Homeಮುಖಪುಟಶಾಲೆಯಲ್ಲಿ ಅಸ್ಪೃಶ್ಯತೆ - ಏಟಿಗೆ ಎದುರೇಟು

ಶಾಲೆಯಲ್ಲಿ ಅಸ್ಪೃಶ್ಯತೆ – ಏಟಿಗೆ ಎದುರೇಟು

- Advertisement -
- Advertisement -

ಉತ್ತರಾಖಂಡ್ ರಾಜ್ಯದ ಚಂಪಾವತ್ ಜಿಲ್ಲೆಯ ಸುಖಿಧಂಗ್ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಅಪರೂಪವೆನಿಸುವ ಒಂದು ಘಟನೆ ನಡೆದಿದೆ. ಸಂವಿಧಾನದ ಪ್ರಕಾರ ಅಸ್ಪೃಶ್ಯತೆಯ ಆಚರಣೆ ಅಪರಾಧವೆನಿಸಿದ್ದರೂ ದೇಶದಾದ್ಯಂತ ಒಂದು ಪಿಡುಗಾಗಿ ಮುಂದುವರೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದರೆ ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಅಲ್ಲಿನ 23 ದಲಿತ ಮಕ್ಕಳು ತೋರಿಸಿಕೊಟ್ಟಿದ್ದಾರೆ. ದಶಕಗಳ ಹಿಂದೆಯೆ ಶಾಲೆಗಳಲ್ಲಿ ಮಧ್ಯಾಹ್ನದ ಊಟ ನೀಡುವ ಕಾರ್ಯಕ್ರಮ ಪ್ರಾರಂಭವಾದಾಗ ದಲಿತ ಮಹಿಳೆಯರು ಮಾಡಿದ ಅಡುಗೆಯನ್ನು ತಿನ್ನಲು ಸವರ್ಣೀಯ ಮಕ್ಕಳು ನಿರಾಕರಿಸುತ್ತಿದ್ದರು. ಅದಕ್ಕೆ ಕಾರಣ ಅವರ ಪೋಷಕರು. ನನ್ನ ತವರು ಜಿಲ್ಲೆಯಾದ ಚಾಮರಾಜನಗರದಲ್ಲಿ ಕೆಲವು ತಂದೆ ತಾಯಿಯರು ಮಕ್ಕಳ ನಾಲಗೆಯನ್ನು ಬೇವಿನ ಕಡ್ಡಿಯಿಂದ ತಿಕ್ಕಿ, ಹಸುವಿನ ಮೂತ್ರ ಲೇಪಿಸಿ ಶುದ್ಧೀಕರಿಸಿಕೊಂಡಿದ್ದರು. ಈ ವಿಷಯ ಬಹುವಾಗಿ ಚರ್ಚಿತವಾಗಿತ್ತು. ನಮ್ಮ ದೇಶದಲ್ಲಿ ಒಂದು ಸಮಸ್ಯೆ ಉದ್ಭವಿಸಿದರೆ ಅದನ್ನು ನಿವಾರಣೆ ಮಾಡಬೇಕು ಎಂದೇನಿಲ್ಲ. ಅದನ್ನು ಹೇಗೋ ಮುಚ್ಚಿಹಾಕಿದರೆ ಆಯಿತು ಅಥವಾ ಜನರನ್ನು ಯಾಮಾರಿಸಿದರೆ ಆಯಿತು ಎನ್ನುವ ಮನೋಭಾವ ಅಧಿಕಾರಸ್ಥರಲ್ಲಿ ಇದೆ. ಇದುವರೆಗೂ ಹಾಗೆ ಮಾಡಿಕೊಂಡು ಬಂದಿದ್ದ ಅಸ್ಪೃಶ್ಯತೆ ಸಮಸ್ಯೆಗೆ ಅಲ್ಲಿನ ವಿದ್ಯಾರ್ಥಿಗಳು ತಕ್ಕ ಉತ್ತರ ನೀಡಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನಾಣ್ನುಡಿಯನ್ನು ನಿಜ ಮಾಡಿ ತೋರಿಸಿದ್ದಾರೆ.

ಶಾಲೆಯಲ್ಲಿ ನಿವೃತ್ತಿಯಿಂದ ತೆರವಾದ ಭೋಜನಮಾತಾ (ಅಡುಗೆ ತಯಾರಿಸುವಾಕೆ) ವೃತ್ತಿಗೆ ಸುನಿತಾ ದೇವಿ ಎಂಬ ದಲಿತ ಮಹಿಳೆಯನ್ನು ಶಾಲಾ ನಿರ್ವಹಣಾ ಸಮಿತಿಯು ಕಾನೂನಿನಂತೆಯೆ ನೇಮಕ ಮಾಡಿತ್ತು. ಆದೇಶದಂತೆ ಆಕೆ ಅಡುಗೆ ಮಾಡುವ ಕಾರ್ಯಕ್ಕೆ ತೊಡಗಿದಳು. ಆದರೆ ಮರುದಿನವೇ ಶಾಲೆಯ 66 ಮಕ್ಕಳಲ್ಲಿ 43 ಸವರ್ಣೀಯ ಮಕ್ಕಳು ದಲಿತ ಮಹಿಳೆ ಮಾಡಿದ ಅಡುಗೆಯನ್ನು ತಿನ್ನುವುದಿಲ್ಲ ಎಂದು ತಿರಸ್ಕರಿಸಿದರು. ಸಮಸ್ಯೆಯನ್ನು ಪರಿಹರಿಸಲು ಶಾಲಾ ನಿರ್ವಹಣಾ ಸಮಿತಿಯು ಬೇರೆ ದಾರಿ ಕಾಣದೆ ಒಂದೆರಡು ದಿನಗಳ ನಂತರ ಸುನಿತಾ ದೇವಿಗೆ ನೀಡಿರುವ ಆದೇಶವನ್ನು ’ತಪ್ಪಾಗಿ ನೀಡಲಾಗಿದೆ’ ಎಂಬ ಕಾರಣ ಹೇಳಿ ಅದನ್ನು ರದ್ದುಪಡಿಸಿ, ಪುಷ್ಪಾ ಭಟ್ ಎನ್ನುವ ಬ್ರಾಹ್ಮಣ ಮಹಿಳೆಗೆ ಹೊಸ ಆದೇಶ ನೀಡಿತು. ಮಕ್ಕಳ ಪೋಷಕರಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ಎರಡು ಗುಂಪಾಯಿತು. ಈ ಜಟಾಪಟಿಯ ನಡುವೆ ಉಳಿದ 23 ದಲಿತ ಮಕ್ಕಳು ಬ್ರಾಹ್ಮಣ ಮಹಿಳೆಯು ಮಾಡಿದ ಅಡುಗೆಯನ್ನು ನಾವು ತಿನ್ನುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡರು! ಈ ಹೊಸ ಮಾದರಿಯ ಪ್ರತಿರೋಧವನ್ನು ನೋಡಿ ಆಡಳಿತ ವರ್ಗಕ್ಕೆ ಒಂದು ದೊಡ್ಡ ಶಾಕ್ ಆಗಿರಲಿಕ್ಕೂ ಸಾಕು. ಇದು ಸರ್ಕಾರದ ಗಮನಕ್ಕೆ ಹೋಗಿ ದೇಶದಾದ್ಯಂತ ಸುದ್ದಿಯಾಯಿತು. ಸ್ವತಃ ಮುಖ್ಯಮಂತ್ರಿಯೇ ಶಾಲೆಗೆ ಭೇಟಿ ನೀಡಿದರು. ಆಗ ಸುನೀತಾ ದೇವಿಯನ್ನು ಕೆಲಸದಿಂದ ವಜಾ ಮಾಡಿದ್ದು ಯಾಕೆ? ಎಂದು ತನಿಖೆ ಮಾಡಲು ಸರ್ಕಾರ ಒಂದು ಸಮಿತಿಯನ್ನು ನೇಮಿಸಿತು. ಈ ಲೇಖನವನ್ನು ಬರೆಯುತ್ತಿರುವ ಹೊತ್ತಿಗೆ ಆಕೆಯನ್ನು ಮರುನೇಮಕ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಮಕ್ಕಳು ಊಟ ಮಾಡುತ್ತಿದ್ದಾರೆ. ಪರಿಸ್ಥಿತಿ ತಾತ್ಕಾಲಿಕವಾಗಿ ತಣ್ಣಗಾಗಿದೆ.


1935ರಲ್ಲಿ ನಡೆದ ಇತಿಹಾಸ ಪ್ರಸಿದ್ಧವಾದ ಒಂದು ಘಟನೆಯನ್ನು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಗುಜರಾತಿನ ಅಹಮದಾಬಾದ್ ಜಿಲ್ಲೆಯ ಕವಿತಾ ಎಂಬ ಗ್ರಾಮದ ಅಸ್ಪೃಶ್ಯರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಸವರ್ಣೀಯರನ್ನು ಕೇಳಿಕೊಳ್ಳುತ್ತಾರೆ. ವಿದ್ಯೆ ಕೇಳುವಷ್ಟು ಸೊಕ್ಕು ಬಂತೆ ಇವರಿಗೆ ಎಂದು ಸವರ್ಣೀಯರು ಕೆರಳಿ ಕೆಂಡವಾಗಿ ಅಸ್ಪೃಶ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಾರೆ. ಅಲ್ಲಿನ ಹಿಂದೂಗಳ ಮನವೊಲಿಸಲು ಹೋಗಿದ್ದ ಎ. ವಿ. ಠಕ್ಕರ್ ಎಂಬುವರು ಒಂದು ವರದಿ ನೀಡುತ್ತಾರೆ. ಕವಿತಾ ಹಳ್ಳಿಯ ಸವರ್ಣೀಯರು ಹರಿಜನ ಬಾಲಕರನ್ನು ಶಾಲೆಗೆ ಸೇರಿಸಿಕೊಳ್ಳಲು ಒಪ್ಪಿರುತ್ತಾರೆ ಮತ್ತು ಸಮಸ್ಯೆ ಬಗೆಹರಿದಿದೆ ಎಂದಿರುತ್ತದೆ ಆ ವರದಿ. ಆದರೆ ವಾಸ್ತವವಾಗಿ ಅಸ್ಪೃಶ್ಯರನ್ನು ಹೆದರಿಸಿ, ಬೆದರಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಒತ್ತಾಯ ಮಾಡಿದ್ದಾರೆಂದು ಅಹಮದಾಬಾದಿನ ಹರಿಜನ ಸೇವಕ ಸಂಘದ ಕಾರ್ಯದರ್ಶಿಯ ಹೇಳಿಕೆಯಿಂದ ತಿಳಿದುಬರುತ್ತದೆ. ಒತ್ತಾಯವೆಂದರೆ ಹೇಗೆ? ಅವರನ್ನು ಜಮೀನಿನಿಂದ ಓಡಿಸಲಾಯಿತು. ದನಕರುಗಳಿಗೆ ಮೇಯಲು ಬಿಡಲಿಲ್ಲ. ಅಸ್ಪೃಶ್ಯರ ಮುಂದಾಳುಗಳನ್ನು ಕರೆಸಿ ದೇವರ ಹೆಸರಿನಲ್ಲಿ ಭಾಷೆ ತೆಗೆದುಕೊಂಡು, ಇನ್ನು ಮುಂದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ಒಪ್ಪಂದ ಮಾಡಿಕೊಳ್ಳಲಾಯಿತು, ಹೀಗೆ. ಆದರೂ ಬಹಿಷ್ಕಾರ ಮುಂದುವರೆಯುತ್ತದೆ. ತಾವು ಮಾಡಿದ ದೌರ್ಜನ್ಯ ಕಡಿಮೆಯಾಯಿತೆಂದು ಹರಿಜನರು ಬಳಸುತ್ತಿದ್ದ ಬಾವಿಯ ನೀರಿಗೆ ಸೀಮೆ ಎಣ್ಣೆ ಸುರಿದು, ಅವರು ಕುಡಿಯಲು ನೀರಿಲ್ಲದೆ ಸಂಕಟಪಡುವುದನ್ನು ನೋಡಿ ಸವರ್ಣೀಯರು ವಿಕೃತಾನಂದವನ್ನು ಪಡೆಯುತ್ತಾರೆ. ದಲಿತರ ಒಂದು ಸಣ್ಣ ಪ್ರತಿರೋಧವನ್ನು ಸವರ್ಣೀಯರು ಸಹಿಸಿಕೊಳ್ಳಲಾರರು ಎನ್ನುವುದಕ್ಕೆ ಇದೊಂದು ಉದಾಹರಣೆ. ಈ ರೀತಿಯ ಮರೆಮೋಸ, ದೌರ್ಜನ್ಯ ಯಾವತ್ತಿನಿಂದಲೂ ನಡೆದುಕೊಂಡು ಬರುತ್ತಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನುಚ್ಛೇದ 17ರ ಪ್ರಕಾರ ಅಸ್ಪೃಶ್ಯರಿಗೆ ಸಂವಿಧಾನಾತ್ಮಕ ರಕ್ಷಣೆ ಇದ್ದಾಗ್ಯೂ 1935ರಲ್ಲಿ ಇದ್ದಂತಹ ದೌರ್ಜನ್ಯಗಳು ಇಂದಿಗೂ ಮುಂದುವರೆದಿವೆ. ಈಗ ಮತಾಂತರ ನಿಷೇಧ ಕಾಯ್ದೆಯು ಜಾರಿಗೆ ಬರುತ್ತಿದೆ. ಇದು ನೇರಾನೇರ ಪ್ರಭುತ್ವವು ಅಸ್ಪೃಶ್ಯರ ಮೇಲೆ ಎಸಗುತ್ತಿರುವ ಕಾನೂನಾತ್ಮಕ ದೌರ್ಜನ್ಯವೆಂದರೆ ತಪ್ಪಾಗದು. ಕಾನೂನು ಜಾರಿಗೆ ಬರುವ ಮುನ್ನವೆ ಸಮಾಜದಲ್ಲಿ ಅನೇಕ ಅಪಸವ್ಯಗಳು ಕಾಣಿಸಿಕೊಳ್ಳುತ್ತಿವೆ. ಮೊನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕ್ರಿಸ್‌ಮಸ್ ದಿನದಂದು ದಶಕಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಒಂದು ಶಾಲೆಗೆ ಕೆಲ ಯುವಕರು ನುಗ್ಗಿ ಕ್ರಿಸ್‌ಮಸ್ ಯಾಕೆ ಮಾಡುತ್ತಿದ್ದೀರಿ, ಗಣಪತಿ ಹಬ್ಬ ಯಾಕೆ ಮಾಡಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹ ವಿತಂಡವಾದಗಳಿಗೆ ಇನ್ನುಮುಂದೆ ಕೊನೆಯಿರುವುದಿಲ್ಲ. ತುಮಕೂರು ಜಿಲ್ಲೆಯ ಒಂದು ಹಳ್ಳಿಯಲ್ಲಿ ಸಂಘಪರಿವಾರದವರೆನ್ನಲಾದ ಕೆಲವರು ಕ್ರೈಸ್ತರ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಎಗ್ಗಿಲ್ಲದೆ ಪ್ರಶ್ನೆ ಮಾಡಿದ್ದಾರೆ. ನವಮತಾಂತರಿಗಳ ಪಾಡು ಹೇಳತೀರದಾಗಿದೆ. ಕಾರ್ಯಕರ್ತನೊಬ್ಬ ಮನೆಯೊಳಗಿರುವ ಮಹಿಳೆಯನ್ನು ನೀವು ಹಿಂದೂ ಆಗಿದ್ದರೆ ಹೆಣ್ಮಕ್ಕಳ ಲಕ್ಷಣ ಏನು? ಎಂದು ಕೇಳುತ್ತಾನೆ. ಅದಕ್ಕೆ ಆಕೆ ನಾನು ತಾಳಿಯನ್ನೂ ಬಿಚ್ಚಿಡುತ್ತೇನೆ, ಕಾಲುಂಗುರವನ್ನೂ ತೆಗೆದಿಡುತ್ತೇನೆ. ಅದನ್ನು ಕೇಳುವ ಅಧಿಕಾರ ನಿನಗೆ ಕೊಟ್ಟವರ್‍ಯಾರು? ಎಂದು ಪ್ರತಿಭಟಿಸುತ್ತಾಳೆ. ವಾಟ್ಸ್ಯಾಪ್ ದೃಶ್ಯಾವಳಿಯ ಪ್ರಕಾರ ಅವು ಎಲ್ಲೆ ಮೀರಿದ ದೌರ್ಜನ್ಯಗಳಾಗಿವೆ. ಒಬ್ಬ ಶಾಸಕರೇ ಚರ್ಚುಗಳ ಬಳಿ ಹೋಗಿ ’ನೀವು ಯಾವ ಜಾತಿ, ಎಷ್ಟು ದಿನಗಳಿಂದ ಇಲ್ಲಿಗೆ ಬರುತ್ತಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಹಾಕುತ್ತಾರೆ. ಶಾಸಕರೇ ಹೀಗೆ ಮಾಡಿದರೆ ಸಾರ್ವಜನಿಕ ನಡವಳಿಕೆಗೆ ಇದ್ದ ಲಕ್ಷ್ಮಣರೇಖೆಯನ್ನು ಅಳಿಸಿಹಾಕಿದಂತಾಗುವುದಿಲ್ಲವೆ? ಹಿಂದೂಧರ್ಮ ಎನ್ನುವುದು ಕಿಟಕಿ ಬಾಗಿಲುಗಳಿಲ್ಲದ, ಮೆಟ್ಟಿಲುಗಳಿಲ್ಲದ ಮನೆ ಎಂಬ ಅಂಬೇಡ್ಕರ್ ಹೇಳಿದ ಮಾತು ಸವರ್ಣೀಯರಿಗೆ
ಇಂದಿಗೂ ನಾಟುತ್ತಿಲ್ಲ ಮತ್ತು ಆಳುವ ಪ್ರಬಲ ಜಾತಿಗಳ ಮನಸ್ಥಿತಿಗೆ ಪೂರಕವಾಗಿಯೆ ಸಂವಿಧಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಮತಾಂತರ ನಿಷೇಧ ಕಾಯಿದೆ ಉದಾಹರಣೆಯಾಗಿದೆ. ಇದು ಸಂವಿಧಾನದ ಅನುಚ್ಛೇದ 25ರಲ್ಲಿ ನೀಡಲಾಗಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೆ ನಾಗರಿಕರಿಂದ ಕಸಿಯುವ ಕಾಯ್ದೆಯಾಗಿದೆ ಮತ್ತು ಸಂವಿಧಾನವಿರೋಧಿಯಾಗಿದೆ. ಸಂವಿಧಾನಬದ್ಧವಾಗಿ ಅಸ್ಪೃಶ್ಯತೆ ನಿಷೇಧ ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿ ಸರ್ಕಾರಕ್ಕಿರಬೇಕಾಗಿತ್ತು. ಅದರ ಬದಲಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ದಲಿತರನ್ನು ಮತಾಂತರ ಮಾಡಿದರೆ ಹೆಚ್ಚು ಕಠಿಣತಮ ಶಿಕ್ಷೆಯನ್ನು ವಿಧಿಸುವುದು ಏನನ್ನು ಹೇಳುತ್ತದೆ? ಸರ್ಕಾರ ದಲಿತರಿಗೆ ನೀವು ಎಲ್ಲಿದ್ದೀರೋ ಅಲ್ಲಿಯೇ ಇರಿ, ಹೇಗಿದ್ದೀರೋ ಹಾಗೆಯೆ ಇರಿ ಎಂಬ ಧಾರ್ಷ್ಟ್ಯದ ಆದೇಶವನ್ನು ನೀಡುತ್ತಿದೆ ಎಂದಲ್ಲವೆ? ಆದ್ದರಿಂದ ಇದು ಪ್ರಭುತ್ವ ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಎಂದು ನಾನು ಕರೆಯುತ್ತೇನೆ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...