ಬಹುನೀರಿಕ್ಷಿತ ಪಂಚರಾಜ್ಯ ಚುನಾವಣೆಗೆ ಕೊನೆಗೂ ಚುನಾವಣಾ ಆಯೋಗ ದಿನಾಂಕ ನಿಗಧಿ ಮಾಡಿದೆ. ಫೆಬ್ರವರಿ 10 ರಿಂದ ಮಾರ್ಚ್ 7 ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದು ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ. ಈಗ ಎಲ್ಲರ ಕಣ್ಣು ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದ ಮೇಲೆ ನೆಟ್ಟಿದೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಪ್ರಮುಖ ನಾಲ್ಕು ಪಕ್ಷಗಳ ಮೊದಲ ಪ್ರತಿಕ್ರಿಯೆ ಇಲ್ಲಿದೆ.
ಡಬಲ್ ಇಂಜಿನ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ
ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ರಾಜ್ಯ ಚುನಾವಣೆಯ ದಿನಾಂಕ ಘೋಷಣೆಗೆ ಸ್ವಾಗತ, ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಆಧಾರದ ಮೇಲೆ ಜನತಾ ಜನಾರ್ದನರ ಆಶೀರ್ವಾದದೊಂದಿಗೆ ಭಾರತೀಯ ಜನತಾ ಪಕ್ಷವು ಭರ್ಜರಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಎಎನ್‌ಐ ಜೊತೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಮ್ಮ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಜನರು ಮತ್ತೊಮ್ಮೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಬದಲಾಗಲಿದೆ – ಸಮಾಜವಾದಿ ಪಕ್ಷ
ಮಾರ್ಚ್ 10 ರಂದು ಇಂಕ್ವಿಲಾಬ್ ಮೆರವಣಿಗೆ ನಡೆಯಲಿದೆ, ಉತ್ತರ ಪ್ರದೇಶ ಬದಲಾಗಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ತಮ್ಮ ಪಕ್ಷದ 2022ರಲ್ಲಿ ಸೈಕಲ್ (ಸಮಾಜವಾದಿ ಪಕ್ಷದ ಚಿಹ್ನೆ) ಅಧಿಕಾರಕ್ಕೆ ಎಂಬ ಹ್ಯಾಷ್‌ಟ್ಯಾಗ್ ಸಹ ಬಳಸಿದ್ದಾರೆ.
ಉತ್ತರ ಪ್ರದೇಶ ಹೋರಾಡುತ್ತದೆ ಮತ್ತು ಗೆಲ್ಲುತ್ತದೆ – ಕಾಂಗ್ರೆಸ್
ಮಾರ್ಚ್ 10 ರಂದು ಉತ್ತರ ಪ್ರದೇಶದ ಯುವಕರು, ರೈತರು, ಮಹಿಳೆಯರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಸಾಮಾನ್ಯ ಜನರ ವಿಜಯಯಾತ್ರೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯುವಕರು, ರೈತರು, ಮಹಿಳೆಯರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಸಾಮಾನ್ಯ ಜನರ ಹಕ್ಕುಗಳಿಗಾಗಿ ಹೋರಾಡಲಿದೆ. ಯುಪಿ ಹೋರಾಡುತ್ತದೆ ಮತ್ತು ಗೆಲ್ಲುತ್ತದೆ ಎಂದು ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ಅದೇ ರೀತಿಯಾಗಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್‌ರವರು ಮಾರ್ಚ್ 10 ರಂದು ಬಿಜೆಪಿ ಮುಕ್ತವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನೀತಿ ಸಂಹಿತೆ ಪಾಲಿಸಲಿ – ಬಿಎಸ್‌ಪಿ
ಮುಕ್ತ, ನ್ಯಾಯಸಮ್ಮತ, ಸುಗಮ ಮತ್ತು ಶಾಂತಿಯುತ ಚುನಾವಣೆ ನಡೆಯಬೇಕು. ಬಿಜೆಪಿ ಹೊಸ ತಂತ್ರಗಳನ್ನು ಅನುಸರಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದನ್ನು ನಿಲ್ಲಿಸಬೇಕು. ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಾಗಿದೆ. ವಿಶೇಷವಾಗಿ ಬಡವರು, ಕಾರ್ಮಿಕರು ಮತ್ತು ದುಡಿಯುವ ಜನರು ಚುನಾವಣೆಯೆಡೆಗೆ ಬಹಳ ಉತ್ಸುಕರಾಗಿದ್ದಾರೆ, ಅವರ ಭಾವನೆಗಳು ಮತ್ತು ಹಕ್ಕುಗಳನ್ನು ಎಲ್ಲ ರೀತಿಯಲ್ಲೂ ರಕ್ಷಿಸಬೇಕು. ಇಂದಿನಿಂದಲೇ ಅನ್ವಯವಾಗುವ ಪಕ್ಷದ ಶಿಸ್ತು ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭ್ಯರ್ಥಿಗಳಿಗೆ ಬಿಎಸ್‌ಪಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಪಕ್ಷದ ಮುಖ್ಯಸ್ಥೆ ಮಯಾವತಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್


