ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರತಿ ಬಿಜೆಪಿ ಅಭ್ಯರ್ಥಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರು ಹದಿನೈದು ಲಕ್ಷ ರೂ. ನೀಡಿದ್ದರು ಎಂದು ಆರೋಪಿಸುವ ಆಮ್ ಆದ್ಮಿ ಪಾರ್ಟಿಯು ಆಡಿಯೊವನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಇಡೀ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದು, ಚಿಕ್ಕಮಗಳೂರಿನ ಮುಗ್ಧ ಮತದಾರರಿಗೆ ಆಸೆ-ಆಮಿಷಗಳನ್ನು ಒಡ್ಡಿ, ಮರಳು ಮಾಡಿ ಮತ ಸೆಳೆಯಲಾಗಿದೆ. ಅದರಲ್ಲೂ ಬಿಜೆಪಿಯೂ ಸಾಧ್ಯವಿರುವ ಎಲ್ಲ ಅಕ್ರಮಗಳನ್ನು ಎಸಗಿ ಚುಣಾವಣೆಯಲ್ಲಿ ಗೆದ್ದಿದೆ ಎಂದು ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆರೋಪಿಸಿದ್ದಾರೆ.
ವಾರ್ಡ್ ನಂ. 27ರಲ್ಲಿ ಸ್ಪರ್ಧಿಸಿದ್ದ ಎಎಪಿ ಅಭ್ಯರ್ಥಿ ದೀಪಕ್ ಅವರು, ವಾರ್ಡ್ ನಂ. 33ರ ಬಿಜೆಪಿ ಅಭ್ಯರ್ಥಿ ನರಸಿಂಹಮೂರ್ತಿಯವರ ಜೊತೆ ನಡೆಸಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆಯನ್ನು ದರ್ಶನ್ ಜೈನ್ ಹಂಚಿಕೊಂಡಿದ್ದಾರೆ.
ಈ ಪೋನ್ ಸಂಭಾಷಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸ್ಥಳೀಯ ಶಾಸಕ ಸಿ.ಟಿ.ರವಿ ಹಾಗೂ ಬಿಜೆಪಿ ನಡೆಸಿದ ಅಕ್ರಮಗಳು ಬಯಲಿಗೆ ಬಂದಿವೆ. ಚುಣಾವಣಾ ಆಯೋಗವು ನಗರಸಭೆ ಚುನಾವಣೆಯಲ್ಲಿ ವಾರ್ಡ್ ಒಂದರ ಅಭ್ಯರ್ಥಿಗೆ ಚುನಾವಣಾ ಖರ್ಚಿಗೆ ನಿಗದಿಪಡಿಸಿರುವ ಮೊತ್ತ 2 ಲಕ್ಷ ರೂ.ಗಳು. ಆದರೆ ಈ ಮೊತ್ತದ ಹತ್ತು- ಇಪ್ಪತ್ತು ಪಟ್ಟು ಹೆಚ್ಚು ಖರ್ಚುನ್ನು ಜೆಸಿಬಿ (ಜೆಡಿಎಸ್-ಕಾಂಗ್ರೆಸ್-ಬಿಜೆಪಿ) ಪಕ್ಷಗಳು ಎಲ್ಲಾ ವಾರ್ಡ್‌ಗಳಲ್ಲೂ ಮಾಡಿವೆ. ಶಾಸಕ ಸಿ.ಟಿ.ರವಿಯವರೇ ಪ್ರತಿ ಅಭ್ಯರ್ಥಿಗೂ 15 ಲಕ್ಷ ರೂಪಾಯಿಗಳನ್ನು ಚುನಾವಣಾ ಅಕ್ರಮಣಕ್ಕೆ ನೀಡಿರುವುದು ಬಿಜೆಪಿ ಅಭ್ಯರ್ಥಿಯ ಬಾಯಿಂದಲೇ ಬಯಲಾಗಿದೆ ಎಂದು ದೂರಿದ್ದಾರೆ.
ಜೊತೆಗೆ ನಗರದ ಹಲವಾರು ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುತ್ತಿರುವ ಫೋಟೋಗಳೂ ಎಎಪಿಗೆ ಲಭ್ಯವಾಗಿದೆ. ರಾಜಾರೋಷವಾಗಿ ಚುನಾವಣೆಯಲ್ಲಿ ಹಣ, ಮದ್ಯ ಹಂಚಿಕೆಯಾದರೂ ಚಿಕ್ಕಮಗಳೂರು ನಗರಸಭೆಯ ಚುನಾವಣಾ ಆಯುಕ್ತರು ರಾಜಕೀಯ ಪಕ್ಷಗಳ ಕಾವಲುಗಾರರಂತೆ ಕಾರ್ಯನಿರ್ವಹಿಸಿದ್ದು ಹಲವಾರು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.
ಚಿಕ್ಕಮಗಳೂರು ನಗರಸಭೆಯ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಸದಸ್ಯತ್ವವನ್ನು ರದ್ದುಪಡಿಸಬೇಕು. ಸ್ಥಳೀಯ ಶಾಸಕ ಸಿ.ಟಿ.ರವಿ ಮತ್ತು ಗೆದ್ದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸುತ್ತದೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಆಯುಕ್ತರು ರಾಜಕೀಯ ಪಕ್ಷಗಳ ಕಾವಲುಗಾರಂತೆ ಕಾರ್ಯನಿರ್ವಹಿಸಿದ್ದಾರೆ. ಇದು ಹಲವಾರು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ ಎಂದಿದ್ದಾರೆ.
ಚಿಕ್ಕಮಗಳೂರಿನ ನಗರಸಭೆಯ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಸದಸ್ಯತ್ವವನ್ನು ರದ್ದುಪಡಿಸಬೇಕು, ಸ್ಥಳೀಯ ಶಾಸಕ ಸಿ.ಟಿ.ರವಿ ಮತ್ತು ಗೆದ್ದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷವು ಜಿಲ್ಲಾಧಿಕಾರಿಗಳು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ. ಚಿಕ್ಕಮಗಳೂರಿನ ಇತಿಹಾಸದಲ್ಲೇ ಕಪ್ಪುಚುಕ್ಕೆಯಾದಂತಹ ನಗರಸಭೆ ಚುನಾವಣಾ ಆಕ್ರಮ ವಿರುದ್ಧ ಎಎಪಿ ಕಾನೂನು ಹೋರಾಟ ನಡೆಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ


