ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯನ್ ಅವರನ್ನು ಸಂಸತ್ ಅಧಿವೇಶನದ ಉಳಿದ ಅವಧಿಗೆ ಪಾಲ್ಗೊಳ್ಳದಂತೆ ಮಂಗಳವಾರ ಅಮಾನತುಗೊಳಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಚುನಾವಣಾ ಸುಧಾರಣೆಗಳ ಕುರಿತಾದ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಒಬ್ರಿಯಾನ್ ಸಂಸತ್ತಿನ ನಿಯಮ ಪುಸ್ತಕದ ಪ್ರತಿಯನ್ನು ಅಧ್ಯಕ್ಷರ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅಮಾನತುಗೊಳಿಸುವಿಕೆಗೆ ಪ್ರಸ್ತಾವನೆಯನ್ನು ಮಂಡಿಸಿದ್ದರು.
ಸದನದಲ್ಲಿ ಪ್ರತಿಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿಯೇ ಸಂಸದ ಡೆರೆಕ್ ಒಬ್ರಿಯನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಇದನ್ನೂ ಓದಿ: ಓಮಿಕ್ರಾನ್ ಆತಂಕ: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರದಿಂದ ನಿರ್ಬಂಧ
ರಾಜ್ಯಸಭೆಯಲ್ಲಿ ಮಂಗಳವಾರದ ಕಲಾಪದ ವೇಳೆ, ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ರ ನಿಬಂಧನೆಯ ವಿರುದ್ಧ ವಿರೋಧ ಪಕ್ಷದ ಸಂಸದರು ಸದನದ ಬಾವಿಯಲ್ಲಿ ಇಳಿದು ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಒಬ್ರಿಯನ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಮಸೂದೆಯ ಮೇಲೆ ಮತಗಳ ವಿಭಜನೆಗೆ ಒತ್ತಾಯಿಸಿದ್ದರು. ಆದರೆ ರಾಜ್ಯಸಭೆಯ ಉಪ ಅಧ್ಯಕ್ಷ ಹರಿವಂಶ್ ಅವರು ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಿದ್ದರು. ಕಾಂಗ್ರೆಸ್, ಟಿಎಂಸಿ, ಎಎಪಿ, ಶಿವಸೇನೆ, ಎಡಪಕ್ಷಗಳು, ಆರ್‌ಜೆಡಿ, ಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಸೇರಿದಂತೆ ಪ್ರತಿಪಕ್ಷಗಳು ತಮಗೆ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ್ದವು.
ಈ ವೇಳೆ ಡೆರೆಕ್ ಒಬ್ರಿಯನ್ ಅವರು ಅಧ್ಯಕ್ಷರ ಕಡೆಗೆ ನಿಯಮ ಪುಸ್ತಕದ ಪ್ರತಿಯನ್ನು ಅಧ್ಯಕ್ಷರ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಆರೋಪ ನಿರಾಕರಿಸಿದ ಸಂಸದ “ ನಿಜವಾಗಿಯೂ ನಾನು ನಿಯಮ ಪುಸ್ತಕವನ್ನು ಎಸೆದಿದ್ದೇನೆ ಎಂದು ಯಾರು ಹೇಳಿದರು? ಆ ದೃಶ್ಯಗಳನ್ನು ನನಗೆ ತೋರಿಸಿ”ಎಂದು ಕೇಳಿದ್ದರು.
“ನೀವು ನನ್ನನ್ನು ಸದಸನದಿಂದ ಅಮಾನತುಗೊಳಿಸಬಹುದು, ನೀವು ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ” ಎಂದು ಡೆರೆಕ್ ಒಬ್ರಿಯನ್ ಹೇಳಿದ್ದಾರೆ. ಜೊತೆಗ ಕಳೆದ ಬಾರಿ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದಕ್ಕಾಗಿ ಅಮಾನತು ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ಮತ್ತು ಹಿಂಸಾಚಾರದ ಆರೋಪದ ಮೇಲೆ 12 ಸಂಸದರನ್ನು ನವೆಂಬರ್ 29 ರಂದು ಅಮಾನತುಗೊಳಿಸಲಾಗಿತ್ತು. ಕಳೆದ ಎರಡು ವಾರಗಳಿಂದ ಹದಿನೈದು ಪ್ರತಿಪಕ್ಷಗಳು ಸಂಸದರ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ.


