ನೆಲ-ಮುಗಿಲು  ಒಂದಾದ ಸಂಕಟ

ಇಡೀ ಮಾನವತೆಯು ಅಷ್ಟೇಕೆ ಸಕಲ ಜೀವರಾಶಿಯೂ ಈ ನೆಲವನ್ನೇ ನಂಬಿಕೊಂಡಿದೆ. ನಮಗಂತೂ ನಿಂತ ನೆಲ ಕಾಲ ಕೆಳಗಿದೆ, ಮುಗಿಲು ಹೊದಿಕೆಯಾಗಿದೆ. ಎರಡೂ ಮುನಿಸಿಕೊಂಡ ಸಂಕಟ ರಾಜ್ಯದ ಕೊಡಗನ್ನು ಕಾಡಿದೆ. ಕೆಲ ಹೊತ್ತು ನಮ್ಮೆಲ್ಲಾ ಆಸೆ, ಅಧಿಕಾರ ಪರ ಆಲೋಚನೆಗಳನ್ನು ಬದಿಗಿಟ್ಟು ಕೇವಲ ಜೀವಿಪರ ಹಿತದ ಆಶಯವನ್ನು ಮುಂದಿಟ್ಟುಕೊಂಡು ನೋಡೋಣ. ಮುಗಿಲು ಮುನಿಸಿಕೊಂಡು ಧಾರಾಕಾರ ಮಳೆ ಉಣಿಸುವುದು ಕೊಡಗಿಗೇನೂ ಹೊಸತಲ್ಲ. ನೆಲ ಮುನಿಸಿದ್ದು ಖಂಡಿತಾ ಹೊಸತು. ಮಾತ್ರವಲ್ಲ, ತಡೆದುಕೊಳ್ಳಲು ಆಗದ ವಿಕೋಪ ಭೂಮಿಯದು. ಇದರಲ್ಲಿ ಬರೀ ನಿಸರ್ಗದ ಪಾತ್ರವೆಷ್ಟು, ನಿಸರ್ಗದಲ್ಲದ್ದೆಷ್ಟು? ಸುಮ್ಮನೆ ಆವೇಶಭರಿತ ಮಾತಿಗೆ ಉತ್ತರಿಸಲು ಆಗದ್ದು. ಭಾವಪರವಶರಾಗಿ ಮಾತಾಡುವ, ಚರ್ಚೆಗಳನ್ನು ಎಬ್ಬಿಸುವ ಮನುಕುಲಕ್ಕೆ ಎಲುಬಿಲ್ಲದ ನಾಲಿಗೆಯು ಸದಾ ಅಣಿಯಾಗಿರುತ್ತದೆ. ಆದಕ್ಕೆ ಆಲೋಚನೆ, ಅಧ್ಯಯನ, ಓದು, ಶೋಧನೆ, ಬೆರಗಿನ ಒಳನೋಟ ಎಲ್ಲವನ್ನೂ ಸ್ವಲ್ಪವಾದರೂ ದಕ್ಕಿಸಿಕೊಂಡು ನೋಡುವಲ್ಲಿ ಮನುಕುಲವು ಸದಾ ಜಾತಿ, ರಾಜಕೀಯ, ಮಾರುಕಟ್ಟೆ ಆಧಾರಿತ ಮುನ್ನೋಟ ಮುಂತಾದವುಗಳಿಂದ ಸೋತಿದೆ. ಇದು ಕೇವಲ ಕರ್ನಾಟಕ-ಕೊಡಗಿನ ಸಂಗತಿಯಲ್ಲ. ಜಗತ್ತು ಇಂದು ಪರಿಸರ ಮತ್ತು ಅಭಿವೃದ್ಧಿಯನ್ನು ಸಮೀಕರಿಸುವಲ್ಲಿ ನಡೆದುಕೊಳ್ಳುತ್ತಿರುವ ಪರಿಸ್ಥಿತಿ. ಜೀವಿಪರ ಆಲೋಚನೆಗಳಿಗೆ ಜಾಗತಿಕ ಚರ್ಚೆಗಳು ಆರಂಭವಾಗಿ 46 ವರ್ಷಗಳು ಸಂದಿವೆ. ಅದಕ್ಕೆ ಹಿಂದಿನ ಹತ್ತಾರು ವರ್ಷಗಳ ಶ್ರಮವನ್ನೂ ಸೇರಿಸಿದರೆ ಹೆಚ್ಚೂ ಕಡಿಮೆ 60 ವರ್ಷಗಳಾಗುತ್ತವೆ. ನಮ್ಮ ದೇಸಿ ಚಿಂತನೆಯಲ್ಲಿ ಓರ್ವ ಮನುಷ್ಯನ ಸಾಮಾನ್ಯ ಆಯಸ್ಸುನಷ್ಟು ಕಾಲ ಶ್ರಮ ಪಟ್ಟಿದ್ದೇವೆ. 60 ತುಂಬಿದ್ದಕ್ಕೆ ಷಷ್ಠ್ಯಾಬ್ದಿ  ಮಾಡಿಕೊಳ್ಳುತ್ತೇವಲ್ಲ, ಅಷ್ಟು ಕಾಲ ಜೀವಿಪರ ಆಲೋಚನೆಗಳ ಮಾಡುತ್ತಾ ಒಮ್ಮತದ ತೀರ್ಮಾನಕ್ಕೆ ಬಾರದೆ ಸೋತಿದ್ದೇವೆ.
ಈ ಹಿಂದೆಯೇ ಹೇಳಿದೆ ಇದು ಕೇವಲ ಭಾರತದ-ಕರ್ನಾಟಕದ-ಕೊಡಗಿನ ಮಾತಷ್ಟೇ ಅಲ್ಲ ಇಡೀ ಭೂಮಿಗೆ ಸೇರಿದ ಆತಂಕ. ನೆಲ ನಮ್ಮ ಕಾಲ ಕೆಳಗಿದೆ. ಅಷ್ಟರ ಮಟ್ಟಿಗೆ ನಾವದನ್ನು ಪೋಷಿಸಿದ್ದೇವೆ. ನೆಲದ ಮೇಲಿನ ಒಂದು ಮಿಲಿಮೀಟರ್ ಮಣ್ಣು ಉತ್ಪಾದನೆಯಾಗಲು ಸಹಸ್ರಾರು ವರ್ಷಗಳು ಬೇಕು. ಒಂದೇ ಒಂದು ಮಳೆಗಾಲ ಎಲ್ಲವನ್ನೂ ಕೊಚ್ಚಿ ಹೋಗಬಲ್ಲದು. ಮಾನವನ ಒಡನಾಟಕ್ಕೆ ಬಾರದ ಯಾವುದೇ ನೆಲವನ್ನು ಗಮನಿಸಿದ್ದೀರಾ?  ನೆಲಕ್ಕೆ ಒಂದು ಬಹು ದೊಡ್ಡ ಗುಣವಿದೆ. ಸುಮ್ಮನೆ ತನ್ನನ್ನು ತಾನು ಏನಾದರೂ ಬೆಳೆಸಿಕೊಂಡು ಹಸಿರಾಗಿಸಿ ಮುಚ್ಚಿಕೊಂಡಿರುತ್ತದೆ. ದೊಡ್ಡ ಬಯಲಿನ ಅಂತಹ ಸ್ಥಳಗಳಲ್ಲಿ ಕಾಲು ದಾರಿಯನ್ನು ಗಮನಿಸಿರುತ್ತೀರಿ! ಮನುಷ್ಯ ಓಡಾಡಿದ ಜಾಗ ಮಾತ್ರ ಹಸಿರಿನಿಂದ ವಂಚಿತವಾಗಿರುತ್ತದೆ. ಸುತ್ತಲೂ ಗಿಡ-ಗೆಂಟೆಗಳಲ್ಲಿ ಯಾವುದಾದರೂ ಸರಿಯೇ…. ಅಲ್ಲಿ ಬೆಳೆಸಿಕೊಂಡಿರುತ್ತದೆ. ಎಲ್ಲಾ ಅಭಿವೃದ್ಧಿಗಳೂ ನೆಲವನ್ನು ಮಾತ್ರವೇ ನಂಬಿರುವುದರಿಂದ ಒಂದಷ್ಟು ಜಾಗರೂಕ ಬೆಳವಣಿಗೆಯನ್ನು ಮನುಕುಲವು ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರಕೃತಿಯು ತಡೆದುಕೊಳ್ಳದೆ ಮುನಿಸು ತೋರಿಸುವುದು ಸಹಜ. ಬರವನ್ನೂ ಸಹಾ ಪ್ರಕೃತಿಯ ಬಿಡುವು ಎಂದೇ ವಿಶ್ಲೇಷಿಸುವ ಅಧ್ಯಯನಗಳು ಸಿಗುತ್ತವೆ.
ಈ ಬಾರಿ ಮಳೆಯ ಮುನಿಸು ಮಲೆನಾಡಿಗೆ ಮಾತ್ರವಲ್ಲ. ಕೆಲ ವರ್ಷಗಳ ಹಿಂದೆ ಸುಮಾರು 2011ರಲ್ಲಿ ರಾಯಚೂರು-ಬಳ್ಳಾರಿ-ಯಾದಗಿರಿ ಜಿಲ್ಲೆಗಳಂತಹ ಬರದ ನಾಡಿನಲ್ಲೂ ತನ್ನ ಚಮತ್ಕಾರವನ್ನು ತೋರಿತ್ತು. ಲಕ್ಷಾಂತರ ಟನ್ನುಗಟ್ಟಲೇ ಫಲವತ್ತಾದ ಮಣ್ಣು ಕೊಚ್ಚಿಹೋಯಿತು. ಸುರಪುರದಲ್ಲಿ ವರ್ಷಕ್ಕೆ ಬೀಳುವ ಮಳೆಯಷ್ಟು ಎರಡೇ ದಿನದಲ್ಲಿ ಬಿದ್ದಿತ್ತು. ಈ ಹವಾಮಾನ ಬದಲಾವಣೆಯು ಎಲ್ಲಾದರೂ ಯಾವಾಗಲಾದರೂ ಆಗಬಹುದು. ಅದಕ್ಕಾಗಿ ಎಲ್ಲಾ ಅಭಿವೃದ್ಧಿ ಪರ ಆಲೋಚನಾಕಾರರೂ ಅದಕ್ಕೆಲ್ಲಾ “ಹವಾಮಾನ ಬದಲಾವಣೆ” ಎಂಬ ಹೆಸರನ್ನು ಕೊಟ್ಟು ಕೈತೊಳೆದುಕೊಂಡಿದ್ದಾರೆ. ನಮ್ಮದೇನೂ ಕೈವಾಡವಿಲ್ಲ. ನಿಸರ್ಗದ್ದೇ ಎನ್ನುತ್ತಾ ತಮ್ಮ ಲಾಭವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾ ಮುಂದೆ ನಡೆಯುತ್ತಾರೆ. ನಿಸರ್ಗದ ಬದಲಾವಣೆಗಳಿಗೆ ಅದರೊಳಗಿನ ಅನೈಸರ್ಗಿಕ ಕಾರಭಾರವೇನು? ಎಂಬುದನ್ನು ಭಾವಪರವಶರಾಗಿ ಮಾತಾಡುವ ಯಾರೂ ಚರ್ಚಿಸುವುದಿಲ್ಲ. ಅದಕ್ಕಾಗಿ ಜಾಗತಿಕವಾಗಿ ಈ ನೆಲದ ರಕ್ಷಣೆಗೆ ಅಂತಾರಾಷ್ಟ್ರೀಯ ಒತ್ತಾಯಗಳು ಕಡ್ಡಾಯವಾಗುತ್ತಿವೆ. ಇನ್ನು ಮುಂದೆ ಇವು ಅಂತರರಾಜ್ಯ, ಅಂತರಜಿಲ್ಲೆಯ ಅಷ್ಟೇಕೆ ಅಂತರತಾಲ್ಲೂಕುಗಳ ಒತ್ತಾಯ ಬೇಕಾದೀತು. ದೊಡ್ಡ-ದೊಡ್ಡ ನಗರಗಳು ಕೊಳೆಗೇರಿಗಳಾಗಿರುವುದು ನಮ್ಮ ನೆಲದ ಪ್ರೀತಿಯನ್ನು ಕಳೆದುಕೊಂಡಿರುವುದರಿಂದ ಎಂಬದನ್ನು ಹೇಗೇ ಹೇಳುವುದು?
ದಕ್ಷಿಣ ಭಾರತದ ನೆಲ, ಪ್ರಸ್ಥಭೂಮಿ- ಗಟ್ಟಿಯಾಗಿದ್ದು ಭೂಕಂಪನಗಳಿಂದ ಮುಕ್ತವಾದದ್ದು ಎಂಬುದನ್ನು ಅರಿತಿದ್ದೇವೆ. ಅಂದರೆ ಭೂಮಿಯ ಒಳಗಣ ಕಂಪನವು ಮೇಲ್ಮೈ ತಲುಪಲು ಆಗುದಂತೆ ಗಟ್ಟಿಯಾದ ಪದರವನ್ನು ಹೊಂದಿದೆ ಎಂದು ಅರ್ಥ. ನಾವು ಮೂರ್ಖರಾಗಿ ಮೇಲ್ಮೈಯನ್ನೇ ಅಲುಗಾಡಿಸಲು ಆರಂಭಿಸಿದರೆ ಏನಾದೀತು ಎಂದಾದರೂ ಆಲೋಚಿಸಿದ್ದೇವೆಯೇ? ಸಣ್ಣ ಸಲಿಕೆ – ಪಿಕಾಸಿಗಳಿಂದ ನೆಲ ಅಗೆಯುತ್ತಿದ್ದ ಕಾಲ ಹೋಗಿ ದಶಕಗಳಾದವು. ಈಗ “ಅರ್ಥ್ ಮೂವರ್ಸ್” ಜೆಸಿಬಿ ಯಂತ್ರಗಳು ಬಂದಿವೆ. ಕ್ಷಣಮಾತ್ರದಲ್ಲಿ ನೆಲ ಅಗೆದು ಗುಡ್ಡಗಳ ಕಡಿದು, ರಸ್ತೆ, ಜಮೀನು, ನಿಮಗೇನು ಬೇಕೋ ಅದನ್ನು ಮಾಡಲು ನೆರವಾಗುತ್ತವೆ. ನಮಗೆ ಎಂದೂ ಹೊಳೆಯದ ಮತ್ತೊಂದು ಕಾನೂನು ನಮ್ಮ ಈ ನಾಚಿಗೆಗೆಟ್ಟ ಆಸೆಯ ಜೊತೆಗೇ ಇದೆ. ಈ ನೆಲ ಎಂದೂ ನಮ್ಮದಲ್ಲ. ಅದಕ್ಕಾಗಿಯೇ ನಾವದಕ್ಕೆ ಬಾಡಿಗೆ ರೂಪದಲ್ಲಿ ಕಂದಾಯ ಕಟ್ಟುತ್ತೇವೆ. ಸರ್ಕಾರ ಬಹುದೊಡ್ಡ ಜಮೀನ್ದಾರ. ಅಂದ ಮೇಲೇ ಮುಗಿದೇ ಹೋಯಿತಲ್ಲ. ಎಲ್ಲಾ ರಾಜಕೀಯ ಮುಖಂಡರೇ ನಿಜವಾದ ಧಣಿಗಳು. ಅವರಿಚ್ಛೆಯೇ ಬಲು ದೊಡ್ಡ ನಿರ್ವಾಹಕ. ನಮ್ಮ ದೇಶದಲ್ಲಿ ಯಾವ ನೆಲವನ್ನು ಯಾವುದಕ್ಕೆ ಬಳಸಬೇಕು ಎನ್ನುವ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಿದೆ. ಅದರ ವರ್ಗೀಕರಣದಂತೆ ಯಾವ ನೆಲವನ್ನು ಬಳಸಲಾಗುತ್ತಿದೆ ಎಂಬುದನ್ನು ಸರ್ಕಾರವೇ ಹೇಳಬೇಕು. ಸಾವಿರಾರು ಜನರನ್ನು ಒಳಗೊಂಡ ಭೂಬಳಕೆ ಮತ್ತು ಭೂಸರ್ವೇಕ್ಷಣಾ ಬ್ಯೂರೋ ದೇಶಾದ್ಯಂತ ನಾಲ್ಕಾರು ದೊಡ್ಡ-ದೊಡ್ಡ ಕಛೇರಿಗಳನ್ನು ಹೊಂದಿದೆ. ದಕ್ಷಿಣ ಭಾರತದ ಪ್ರಾಂತೀಯ ಕಛೇರಿಯು ಬೆಂಗಳೂರಿನಲ್ಲೇ ಇದೆ. ಸಂಸತ್ತು ಅದಕ್ಕೆ ಕೊಟ್ಟ ಅಧಿಕಾರ ಎಷ್ಟು. ಅದರ ತಿಳಿವಳಿಕೆಯನ್ನು ಬಳಸುವ ವಿಧಾನಗಳೆಷ್ಟು? ಯಾವುದಕ್ಕೂ ಉತ್ತರಗಳು ಸುಲಭವಾಗಿ ದೊರಕಲಾರವು.
ಕಾಲ ಕೆಳಗಿರುವ ನೆಲ ಅಂದು ಗುರುತ್ತಿಸುತ್ತೇವಲ್ಲ, ಅದಕ್ಕೆ ಸದಾ ಹಚ್ಚಡ ಇರಬೇಕಾದ್ದು ನ್ಯಾಯ ಎಂದು ಹೇಳಲು ಖಂಡಿತಾ ಮಾಧವ ಗಾಡ್ಗೀಳ್‍ರಂತಹ ಮೇಧಾವಿ ವಿಜ್ಞಾನಿಗಳ ವರದಿ ಬೇಕಿಲ್ಲ. ಸಾಮಾನ್ಯ ಜ್ಞಾನ ಅದು. ಅದರಲ್ಲೂ ಸೂಕ್ಷ್ಮಪ್ರದೇಶಗಳಲ್ಲಂತೂ ನೆಲಕ್ಕೆ ಹಸಿರು ಹೊದಿಕೆ ಅನಿವಾರ್ಯ. ನಮ್ಮದೇ ಹೊಲಗದ್ದೆಗಳಲ್ಲಿ ನೆರಳಿಗೆಂದು ಬೆಳೆಸಿಕೊಂಡ ಮರವನ್ನು ಕಡಿಯುತ್ತೇವೆಯೇ? ಅದಕ್ಕೆ ಪೂಜೆ ಮಾಡುತ್ತಾ ಕಾಪಾಡಿಕೊಳ್ಳಲು ನಮ್ಮದೇ ನ್ಯಾಯ ಕಟ್ಟಿಕೊಂಡಿಲ್ಲವಾ? ಹಾಗೆಯೇ ಕೊಡಗಿನ ನೆಲವೂ ಕೂಡ ನಮ್ಮ ಎಲ್ಲಾ ಆಸೆಯನ್ನೂ ಮೀರಿ ಸದಾ ಹಸಿರಾಗಿರಬೇಕಾದ ಅನಿವಾರ್ಯವನ್ನು ಹೊಂದಿದೆ. ನಮ್ಮ-ನಿಮ್ಮೆಲ್ಲರ ವಾರಾಂತ್ಯದ ಮೋಜಿಗೆ ಅದನ್ನು ಬಳಸುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಅನಿವಾರ್ಯವನ್ನು ಮುರಿಯುತ್ತಿದ್ದೇವೆ. ಹೇಗೂ ಈ ನೆಲ ನಮ್ಮದಲ್ಲವಲ್ಲ. ಅದಕ್ಕೇ ಮೋಜನ್ನು ಬೇರೊಬ್ಬರ ನೆಲದಲ್ಲಿ ಸುಲಭವಾಗಿ ಮಾಡಿ ಬರುತ್ತೇವೆ. ಪಕ್ಕದ ಕೇರಳವೂ ಸಹಾ ಈ ಬಗೆಯ ಸಾಂಸ್ಕøತಿಕ ಹೊಡೆತಗಳನ್ನು ನಿರಂತರವಾಗಿ 17ನೆಯ ಶತಮಾನದಿಂದಲೂ ಅನುಭವಿಸುತ್ತಾ ಬಂದಿದೆ. ಪೋರ್ಚುಗೀಸರು. ಅರಬ್ಬರು, ಇತರೇ ಅನ್ಯರು ತಮ್ಮದಲ್ಲದ ನೆಲದಲ್ಲಿ ಮೋಜು ಮಾಡಿ ಅಲ್ಲಿನ ನೆಲವನ್ನು ದಣಿಸಿದ್ದಲ್ಲದೇ ಅದನ್ನೇ ಗಳಿಕೆಯ ಹಾದಿಯಾಗಿ ಕಲಿಸಿ ಜನಕ್ಕೆ ಹುಚ್ಚು ಹಿಡಿಸಿದ್ದಾರೆ. “ದೇವರ ನೆಲ” ಬಯಲಾಗಿ “ದಣಿವಾರದ ನೆಲ”ವಾಗಿ ಪರಿವರ್ತಿತವಾಗಿದೆ.
ಈಗಲೂ ಕೇವಲ ಕೊಡಗರು ಮಾತ್ರವೇ ಅನುಭವಿಸುವಂತಹ ಕಟ್ಟಳೆಗಳು ಕೊಡಗಿನ ನೆ¯ಕ್ಕೆ ಇವೆ. ಅದನ್ನು ಬಾಡಿಗೆ ಕೊಡುವ ಮೂಲಕ ಅನ್ಯರನ್ನು ಆಕರ್ಷಿಸಿ ಸಾಂಸ್ಕøತಿಕ ಹಿಂಸೆಯನ್ನು ನೆಲದ ಮೇಲೆ ಹೇರಲಾಗಿದೆ. ಇದು ಸೂಕ್ಷ್ಮವಾಗಿ ಕಾಣುವವರಿಗೆ ತಿಳಿಯದ ಸಂಗತಿಯಲ್ಲ. ಜಗತ್ತಿನ ಅನೇಕ ನೆಲಗಳು ಈ ಬಗೆಯ ಸಾಂಸ್ಕøತಿಕ ವಿಧ್ವಂಸಕತೆಯನ್ನು ಅನುಭವಿರುವುದನ್ನು ಅನೇಕ ಅಧ್ಯಯನಗಳು ದಾಖಲು ಮಾಡಿವೆ. ಒಂದು ಪುಟ್ಟ ಎಚ್ಚರವಾಗಿ ಮಾಧವ ಗಾಡ್ಗೀಳ್ ಅಪ್ಪಟ ಸ್ವಾನುಭವದಿಂದ ಕಂಡದನ್ನು ವರಿದಿಯಾಗಿಸಿದ್ದರು. ಅದನ್ನು ತಮ್ಮ ಅನುಕೂಲಕ್ಕಾಗಿಯೇ ಕಸ್ತೂರಿರಂಗನ್ ವರಿದಿಯಾಗಿಸಿತ್ತು. ಆಗಲೂ ಗಾಡ್ಗೀಳ್ ಅವರು ತಮ್ಮ ಆಕ್ಷೇಪಣಾ ಪ್ರತಿಕ್ರಿಯೆಯನ್ನು ನೇರವಾಗಿ ಕಸ್ತೂರಿರಂಗನ್ ಅವರಿಗೆ ಬರೆದ ಪತ್ರವೂ ಸಾರ್ವಜನಿಕವಾಗಿ ಸಂವಹನಗೊಂಡಿತ್ತು. ಇದು ಪ್ರಕಟವಾಗಿಯೇ 5 ವರ್ಷಗಳಾಗಿವೆ. ಗಾಡ್ಗೀಳ್ ಅವರು ಆ ಆಕ್ಷೇಪಣಾ ಪತ್ರದಲ್ಲಿ ಸೂಕ್ಷ್ಮ ಪರಿಸರವೊಂದನ್ನು ನೋಡಬೇಕಾದಾಗ ವಹಿಸಬೇಕಾದ “ಪರ”ವನ್ನು ಐರೋಪ್ಯ ಹಿತದಲ್ಲಿದ್ದ ಮನಸ್ಸನ್ನು ಭಾರತೀಯವಾಗಿಸಬೇಕಾದ ಸಂದರ್ಭದಿಂದಲೇ ಆರಂಭಿಸಿದ್ದಾರೆ.
ಇಷ್ಟೆಲ್ಲಾ ಹಿನ್ನೆಲೆಯಲ್ಲಿ ಕೊಡಗನ್ನು ಕಾಪಾಡಬೇಕಾದ ಪಾರಂಪರಿಕ ಹಿತವನ್ನು ನಮ್ಮ ತಿಳಿವಳಿಕೆಯಾಗಿಸಿಕೊಂಡು, ಪ್ರಸ್ತುತ ಅಧ್ಯಯನ, ಅನುಭವ, ಸಂಶೋಧನೆಗಳು, ಜಾಗತಿಕ ನಿಲುವುಗಳು, ಸ್ಥಳಿಯ ಪ್ರಸ್ತುತತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ನಮ್ಮ ಮನೆಯು ಸ್ವಚ್ಛವಾಗಿರಲು ಪಕ್ಕದ ಮನೆಯವರ ಸಹಕಾರಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು, ನೆಲವನ್ನು ಸಡಿಲಿಸುವಾಗ ಆಲೋಚಿಸಬೇಕಿದೆ. ಅದಕ್ಕಾಗಿ ನಿಮ್ಮದೇ ನಿವೇಶನದಲ್ಲೂ ಮನೆಯ ನಿರ್ಮಿತಿಯಲ್ಲಿ ಅಕ್ಕ-ಪಕ್ಕದವರ ಅನುಮತಿ ಬೇಕು ಎಂದು ಕಾನೂನು ಹೇಳುತ್ತದೆ. ಅದು ಒಂದು ಬಗೆಯ ಜಾಗರೂಕತೆಯ ಅನಿವಾರ್ಯತೆಯನ್ನು ಒಪ್ಪಿಸಿಕೊಳ್ಳುವ ತಯಾರಿ. ಹಾಗಾಗಿ ನಮ್ಮೊಳಗೆ ಉದ್ಭವಿಸುವ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಗಳಿಗೆ ಬೇಕಾದ ಅಧ್ಯಯನವನ್ನು, ತಯಾರಿಯನ್ನು ಮಾಡಿಕೊಂಡು ಮುನ್ನೋಡುವ ಹೊಣೆ ನಮ್ಮದಾಗಿದೆ.
1. ಕೊಡಗು ಮತ್ತು ಕೇರಳದಲ್ಲಿ ಆದ ಅತಿವೃಷ್ಟಿ ಮತ್ತು ಆನಂತರದ ದುರಂತದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇಲ್ಲಿ ನಡೆದ ದುರಂತವು ಸ್ಥಳೀಯ ಜನ ಅಲ್ಲಿನ ವಾತಾವರಣವನ್ನು ಬೇಕಾಬಿಟ್ಟಿಯಾಗಿ ಬಳಸಿದ ಕಾರಣಕ್ಕಾಗಿ ಅಲ್ಲಿನ ನೆಲ ಶಕ್ತಿಹೀನವಾಗಿ ಕೊಚ್ಚಿಹೋಗಿ ಅನಾಹುತ ಸಂಭವಿಸಿದೆ ಎಂಬುದು ಮೊದಲ ವಾದ. ಓ ವಾದದ ಕುರಿತು ನಿಮ್ಮ ನಿಲುವೇನು?
2. ಕೊಡಗು ಮತ್ತು ಕೇರಳಗಳಲ್ಲಿ ಆದ ಅನಾಹುತಗಳಿಗೆ ಕಾರಣ ಪ್ರಕೃತಿ. ಅತಿಯಾದ ಮಳೆಯೇ ಅಲ್ಲಿನ ಭೂಕುಸಿತ ಮತ್ತು ಮಣ್ಣಿನ ಸವಕಳಿಗೆ ಕಾರಣ ಎಂಬ ಇನ್ನೊಂದು ವಾದವಿದೆ. ಇದನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
3. ನೆಲದ ಮೇಲ್ಮೈಯನ್ನು ಅಸಹಜವಾಗಿ ನಿರ್ವಹಿಸುತ್ತಿರುವ ಬಗ್ಗೆ ನಿಲುವುಗಳೇನು?
4. ಮೇಲ್ಮಣ್ಣು ಸಡಿಲಗೊಂಡದ್ದೂ ಅಲ್ಲದೇ ಹರಿವ ನೀರನ್ನು ಅದರ ಪಾಡಿಗೆ ಹರಿಯಗೊಡದೆ, ಹರಿವ ಪಾತ್ರದಲ್ಲಿ ನಾವು ಹಾಳುಗೆಡಹಿದ ಮಾನವನ ಒತ್ತುವರಿಗಳ ಬಗ್ಗೆ ಏನು ಹೇಳುತ್ತೀರಿ?
5. ಅತೀವೃಷ್ಠಿ – ಅನಾವೃಷ್ಠಿ ಮಳೆ ಎರಡರಲ್ಲೂ ಮಾನವನ ಕೊಡುಗೆ ಇದೆ ಎಂಬ ತಿಳಿವಳಿಕೆಯನ್ನು ಹೇಗೆ ಸಾಧ್ಯಮಾಡುವುದು? ಅಥವಾ ಅದರ ನಿರಾಕರಣೆಯ ಆಸೆಯ ಬೆಂಬಲಕ್ಕೆ ಏನು ಹೇಳುತ್ತೀರಿ?
6. ಕೇವಲ ಪ್ರವಾಸೋದ್ಯಮದ ಹಿತಕ್ಕಾಗಿ ಬಲಿಯಾದ ಸ್ಥಳಿಯತೆಯ ಕುರಿತ ನಮ್ಮ ತಿಳಿವಳಿಕೆ ಇದೆಯೇ?
7. ಈ ಬಗೆಯ ಅನಾಹುತಗಳನ್ನು ತಡೆಗಟ್ಟಬಹುದಾದ ಕ್ರಮಗಳೇನು?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here