ಅಪ್ರಾಪ್ತ ವಯಸ್ಕನ (ಬಾಲಕ/ಬಾಲಕಿ) ಕೈಗಳನ್ನು ಹಿಡಿದುಕೊಳ್ಳುವುದು ಮತ್ತು ಪ್ಯಾಂಟ್ ಜಿಪ್ ಅನ್ನು ಅಪ್ರಾಪ್ತ ವಯಸ್ಕನ ಮುಂದೆ ತೆಗೆಯುವುದು ಮಾಡುವುದು ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ಅಪರಾಧಗಳ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು ಬಾಂಬೇ ಹೈಕೋರ್ಟ್ ಆದೇಶ ನೀಡಿದೆ ಎಂದು ಗುರುವಾರ ಲೈವ್ ಲಾ ವರದಿ ಮಾಡಿದೆ.
ಐದು ವರ್ಷದ ಬಾಲಕಿಯನ್ನು ಕಿರುಕುಳ ಮಾಡಿದ್ದಕ್ಕಾಗಿ 50 ವರ್ಷದ ವ್ಯಕ್ತಿಗೆ ನೀಡಲಾದ ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.
ಪ್ರಕರಣದ ಹಿನ್ನೆಲೆ
ನಾಗಪುರದ ಸೆಷನ್ ಕೋರ್ಟು ಪ್ರಸ್ತುತ ಪ್ರಕರಣದಲ್ಲಿ ಅಪರಾಧವು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ವಿರುದ್ಧವಾಗಿರುವುದರಿಂದ, ಪೋಕ್ಸೋ ಸೆಕ್ಷನ್ 10 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ವಿವರಿಸಿ, ಅರೋಪಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿತ್ತು.
ಆರೋಪಿ ತನ್ನ ಪ್ಯಾಂಟ್ ಜಿಪ್ ತೆಗೆದು, ಮಗಳ ಕೈಗಳನ್ನು ಹಿಡಿದಿರುವುದನ್ನು ತಾನು ನೋಡಿದ್ದಾಗಿ ಮಗುವಿನ ತಾಯಿ ದೂರು ದಾಖಲಿಸಿದ್ದರು. ಆ ವ್ಯಕ್ತಿ ತನ್ನ ಜೊತೆಗೆ ಮಲಗಲು ಹೇಳಿದ್ದಾಗಿ ಮಗು ತಿಳಿಸಿದೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದರು.
ಬಾಂಬೆ ಹೈಕೋರ್ಟು ಹೇಳಿದ್ದೇನು?
ಈ ಪ್ರಕರಣವು ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ಅಪರಾಧಗಳ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು ಬಾಂಬೇ ಹೈಕೋರ್ಟ್ ಆದೇಶ ನೀಡಿದೆ.
“ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ” ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ ಎಂಬ ಕಾರಣಕ್ಕೆ ಪೋಕ್ಸೋ ಅಡಿಯಲ್ಲಿ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರೇ ಈ ಆದೇಶವನ್ನೂ ನೀಡಿದ್ದಾರೆ.
ಮೊದಲ ಪ್ರಕರಣದಲ್ಲಿ, ಪೇರಲ ಹಣ್ಣನ್ನು ನೀಡುವ ಆಮಿಷವೊಡ್ಡಿ 12 ವರ್ಷ ವಯಸ್ಸಿನ ಮಗುವನ್ನು ಆರೋಪಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಆಕೆಯ ಸ್ತನವನ್ನು ಒತ್ತಿ ಮತ್ತು ಅವಳ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದ್ದ. ಆತನಿಗೆ ಕೆಳ ಕೋರ್ಟಿನಲ್ಲಿ ಶಿಕ್ಷೆ ಆಗಿತ್ತು. ಆದರೆ ಬಾಂಬೇ ಹೈಕೋರ್ಟಿನ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರು, “ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ” ಅದು ಲೈಂಗಿಕ ಅಪರಾಧ ಆಗುವುದಿಲ್ಲ ಎಂದು ಆರೋಪಿಯನ್ನು ಖುಲಾಸೆಗೊಳಿಸಿದ್ದರು.
ಸದ್ಯದ ಪ್ರಕರಣ
ನ್ಯಾಯಮೂರ್ತಿ ಗಣದೇವಾಲಾ ಹಿಂದಿನ ಆದೇಶದಂತೆ ಈ ಆದೇಶದಲ್ಲೂ ಪೋಕ್ಸೋ ಕಾಯ್ದೆಯ ಸೆಕ್ಷನ್ 7 ಅನ್ನು ಉಲ್ಲೇಖಿಸಿದ್ದಾರೆ. ಆದರೆ ಸೆಕ್ಷನ್ 7 ಪ್ರಕಾರ, “ಯಾರು, ಲೈಂಗಿಕ ಉದ್ದೇಶದಿಂದ ಮಗುವಿನ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸುತ್ತಾರೆ ಅಥವಾ ಮಗು ತಮ್ಮ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸುವಂತೆ ಒತ್ತಾಯಿಸುತ್ತಾರೋ ಅಂಥವರು ಅಲ್ಲಿ ಲೈಂಗಿಕ ಕ್ರಿಯೆ ನಡೆಸದೇ ಇದ್ದರೂ ಕೂಡ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಬೆಕು…..’
ಸೆಕ್ಷನ್ 7 ಉಲ್ಲೇಖಿಸಿದ ನ್ಯಾಯಾಧೀಶೆ, “ಲೈಂಗಿಕ ಉದ್ದೇಶದೊಂದಿಗೆ ದೈಹಿಕ ಸಂಪರ್ಕ, ಸ್ಪರ್ಶ ಮಾಡುವುದು (ಲೈಂಗಿಕ ಕ್ರಿಯೆ ನಡೆಸದೇ ಇದ್ದರೂ) ಅಪರಾಧಕ್ಕೆ ಅತ್ಯಗತ್ಯ ಅಂಶವಾಗಿದೆ’ ಎಂದು ಹೇಳಿದರಾದರೂ, ಆರೋಪಿ ಬಾಲಕಿಯ ಖಾಸಗಿ ಭಾಗಗಳನ್ನು ಮುಟ್ಟದ ಕಾರಣ ಈ ಪ್ರಕರಣ ಲೈಂಗಿಕ ದೌರ್ಜನ್ಯದ ಅಡಿ ಬರುವುದಿಲ್ಲ ಎಂದು ಆದೇಶ ನೀಡಿದ್ದಾರೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಸುಪ್ರಿಂ ಕೋರ್ಟಿನಲ್ಲಿ ಗಣದೇವಾಲಾ ಅವರ ಜನೆವರಿ 19ರ ತೀರ್ಪನ್ನು ವಿಶೇಷವಾಗಿ ಪ್ರಸ್ತಾಪ ಮಾಡಿದ ನಂತರ ಆ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ಬಾಂಬೆ ಹೈಕೋರ್ಟ್‌ನ ವ್ಯಾಖ್ಯಾನದ ವಿರುದ್ಧ ತುರ್ತು ಮೇಲ್ಮನವಿ ಸಲ್ಲಿಸುವಂತೆ ಜನವರಿ 25 ರಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಮಹಾರಾಷ್ಟ್ರ ಸರ್ಕಾರವನ್ನು ಕೋರಿತ್ತು. ಹಲವಾರು ಮಕ್ಕಳ ಹಕ್ಕುಗಳ ಸಂಸ್ಥೆಗಳು ಈ ತೀರ್ಪನ್ನು “ಸಂಪೂರ್ಣ ಸ್ವೀಕಾರಾರ್ಹವಲ್ಲದ ತೀರ್ಪಿದು. ಅತಿರೇಕದ ಮತ್ತು ಅಸಹ್ಯಕರ ತೀರ್ಪು” ಎಂದು ಟೀಕಿಸಿವೆ.
ಇದನ್ನೂ ಓದಿ: 10 ಲಕ್ಷ ರೂ. ‘ಶಾಂತಿ ಉಲ್ಲಂಘನೆ’ ಬಾಂಡ್ ನೀಡಲು ರೈತರಿಗೆ ನೋಟಿಸ್! ಯುಪಿ ಸರ್ಕಾರಕ್ಕೆ ವಿವರಣೆ ಕೇಳಿದ ನ್ಯಾಯಾಲಯ


