ಅತ್ಯಚಾರದಲ್ಲಿ ಭಾಗಿಯಾದ 3 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಸಾಕ್ಷ್ಯನಾಶ ಮಾಡಿದ ಉಳಿದ ಮೂವರಿಗೆ 5 ವರ್ಷ ಜೈಲು ಸಜೆಯ ಶಿಕ್ಷೆಯನ್ನು ಕೋರ್ಟ್ ಘೋಷಿಸಿದೆ. ದೀಪಕ್ ಖಜುರಿಯಾ, ಆನಂದ್ ದತ್ತಾ, ಸಾಂಜಿ ರಾಮ್ ಗೆ ಜೀವಾವಧಿ ಘೋಷಿಸಿದ್ದು, ತಿಲಕ್ ರಾಜ್, ಆನಂದ್ ದತ್ತಾ, ಸುರೇಂದರ್ ವರ್ಮಾ ಎಂಬ ಪೊಲೀಸರಿಗೆ 5 ವರ್ಷಗಳ ಜೈಲು ಸಜೆಯನ್ನು ವಿಧಿಸಲಾಗಿದೆ.
ಇಂದು ಬೆಳಿಗ್ಗೆ ಆರೋಪಿಗಳನ್ನು ಘೋಷಿಸಿದ್ದು ಸಂಜೆ 4.45ರ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಯಿತು.
ಕಥುವಾ ಪ್ರದೇಶ ಹಾಗೂ ಸುತ್ತಮುತ್ತ ಇರುವ ಅಲೆಮಾರಿಗಳನ್ನು ಭಯಪಡಿಸುವ ಸಲುವಾಗಿ ಹಾಗೂ ಅವರನ್ನು ಅಲ್ಲಿಂದ ಓಡಿಸುವ ಸಲುವಾಗಿಯೂ ಸಹ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ಮಾಡಲಾಗಿದೆ ಎಂದು ಘೋರ ಸತ್ಯವು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಎಂಟು ವರ್ಷ ಬಾಲಕಿಯರ ಸಾಮೂಹಿಕ ಬರ್ಬರ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ದೋಷಿಗಳೆಂದು ಪಠಾಣ್ ಕೋರ್ಟ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಅತ್ಯಾಚಾರ ಆರೋಪಿಗಾಳದ ದೀಪಕ್ ಖಜುರಿಯಾ, ಆನಂದ್ ದತ್ತಾ, ಸಾಂಜಿ ರಾಮ್, ತಿಲಕ್ ರಾಜ್, ಸುರೇಂದ್ರ, ಪ್ರವೇಶ್ ದೋಷಿಗಳೆಂದು ಪಠಾಣ್ ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ವಿಶಾಲ್ ನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಜನವರಿ 10, 2018ರಲ್ಲಿ ನಡೆದ ಅತ್ಯಾಚಾರ ಪ್ರಕರಣ ವಿಚಾರಣ ನಡೆಸಿದ ಪೊಲೀಸರು 2018 ರ ಎಪ್ರಿಲ್ ತಿಂಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 8 ವರ್ಷದ ಬಾಲಕಿಗೆ ಮಾದಕ ಸೇವನೆ ಮಾಡಿಸಿ ದೇವಾಲಯವೊಂದರಲ್ಲಿ ಸತತ ನಾಲ್ಕು ದಿನಗಳ ಕಾಲ ಅತ್ಯಾಚಾರ ಮಾಡಿ ಕಲ್ಲಿನಿಂದ ಚಚ್ಚಿ ಕೊಲೆ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಆಡಳಿತದಲ್ಲಿದ್ದ ಬಿಜೆಪಿ-ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ (ಪಿಡಿಪಿ) ಮೈತ್ರಿಕೂಟದ ನಡುವೆ ಬಿಜೆಪಿ ನಾಯಕರು ಚೌಧುರಿ ಲಾಲ್ ಸಿಂಗ್ ಮತ್ತು ಪ್ರಕಾಶ್ ಗಂಗಾ ಈ ಇಬ್ಬರು ಆರೋಪಿಗಳ ರಕ್ಷಣೆಗೆ ನಿಂತಿದ್ದರು ಎಂಬುದು ವಿವಾದ ಸಹ ಆಯಿತು ಬಿಜೆಪಿ ಶಾಸಕ ರಾಜೀವ್ ಜಸ್ ರೊಟಿಯಾ ಎಂಬುವವರು ಆರೋಪಿಗಳ ಪರವಾಗಿ ಬಹಿರಂಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಬಹುತೇಕರು ಖಂಡಿಸಿದ್ದರು.
ಅಷ್ಟು ಮಾತ್ರವಲ್ಲದೇ ಸಂತ್ರಸ್ತೆಯ ಪರವಾಗಿ ವಕೀಲಿಕೆ ನಡೆಸಿದ್ದ ದೀಪಿಕಾ ಸಿಂಗ್ ರಾವತ್ ರವರ ಮೇಲೆ ವಕೀಲರ ಸಂಘದ ಅಧ್ಯಕ್ಷರಾದ ಬಿ.ಎಸ್ ಸಲಾತಿಯ ಎಂಬುವವರು ನ್ಯಾಯಾಲಕ್ಕೆ ಹಾಜರಾಗದಂತೆ ಬಹಿರಂಗವಾಗಿ ಬೆದರಿಕೆ ಹಾಕಿದ್ದ ಘಟನೆಯೂ ಸಹ ನಡೆದಿತ್ತು. ಅವರು ಕೇಸಿನಿಂದ ಹಿಂದೆ ಸರಿಯಬೇಕೆಂದು ಹಲವಾರು ಜೀವಬೆದರಿಕೆಯ ಕರೆಗಳು ಸಹ ದೀಪಿಕಾ ಸಿಂಗ್ ರವರಿಗೆ ಬಂದಿದ್ದವು. ತೀವ್ರ ಒತ್ತಡದ ಕಾರಣದಿಂದಾಗಿ ಕೊನೆಗೆ ಅವರು ಕೇಸಿನಿಂದ ಹಿಂದೆ ಸರಿಯಬೇಕಾಗಿತ್ತು.

ನಂತರ ಸಂತ್ರಸ್ತೆಯ ಪರವಾಗಿ ಮುಬಿನ್ ಫಾರೂಖಿ ಎಂಬುವವರು ವಕೀಲಿಕೆ ನಡೆಸಿದ್ದರು. ಇಂದು ಈ ಕೇಸಿನಲ್ಲಿ ತಿಲಕ್ ರಾಜ್, ಆನಂದ್ ದತ್ತಾ, ಸುರೇಂದರ್ ವರ್ಮಾ ಎಂಬ ಮೂವರು ಪೋಲಿಸರ ಮೇಲೆ ಸಾಕ್ಷ್ಯನಾಶದ ಆರೋಪ ಸಾಬೀತಾಗಿದೆ ಎಂದು ವಕೀಲರು ತಿಳಿಸಿದ್ದಾರೆ.


