ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು ಭಾರತ ಟೆಸ್ಟ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ. ಕಳೆದ ವರ್ಷ, ಕೊಹ್ಲಿ ಅವರು ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದರ ನಂತರ ಬಿಸಿಸಿಐ ಅವರನ್ನು ಏಕದಿನ ತಂಡನ ನಾಯಕ ಸ್ಥಾನದಿಂದ ತೆಗೆದುಹಾಕಿತ್ತು.
“ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು 7 ವರ್ಷಗಳ ಕಾಲ ಪ್ರತಿದಿನ ನಿರಂತರವಾಗಿ ಶ್ರಮ ಪಟ್ಟಿದ್ದೇನೆ. ಏನನ್ನೂ ಬಿಡದೇ ನಾನು ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಪ್ರತಿಯೊಂದು ವಿಷಯವೂ ಒಂದು ಹಂತದಲ್ಲಿ ಸ್ಥಗಿತಗೊಳ್ಳಬೇಕು, ಹಾಗೆಯೆ, ಭಾರತದ ಟೆಸ್ಟ್ ಕ್ಯಾಪ್ಟನ್ ಆಗಿ ಇದು ನನ್ನ ಕೊನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ನಾಯಕತ್ವ ವಿವಾದ: ಬಿಸಿಸಿಐ ಇದನ್ನು ನಿಭಾಯಿಸುತ್ತದೆ ಎಂದ ಸೌರವ್ ಗಂಗೂಲಿ
“ಪ್ರಯಾಣದ ಉದ್ದಕ್ಕೂ ಅನೇಕ ಏರಿಳಿತಗಳು ಮತ್ತು ಕೆಲವು ಕುಸಿತಗಳು ಇದ್ದವು. ಆದರೆ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ಇರಲಿಲ್ಲ. ನಾನು ಯಾವಾಗಲೂ ನನ್ನ 120% ದಷ್ಟು ಪ್ರಯತ್ನವನ್ನು ಎಲ್ಲದರಲ್ಲೂ ನೀಡುತ್ತೇನೆ ಎಂದು ನಂಬಿದ್ದೇನೆ. ಒಂದು ವೇಳೆ ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಸರಿಯಾದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನನ್ನ ಮನಸ್ಸಿನಲ್ಲಿ ನನಗೆ ಸಂಪೂರ್ಣ ಸ್ಪಷ್ಟತೆ ಇದೆ ಮತ್ತು ನನ್ನ ತಂಡಕ್ಕೆ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ” ಎಂದು ಕೊಹ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಇಷ್ಟು ದೀರ್ಘಾವಧಿಯವರೆಗೆ ನನ್ನ ದೇಶವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದ ಬಿಸಿಸಿಐಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಪರಿಸ್ಥಿತಿಯಲ್ಲಿ ಎಂದಿಗೂ ಬಿಟ್ಟುಕೊಡದ ತಂಡದ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಈ ಪ್ರಯಾಣವನ್ನು ಸ್ಮರಣೀಯ ಮತ್ತು ಸುಂದರಗೊಳಿಸಿದ್ದೀರಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ನಮ್ಮನ್ನು ಮುನ್ನಡೆಸಿದ್ದ ರವಿ ಭಾಯ್ ಮತ್ತು ಅವರ ಗುಂಪಿಗೆ ಧನ್ಯವಾದಗಳು. ಕೊನೆಯದಾಗಿ, ನಾಯಕನಾಗಿ ನನ್ನನ್ನು ನಂಬಿದ ಎಂಎಸ್ ಧೋನಿಗೆ ಧನ್ಯವಾದ”ಎಂದು ಅವರು ಹೇಳಿದ್ದಾರೆ.
ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಸೋತ ಒಂದು ದಿನದ ನಂತರ ಟೆಸ್ಟ್ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಕೊಹ್ಲಿ ತೆಗೆದುಕೊಂಡಿದ್ದಾರೆ. ನವೆಂಬರ್ 2019 ರಿಂದ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೆ ಶತಕ ದಾಖಲಿಸಿಲ್ಲ. ಅವರು ಕೊನೆಯ ಬಾರಿಗೆ ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದರು.
ಇದನ್ನೂ ಓದಿ:ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ


