ಉತ್ತರ ಪ್ರದೇಶದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ತೀವ್ರ ಕಸರತ್ತು ನಡೆಸುತ್ತಿವೆ. ಇಂತಹ ಸಮಯದಲ್ಲಿ ಬಿಜೆಪಿ ಶಾಸಕನೊಬ್ಬ ವೇದಿಕೆ ಮೇಲಿರುವಾಗಲೇ ಅಲ್ಲಿಗೆ ಬಂದ ರೈತನೊಬ್ಬ ಶಾಸಕನ ಕೆನ್ನೆಗೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉನ್ನಾವೋದ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದಾಗ ವಯಸ್ಸಾದ ರೈತನೊಬ್ಬ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅಲ್ಲಿದ್ದವರು ರೈತನನ್ನು ವೇದಿಕೆಯಿಂದ ಹೊರಗೆ ಎಳೆದುಕೊಂಡು ಹೋಗಿದ್ದಾರೆ. ಈ 21 ಸೆಕೆಂಡ್‌ಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಬಿಜೆಪಿ ವಿರುದ್ಧ ಜನ ಸಿಟ್ಟುಗೊಂಡಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷವು “ಬಿಜೆಪಿ ಶಾಸಕ ಪಂಕಜ್ ಗುಪ್ತಾ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ರೈತನೊಬ್ಬ ಅವರ ಕಪಾಳಕ್ಕೆ ಬಾರಿಸಿದ್ದಾರೆ. ಇದು ಕೇವಲ ಶಾಸಕನಿಗೆ ಮಾತ್ರವಲ್ಲ ಯೋಗಿ ಆದಿತ್ಯನಾಥ್‌ರವರ ಕೆಟ್ಟ ಆಡಳಿತ, ಕೆಟ್ಟ ನೀತಿಗಳು ಮತ್ತು ಸರ್ವಾಧಿಕಾರಕ್ಕೆ ಬಿದ್ದ ಹೊಡೆತವಾಗಿದೆ” ಎಂದು ಬರೆದಿದೆ.
ರೈತ ತನ್ನ ಹಸು ಕಳೆದುಹೋಗಿದ್ದರ ಬಗ್ಗೆ ಪೊಲೀಸ್ ಸೇರಿದಂತೆ ಶಾಸಕನಿಗೆ ದೂರು ಕೊಟ್ಟಿದ್ದ. ಆದರೆ ಅದನ್ನು ಹುಡುಕಲು ಯಾರೂ ಸಹಾಯ ಮಾಡಲಿಲ್ಲ. ಹಾಗಾಗಿ ಕೋಪದಲ್ಲಿ ಶಾಸಕನ ಕಪಾಳಕ್ಕೆ ಬಾರಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಘಟನೆ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಪ್ರತಿಕ್ರಿಯಿಸಿದ್ದು, “ಅವರು ಕೇವಲ ನನ್ನ ಗದ್ದ ಮುಟ್ಟಿ ಮುದ್ದು ಮಾಡಿದರು ಅಷ್ಟೇ. ಆದರೆ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಪ್ರಕರಣವನ್ನು ತಿರುಚುತ್ತಿವೆ” ಎಂದು ಆರೋಪಿಸಿದ್ದಾರೆ.
ಅಲ್ಲದೆ ಶಾಸಕರು ತಮಗೆ ಕಪಾಳ ಮೋಕ್ಷ ಮಾಡಿದ ರೈತರನೊಟ್ಟಿಗೆ ಕುಳಿತು ಪತ್ರಿಕಾಗೋಷ್ಠಿ ಸಹ ನಡೆಸಿದ್ದಾರೆ. ಅಲ್ಲಿ ಪತ್ರಕರ್ತರೊಬ್ಬರು ನೀವು ಪ್ರೀತಿಯಿಂದ ಮಾಡಿದ್ದೀರಿ ಎಂದು ಹೇಳುತ್ತಿದ್ದೀರಿ, ಆದರೆ ಅದರಿಂದ ತಪ್ಪು ಸಂದೇಶ ಹೋಗಿದೆಯಲ್ಲ ಎಂದು ರೈತನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ರೈತನು “ನಾನು ಶಾಸಕನಿಗೆ ಹೊಡೆದಿಲ್ಲ. ನಾನು ಅವರ ಹತ್ತಿರ ಬಂದು ಬೇಟಾ (ಮಗ) ಎಂದು ಸಂಬೋಧಿಸಿ ಏನೋ ಕೇಳಿದೆ” ಎಂದಿದ್ದಾರೆ.
ಆಗ ಮಧ್ಯಪ್ರವೇಸಿಸಿದ ಶಾಸಕ ಪಂಕಜ್ ಗುಪ್ತಾ, “ವಾಸ್ತವ ಸಂಗತಿ ಏನೆಂದರೆ, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಘಟನೆಯನ್ನು ತಿರುಚಿದ್ದಾರೆ. ಈ ರೈತನಿಗೆ ನನ್ನ ಜೊತೆ ಯಾವುದೇ ಸಮಸ್ಯೆ ಇಲ್ಲ, ರೈತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದ್ದಾರೆ ಎಂದು ತೋರಿಸಲು ವಿರೋಧ ಪಕ್ಷಗಳು ಬಯಸಿದ್ದಾರೆ. ಇವರು ನನ್ನ ತಂದೆಯಂತೆ, ಅವರು ಇದನ್ನು ಹಿಂದೆಯೂ ಮಾಡುತ್ತಿದ್ದರು” ಎಂದು ರೈತನ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಬುಲ್ಲಿ ಬಾಯ್ ವಿಕೃತಿಯ ಬಳಿಕ ‘ಟ್ರೇಡ್’ ‘ರಾಯ್ತಾಸ್’ ಗುಂಪುಗಳ ನಡುವಿನ ಬಲಪಂಥೀಯ ಭಿನ್ನತೆ ಬಯಲು



BJP twisting to save it’d face