ಸುಡಾನ್ನ ಪಶ್ಚಿಮ ಕೊರ್ಡೋಫಾನ್ ಪ್ರಾಂತ್ಯದಲ್ಲಿ ಮಂಗಳವಾರ ಚಿನ್ನದ ಗಣಿ ಕುಸಿದು ಕನಿಷ್ಠ 38 ಜನರು ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ದೇಶದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿಯು ಹೇಳಿಕೆ ನೀಡಿದ್ದು, ಸುಡಾನ್ ರಾಜಧಾನಿ ಖಾರ್ಟೌಮ್‌ನ ದಕ್ಷಿಣಕ್ಕೆ 700 ಕಿಲೋಮೀಟರ್ (435 ಮೈಲುಗಳು) ದೂರದಲ್ಲಿರು ಫುಜಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ಇದನ್ನು ಮುಚ್ಚಲಾಗಿತ್ತು ಎಂದು ತಿಳಿಸಿದೆ.
’ಇಲ್ಲಿ ಕಾರ್ಯಾಚರಣೆ ನಿಲ್ಲಿಸಲು ಸರ್ಕಾರ ನಿರ್ಧರಿಸಿತ್ತು. ಕೆಲಸ ನಿಲ್ಲಿಸುವಂತೆಯೂ ಸೂಚಿಸಿದ್ದೆವು. ಜೊತೆಗೆ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿದ್ದೆವು. ಆದರೆ ಗಣಿಗಾರಿಕೆ ನಡೆಸುವವರು, ಕೆಲಸಗಾರರು ಮತ್ತೆ ಗಣಿಗಾರಿಕೆ ಕೆಲಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಉಡುಪಿ: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರು
ಘಟನೆಯಲ್ಲಿ 25 ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಹೊರ ತೆಗೆಯಲು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಗಣಿಗಾರಿಕೆ ಕಂಪನಿಯು ತಿಳಿಸಿದೆ.
ಮೃತರ ಅಂತ್ಯಕ್ರಿಯೆ ಮಾಡಲು ಜನರು ಸಮಾಧಿಗಳನ್ನು ಸಿದ್ಧಪಡಿಸುತ್ತಿರುವುದನ್ನು ಕಂಪನಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದೆ.
ಸುಡಾನ್ನಲ್ಲಿ ಗಣಿಗಾರಿಕೆ ಅತ್ಯಂತ ಮುಖ್ಯ ಕಸುಬಾಗಿದೆ. ರೆಡ್ ಸೀ, ನಹ್ರ್ ಅಲ್ ನೀಲ್, ಪಶ್ಚಿಮ ಕೊರ್ಡೋಫಾನ್, ದಕ್ಷಿಣ ಕೊರ್ಡೊಫಾನ್, ಪಶ್ಚಿಮ ಕೊರ್ಡೊಫಾನ್ ಮತ್ತು ಉತ್ತರದ ರಾಜ್ಯಗಳು ಸೇರಿ ಬಹುತೇಕ ರಾಜ್ಯಗಳಿಂದ ಸುಮಾರು 20 ಲಕ್ಷ ಜನ ಗಣಿಗಾರಿಕೆ ಉದ್ಯಮದಲ್ಲಿ ದುಡಿಯುತ್ತಿದ್ದಾರೆ.


