| ಅಭಿಷೇಕ್ ಮೌರ್ಯ |
ರಾಜಕೀಯದಲ್ಲಿ ಜಾತಿ ಎಂಬುದು ಮುಖ್ಯ ದಾಳವಾಗಿ ಉರುಳಲ್ಪಡುತ್ತಿದೆ. ಇತ್ತೀಚೆಗಂತೂ ಗ್ರಾಮ ಪಂಚಾಯ್ತಿ ಚುನಾವಣೆಯ ಟಿಕೆಟ್, ಅಧ್ಯಕ್ಷ ಉಪಾಧ್ಯಕ್ಷನ ಸ್ಥಾನದಿಂದ ಹಿಡಿದು ಲೋಕಸಭೆಯ ಕೇಂದ್ರ ಸಚಿವರ ಸ್ಥಾನದವರೆಗೂ ಜಾತಿಯೇ ಮುಖ್ಯವಾಗಿದೆ. ತಾನು ಮೇಲ್ವರ್ಗದವನಾಗಿದ್ದು, ಸಮಾಜದ ಮುಖ್ಯವಾಹಿನಿಯಲ್ಲಿ ಹತ್ಯೆ, ಹಲ್ಲೆಗಳಂತಹ ಹೇಯ ಕೃತ್ಯಗಳನ್ನು ಮಾಡಿದರು ಸರಿ, ರಾಜಕೀಯದಿಂದ ಎಲ್ಲವನ್ನೂ ಮುಚ್ಚಿಹಾಕುವುದರೊಂದಿಗೆ ಉನ್ನತ ಹುದ್ದೆಗೆ ಏರಬಹುದು. ಕೊಲೆ ಹತ್ಯೆಗಳಂತಹ ಹಿಂಸಾತ್ಮಕ ಪ್ರಕರಣಗಳಲ್ಲಿ ಆರೋಪಿ ಅಪರಾಧಿಗಳಾಗಿದ್ದರು, ಗೃಹ ಸಚಿವ, ರಕ್ಷಣಾ ಸಚಿವರಂತಹ ಮುಖ್ಯ ಹುದ್ದೆಗಳನ್ನೇ ಪಡೆಯಬಹುದು. ಒಂದು ಕಡೆ ಇದು ಸವರ್ಣೀಯ ಅಥವಾ ಮೇಲ್ವರ್ಗದ ಕತೆಯಾದರೆ ಇಂದಿನ ರಾಜಕೀಯದಲ್ಲಿ ದಲಿತ ನಾಯಕರುಗಳು ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ.
ಅಂದಹಾಗೆ ರಾಜ್ಯರಾಜಕಾರಣದಲ್ಲಿ ಚದುರಂಗದಾಟ ಭರ್ಜರಿಯಾಗಿಯೇ ಸಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೆಡವಿ ನೂತನ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಅತ್ತ ಕೈ-ತೆನೆ ನಾಯಕರು ತಮ್ಮ ಖುರ್ಚಿಗಳನ್ನು ಭದ್ರ ಪಡಿಸಿಕೊಳ್ಳುವಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ಇವರ ನಡುವಿನ ವಾಕ್ ಸಮರಕ್ಕೆ ದಲಿತ ನಾಯಕರು ತುತ್ತಾಗುತ್ತಿದ್ದಾರೆ.
ಬಿಜೆಪಿ ಪಕ್ಷ ದಲಿತರಿಗೆ ಏನೇನು ಮಾಡದಿದ್ದರೂ, ಸಂವಿಧಾನ ಕಿತ್ತು ಹಾಕುತ್ತೇವೆಂದು ಹೇಳುತ್ತದೆ. ಆ ಪಕ್ಷದ ರಾಜ್ಯಾಧ್ಯಕ್ಷ “ತಾಕತ್ತಿದ್ದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ” ಅಂತಾ ಊರ ತುಂಬಾ ಡಂಗೂರ ಸಾರಿಕೊಂಡು ಕೈ-ತೆನೆ ನಾಯಕರಿಗೆ ಸವಾಲಾಕಿಕೊಂಡು ಬರುತ್ತಿದ್ದಾರೆ. ನಾನೇನು ಕಡಿಮೆ ಇಲ್ಲ ಎನ್ನುವಂತೆ ಮೈತ್ರಿ ಪಕ್ಷದ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯನವರು “ತಾಕತ್ತಿದ್ದರೆ ದಲಿತರನ್ನು ಕೇಂದ್ರ ಸಚಿವರನ್ನಾಗಿ ಮಾಡಿ” ಎಂದು ಪ್ರತಿ ಸವಾಲ್ ಹಾಕಿತ್ತಿದ್ದಾರೆ. ಈ ಬೆಳವಣಿಗೆಗಳನ್ನು ನೋಡಿದ್ರೆ ದಲಿತನಾಯಕರೇನು ಇವರ ರಾಜಕೀಯ ಚದುರಂಗಕ್ಕೆ ಅನಿವಾರ್ಯವಾಗಿರುವ ಕಾಲಾಳುಗಳ ಅಥವಾ ದಾಳವ ಅನ್ನೋ ಪ್ರಶ್ನೆ ಕಾಡತೊಡಗಿದೆ.
ಅಂದರೆ ದಲಿತರು ಮೌಲ್ಯಮಾಪನಕ್ಕೆ ಒಳಪಡುವ ತಕ್ಕಡಿಯ ತೂಕದ ಕಲ್ಲುಗಳ ಅಂತ. ಯಾವ ಕಡೆ ಬಾಗುತ್ತೆ ಅದರ ವಿರುದ್ದ ಕಲ್ಲೆಸೆಯಲು ಇತರರು ಸಿದ್ದರಿರುವುದು ದೊಡ್ಡ ದುರಂತವಾಗಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ದಲಿತ ಮುಖ್ಯಮಂತ್ರಿ ಮಾಡಬೇಕೆಂಬ ಕೂಗ ಜೋರಾಗಿದ್ದಾಗ ಖರ್ಗೆಯವರು ಹೇಳಿದ್ದು ಮಾತು ಬಹಳ ಮಹತ್ವದ್ದು. “ದಲಿತ ಎಂಬ ಕಾರಣಕ್ಕೆ ನನ್ನನ್ನು ಮುಖ್ಯಮಂತ್ರಿ ಎಂದರೆ ನಾನು ಒಪ್ಪುವುದಿಲ್ಲ. ನನ್ನ ಸಾಮರ್ಥ್ಯದ ಕಾರಣಕ್ಕೆ ಮುಖ್ಯಮಂತ್ರಿ ಮಾಡಿದರೆ ಮಾತ್ರ ಒಪ್ಪುತ್ತೇನೆ” ಅಂದಿದ್ದರು. ಈ ಮಾತು ಕೇಳಿದ ಮೇಲೂ ಎಲ್ಲಾ ಪಕ್ಷಗಳ ಮುಖಂಡರು ತಮ್ಮ ಬಾಯಿಯನ್ನು ಮುಚ್ಚಿಕೊಂಡಿಲ್ಲ.
ಇನ್ನೂ ಸಂವಿಧಾನದಡಿಯಲ್ಲಿ ಚುನಾಯಿತರಾಗಿರುವ ಮಾನ್ಯ ದಲಿತ ಶಾಸಕ, ಸಂಸದರೆ ಎಚ್ಚೆತ್ತುಕೊಂಡು ಒಂದಾಗಬೇಕಿದ್ದು, ರಾಜಕೀಯಕ್ಕಾಗಿ ದಲಿತರ ಹೆಸರೇಳುತ್ತಿರುವ ನಾಯಕರಿಕೆ ಪಾಠ ಕಲಿಸಬೇಕಿದೆ. ಅವರ ರಾಜಕೀಯಕ್ಕೆ ದಾಳಗಳಾಗುವ ಬದಲಿಗೆ ತಮ್ಮ ಸಮುದಾಯದ ಪರವಾಗಿ ಸದನಗಳಲ್ಲಿ ಪ್ರಶ್ನಿಸಿ ತಮ್ಮ ಹಕ್ಕುಗಳನ್ನು ಕೇಳಬೇಕಿದೆ. ನಿಮಗೆ ಮತ ನೀಡಿದ ಮತದಾರರ ಸಮಸ್ಯೆಗಳನ್ನು ಆಲಿಸಿ, ಅವರ ಕಷ್ಟಗಳಿಗೆ ಸ್ಪಂದಿಸಬೇಕಿದೆ. ನಿಮ್ಮ ಸಾಮರ್ಥ್ಯವನ್ನು ನಿಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ವಿನಿಯೋಗಿಸಬೇಕು. ಆ ಮೂಲಕ ದೇಶದ ಎಲ್ಲಾ ಹುದ್ದೆಗಳನ್ನು ನಿರ್ವಹಿಸಲು ನಾವು ಸಿದ್ಧ ಎನ್ನುವುದನ್ನು ತೋರಿಸಬೇಕು.
ಇನ್ನು ಮೂರು ಪಕ್ಷದವರು ಸಹ ಸಹಜವಾಗಿ ದಲಿತ ವ್ಯಕ್ತಿಗಳು ಮುಖ್ಯಮಂತ್ರಿಗಳಾಗದಂತೆ ತಡೆಯಲು ಸೋಲಿಸುವ ಗೆಲ್ಲಿಸುವ ಆಟವನ್ನು ಇದುವರೆಗೂ ಆಡಿದ್ದಾರೆ. ಇನ್ನು ಮುಂದೆ ಆ ಆಟ ನಡೆಯದಂತೆ ಎಚ್ಚರವಹಿಸಬೇಕು.

ಜೊತೆಗೆ ನೀವಿರುವ ಪಕ್ಷಗಳಲ್ಲಿ ಪ್ರಜಾತಂತ್ರ, ಸಂವಿಧಾನದ ಆಶಯಗಳು ಜಾರಿಯಾಗುತ್ತಿಲ್ಲ. ಆ ಬಗ್ಗೆ ನೀವು ಪ್ರಶ್ನಿಸಿ ಸರಿಪಡಿಸಬೇಕು. ದೇಶದ ಎಲ್ಲೆ ಜನರ ಮೇಲಿನ ದೌರ್ಜನ್ಯ ನಡೆದರೆ ನೀವು ಅದನ್ನು ಪ್ರತಿಭಟಿಸಿ ದನಿ ಎತ್ತಬೇಕು. ನಾನು ಆ ಪಕ್ಷ, ನಾನು ಈ ಪಕ್ಷ ಹಾಗಾಗಿ ಆ ಘಟನೆ ಬಗ್ಗೆ ಮಾತಾಡುವುದಿಲ್ಲ ಎಂಬುದನ್ನು ಬಿಡಬೇಕು. ತಪ್ಪು ತಮ್ಮದೇ ಪಕ್ಷ ಮಾಡಿದರೂ ಸಹ ಅದನ್ನು ಖಂಡಿಸಿ, ಮುಂದೆ ಆ ರೀತಿಯ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕಿದೆ.
ಜೊತೆಗೆ ದಲಿತ ಸಮುದಾಯದಿಂದಲೂ ಇದುವರೆಗೆ ಬಹಳಷ್ಟು ಜನ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದಿದ್ದಾರೆ. ಆದರೆ ಅವರು ಅವರ ಸಮುದಾಯಕ್ಕೆ ಹೆಚ್ಚೆನೂ ಮಾಡಿಲ್ಲ, ಮೂಲಭೂತ ಬದಲಾವಣೆ ಬಂದಿಲ್ಲ ಎಂಬ ಆರೋಪಗಳಿವೆ. ಅದನ್ನು ತೊಡೆದು ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆ ಮೂಲಕ ರಾಜಕಾರಣಕ್ಕೆ ಹೊಸ ಅರ್ಥ ನೀಡಬೇಕು.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)


