂದ ನಿರೂಪಿಸುತ್ತಾರೆ. ಕಾಡಿನ ಅರಿವನ್ನು ಕಲಿಸುವ ಒಬ್ಬ ಗುರುವಾಗಿ ನಾಯಿ ಇಲ್ಲಿ ಕಾಣುತ್ತದೆ. ಕಾಡಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಲೇಖಕರಿಗೆ ತಿಳಿಯುವಂತೆ ಮಾಡುವ ಕಿವಿ ಪ್ರಕೃತಿ ಹಾಗೂ ಮನುಷ್ಯನ ನಡುವೆ ಜ್ಞಾನದ ಕೊಂಡಿಯಾಗಿ ಕೆಲಸ ಮಾಡುತ್ತದೆ.
“ನಾನು ತೋಟ ಮಾಡಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಕೋವಿ ಹೆಗಲ ಮೇಲೆ ಹಾಕಿಕೊಂಡು ದಿನವಿಡೀ ಕಿವಿಯೊಂದಿಗೆ ಅಲೆಯುವುದು ನನ್ನ ಕೆಲಸವಾಗಿತ್ತು. ಓದುವುದು, ಬರೆಯುವುದು, ಎಲ್ಲದಕ್ಕೂ ತಿಲಾಂಜಲಿಯಿತ್ತು. ಹೀಗೆ ನಿರ್ಜನ ಕಾಡುಗಳಲ್ಲಿ ಗೊತ್ತು, ಗುರಿಯಿಲ್ಲದೆ ಅಲೆಯುತ್ತಿರುವ ನನ್ನನ್ನು ನೋಡಿ ಅನೇಕರು ಇವನು ಸಂಪೂರ್ಣ ಹಾಳಾದನೆಂದು ವ್ಯಸನ ಸೂಚಿಸಿದವರಿದ್ದಾರೆ. ಅನೇಕರು `ಎಂಥವರಿಗೆ ಎಂಥಾ ಮಗ’ ಎಂದು ವಿಷಾದಪಟ್ಟವರೂ ಅನೇಕರಿದ್ದಾರೆ. ಕೆಲವರು ‘ಈ ನಾಯಿಯ ದೆಸೆಯಿಂದ ಹಾಳಾದ’ ಎಂದು ಕಿವಿಯನ್ನೂ ದೂಷಿಸಿದವರೂ ಇದ್ದಾರೆ” ಎನ್ನುತ್ತಾರೆ ತೇಜಸ್ವಿ
ಕುವೆಂಪು ಸಾಹಿತ್ಯ ಪ್ರಕೃತಿಯ ವಿವರಗಳಿಂದ ಸೌಂದರ್ಯ ಮತ್ತು ಧ್ವನಿ ಪಡೆದು ಭಾವನಾತ್ಮಕವಾದರೆ, ಅದೇ ತೇಜಸ್ವಿ ಕಥನ ನಿಸರ್ಗದಲ್ಲಿ ಕಾಣದ ಬದುಕಿನ ವಿವರಗಳೆಡೆಗೆ ಆಸಕ್ತಿ ವಹಿಸಿ ಸೃಜನಾತ್ಮಕವಾಗುತ್ತದೆ. ಕುವೆಂಪು ಅವರ ನಾಯಿಗುತ್ತಿ ಪ್ರಕೃತಿಯ ನಡುವೆ ಒಂದು ಲಯವಾಗಿ ಬದುಕುವವನು. ಆತನ ನಾಯಿ ಹುಲಿಯ ನಿಸರ್ಗವನ್ನು ನೋಡುವ ಅವನ ನೋಟವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ಅವನಿಗೂ ನಿಸರ್ಗದ ಅರಿವಿನ ಪಾಠ ಹೇಳುವ ಸೂಕ್ಷ್ಮ ಜೀವಿ ಅದು. ಇದರ ಹಾಗೆಯೇ ತೇಜಸ್ವಿ ಕಥನದ ನಾಯಿ ‘ಕಿವಿ’ ಕೂಡ ನಿಸರ್ಗದ ಕಾಣದ ಅನೇಕ ಮುಖಗಳನ್ನು ತೋರಿಸುತ್ತಾ ಹೋಗುತ್ತದೆ. ಪ್ರಾಣಿಯಿಂದ ಮನುಷ್ಯ ಕೂಡ ಕಲಿಯುತ್ತಾನೆ ಮತ್ತು ಕಲಿಯಬೇಕು ಎಂಬ ಸಂಗತಿಯೇ ಇಲ್ಲಿ ಮುಖ್ಯ.
ಅಲೆದಾಟದಲ್ಲಿ, ಸಾಕು ಪ್ರಾಣಿಯೊಟ್ಟಿಗಿನ ಆಪ್ತತೆಯಲ್ಲಿ ಜ್ಞಾನ ಗಳಿಸುತ್ತಿದ್ದ ತೇಜಸ್ವಿ ಹೊರ ಜಗತ್ತಿಗೆ ಹಾಳಾದವರಂತೆ ಕಂಡಿರುವುದು ಉತ್ಪ್ರೇಕ್ಷೆಯ ಸಂಗತಿಯಲ್ಲ. ಮನುಷ್ಯ ತನ್ನೆಲ್ಲಾ ಸಂಬಂಧಗಳಷ್ಟೇ ಮಿಗಿಲಾಗಿ ಪ್ರಾಣಿಲೋಕದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವುದು ಬಯಲ ಮತ್ತು ಕಾಡಿನ ಬದುಕಿನವರಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ತೇಜಸ್ವಿ ಕಥನಗಳು ಹೇಳುತ್ತವೆ.
ಮನುಷ್ಯನಿಗಿಂತ ಮಿಗಿಲಾದ ವಾಸನಾ ಜ್ಞಾನ, ಮತ್ತು ಎಚ್ಚರದ ಸ್ಥಿತಿ ಇರುವ ನಾಯಿ ತೇಜಸ್ವಿ ಅವರಿಗೆ ಹೊಸ ಸಂಗತಿಗಳನ್ನು ತಿಳಿಸುವ ಗುರುವಾಗಿದೆ. ತನ್ನ ಸೂಕ್ಷ್ಮ ಗ್ರಹಿಕೆಗಳಿಂದ ನಿರೂಪಕನ ಅರಿವನ್ನು ವಿಸ್ತಾರಿಸುವ ನಾಯಿ ಜಗದ ಕಣ್ಣಿಗೆ ಮಾತ್ರ ಸಾಮಾನ್ಯ ಪ್ರಾಣಿ. ಇಂಥ ಸಾಮಾನ್ಯ ಜೀವದಿಂದಲೂ ಕಲಿಯುವ ಸಾಕಷ್ಟು ಸಂಗತಿಗಳಿವೆ ಎಂಬ ಸರಳ ಸತ್ಯವನ್ನು ತೇಜಸ್ವಿ ಕಥನಗಳು ತೆರೆದಿಡುತ್ತವೆ. “ಮನುಷ್ಯನ ಮಿತ್ರ ಶೇಷ್ಠನಾದ ನಾಯಿ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿ ನಮಗೆ ಪರಿಚಯವಾದಾಗ ಮಾತ್ರ ನಾಯಿಯ ಹಿರಿಮೆ ನಮಗೆ ಅರ್ಥವಾಗುತ್ತದೆ. ನಮ್ಮ ಅಂತಃಕರಣವನ್ನು ಈ ಜೀವಗಳು ಎಷ್ಟು ಕಲಕುತ್ತವೆ ಎಂದರೆ ಇದನ್ನು ಇತರರಿಗೆ ವಿವರಿಸಿ, ವಿಶ್ಲೇಷಿಸಿ ಹೇಳುವುದು ಕಷ್ಟ ಎನಿಸುತ್ತದೆ” ಎನ್ನುತ್ತಾರೆ ತೇಜಸ್ವಿ. ನಮ್ಮ ಪರಿಸರದಲ್ಲೇ ಬದುಕುವ ಜೀವಿಗಳ ಜೊತೆಗೆ ಸಹಜವಾಗಿ ಬಾಳುವ ಜೊತೆಗೆ ಅವುಗಳ ಅಂತಃಸತ್ವವನ್ನೂ ಅರಿತು ಗೌರವಿಸುವ ವಿವೇಕವನ್ನು ತೇಜಸ್ವಿ ಬರೆಹಗಳು ಕಲಿಸುತ್ತವೆ.
“ನಾಯಿಗೆ ನಾವು ಮಾಡುವಂತೆ ಮಾನವೀಯ ವ್ಯಕ್ತಿತ್ವವನ್ನೂ ಆರೋಪಿಸಿ ನಮ್ಮಂತೆಯೇ ಅದು ಕೂಡ ಎಂದು ನೋಡುವುದರಿಂದ ನಾಯಿಗೆ ಸಂತೋಷವಾಗಲೀ, ಪ್ರಯೋಜನವಾಗಲೀ ಉಂಟೆ ಎಂದು ನನಗೆ ಅನುಮಾನ” ಎನ್ನುವ ತೇಜಸ್ವಿ ಮನುಷ್ಯ ಮತ್ತು ಪ್ರಾಣಿಲೋಕದ ನಡುವೆ ಇಕಾಲಜಿ ರೂಪಿಸಿರುವ ಮಿತಿಗಳನ್ನೂ ಗಮನಿಸಿ ಹೇಳಬಲ್ಲರು. ಪರಿಸರ ಲೋಕದ ಇಂಥ ಬೆಸುಕೊಂಡಿಗಳನ್ನು ನಮ್ಮ ನಮ್ಮ ಬುದ್ಧಿಶಕ್ತಿಯ ಮಿತಿಗೆ ತಕ್ಕಂತೆ ನಾವೆಲ್ಲಾ ವ್ಯಾಖ್ಯಾನಿಸಿಕೊಳ್ಳುತ್ತಿದ್ದೇವೆ. ಈ ಪ್ರಾಣಿಲೋಕವನ್ನು ಕರುಣೆ, ಸಹಾನುಭೂತಿಯಿಂದ ನೋಡಬೇಕೇ ಹೊರತು ನಮ್ಮಂತೆ ಅವೂ ಕೂಡ ಇರಬೇಕು ಎಂದು ಬಯಸುವುದು ಮನುಕುಲದ ಆಲೋಚನಾ ಪರಿಮಿತಿ.
ತನ್ನ ಜಾಣತನ, ನಿಷ್ಠ್ಠೆ ಮತ್ತು ಪ್ರತಿಭೆಗಳನ್ನು ತನ್ನ ಸಾಕುವ ಮಾಲೀಕನಿಗೆ ಪರಿಚಯಿಸಲು ಹೋಗಿ ಹತವಾದ ನಾಯಿಗಳ ಕಥೆ ಅನೇಕ ಇವೆ. ಹುಚ್ಚು ಸಾಹಸಗಳ ತೋರಿಸಲು ಹೋಗಿ ಶತ್ರುಗಳಿಂದ ಕೊಲ್ಲಲ್ಪಟ್ಟ ನಾಯಿಗಳಿವೆ. ಕಾಡಿನ ಪ್ರಾಣಿಗಳ ಜತೆ ಸೆಣೆಸಿ ಪ್ರಾಣ ಬಿಡುವ ಅನೇಕ ನಾಯಿ ಪಾತ್ರಗಳು ತೇಜಸ್ವಿ ಕಥೆಗಳಲ್ಲಿವೆ. ಭಿಕ್ಷುಕರು ಬಂದರೆ ಬೊಗಳುವುದು, ಸಿರಿವಂತರು ಬಂದರೆ ಗೌರವಿಸುವ ಗುಣ ತಮ್ಮ ನಾಯಿ ಕಿವಿ ಕಲಿತ ಬಗ್ಗೆ ತೇಜಸ್ವಿಯವರಿಗೆ ಆಶ್ಚರ್ಯವೆನಿಸುತ್ತದೆ. ತರತಮ ಭಾವ ಮನುಷ್ಯರಲ್ಲಿ ಸಹಜ. ಆದರೆ ನಾಯಿಯೂ ಇದನ್ನು ಪಾಲಿಸುವುದು ಹೇಗೆಂದು ಅವರಿಗೂ ಗೊತ್ತಾಗುವುದಿಲ್ಲ. “ಇದು ನಾಯಿಗೆ ಇರುವ ತಾರತಮ್ಯ ಭಾವವೋ, ಪ್ರಕೃತಿ ಅದಕ್ಕೆ ಕಲಿಸಿರುವ ಪಾಠವೋ ಗೊತ್ತಿಲ್ಲ. ಮನುಷ್ಯರಂತೆಯೇ ಬೇರೆ ಬೇರೆ ಸ್ವಭಾವ, ವರ್ತನೆ ಇರುವ ಪ್ರಾಣಿ ಲೋಕವೂ ಇರುತ್ತದೆ ಎನ್ನುವುದಕ್ಕೆ ನಾಯಿ ಕಿವಿಯೇ ಉದಾಹರಣೆ” ಎನ್ನುತ್ತಾರೆ.
ಪ್ರಾಣಿ ಪಕ್ಷಿಗಳಿಗೆ ಮನುಷ್ಯರಂತೆ, ಬದುಕಿನ ವಿವರಗಳು, ಜಿದ್ದು, ನೆನಪು, ಭಾವುಕತೆ, ಉಪಕಾರ ಸ್ಮರಣೆ, ಸ್ನೇಹ, ನಂಬಿಕೆಗಳು, ಸಂಬಂಧಗಳನ್ನು ಕಾಪಾಡುವ ಜವಾಬ್ದಾರಿ ಇತ್ಯಾದಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಚರ್ಚೆ ಅನೇಕ ಕಡೆ ಬರುತ್ತದೆ. ಮನುಷ್ಯ ಪ್ರತಿಯೊಂದು ಜೀವದ ಜತೆ ದಿನನಿತ್ಯದ ಸಖ್ಯ, ಒಡನಾಟ ಬೆಳೆಸಿಕೊಂಡರೆ ತನ್ನತನದ ಸ್ವರೂಪಗಳನ್ನು, ಮನುಷ್ಯನ ವ್ಯಕ್ತಿತ್ವಕ್ಕೆ ಹತ್ತಿರದ ಗುಣ ಸ್ವಭಾವಗಳನ್ನು ಪ್ರಾಣಿ ಪಕ್ಷಿಗಳಲ್ಲಿ ಹುಡುಕಲು ಆರಂಭಿಸುತ್ತಾನೆ. ಇದೊಂದು ಸಹಜ ಪ್ರಕ್ರಿಯೆ.
ಲೇಖಕರ ಕೈಯ್ಯಲ್ಲಿ ಕೋವಿ ನೋಡಿದರೆ ನಾಯಿ ಕಿವಿ ಬೆಳಗಾಗುವವರೆಗೂ ಹಿಂದಿರುಗದೆ ರಾತ್ರಿ ಎಲ್ಲಾ ಕಾಡೊಳಗೇ ಶಿಕಾರಿ ಹುಡುಕಿಕೊಂಡು ತಿರುಗುವ ಸ್ವಭಾವ ಹೊಂದಿದೆ. ತಿರುಗಾಟದ, ಶಿಕಾರಿಯ ಹಿಂದೆ ಅಲೆಯುವ ಸ್ವಭಾವ ಪ್ರಧಾನ ಗುಣವಾದ ಕಾರಣ ಲೇಖಕನಿಗೆ ಕಿವಿ ಮುಖ್ಯ ಸಂಗಾತಿ ಎನಿಸುತ್ತದೆ. ಶಿಕಾರಿ ಸಮಯದಲ್ಲಿ ಟಾರ್ಚ್ ಬೆಳಕನ್ನೂ, ನಿರೂಪಕನ ಧ್ವನಿಯನ್ನೂ ಕೇಳುತ್ತಲೇ ಅದನ್ನೇ ತನ್ನ ಪ್ರೋತ್ಸಾಹವೆಂದು ತಿಳಿದು ಮತ್ತಷ್ಟು ಜೋರಾಗಿ ಬೊಗಳುತ್ತಾ, ಪೊದೆಯ ಮುಳ್ಳು, ಅಪಾಯ ಒಂದನ್ನೂ ಲೆಕ್ಕಿಸದೆ ಪ್ರಾಣಿಯ ಮೇಲೆ ಹಾರಿ ಆಕ್ರಮಣ ಮಾಡುವ ಕಿವಿ ತನ್ನ ಈ ವಿಶೇಷ ಪ್ರತಿಭೆಯ ಕಾರಣಕ್ಕೆ ಹೆಚ್ಚು ಮನ್ನಣೆ ಪಡೆಯುತ್ತದೆ. ಮನುಷ್ಯರ ಜೊತೆ ಬದುಕುತ್ತಾ ಅವರ ಬೇಕು ಬೇಡಗಳನ್ನು ಅರಿತು ಅವರಂತಾಗುವ ವಿಶೇಷ ಗುಣ ನಾಯಿಗಳಿಗಿದೆ.

– ಕಲೀಮ್ ಉಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...