ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, “ಚರ್ಮದ ನೇರ ಸಂಪರ್ಕವಿಲ್ಲದೆ ಸ್ತನವನ್ನು ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ” ಎಂದು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಪುಷ್ಪಾ ವಿ ಗಣದೇವಾಲಾ ಅವರು ಮತ್ತೊಮ್ಮೆ ಹಿನ್ನಡೆ ಅನುಭವಿಸಿದ್ದಾರೆ. ಸುಪ್ರೀಂಕೋರ್ಟ್ ಕೊಲಿಜಿಯಂ ಅವರನ್ನು ಶಾಶ್ವತ ನ್ಯಾಯಾಧೀಶರನ್ನಾಗಿ ಮಾಡಲಾಗುವುದಿಲ್ಲ ಎಂದು ಹೇಳಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ಹೈಕೋರ್ಟ್‌ನ ಹುದ್ದೆಯನ್ನು ಇದು ಎರಡನೇ ಬಾರಿಗೆ ತಿರಸ್ಕರಿಸಿದೆ.
ಸುಪ್ರೀಂಕೋರ್ಟ್ ಕೊಲೀಜಿಯಂ ಅವರನ್ನು ತಿರಸ್ಕರಿಸಿರುವುದರಿಂದ ಪ್ರಸ್ತುತ ಬಾಂಬೆ ಹೈಕೋರ್ಟ್‌ನ ತಾತ್ಕಾಲಿಕ ನ್ಯಾಯಾಧೀಶರಾಗಿರುವ ಗಣದೇವಾಲಾ ಅವರು ಫೆಬ್ರವರಿಯಲ್ಲಿ ತಮ್ಮ ಅವಧಿ ಮುಗಿದ ನಂತರ ತಮ್ಮ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಮರಳಲಿದ್ದಾರೆ.
ಜನವರಿ 19 ರ ತೀರ್ಪಿನಲ್ಲಿ, ಜಸ್ಟಿಸ್ ಗಣದೇವಾಲಾ ಅವರು, “ಚರ್ಮದಿಂದ ಚರ್ಮಕ್ಕೆ ನೇರವಾಗಿ ಸಂಪರ್ಕ ಇಲ್ಲದೆ ಅಪ್ರಾಪ್ತ ವಯಸ್ಕರ ಸ್ತನವನ್ನು ಹಿಡಿಯುವುದು ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುವುದಿಲ್ಲ” ಎಂದು ತೀರ್ಪು ನೀಡಿದ್ದರು. ಈ ತೀರ್ಪಿನ ವಿರುದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾದ ನಂತರ ಸುಪ್ರೀಂ ಕೋರ್ಟ್ ನವೆಂಬರ್ 18 ರಂದು ತೀರ್ಪನ್ನು ರದ್ದುಗೊಳಿಸಿತ್ತು.
ನಂತರ, ಮತ್ತೊಂದು ಪ್ರಕರಣದಲ್ಲಿ ಕೂಡಾ ನ್ಯಾಯಮೂರ್ತಿ ಗಣದೇವಾಲಾ ಅವರು ವಿವಾದಾತ್ಮಕವಾಗಿ ತೀರ್ಪು ನೀಡಿದ್ದರು. “‘ಮಹಿಳಾ ಸಂತ್ರಸ್ತೆಯ ಕೈಗಳನ್ನು ಹಿಡಿದಿಟ್ಟುಕೊಳ್ಳುವುದು’ ಅಥವಾ ‘ಪ್ಯಾಂಟಿನ ಜಿಪ್ ಅನ್ನು ತೆರೆಯುವುದು’ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ” ಎಂದು POCSO(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಅಡಿಯಲ್ಲಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸಿದ್ದರು. ಆ ವ್ಯಕ್ತಿಯು ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು.
ಈ ತೀರ್ಪಿನ ನಂತರ, ನ್ಯಾಯಮೂರ್ತಿ ಗಣೆಡಿವಾಲಾ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಶಿಫಾರಸು ಮಾಡುವ ನಿರ್ಧಾರವನ್ನು ಕೊಲಿಜಿಯಂ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಪ್ರಾಪ್ತರ ಎದುರು ಪ್ಯಾಂಟ್ ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್


